ನಿಮಗಿದು ಗೊತ್ತೇ? – ಜರ‍್ಮನಿಯ ಈ ಮರಕ್ಕೆ ಅಂಚೆ ವಿಳಾಸವಿದೆ!
– ಕೆ.ವಿ.ಶಶಿದರ.
Brautigamseiche
Dodauer Forst
23701, Eutin, Germany
ಪ್ರಪಂಚದ ಯಾವ ಮೂಲೆಯಿಂದಾದರೂ ಈ ವಿಳಾಸಕ್ಕೆ ಪತ್ರ ಬರೆಯಿರಿ. ಅದು ನೇರವಾಗಿ ಸೇರುವುದು ಜರ‍್ಮನಿಯ ಡೊಡಯುರ್ ಕಾಡಿನಲ್ಲಿರುವ ಓಕ್ ಮರದ ಪೊಟರೆಯನ್ನು! ಓಕ್ ಮರದ ಕಾಂಡದಲ್ಲಿನ ಪೊಟರೆಯಲ್ಲಿ ಈ ವಿಳಾಸದ ಅನೇಕ ಪತ್ರಗಳನ್ನು ಅಂಚೆಯವರು ಹಲವಾರು ವರ‍್ಶಗಳಿಂದ ಚಾಚೂ ತಪ್ಪದೆ ತಂದು ಹಾಕುತ್ತಿದ್ದಾರೆ. ಆದರಲ್ಲಿ ಪೊಟರೆಯು ಕೈಗೆಟಕುವಶ್ಟು ಎತ್ತರದಲ್ಲಿಲ್ಲ. ಅದನ್ನು ತಲುಪಲು ಇರುವುದು ಒಂದೇ ದಾರಿ. ಮರಕ್ಕೆ ಜೋಡಿಸಿರುವ ಏಣಿಯ ಮೂಲಕ ಮಾತ್ರ.
ಈ ಮರಕ್ಕೆ ಯಾರು ಬೇಕಾದರೂ ಪತ್ರ ಬರೆಯಬಹುದು. ಇದರಲ್ಲಿ ದಾಕಲಾಗುವ ಎಲ್ಲಾ ಪತ್ರಗಳು ಸಾರ‍್ವಜನಿಕ ಆಸ್ತಿಯಂತೆ. ಯಾರು ಯಾವ ಪತ್ರವನ್ನು ಬೇಕಾದರೂ ಓದಬಹುದು, ಮನಸ್ಸಿದ್ದಲ್ಲಿ, ಸರಿ ಎನಿಸಿದಲ್ಲಿ ಯಾರಿಗೆ ಬೇಕಾದರು ಉತ್ತರಿಸಬಹುದು. ಇಶ್ಟವಾದಲ್ಲಿ ಕೊಂಡೊಯ್ಯಬಹುದು. ಇದಕ್ಕೆ ಯಾವುದೇ ಕಟ್ಟು ಪಾಡುಗಳಿಲ್ಲ ಹಾಗೂ ಯಾರ ಅಬ್ಯಂತರವೂ ಇಲ್ಲ.
ಕಳೆದ ನೂರಾರು ವರ‍್ಶಗಳಿಂದ ಈ ಮರದ ವಿಳಾಸಕ್ಕೆ ಪತ್ರಗಳು ಬರುತ್ತಿವೆ. ಸಾವಿರಾರು ಜನ ತಮ್ಮ ಆಸೆ ಆಕಾಂಕ್ಶೆಗಳನ್ನು ವಿವರಿಸಿ, ತಮ್ಮ ಬವಿಶ್ಯದ ಬಾಳ ಸಂಗಾತಿಯನ್ನು ಅರಸಿ ಪತ್ರಗಳನ್ನು ಈ ವಿಳಾಸಕ್ಕೆ ಬರೆದಿದ್ದಾರೆ. ಇಲ್ಲಿಗೆ ಪತ್ರ ಬರೆದ ನಂತರ ನೂರಾರು ಜನರ ಇಚ್ಚೆಗಳು ಈಡೇರಿರುವುದು ಈ ಮರದ ಹೆಗ್ಗಳಿಕೆ. ಮರದ ಪೊಟರೆ ಸೇರುವ ಬಹುತೇಕ ಪತ್ರಗಳಲ್ಲಿನ ಮೂಲ ಬಯಕೆ ಪ್ರೀತಿಯ ಬಾಳ ಸಂಗಾತಿಯನ್ನು ಪಡೆಯುವುದು. ಇದನ್ನು ಮನಗಂಡ ಜರ‍್ಮನ್ ಸರ‍್ಕಾರ ಈ ಓಕ್ ಮರವನ್ನು ಪ್ರಾಕ್ರುತಿಕ ಸ್ಮಾರಕವೆಂದು ನೋಂದಣಿ ಮಾಡಿರುವುದರಿಂದ ಸರ‍್ಕಾರದ ಅಬಯಹಸ್ತ ಇದಕ್ಕಿದೆ.
ಈ ಮರ ಎಲ್ಲಿದೆ?
ಜರ‍್ಮನಿಯ ಡೊಡಯುರ್ ಕಾಡಿನಲ್ಲಿ ಯೂಟಿನ್ ನಗರದ ಬಳಿಯಿರುವ ಈ ಓಕ್ ಮರವು ಗುರುತಿಸಲ್ಪಟ್ಟಿರುವುದು ‘ಮದುಮಗನ ಮರ’ ಎಂದೇ. ಬಿ 76 ಎಂಬ ಪೆಡರೆಲ್ ರಸ್ತೆಯು ಸ್ಕ್ಲೆಸ್ವಿಗ್‍ನಿಂದ ಕೈಲ್‍ಗೆ ಸಂಪರ‍್ಕ ಕಲ್ಪಿಸುತ್ತೆ. ಮದ್ಯೆ ಯೂಟಿನ್, ಪ್ಲಾನ್ ಮುಂತಾದ ನಗರಗಳ ಮೇಲೆ ಹಾದು ಹೋಗುತ್ತದೆ. ಯೂಟಿನ್ ಬಿಟ್ಟ ನಂತರ ಪ್ಲಾನ್ ಕಡೆ ಹೊರಳುವ ಕಡೆ ಈ ‘ಮದುಮಗನ ಓಕ್ ಮರ’ವಿದೆ.
ಈ ಓಕ್ ಮರವು ಒಂದು ಅಂದಾಜಿನ ಪ್ರಕಾರ 500 ವರ‍್ಶಗಳಶ್ಟು ಹಳೆಯದು. ಇದರ ಕಾಂಡದ ಸುತ್ತಳತೆ 16 ಅಡಿಗಳಶ್ಟಿದೆ. 82 ಅಡಿ ಎತ್ತರವಿರುವ ಇದು 30 ಮೀಟರ್‍ನಶ್ಟು ಹರಡಿದೆ. ನೈಸರ‍್ಗಿಕ ಸ್ಮಾರಕವೆಂದು ಜರ‍್ಮನ್ ಸರ‍್ಕಾರ ಗೋಶಿಸಿದ ಬಳಿಕ, ಈ ಮರದ ಪೊಟರೆಯನ್ನು ತಲುಪಲು ಹಾಕಿರುವ ಏಣಿಗೆ ಬೇಕಾಗುವಶ್ಟು ಕಾಲುದಾರಿಯನ್ನು ಹೊರತು ಪಡಿಸಿ ಉಳಿದಂತೆ ಸುತ್ತಲೂ ಮರದ ಬೇಲಿಯನ್ನು ಹಾಕಲಾಗಿದೆ.
ಪೊಟರೆಯ ವಿವರ
ಈ ಪೊಟರೆಯು ನೆಲದಿಂದ ಅಂದಾಜು ಮೂರು ಮೀಟರ್ (ಹತ್ತು ಅಡಿ) ಎತ್ತರದಲ್ಲಿದೆ. ಒಂದು ಅಡಿಯಶ್ಟು ಅಗಲವಿದೆ. ಬಹಳ ಹಳೆಯದಾದ ಈ ಮರದ ಪೊಟರೆ ಕುಸಿಯುವುದನ್ನು ತಡೆಯಲು 90ರ ದಶಕದ ನಡುಬಾಗದಲ್ಲಿ ಅದನ್ನು ಬಿಗಿಗೊಳಿಸಲಾಯಿತು. 2014ರಲ್ಲಿ ಶಿಲೀಂದ್ರಗಳ ಸೋಂಕು ಓಕ್ ಮರದ ಕಾಂಡ ಮತ್ತು ಕೊಂಬೆಗಳಲ್ಲಿ ಕಂಡುಬಂದ ಕಾರಣ ಕೊಂಬೆಗಳನ್ನು ಕಡಿದು ಚಿಕ್ಕದಾಗಿಸಲಾಯಿತು.
ಪೊಟರೆಯು ಅನಾದಿ ಕಾಲದಿಂದಲೂ ‘ಡೆಡ್ ಡ್ರಾಪ್’ ಅಗಿ ಉಪಯೋಗವಾಗುತ್ತಿದೆ.
ಏನದು ಡೆಡ್ ಡ್ರಾಪ್?
ಇಬ್ಬರು ವ್ಯಕ್ತಿಗಳು ಪರಸ್ಪರ ಬೇಟಿಯಾಗದೆ ಸೂಕ್ಶ್ಮ ಮಾಹಿತಿಗಳನ್ನು ಹಂಚಿಕೊಳ್ಳುವ ತಂತ್ರಗಾರಿಕೆಗೆ ಡೆಡ್ ಡ್ರಾಪ್ ಎಂದು ಹೆಸರಿಸಲಾಗಿದೆ. ಮೊದಲೇ ನಿರ‍್ದರಿಸಿಕೊಂಡ ಒಂದು ನಿರ‍್ದಿಶ್ಟ ರಹಸ್ಯ ಸ್ತಳದಲ್ಲಿ ಮಾಹಿತಿಯನ್ನು ಇಡಲಾಗುತ್ತದೆ. ಅಲ್ಲಿಂದ ಅದು ವಿನಿಮಯವಾಗುತ್ತದೆ. ಈ ಡೆಡ್ ಡ್ರಾಪ್ ತಂತ್ರಗಾರಿಕೆಯಿಂದ ತಮ್ಮ ಕಾರ‍್ಯಾಚರಣೆಯ ಗೌಪ್ಯತೆಯನ್ನು ಎರಡೂ ಕಡೆಯವರು ಕಾಪಾಡಿಕೊಳ್ಳುತ್ತಾರೆ.
ಈ ಮರದ ಐತಿಹ್ಯಗಳು ಹಾಗೂ ಸಂಪ್ರದಾಯಗಳು
ಒಬ್ಬ ಸಿಲ್ಟಿಕ್ ದಳವಾಯಿಯನ್ನು ಕಾಡಿನ ಮರಕ್ಕೆ ಬಿಗಿದಿದ್ದಾಗ ಕ್ರಿಶ್ಚಿಯನ್ ಹುಡುಗಿಯೊಬ್ಬಳು ಅವರನ್ನು ಬಿಡಿಸಿದ್ದಳು. ಆಕೆಗೆ ನಮನ ಸಲ್ಲಿಸುವ ಸಲುವಾಗಿ ದಳವಾಯಿಯ ಮಗ ಈ ಮರವನ್ನು ನೆಟ್ಟಿದ್ದು ಎಂಬ ಕತೆಯಿದೆ. ಕ್ರಿಶ್ಚಿಯನ್ ಹುಡುಗಿ ಎಂಬ ಕತೆಯನ್ನು ಕ್ರಿಶ್ಚಿಯನ್ ಮಿಶನರಿಗಳು ಹುಟ್ಟು ಹಾಕಿರುವುದೆಂದು ಇದಕ್ಕೆ ಯಾವುದೇ ಪುರಾವೆ ಇಲ್ಲವೆಂದು ಇತಿಹಾಸಕಾರರು ಅಬಿಪ್ರಾಯ ಪಡುತ್ತಾರೆ.
ಮತ್ತೊಂದು ಸಂಪ್ರದಾಯದಂತೆ, ಒಬ್ಬ ಹುಡುಗಿಯು ಪೂರ‍್ಣ ಚಂದ್ರನಿರುವ ದಿನದಂದು ರಾತ್ರಿ ಈ ಓಕ್ ಮರದ ಸುತ್ತ ಮೌನವಾಗಿ ತನ್ನ ಪ್ರಿಯತಮನ ಬಗ್ಗೆ ಮಾತ್ರ ಯೋಚಿಸುತ್ತಾ, ಮೂರು ಸುತ್ತು ಹಾಕಿದಲ್ಲಿ ಒಂದು ವರುಶದೊಳಗೆ ಆ ಪ್ರಿಯತಮನೊಡನೆ ಮದುವೆಯಾಗುವುದು ನಿಶ್ಚಿತ ಎಂಬ ನಂಬಿಕೆ ಬಲವಾಗಿದೆ.
‘ಮದುಮಗನ ಮರ’ ಎಂದು ಇದಕ್ಕೆ ಹೆಸರು ಬರಲು 19ನೇ ಶತಮಾನದ ಕೊನೆಯಲ್ಲಿ ನಡೆದ ಒಂದು ಗಟನೆಯೇ ಕಾರಣ. ಹೆಡ್ ಪಾರೆಸ್ಟರ್ ಮಗಳಾದ ಓಹರ‍್ಟ್ ಹಾಗೂ ಚಾಕೋಲೇಟ್ ತಯಾರಕನ ಮಗನಾದ ಸ್ಕುಟ್ಟೆ ಪ್ಲೆಸ್ಚೆ ಒಬ್ಬರನ್ನೊಬ್ಬರು ಗಾಡವಾಗಿ ಪ್ರೀತಿಸುತ್ತಿದ್ದರು. ಆದರೆ ಈ ಬಾಂದವ್ಯಕ್ಕೆ ಹೆಣ್ಣಿನ ತಂದೆಯಿಂದ ವಿರೋದವಿತ್ತು. ಆದರೂ ಈ ಪ್ರೇಮಿಗಳು ತಮ್ಮ ಪ್ರೇಮ ಪತ್ರವನ್ನು ಯಾರಿಗೂ ತಿಳಿಯದಂತೆ ಈ ಮರದ ಪೊಟರೆಯಲ್ಲಿ ಅಡಗಿಸಿಟ್ಟು ಅದರ ಮೂಲಕ ತಮ್ಮ ಪ್ರೇಮ ಸಲ್ಲಾಪವನ್ನು ಮುಂದುವರೆಸಿದ್ದರು. ಹಲವು ದಿನಗಳ ನಂತರ ಮಗಳ ಪ್ರೇಮಕ್ಕೆ ಸೋತು ತಂದೆ ಒಪ್ಪಿಗೆ ಸೂಚಿಸಿದ ಮೇಲೆ 1891ರ ಜೂನ್ 2ನೇ ದಿನಾಂಕದಂದು ಈ ಮರದ ಅಡಿಯಲ್ಲೇ ಪ್ರೇಮಿಗಳಿಬ್ಬರೂ ದಂಪತಿಗಳಾದರು.
ಬಾಯಿಂದ ಬಾಯಿಗೆ ಈ ವಿಚಾರ ಹಬ್ಬುತ್ತಿದ್ದಂತೆ ನೂರಾರು ಜನ ತಮ್ಮ ಪ್ರೇಮಿಗಳನ್ನು ಹುಡುಕಲು ಪ್ರೇಮಪತ್ರಗಳನ್ನು ಬರೆದು ಈ ಮರದ ಪೊಟರೆಯಲ್ಲಿ ಹಾಕಲು ಪ್ರಾರಂಬಿಸಿದರು. 1927ರಲ್ಲಿ ಪೊಟರೆಯನ್ನು ತಲುಪಲು ಏಣಿಯನ್ನು ಕಟ್ಟಲಾಯಿತು. ನಂತರದ ದಿನಗಳಲ್ಲಿ ಅಂಚೆ ಸೇವೆಯನ್ನೂ ಸಹ ಒದಗಿಸಲಾಯಿತು. ಅಂಚೆ ಸೇವೆಯನ್ನು ವಾರಕ್ಕೆ ಆರು ದಿನ ನೀಡಲಾಗುತ್ತದೆ. ನಿವ್ರುತ್ತ ಅಂಚೆ ನೌಕರನೊಬ್ಬ ತಿಳಿಸುವಂತೆ 2006ರಲ್ಲಿ ವಿಶ್ವದ ಎಲ್ಲಡೆಯಿಂದ ದಿನವೊಂದಕ್ಕೆ ಐದಾರು ಪತ್ರಗಳು ಈ ವಿಳಾಸಕ್ಕೆ ಬರುತ್ತಿದ್ದವು. ಇದು ಸಾರ‍್ವಜನಿಕ ಪೋಸ್ಟ್ ಬಾಕ್ಸ್.
ಇದುವರೆಗೂ ‘ಮದುಮಗನ ಓಕ್’ನಿಂದ ದಂಪತಿಗಳಾದವರು ನೂರಾರು ಮಂದಿ. ನಿವ್ರುತ್ತ ಅಂಚೆ ನೌಕರ ಈ ಮರದ ಬಗ್ಗೆ 1990ರಲ್ಲಿ ನಡೆದ ಟೆಲಿವಿಶನ್ ಕಾರ‍್ಯಕ್ರಮದಲ್ಲಿ ಬಾಗವಹಿಸಿದ್ದನ್ನು ಟಿವಿಯಲ್ಲಿ ನೋಡಿದ ಹೆಣ್ಣೊಬ್ಬಳು, ಆತನಿಗೆ ನೇರ ಪತ್ರ ಬರೆದು ಮದುವೆಯಾದ ಗಟನೆಗೂ ಈ ಮರ ಸಾಕ್ಶಿಯಾಗಿದೆ.
ಮದುಮಗನ ಓಕ್‍ಗೆ ಮದುವೆ!
25ನೇ ಏಪ್ರಿಲ್ 2009ರಲ್ಲಿ ಈ ಮದುಮಗನಿಗೆ ಡುಸೆಲ್ಡಾರ‍್ಪನಲ್ಲಿರುವ ಹಿಮ್ಮೆಲ್ಜಿಸ್ಟ್ ಚೆಸ್ನೆಟ್ ಜೊತೆ ಸಾಂಕೇತಿಕವಾಗಿ ಮದುವೆಯನ್ನು ಮಾಡಲಾಯಿತು. ಈ ಹಿಮ್ಮೆಲ್ಜಿಸ್ಟ್ ಚೆಸ್ನೆಟ್ ಜರ‍್ಮನಿಯಲ್ಲಿ ತನ್ನದೆ ಆದ ವಿಳಾಸ ಹೊಂದಿರುವ ಮತ್ತೊಂದು ಮರ!
(ಮಾಹಿತಿ ಹಾಗೂ ಚಿತ್ರ ಸೆಲೆ: amusingplanet.com )
ಇತ್ತೀಚಿನ ಅನಿಸಿಕೆಗಳು