ಸಣ್ಣಕತೆ: ಬದುಕಿನ ಬುತ್ತಿ

ಕುಮಾರ್ ಬೆಳವಾಡಿ.

ಬೆಳದಿಂಗಳ ರಾತ್ರಿ, ಹತ್ತು ಗಂಟೆಗೆ ಮನೆಗೆ ಬಂದ ರಾಮಣ್ಣ ಊಟ ಮುಗಿಸಿ ಮಲಗಿದನು. ರಾಮಣ್ಣನಿಗೆ ಏನೇನೊ ಆಲೋಚನೆಗಳು, ಶನಿವಾರವಾಗಿದ್ದರೂ ಮನೆಗೆ ಬಂದಿದ್ದ ಬೀಗರನ್ನ ಬಸ್ಸಿಗೆ ಏರಿಸಲು ಮದ್ಯಾಹ್ನ ಹೋದವನು ಹಿಂದಿರುಗುವ ಹೊತ್ತಿಗೆ ರಾತ್ರಿ ಹತ್ತಾಗಿತ್ತು. ಮನೆಗೆ ಬಂದವನೇ ಅಲೋಚನೆಯಲ್ಲಿ ಮುಳುಗಿದ್ದನು. ಮಲಗುತಿದ್ದಂತೆ ಮನದಲ್ಲಿ ಹಲವು ಯೋಚನೆಗಳು ಸರಪಳಿಯಂತೆ ಜೋಡಿಸಿಕೊಂಡು ಹೊರಬರುತ್ತಿದ್ದವು. ಯೋಚನೆಯಲ್ಲಿ  ಮಲಗಿದ್ದವನಿಗೆ ಹಾಯೆನಿಸಿದರೂ, ದೇಹ ಹಾಸಿಗೆಯ ಮೇಲಿತ್ತು ಆದರೆ ಮನಸ್ಸು ಮಾತ್ರ ಮದುವೆ, ಹಣ ಎಂದು ಚಡಪಡಿಸುತ್ತಿತ್ತು. ರಾಮಣ್ಣನಿಗೆ ತಂಗಿಯ ಮದುವೆಯ ಬಗ್ಗೆ ಅಲೋಚನೆ, ಹೇಗಾದರೂ ಮಾಡಿ ಹಣ ಸೇರಿಸಿ ಮದುವೆ ಮಾಡಿ ಮುಗಿಸಿದರೆ ಅಶ್ಟೇ ತನ್ನ ಪಾಲಿಗೆ ಉಳಿದಿರುವ ಕಾರ‍್ಯ ಎಂದು ಯೋಚಿಸುತ್ತಿದ್ದಂತೆ, ಯಾರನ್ನ ಕೇಳಲಿ? ಯಾರು ನನಗೆ ಹಣ ಕೊಡ್ತಾರೆ? ಅನ್ನೋ ಪ್ರಶ್ನೆಗಳು ಮನದಲ್ಲಿ ಅಲೆಯುತಿದ್ದವು. ತನ್ನ ಬಳಿಯಿರುವ ಜಮೀನು, ಅಲ್ಪ ಸ್ವಲ್ಪ ಹಣ ಹೇಗೋ ಆಗುತ್ತದೆ. ಆದರೆ ಉಳಿದ ಕಾರ‍್ಯಗಳಿಗೆ? ಹಾಗೆ ಯೋಚಿಸುತ್ತಿದ್ದಂತೆ ಮನಸ್ಸಿನಲ್ಲಿ ತಕ್ಶಣ ತನ್ನ ಯಜಮಾನರ ಬಳಿ ಕೇಳಬಹುದಲ್ಲ ಅಂದುಕೊಂಡ. ಸರಿ ಬೆಳಿಗ್ಗೆ ಎದ್ದು ಯಜಮಾನ್ರನ್ನ ಸಂದಿಸಿ ಕೇಳಬೇಕೆಂದುಕೊಳ್ಳುತಿದ್ದಂತೆ ನಿದ್ದೆಯಲ್ಲಿ ತೇಲಿಹೋದನು.

ಬೆಳಿಗ್ಗೆ ಎದ್ದವನೇ ಯಜಮಾನ್ರ ಮನೆ ಕಡೆ ಹೊರಟ. ದಾರಿಯಲ್ಲಿ ಹೋಗುತ್ತಿದವನಿಗೆ ಯೋಚನೆಗಳು ಸುರುಳಿಯಂತೆ ತೇಲಿ ಬರುತ್ತಿದ್ದವು. ತನ್ನ ಪಾಲಿನ ಒಂದೇ ಒಂದು ಕಾರ‍್ಯವೆಂದರೆ ಹಣ ಸೇರಿಸಿ ತಂಗಿ ಮದುವೆ ಮುಗಿಸುವುದು ಅಶ್ಟೇ, ಎಂದು ಲೆಕ್ಕ ಹಾಕುತ್ತ ಇನ್ನು ನನ್ನ ಪಾಡು ಹೇಗೋ ನಡೆಯುತ್ತದೆ ಎಂದುಕೊಂಡೇ ಹೊರಟನು. ಆದರೂ ಮನಸಲ್ಲಿ ಗೊಂದಲ ಯಾಜಮಾನ್ರು ಹಣ ಕೊಡ್ತಾರಾ? ಕೊಟ್ರೆ ಹೇಗೋ ಕಶ್ಟನೋ ಸುಕಾನೋ ಮದುವೆ ಮಾಡಿ ಮುಗಿಸ್ತೀನಿ ಇಲ್ಲಾಂದ್ರೆ!? ಯಾರನ್ನ ಕೇಳೋದು? ಕರ‍್ಚಿಗೆ ಏನ್ ಮಾಡೋದು? ಮದುವೆ ಮಾಡೋದಾದ್ರೂ ಹೇಗೆ? ಎಂದು ಯೋಚಿಸುತ್ತಿದ್ದ.

ನಾನು ಕೇಳಿದ್ರೆ ಯಜಮಾನ್ರು ಇಲ್ಲ ಅನ್ನಲ್ಲ. ಒಂದ್ ವೇಳೆ ಇಲ್ಲ ಅಂದ್ರೆ? ಚೇ! ಹಾಗನ್ನಲ್ಲ. ಎಶ್ಟು ವರ‍್ಶದಿಂದ ಅವರ ಮನೆ ಕೆಲಸ ಮಾಡ್ತಿದ್ದೀನಿ ಅಲ್ಲದೆ ಮನೆ ಮಗನಂತೆ ಎಲ್ಲ ಕೆಲಸಕ್ಕೂ ನನ್ನದೇ ರಾಯಬಾರ! ಒಂದ್ ವೇಳೆ ಇಲ್ಲ ಅಂದ್ಬಿಟ್ಟ್ರೆ ನನ್ನ ಈ ಸ್ತಿತಿಗೆ ಯಾರು ಸಹಾಯ ಮಾಡ್ತಾರೆ?

ಹೇ, ಹಾಗನ್ನಲ್ಲ… ಸ್ವಲ್ಪವಾದ್ರೂ ಸಹಾಯ ಮಾಡ್ತಾರೆ. ನಾನು ಅವರ ಮನೆಗೆ ಏನೆಲ್ಲ ಕೆಲಸ ಮಾಡಿದ್ದೀನಿ. ಮನೇಲಿ ಅಕ್ಕಿ, ರಾಗಿ ಹಂಚೋದು, ಹೇಳಿದಕಡೆ, ಕೂಗಿದ ಕಡೆ ಹೋಗೋದು, ಯಾವ ಸಮಯವಾಗ್ಲಿ, ಯಾವ ದಿನವಾಗಲಿ ಅವರ ಮನೆ ಕೆಲ್ಸಕ್ಕೆ ಹೋಗ್ತೀನಿ. ಅವರ ಮನೇಲಿ ಯಾರಾದ್ರೂ ಕಾಯಿಲೆ ಮಲಗಿದ್ರೆ ಅವರಿಗೆ ಉಪಚಾರ ಮಾಡೋದು, ಸಂತೆಗೆ ಹೋಗಿ ಬರೋದು, ಯಾರು ಇಲ್ಲ ಅಂದ್ರೆ ಮನೆ ನೋಡ್ಕೊಳ್ಳೋದು ಎಲ್ಲ ನನ್ನದೇ ತಾನೇ ಜವಾಬ್ದಾರಿ. ಈಗ ಕೆಲ ತಿಂಗಳ ಹಿಂದೆ ಮನೆ ಕಟ್ಟಿಸುವಾಗ ನಾನೇ ಸ್ವತ ನಿಂತು ನೋಡ್ಕೋತಿದ್ದೆ, ಕೆಲಸ ಮಾಡಿಸ್ತಿದ್ದೆ. ಆಮೇಲೆ ಮನೆ ಪೂಜೆಗೆ ಚಪ್ಪರದಿಂದ ಹಿಡಿದು, ತರಕಾರಿ, ದಾನ್ಯ, ಹೂ… ಸಾಲದ್ದಕ್ಕೆ ನೆಂಟರ ಉಪಚಾರದವರೆಗೂ ನನ್ನದೇ ಉಸ್ತುವಾರಿಯಲ್ಲೇ ನಡೆಯಿತಲ್ಲ, ಇಶ್ಟೆಲ್ಲಾ ಮಾಡೋ ನಂಗೆ ಹಣ ಇಲ್ಲ ಅಂತಾರ?

ಒಂದು ವೇಳೆ ಇಲ್ಲ ಅಂದ್ರೆ ಹಣಕ್ಕೆ ಏನ್ ಮಾಡ್ಲಿ? ತನ್ನ ಬದುಕನ್ನ ಯೆಜಮಾನ್ರ ಮನೆಯ ಕೆಲಸಕ್ಕೆ ಮುಡಿಪಾಗಿಟ್ಟಂತೆಯೇ ರಾಮಣ್ಣ ಇದ್ದದ್ದರಿಂದ ಅವನ ಮುಕದಲ್ಲಿ ಏನೋ ನಗು, ಸಂತೋಶ ಎಲ್ಲಾ ಒಟ್ಟಾಗಿ ಮೂಡಿಬರುತಿತ್ತು ಜೊತೆಗೆ ನಡಿಗೆ ಮತ್ತೂ ಬಿರುಸಾಗುತಿತ್ತು ಆದರೂ ಏನೋ ಗೊಂದಲ…

ಹಾಗೆ ಯೋಚಿಸುತ್ತ ಮುನ್ನಡೆದಂತೆ ಕಣ್ಣಲ್ಲಿ ಬಂದ ನೀರನ್ನು ಒರೆಸಿಕೊಂಡು, ತನ್ನ ತಂದೆ ತಾಯಿಯಿದ್ದಿದ್ದರೆ ನಾನು ಈ ರೀತಿ ಕಶ್ಟಪಡಬೇಕಾಗಿರಲಿಲ್ಲ. ಎಲ್ಲಾ ಅವರೇ ನೋಡ್ಕೋತಿದ್ರು. ಅದರೆ ಇಂದು ಅವರ ನೆನಪು ಮಾತ್ರ. ತಂಗಿ ಅಂದರೆ ತಮ್ಮ ಮಗಳ ಮದುವೆ ಅಂದಾಕ್ಶಣ ಅವರಿದ್ದಿದ್ದರೆ ಎಶ್ಟು ಸಂತೋಶಪಡುತಿದ್ದರೋ! ಅಂದುಕೊಳ್ಳುತ್ತ ಮುನ್ನಡೆದ.

ಎಶ್ಟು ಚಿಕ್ಕ ವಯಸ್ಸಿನಲ್ಲೇ ನಮ್ಮಿಬ್ಬರನ್ನು ಬಿಟ್ಟು ಹೋದರು? ಅಂದಿನಿಂದ ನಾನೇ ಆಕೆಗೆ ತಂದೆ ತಾಯಿ ಎಲ್ಲಾ. ಅವರಿದ್ದಿದ್ದರೆ?

ಪಾಪ! ಆಕೆಯೋ, ಆಕೆ ಸ್ವಬಾವವೋ, ಯಾರೊಡನೆ ಹೆಚ್ಚು ಮಾತಾಡೋಲ್ಲ, ಸೇರೋದು ಇಲ್ಲ, ತಾನಾಯಿತು ತನ್ನ ಕೆಲಸವಾಯಿತು. ಅದರೆ ಆಕೆಗೆ ನಾನೆಂದರೆ ಎಶ್ಟು ಪ್ರೀತಿ? ಎಂದೂ ನನಗೆ ಬೇಸರವಾಗೋತರ ಹಿಂತಿರುಗಿ ಮಾತಾಡಿಲ್ಲ, ನನಗೆ ಬೇಸರವಾಗೋತರ ನಡೆದುಕೊಂಡಿಲ್ಲ. ತಾನು ಬರೋವರೆಗೂ ಆಕೆ ಕಾಯುತ್ತಿದ್ದುದ್ದು, ಸ್ವಲ್ಪ ತಡವಾದರೂ ಆಕೆಯ ಮುಕದ ಗಾಬರಿ, ಹಬ್ಬ ಹರಿದಿನಗಲ್ಲಿ ತನಗಾಗಿ ಮಾಡೋ ಉಪಚಾರ, ಓಡಾಟ… ಎಲ್ಲಾ ನೆನೆಯುತಿದ್ದಂತೆ ತನಗೆ ಹೆಮ್ಮೆ ಅನ್ನಿಸಿತು. ಜೊತೆಗೆ ತನ್ನನ್ನು ಬಿಟ್ಟು ಹೋಗುತ್ತಾಳೆನ್ನೋ ದುಕ್ಕವೂ ಒಮ್ಮೆಗೆ ರಾಮಣ್ಣನಿಗೆ ಉಂಟಾಯಿತು. ಮದುವೆಯಾದ ಮೇಲೆ ತನ್ನನ್ನು ಬಿಟ್ಟು ಹೋಗುತ್ತಾಳೆ ಆಮೇಲೆ ನಾನು ಒಂಟಿ ಎಂದು ಯೋಚಿಸುತ್ತ ಬಂದ ದುಕ್ಕವನ್ನ ತಡೆದು ದಾರಿ ಸವೆಸುತಿದ್ದ. ಬೆಳಗಿನ ವೇಳೆ, ಬಾನುವಾರವಾದ್ದರಿಂದ ಯಾರು ಅಡ್ಡ ಸಿಗಲಿಲ್ಲ ಜೋರಾಗಿ ನಡೆಯುತಿದ್ದ.

ಸದ್ಯ ಯಜಮಾನರ ಕಂಡು ಹಣ ಕೇಳಿದ್ರೆ ನನ್ನ ಅರ‍್ದ ಕೆಲಸ ಕಾರ‍್ಯ ಮುಗಿದಂತೆ ಎಂದುಕೊಂಡ.

ನಿರ‍್ಜನವಾದ ರಸ್ತೆ, ಬೆಳಿಗ್ಗಿನ ಚಳಿಗಾಳಿ, ಆಗತಾನೆ ಉದಯಿಸಿ ಕೆಂಪು ರಂಗು ಚೆಲ್ಲುತ್ತಿರುವ ಸೂರ‍್ಯ, ಇವುಗಳ ಮದ್ಯ ರಾಮಣ್ಣ ಮತ್ತು ಅವನ ಯೋಚನೆಗಳು, ಅವುಗಳ ತಾಳಕ್ಕೆ ತಕ್ಕಂತೆ ರಾಮಣ್ಣನ ಹೆಜ್ಜೆಗಳಿಂದ ಸವೆಯುತ್ತಿರುವ ದಾರಿ, ದಾರಿಯಲ್ಲಿ ಹೋಗುತ್ತಿದ್ದಂತೆ ಈ ಮೊದಲು ಬಂದಿದ್ದ ಗಂಡಿನ ಬಗ್ಗೆ ಯೋಚಿಸುತ್ತಾ – ಅವನೊಬ್ಬ ಸರ‍್ಕಾರಿ ಗುಮಾಸ್ತ ಅಂದಮೇಲೆ ಲಂಚ, ಬ್ರಶ್ಟಾಚಾರ ಇವುಗಳಿಂದ ಕೂಡಿದ ಅವನ ಬದುಕನ್ನ ನೆನೆಸಿಕೊಂಡು ಮನಸ್ಸಿನಲ್ಲೇ ಶಪಿಸಿದನು. ಆದರೆ ಈಗ ನೋಡಿರುವವ ಶಾಲೆಯ ಉಪಾದ್ಯಾಯನಂತೆ, ಒಳ್ಳೆಯ ಮನೆತನ, ಒಳ್ಳೆಯ ಹುಡುಗ, ದೂರದ ಊರಿನವನಾದರೇನು ನಯ-ವಿನಯ ತಕ್ಕಂತಿದೆ ಎಂದುಕೊಂಡೇ ದಾರಿ ಸವೆಸುತ್ತಿದ್ದನು.

ಅಂತೂ ಒಳ್ಳೆಯ ಕಡೆ ಸಂಬಂದ, ಯಜಮಾನ್ರ ಹತ್ರ ಹಣ ಕೇಳಿ ತಗೆದುಕೊಂಡ್ರೆ.. ಅಬ್ಬ! ಮದುವೆಯ ಕಾರ‍್ಯ ಅರ‍್ದ ಇಂದಿಗೇನೇ ಮುಗಿದಂತೆ! ಹಣ ದೊರೆಯಿತು ಅಂದ್ರೆ ಆಯಿತು, ನೆಂಟರಿಗೆ ವಿಶಯ ತಿಳಿಸಿ ಅವರಲ್ಲಿ ಬೇಕಾದವರನ್ನ ಮೊದಲು ಕರೆಸಿ ಸ್ವಲ್ಪ ಕಾರ‍್ಯ ಮುಗಿಸಿ ಬಿಡೋಣ ಉಳಿದಿದ್ದು ಹೇಗೋ ನಡೆದುಹೋಗುತ್ತದೆ…

ಹೀಗೆ ಯೋಚನೆಯಲ್ಲಿ ಮುಳುಗಿದ್ದವನಿಗೆ ತಕ್ಶಣ ಏನೋ ಕಂಡವನಂತೆ, ತಿಳಿದವನಂತೆ ಲೆಕ್ಕ ಹಾಕುತ್ತಿದ್ದನು. ಅವನ ಮನಸ್ಸು ಈಗ ಸಮಾಜದ ಕಡೆ ಹರಿಯಿತು. ಅಂತೂ ಮದುವೆ ಗೊತ್ತುಪಡಿಸಿಯಾಗಿದೆ, ಅನವಶ್ಯಕ ಕಾರಣಗಳಿಂದ ಮದುವೆ ನಿಂತರೆ? ತಕ್ಶಣ ದಂಗಾದನು. ತೂ! ಹಾಳು ಸಮಾಜ, ಹಾಳು ಜನಗಳು, ತಲೆಗೊಂದು ಮಾತಾಡ್ಕೋತಾರೆ. ಇವರ ಮದ್ಯ ಏನ್ ಜೀವನ ಮಾಡೋದೋ ಏನೋ! ಹೇಗಿದ್ದರೂ ಆಡ್ಕೋತಾರೆ. ಇದೇ ಗೋಳು ಇವರದು ಏನ್ಮಾಡ್ಬೇಕೋ ಏನೋ? ನನ್ನ ಹಣೆ ಬರಹ ಹೇಗೋ ನಡೀಲಿ ಎಲ್ಲ ದೇವರಿಚ್ಚೆ ಎಂದು ತನ್ನಶ್ಟಕ್ಕೆ ಸಮಾದಾನಗೊಂಡು ಮುಂದುವರೆದನು. ಯಾರು ಏನಾದರೂ ಅಂದ್ಕೊಳ್ಳಿ ಜನರನ್ನ ಒಪ್ಪಿಸೋದು ಸಾದ್ಯವಿಲ್ಲ ನನ್ನ ಪ್ರಯತ್ನ ನಾನು ಮಾಡ್ತೀನಿ ಅಶ್ಟೇ.

ದೇವ್ರೇ! ಹೀಗೆ ಯೋಚಿಸುತ್ತಾ ಯೋಚಿಸುತ್ತಾ ನಡೆದು ಬಂದನು. ತಲೆ ಮೇಲೆತ್ತುತ್ತಿದ್ದಂತೆ ಯಜಮಾನ್ರ ಮನೆ ಹತ್ತಿರಕ್ಕೆ ಬಂದುಬಿಟ್ಟಿದ್ದನು. ಮನಸಲ್ಲಿ ದೇವರನ್ನ ನೆನೆಯುತ ಮನೆಯ ಮುಂದಿನ ಅಂಗಳಕ್ಕೆ ಕಾಲಿಟ್ಟನು.

ಅಂದು ಬಾನುವಾರವಾದ್ದರಿಂದ ಮನೆಯಲ್ಲಿ ಯಜಮಾನರ ಮಗಳನ್ನ ಬಿಟ್ಟು ಯಾರು ಹಾಸಿಗೆಯಿಂದ ಮೇಲೆದ್ದಿರಲಿಲ್ಲ. ಅಂಗಳದಲ್ಲಿ ಕೆಲಸ ಮಾಡುತಿದ್ದ ಯಜಮಾನರ ಮಗಳು ಕನಕ ರಾಮಣ್ಣನನ್ನು ನೋಡಿ, ಯಜಮಾನರು ಇನ್ನು ಎದ್ದಿಲ್ಲ ನೀನು ಉಳಿದ ಕಾರ‍್ಯ ಮುಂದುವರಿಸು ಅಂತ ಹೇಳಿ ಅಡುಗೆ ಮನೆ ಕಡೆ ಹೋದಳು. ಏನೋ ಹೇಳಬೇಕೆಂದು ಹೊರಟ ರಾಮಣ್ಣನ ಬಾಯಿಂದ ಮಾತುಗಳು ಹೊರಬರಲಿಲ್ಲಸುಮ್ಮನೆ ನಡೆದನು.

ರಾಮಣ್ಣನು ತನ್ನ ಕಾರ‍್ಯದಲ್ಲಿ ನಿರತನಾಗಿರುವಾಗ, ಅರ‍್ದ ಗಂಟೆಯ ನಂತರ ಯಜಮಾನರು ಹೊರಗೆ ಬಂದರು. ರಾಮಣ್ಣನ ಮುಕದಲ್ಲಿದ್ದ ಸಂತೋಶ, ನಗು ಗಮನಿಸಿ ವಿಶಯ ಕೇಳಿದರು.  ಯಜಮಾನರಿಗೆ ತಿಳಿದಿದ್ದರೂ ರಾಮಣ್ಣನಿಂದ ಮತ್ತೆ ಕೇಳಿ ತಿಳಿಯಬೇಕೆಂಬ ಕುತೂಹಲದಿಂದ ಕೇಳಿದರು. ರಾಮಣ್ಣ ಎಲ್ಲಾ ವಿಶಯ ತಿಳಿಸಿ ತನ್ನ ತಂಗಿಯ ಮದುವೆಗೆ ಹಣ ಸಹಾಯ ಕೇಳಿದನು. ಹಣದ ವಿಶಯ ಬಂದಾಗ ತಾವು ಕೊಟ್ಟ ಸಾಲದ ಹಣ ಯಾರು ಹಿಂದಿರುಗಿಸಿಲ್ಲ, ಅಕ್ಕಿ ರಾಗಿ ಹಂಚಿರುವ ಹಣವನ್ನೂಹಿಂದಿರುಗಿಸಿಲ್ಲ, ಯಾವ ಹಣವು ನನಗೆ ಬಂದಿಲ್ಲ, ಅಲ್ಲದೇ ನನ್ನ ಬಳಿ ಯಾವ ಹಣವು ಇಲ್ಲದಿರುವಾಗ ನನ್ನಲ್ಲಿ ಸಹಾಯ ಕೇಳ್ತಿದ್ದೀಯ, ಹಣ ಇದ್ದಿದ್ರೆ ಕಂಡಿತ ಕೊಡ್ತಿದ್ದೆ… ಎಂದು ರಾಗ ತೆಗೆದರು. ಇದ್ದಕ್ಕಿದ್ದಂತೆಯೇ ರಾಮಣ್ಣನ ಜೀವ ಪಕ್ಶಿ ಹಾರಿಹೋದಂತಾಯಿತು. ನಿಂತಲ್ಲೇ ಕುಸಿದನು.

ಅಶ್ಟಕ್ಕೇ…

“ಅಣ್ಣಾ…” ಅಂತ ಕರೆದಂತಾಯಿತು. ರಾಮಣ್ಣ ಕಣ್ಣು ಬಿಟ್ಟಾಗ ತಂಗಿ ನೀಲ ಪಕ್ಕದಲ್ಲಿ ನಿಂತಿದ್ದಳು – ಗಂಟೆ ಎಂಟಾಗಿತ್ತು.

(ಚಿತ್ರ ಸೆಲೆ: finalreport.in)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *