ಐ ಪಿ ಎಲ್ 10 – ಮರುನೋಟ

– ಪ್ರಶಾಂತ್ ಇಗ್ನೇಶಿಯಸ್.

ಮತ್ತೊಂದು ಐ.ಪಿ.ಎಲ್ ಮುಗಿದಿದೆ. 10 ವರ‍್ಶಗಳನ್ನು ಮುಗಿಸಿದೆ ಎಂಬುದು ದೊಡ್ಡ ಸಾದನೆಯೇ. ಐ.ಪಿ.ಎಲ್ ಶುರುವಾದಾಗ ಇದು ಬಹಳ ಕಾಲ ನಡೆಯುವುದಿಲ್ಲ ಎಂದೇ ತುಂಬಾ ಜನ ಕ್ರಿಕೆಟ್ ಪಂಡಿತರು ವ್ಯಂಗ್ಯವಾಡಿದ್ದರು. ಸಾವಿರಾರು ಕೋಟಿ ರುಪಾಯಿಯ ವ್ಯವಹಾರವಾದ ಇದು ಲಾಬ ತರಲು ಸಾದ್ಯವೇ ಎಂಬ ಪ್ರಶ್ನೆ ಮೂಡಿತ್ತು. ಚುನಾವಣೆಯ ಕಾರಣ 2 ನೆಯ ವರ‍್ಶವೇ ದಕ್ಶಿಣ ಆಪ್ರಿಕಾದಲ್ಲಿ ಪಂದ್ಯಗಳನ್ನು ನಡೆಸಬೇಕಾದ ಅನಿವಾರ‍್ಯತೆ ಈ ವಾದಕ್ಕೆ ಮತ್ತಶ್ಟು ರೆಕ್ಕೆ ಪುಕ್ಕ ಮೂಡಿಸಿತ್ತು.

10 ನೇ ವರ‍್ಶದ ಪಂದ್ಯಗಳು ಮುಗಿದಿದೆ. ಗೆದ್ದದ್ದು ಮುಂಬೈ ಇಂಡಿಯನ್ಸ್. ಮುಂಬೈ ಗೆಲ್ಲುವುದರೊಂದಿಗೆ ಒಂದಶ್ಟು ಹಳೆಯ ನಂಬಿಕೆಗಳು ನಿಜವಾಗಿದೆ. ಮೊದಲಿಗೆ ಇತಿಹಾಸ, ಹಿಂದಿನ ಅಂಕಿ ಅಂಶಗಳು ಏನೇ ಆದರೂ, ಅಂದು ಯಾರು ಚೆನ್ನಾಗಿ ಆಡುತ್ತಾರೋ ಅವರೇ ಗೆಲ್ಲುವುದು ಎನ್ನುವ ನಂಬಿಕೆ ಅಂದು ನಿಜವಾಯಿತು. ಈ ವರ‍್ಶ ಪೈನಲ್ ಗೂ ಮೊದಲು ಮುಂಬೈ, ಪುಣೆ ತಂಡಗಳು 3 ಬಾರಿ ಮುಕಾಮುಕಿಯಾಗಿದ್ದವು. ಮೂರರಲ್ಲೂ ಗೆದ್ದಿದ್ದು ಪುಣೆ ತಂಡವೇ. ಪೈನಲ್ ನಲ್ಲಿ ಗೆಲ್ಲುವ ನೆಚ್ಚಿನ ತಂಡ ಪುಣೆಯಾಗಿದ್ದರೂ, ಗೆದ್ದದ್ದು ಅಂದು ಉತ್ತಮವಾಗಿ ಆಡಿದ ಮುಂಬೈ ತಂಡವೇ. ಇದರ ಜೊತೆಗೆ ಲಾ ಆಪ್ ಆವರೇಜಸ್ ಎಂಬ ಮಾತಿದೆ. ಗೆಲ್ಲುತ್ತಲೇ ಇರುವ ತಂಡಕ್ಕೆ ಅತವಾ ಆಟಗಾರನಿಗೆ ಸೋಲು ಅತವಾ ಒಂದು ವೈಪಲ್ಯ ಮುಂದೆ ಇರುತ್ತದೆ ಎಂಬುದು ಈ ಸರಾಸರಿಯ ನಿಯಮ. ಗೆಲುವೇ ಕಂಡ ತಂಡ ಈ ಸರಾಸರಿಯ ತಕ್ಕಡಿಗೆ ತಲೆಬಾಗಲೇ ಬೇಕಾಗುತ್ತದೆ. ಅಂದು ಆದದ್ದು ಅದೇ.

ಕಡಿಮೆ ಮೊತ್ತ ಅಪಾಯಕಾರಿ!

ಕಡಿಮೆ ಮೊತ್ತದ ಸವಾಲು ಯಾವಾಗಲೂ ಅಪಾಯಕಾರಿ ಎಂಬುದು ಮತ್ತೊಂದು ನಂಬಿಕೆ. ಕೇವಲ 130 ರನ್ನುಗಳ ಸವಾಲು ನೀಡಿದ ಮುಂಬೈಯನ್ನು ಪುಣೆ ಸುಲಬವಾಗಿ ಮಣಿಸಬಹುದು ಎಂಬುದು ಎಲ್ಲರ ನೀರಿಕ್ಶೆಯಾದರೂ, ಕಡಿಮೆ ಮೊತ್ತಗಳು ಅಪಾಯಕಾರಿ ಎಂಬುದು ಮತ್ತೆ ನಿಜವಾಯಿತು. ಈ ಸಾಮಾನ್ಯ ಮೊತ್ತವೇ ಪುಣೆ ತಂಡದ ಉಸಿರುಗಟ್ಟಿಸಿ ಕಂಟಕಪ್ರಾಯವಾಯಿತು. 1983ರಲ್ಲಿ ಕೇವಲ 183ರ ಸವಾಲು ನೀಡಿ ವಿಶ್ವಕಪ್ ಗೆದ್ದ ಬಾರತ ತಂಡ ಸಾದನೆಯನ್ನು ಮರೆಯಲಾದೀತೆ?

ನಿರ‍್ಣಾಯಕ ಪಂದ್ಯಗಳಲ್ಲಿ ಮುಂಬೈ ತಂಡಗಳು ಹೋರಾಟಕ್ಕೆ ಹೆಸರುವಾಸಿಯಾಗಿದೆ. ಅವರಿಗೆ ಅಂತಹ ಒತ್ತಡದ ಪಂದ್ಯಗಳನ್ನು ಗೆಲ್ಲುವ ಕಲೆ ಗೊತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಶಯ. ಮುಂಬೈ ಅಂದು ಆ ನಂಬಿಕೆಯನ್ನು ಮತ್ತೆ ನಿಜ ಮಾಡಿತು. ದೇಶೀಯ ಪಂದ್ಯಾವಳಿಗಳಲ್ಲೂ ಅತಿ ಹೆಚ್ಚು ಗೆಲುವು ಕಂಡಿರುವ ಮುಂಬೈ ತಂಡ ಅಂದು ಕೂಡ ಕೊನೆವರೆಗೂ ಚಲ ಬಿಡದೆ ಹೋರಾಡಿತು. ಸೋಲಿನ ದವಡೆಯಿಂದ ಗೆಲುವನ್ನು ಕಸಿದುಕೊಂಡಿತು.

ಇನ್ನೊಂದು ನಂಬಿಕೆ ಎಂದರೆ ಕ್ರೀಡೆಯಲ್ಲಿ ಕೊನೆಗೆ ಗೆಲ್ಲುವ ತನಕ ಅದು ಗೆಲುವಲ್ಲ, ಅದು ಗೆಲುವಿನ ಕಡೆಗೆ ನಡಿಗೆಯಶ್ಟೇ. ಇಲ್ಲಿ ಆದದ್ದು ಅದೇ. ಪುಣೆ ತಂಡ 72ರ ತನಕ ಕಳೆದುಕೊಂಡಿದ್ದು ಕೇವಲ 1 ವಿಕೆಟ್ ಅಶ್ಟೇ. ಗೆದ್ದಂತೆ ಬಾಸವಾಗುತ್ತಿದ್ದ ಪಂದ್ಯದಲ್ಲಿ ಕ್ರೀಡೆಗಳಲ್ಲಿನ ಈ ನಂಬಿಕೆಯನ್ನು ಪುಣೆ ತಂಡಕ್ಕೆ ಮತ್ತೆ ನೆನಪಿಸಲಾಯಿತು. ಒಟ್ಟಿನಲ್ಲಿ ರಹಾನೆ ಆಟ ಸಾಲಲ್ಲಿಲ್ಲ, ದೋನಿ ಕೈ ಹಿಡಿಯಲಿಲ್ಲ, ಸ್ಮಿತ್ ಆಟ ದಡ ತಲುಪಿಸಲಿಲ್ಲ. ಮುಂಬೈ ಮೂರನೆ ಬಾರಿ ವಿಜೇತ ತಂಡವಾಯಿತು.

ಐ ಪಿ ಎಲ್ 10 – ಮಿಂಚಿದವರು

ಈ ಹತ್ತು ವರ‍್ಶಗಳಲ್ಲಿ ಅನೇಕ ಯುವ ಆಟಗಾರರು ಐ.ಪಿ.ಎಲ್ ವೇದಿಕೆಯಲ್ಲಿ ಅರಳಿದ್ದಾರೆ. ಈ ವರ‍್ಶವೂ ಒಂದಶ್ಟು ಹೊಸ ಆಟಗಾರರು ಜನರ ಮನಸೆಳೆಯಲು ಯಶಸ್ವಿಯಾದರು. ತಂಪಿ, ತ್ರಿಪಾಟಿ, ರಾಣಾ, ಉನಾದ್ಕಟ್, ಐಯರ್, ಪಂತ್, ಇಶಾನ್, ಕ್ರುನಾಲ್ ಮುಂತಾದ ಆಟಗಾರರು ಗಮನ ಸೆಳೆದರೆ ವಾರ್‍ನರ್ , ಗಂಬೀರ್, ದವನ್, ಸ್ಮಿತ್, ರೈನಾ, ಬುವಿಯಂತಾ ಅನುಬವಿಗಳು ತಮ್ಮ ಕೈ ಚಳಕ ತೋರಲು ಮರೆಯಲಿಲ್ಲ. ಕರ‍್ನಾಟಕದ ಉತ್ತಪ್ಪ, ಪಾಂಡೆ ಸಾಕಶ್ಟು ಮಿಂಚಿದರು.

ಐ ಪಿ ಎಲ್ 10  – ಆರ್ ಸಿ ಬಿ ಕತೆ-ವ್ಯತೆ!

ಇನ್ನೂ ಆರ್.ಸಿ.ಬಿ ಗೆ ಇದು ಅತಿ ಕೆಟ್ಟ ವರ‍್ಶವಾಯಿತು. ಗೇಲ್, ಕೊಹ್ಲಿ, ಏ ಬಿ ರಂತ ಆಟಗಾರರಿದ್ದರೂ ಸೋತದ್ದೇಕೆ ಎಂಬ ಪ್ರಶ್ನೆ ಎದುರಿಸಬೇಕಾಯಿತು. ಹೊಸ ಹುಲ್ಲು, ಮಣ್ಣು ತುಂಬಿದ ಚಿನ್ನಸ್ವಾಮಿಯ ಅಂಕಣ ಈ ಬಾರಿ ಬ್ಯಾಟಿಂಗಿಂತ ಬೌಲರುಗಳಿಗೆ ನೆರವಾಗುತ್ತಿತ್ತು ಎಂಬುದು ಎದ್ದು ಕಾಣುತ್ತಿತ್ತು. ಇದನ್ನು ತಂಡ ಮತ್ತು ತರಬೇತುದಾರರು ಅರ‍್ತ ಮಾಡಿಕೊಂಡು ತಕ್ಕ ಯೋಜನೆಗಳನ್ನು ಹಾಕಿಕೊಂಡಂತೆ ಕಾಣಲಿಲ್ಲ. ಬ್ಯಾಟ್ಸ್ ಮನ್ ಗಳ ಮೂಲಕವೇ ಗೆಲುವು ಕಾಣಲು ಹೊರಟ ತಂಡ ಸ್ವಂತ ಅಂಕಣದಲ್ಲೇ ಮುಗ್ಗರಿಸಿತ್ತಲ್ಲದೇ ಬೇರೆ ಅಂಕಣದಲ್ಲಿ ಆಡಲು ಬೇಕಾದ ಆತ್ಮವಿಶ್ವಾಸವನ್ನು ಗಳಿಸಿಕೊಳ್ಳಲೇ ಇಲ್ಲ. ಆರ್ ಸಿ ಬಿ ನಿರೀಕ್ಶಿತ ಕೊನೆಯನ್ನೇ ಕಂಡಿತು!

(ಚಿತ್ರ ಸೆಲೆ: twitter.com/iplt20criclive )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: