ಮೇಕಪ್‍ನ ಹಲವು ಕುತೂಹಲಕಾರಿ ಸಂಗತಿಗಳು
– ಕೆ.ವಿ.ಶಶಿದರ.
ಮೇಕಪ್ ಇಲ್ಲವೇ ಸೌಂದರ‍್ಯ ವರ‍್ದಕ ತಯಾರಿಕೆ ಇಂದು ವಿಶ್ವದಲ್ಲಿ ಬಹು ದೊಡ್ಡ ಉದ್ಯಮ ವಲಯ. ಹಲವು ವರದಿಗಳ ಪ್ರಕಾರ ಪ್ರತಿ ಹತ್ತು ಹೆಂಗಸರಲ್ಲಿ ಒಂಬತ್ತು ಮಂದಿ ಒಂದಲ್ಲಾ ಒಂದು ರೀತಿಯ ಸೌಂದರ‍್ಯ ವರ‍್ದಕವನ್ನು ಕಂಡಿತಾ ಉಪಯೋಗಿಸುತ್ತಾರೆ. ಹಲವರಂತೂ ಅದರ ದಾಸರಾಗಿ ಬಿಟ್ಟಿರುತ್ತಾರೆ. ಸೌಂದರ‍್ಯ ವರ‍್ದಕದ ಉದ್ಯಮವು ಇಂದು ವಿಶ್ವದಲ್ಲಿ 235 ಬಿಲಿಯನ್ ಡಾಲರ್‍ನಶ್ಟು ದೊಡ್ಡ ಉದ್ಯಮವಾಗಿ ಬೆಳೆಯಲು ಇವರುಗಳೇ ಸ್ಪೂರ‍್ತಿ ಎಂದರೂ ತಪ್ಪಾಗಲಾರದು.
ಕುತೂಹಲ ತಡೆಯಲಾಗದೆ ಹುಡುಕಿದಾಗ ಮೇಕಪ್‍ನ ಸುತ್ತ ಕೆಲವು ಅದ್ಬುತವಾದ, ರೋಚಕವಾದ ವಾಸ್ತವ ಸಂಗತಿಗಳು ದೊರಕಿವೆ. ಬನ್ನಿ ಕೆಲವೊಂದರ ಬಗ್ಗೆ ಕೊಂಚ ತಿಳಿಯುವ.
ಮೇಕಪ್‍ನಿಂದ ವಿಚ್ಚೇದನೆ!
ಮೇಕಪ್‍ನಿಂದ ಹೆಂಗಸರ ಮೇಲಾಗುವ ಪ್ರಮುಕ ಪ್ರಬಾವವೆಂದರೆ ಅದು ಅವರ ವಿಶ್ವಾಸವನ್ನು ದುಪ್ಪಟ್ಟುಗೊಳಿಸುತ್ತದೆ. ಸಮಾಜದಲ್ಲಿ ವರ‍್ಚಸ್ಸನ್ನು ಇಮ್ಮಡಿಗೊಳಿಸುತ್ತದೆ. ಆತ್ಮ ಸ್ತೈರ‍್ಯವನ್ನು ದ್ವಿಗುಣಗೊಳಿಸುತ್ತದೆ. ಮಹನೀಯರೂ ಅಶ್ಟೆ ಸೌಂದರ‍್ಯ ವರ‍್ದಕದಿಂದ ಹೆಂಗಸರತ್ತ ಆಕರ‍್ಶಣೆಗೆ ಒಳಗಾಗುತ್ತಾರೆ ಹಾಗೂ ಬೇಸ್ತು ಬೀಳುತ್ತಾರೆ ಸಹ! ಮೇಕಪ್ ಎಂಬುದು ವಿಚ್ಚೇದನಕ್ಕೆ ಮೂಲ ಕಾರಣ ಎಂದ ಕೂಡಲೆ ಬಹಳಶ್ಟು ಮಂದಿ ಮೂಗು ಮುರಿಯುತ್ತಾರೆ. ಇದು ಶುದ್ದ ಸುಳ್ಳು ಎಂದು ವಾದಿಸುವವರ ಸಂಕ್ಯೆಯೇನು ಕಡಿಮೆಯಿಲ್ಲ. ಆದರೆ 200 ವರ‍್ಶಗಳ ಹಿಂದೆ ಇಂಗ್ಲೇಂಡ್‍ನಲ್ಲಿ ಇದಕ್ಕೆ ತದ್ವಿರುದ್ದವಾದ ನಂಬಿಕೆಯಿತ್ತು. ಅದರ ಪರಿಣಾಮವಾಗಿ ಮೇಕಪ್ ಮಾಡಿಕೊಂಡ ಹೆಂಡತಿಯನ್ನು ವಿಚ್ಚೇದಿಸುವ ಅವಕಾಶವನ್ನು ಕಲ್ಪಿಸುವ ಕಾನೂನನ್ನು ಜಾರಿಗೊಳಿಸಲು ಮಹನೀಯರು ಸನ್ನದ್ದರಾಗಿದ್ದರು ಎಂದು ಇತಿಹಾಸದ ಪುಟಗಳಲ್ಲಿ ಉಲ್ಲೇಕವಿದೆ. ಕಾರಣಾಂತರದಿಂದ ಅದು ಕೊನೆ ಗಳಿಗೆಯಲ್ಲಿ ಜಾರಿಯಾಗಲಿಲ್ಲವಶ್ಟೆ.
ಒಂದು ವರುಶಕ್ಕೆ 1 ಬಿಲಿಯನ್ ಲಿಪ್‍ಸ್ಟಿಕ್ ಗಳು ಮಾರಾಟವಾಗುತ್ತವಂತೆ!
ಮೇಕಪ್ ಉದ್ಯಮ ಹೇಗೆ ಇಶ್ಟು ಅಗಾದವಾಗಿ ಬೆಳೆಯಿತು ಎಂದು ಆಶ್ಚರ‍್ಯ ಪಡುವವರು ಈ ಕೆಲವೊಂದು ಸಂಕ್ಯೆಗಳನ್ನು ಗಮನಿಸಬೇಕು. ವಾರ‍್ಶಿಕ ಅಂದಾಜು ಒಂದು ಬಿಲಿಯನ್ ಅಂದರೆ ಒಂದು ನೂರು ಕೋಟಿ ಲಿಪ್‍ಸ್ಟಿಕ್‍ಗಳು ಜಗತ್ತಿನಾದ್ಯಂತ ಮಾರಾಟವಾಗುತ್ತದಂತೆ. ಜಗತ್ತಿನಾದ್ಯಂತ ಮಾರಾಟವಾಗುವ ಬೇರಾವುದೇ ವಸ್ತುಗಳಿಗಿಂತ ಲಿಪ್‍ಸ್ಟಿಕ್‍ನ ಮಾರಾಟ ಹತ್ತು ಪಟ್ಟು ಹೆಚ್ಚು.
ಪೆನ್ಸಿಲ್ವೇನಿಯಾದಲ್ಲಿ ಮೇಕಪ್ ದರಿಸಲು ಪರವಾನಗಿಯ ಅವಶ್ಯಕತೆ!
ಕಾನೂನು ಕುರುಡು ಎಂಬುದು ಒಂದು ಜಾಣ್ಣುಡಿ. ವಿಶ್ವಾದ್ಯಂತೆ ಹಲವು ಹುಚ್ಚು ಕಾನೂನುಗಳೂ ಸಹ ಜಾರಿಯಲ್ಲಿವೆ. ಅಂತಹುದೊಂದು ಹುಚ್ಚು ಕಾನೂನು ಮದ್ಯ ಅಟ್ಲಾಂಟಿಕ್ ರಾಜ್ಯವಾದ ಪೆನ್ಸಿಲ್ವೇನಿಯಾದಲ್ಲಿ ಇಂದಿಗೂ ಜಾರಿಯಲ್ಲಿದೆ. ಮೇಕಪ್ ಮಾಡಿಕೊಳ್ಳಲು ಪರವಾನಗಿ ಬೇಕೆಂಬುದೇ ಆ ಕಾನೂನು! ಇಂದಿನ ಪರಿಸ್ತಿತಿಯಲ್ಲಿ ಈ ಕಾನೂನನ್ನು ಗಮನಿಸಿದರೆ ಇದರ ಅಮೂಲಾಗ್ರ ಬದಲಾವಣೆ ಕಂಡಿತ ಅಗಬೇಕಿದೆ. ಏಕೆಂದರೆ ಈ ಕಾನೂನನ್ನು ಉಲ್ಲಂಗಿಸುತ್ತಿರುವ ಅನೇಕ ಅಪರಾದಿಗಳು, ಅಂದರೆ ಮೇಕಪ್ ಮಾಡಿಕೊಂಡ ಮಹಿಳಾ ಮಣಿಗಳು, ರಸ್ತೆಗಳಲ್ಲಿ ಗುಂಪು ಗುಂಪಾಗಿ, ರಾಜಾ ರೋಶವಾಗಿ, ನಿರ‍್ಬಯವಾಗಿ ಅಡ್ಡಾಡುತ್ತಿದ್ದಾರೆ. ಪೆನ್ಸಿಲ್ವೇನಿಯಾ ಅಪರಾದಿಗಳ ನೆಲೆವೀಡಾಗಿದೆ! ಅದಕ್ಕೆ ಕಾನೂನಿನ ಸೂಕ್ತ ಬದಲಾವಣೆ ಅತ್ಯಗತ್ಯ.
ಅಮೇರಿಕಾದಲ್ಲಿನ ಕಾನೂನು ಏನು ಹೇಳುತ್ತದೆ?
ಜನರ ಹಿತ ಕಾಪಾಡುವಲ್ಲಿ ಅಮೇರಿಕಾ ಮಂಚೂಣಿಯಲ್ಲಿರುವ ರಾಶ್ಟ್ರ. ಪ್ಯಾಕೇಜ್ಡ್ ಪುಡ್, ತಂಪು ಪಾನೀಯ, ಔಶದಿ, ಡೈರಿ ಉತ್ಪನ್ನಗಳು, ದರಿಸುವ ಬಟ್ಟೆಗಳು, ಕೊನೆಗೆ ಮಕ್ಕಳಿಗೆ ಹಾಕುವ ಡೈಪರ್‍ಗಳಿಗೂ ನಿಶ್ಟೂರವಾದ ಕಾನೂನಿನ ಚೌಕಟ್ಟಿದೆ. ಇಂತಹ ದೇಶದಲ್ಲಿ ಕಾನೂನಿನ ಚೌಕಟ್ಟಿನಿಂದ ಹೊರಗುಳಿದಿರುವುದು ಮೇಕಪ್ ಸಾಮಗ್ರಿಗಳು ಮಾತ್ರ. ಅಮೇರಿಕಾದ ಕಾನೂನಿನ ಕದಂಬ ಬಾಹುಗಳಿಂದ ತಪ್ಪಿಸಿಕೊಂಡಿರುವ ಕಾರಣ ಮೇಕಪ್ ಸಾಮಗ್ರಿಗಳಿಂದ ಆಗಬಹುದಾದ ಎಲ್ಲಾ ರೀತಿಯ ಅನಾಹುತಗಳಿಗೂ ತಯಾರಿಕಾ ಕಂಪೆನಿಗಳೇ ನೇರ ಹೊಣೆ.
ಮೇಕಪ್‍ಗಾಗಿ 10 ಲಕ್ಶ ರೂಪಾಯಿಗಳು!
ಅಮೇರಿಕಾದಲ್ಲಿನ ಹೆಂಗಸರು ತಮ್ಮ ಜೀವಿತಾವದಿಯಲ್ಲಿ ಕನಿಶ್ಟ 15000 ಡಾಲರ್ (ಅಂದಾಜು 10 ಲಕ್ಶರೂಪಾಯಿಗಳು) ಹಣವನ್ನು ಮೇಕಪ್‍ಗಾಗಿಯೇ ವೆಚ್ಚಮಾಡುತ್ತಾರೆಂದು ಸಮೀಕ್ಶೆಯೊಂದು ಹೇಳುತ್ತದೆ. ಅಮೇರಿಕಾದ ಜನರ ಸರಾಸರಿ ಹಣ ಸಂಪಾದನೆಗೆ ಹೋಲಿಸಿದಲ್ಲಿ ಈ ಮೊತ್ತ ಕಡಿಮೆಯೇನಲ್ಲ. ಬೇರೆ ಮುಂದುವರೆದ ರಾಶ್ಟ್ರಗಳಲ್ಲಿನ ಮಹಿಳೆಯರು ಇದರಲ್ಲಿ ಹಿಂದೆ ಬಿದ್ದಿಲ್ಲ.
ಮೈಬಣ್ಣವನ್ನು ಬಿಳಿಯಾಗಿಸಲು ಜಿಗಣೆಗಳನ್ನು ಬಳಸುತ್ತಿದ್ದರು!
ಸೌಂದರ‍್ಯ ವರ‍್ದಕಗಳ ಇತಿಹಾಸವನ್ನು ಗಮನಿಸಿದರೆ, ಇದರ ಪ್ರವ್ರುತ್ತಿಗಳು ಬಹಳ ಬಾರಿ ತೀವ್ರ ಬದಲಾವಣೆಯನ್ನು ಕಂಡಿರುವುದರಲ್ಲಿ ಯಾವುದೇ ಆಶ್ಚರ‍್ಯವಿಲ್ಲ. ಮದ್ಯಮಯುಗದಲ್ಲಿ ಮಹಿಳೆಯರು ಹಿಮದಂತಹ ಬಿಳಿಯನ್ನು ಆರಾದಿಸುತ್ತಿದ್ದರು. ತಮ್ಮ ಮೈ ಬಣ್ಣವನ್ನು ಬಿಳಿಯಾಗಿಸಲು ಸಕಲ ಪ್ರಯತ್ನಗಳನ್ನೂ ಮಾಡುತ್ತಿದ್ದರು. ಅವುಗಳಲ್ಲಿ ಕೆಲವೊಂದು ಒಳ್ಳೆಯದಲ್ಲದ್ದು. ಆ ಕಾಲದಲ್ಲಿ ಚರ‍್ಮದ ಬಣ್ಣವನ್ನು ಬಿಳಿಯಾಗಿಸಲು ಜಿಗಣೆಗಳನ್ನು ಸಹ ಬಳಸುತ್ತಿದ್ದರೆಂದು ದಾಕಲೆಗಳು ಹೇಳುತ್ತವೆ.
ದಿನಗಳೆದಂತೆ ಹೊಸ ಹೊಸ ಅವಿಶ್ಕಾರಗಳು ಹೊರ ಬಂದಿದ್ದರಿಂದ ಜಿಗಣೆಗಳ ಉಪಯೋಗ ಹಿಂದಕ್ಕೆ ಸರಿದು ಅವುಗಳ ಜಾಗವನ್ನು ರಾಸಾಯನಿಕಗಳು ಆಕ್ರಮಿಸಿಕೊಂಡ ಕಾರಣ ಚರ‍್ಮದ ಬಣ್ಣವನ್ನು ಬದಲಾಯಿಸುವುದು ಇತ್ತೀಚಿನ ದಿನಗಳಲ್ಲಿ ಸುಲಬ ಸಾದ್ಯವಾಯಿತು.
ಹೀಗಿದೆ ಮೇಕಪ್ ಪುರಾಣದ ಹಲವು ರೋಚಕ ಸಂಗತಿಗಳು.
(ಮಾಹಿತಿ ಸೆಲೆ: factshunt.com)
(ಚಿತ್ರ ಸೆಲೆ: stylecraze.com, indoindians.com, beautylish.com)
ಇತ್ತೀಚಿನ ಅನಿಸಿಕೆಗಳು