ಮೌನವೇ ಏನಾಯಿತು ನಿನಗೆ

– ಗೌರೀಶ ಬಾಗ್ವತ.

ಮೌನವೇ ಏನಾಯಿತು ನಿನಗೆ
ನೀನೇಕೆ ಹೀಗೆ ಮರೆಯಾದೆ
ಮುಸ್ಸಂಜೆಯ ತಂಗಾಳಿಯಲಿ
ಮನಸ ಹಗುರಗೊಳಿಸು

ಈ ತೀರದ ಮರಳಲಿ ಮೂಡಿದೆ
ನಿನ್ನ ಹೆಜ್ಜೆಯ ಗುರುತು
ಮನದ ಬಾಗಿಲಿಗೆ ತಾಕಿದೆ
ನಿನ್ನ ಗೆಜ್ಜೆಯ ಮಾತು

ನಿನ್ನ ಹೆಜ್ಜೆಗೆ ನಾ ಆಸರೆಯಾಗಲು
ಸುಂದರ ನಾಟ್ಯವಾಡಿದೆ ಕಡಲು
ಹೊಂಗಿರಣದಿ ಮಿಂಚಿವೆ ಅಲೆಗಳು
ಮನದಲಿವೆ ನೀನಿಟ್ಟ ಹೆಜ್ಜೆಗಳು

ಸಮಯ ಜಾರಿತು ಅಲೆಗಳ ಎಣಿಕೆಯಲಿ
ತಂಪು ತಂಗಾಳಿ ಮನವ ಸೋಕುತಲಿ
ಪಡುವಣದಿ ರವಿಯು ಮಡಿಯುತಲಿ
ನೋವಿನ ದಿನಗಳ ನೆನಪು ಅಳಿಯಲಿ

ಪ್ರೀತಿಯ ಲಹರಿಯಾಗಿ ನೀ ಪ್ರವಹಿಸಿದೆ
ನಿನ್ನ ಹೆಜ್ಜೆಗಳಲೇ ನಾ ಮುಳುಗಿದೆ
ಜೊತೆಯಾಗಿರಬೇಕೆಂಬ ಕನಸು ನನಸಾಗಿದೆ
ಹೆಜ್ಜೆಯಿಟ್ಟ ಕಾಲಿಗೊಂದು ಪುಟ್ಟ ಗೆಜ್ಜೆಯಿದೆ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *