ಹೊಳಪಿನ ನಾದ ‘ಸಂಗೀತ’!
ಹಾಲಹಸುಳೆಯ ತೊದಲು ಲೀಲೆಯ ಸ್ವರಗಳಲಿ
ಜೋಲುತ ಹರಿವ ನಾದದ! ಲಹರಿಯೆ
ಮೇಲಾದ ದಿವ್ಯ ಸಂಗೀತ!
ಗಿಡಮರದ ಎಲೆಗಳಲಿ ಗುಡುಗು ಮಿಂಚೊಡಲಲ್ಲಿ
ಬಿಡಲಾರದ ಸುರಿವ ಮಳೆಹನಿಯ! ಮುತ್ತಲ್ಲಿ
ಅಡಗಿರುವ ಲಯವೆ ಸಂಗೀತ!
ಎಳೆಬಿಸಿಲ ಆಟದಲಿ ಹೊಳೆಹಳ್ಳ ಜರಿಗಳಲಿ
ಜುಳುಜುಳು ಶಬ್ದದುದರದಲಿ! ಅವಿತಿರುವ
ಹೊಳಪಿನ ನಾದ ಸಂಗೀತ!
ಜೇನು ಹುಳು ಜೇಂಕಾರ ದ್ಯಾನದಲೆ ಓಂಕಾರ
ಮೌನದ ಒಳಗೆ ನೆಲೆಸಿರುವ! ಸರಿಗಮದ
ಗಾನದಮ್ರುತವೆ ಸಂಗೀತ!
ತೊರೆಬಿಟ್ಟ ಮೊಲೆಕಚ್ಚಿ ನೊರೆವಾಲು ಕುಡಿವಾಗ
ಕರುಗಳ ತುಟಿಯ ತುದಿಯಲ್ಲಿ! ಒಸರುವ
ವರದ ಬಿಂದುವೆ ಸಂಗೀತ!
ಬೀಸುವ ಗಾಳಿಯಲಿ ಸೂಸುಕಂಪಲೆಯಲ್ಲಿ
ಮಾಸದ ಹವಳ ಪ್ರಬೆಯಲ್ಲಿ! ಹೊಳೆಯುವ
ಶ್ವಾಸದ ಉಸಿರೆ ಸಂಗೀತ!
ಕಾಳ ಕತ್ತಲೆ ಹಗಲು ವೇಳೆಯನು ಲೆಕ್ಕಿಸದೆ
ಪಾಳಿಯಲಿ ನಾದ ಹೊಮ್ಮಿಸುವ! ಕೀಟಗಳ
ಮೇಳದ ಹಾಡೆ ಸಂಗೀತ!
(ಚಿತ್ರ ಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು