ಹಳ್ಳಿಯಲ್ಲೊಂದು ಬೆಳಗು

– ವಿನು ರವಿ.

ನಬದಲ್ಲಿ ಸೂರ‍್ಯಕಾಂತಿ
ಹೂವರಳಿದಂತೆ
ನೇಸರನ ಚೆಲುವಿನಾ ರಂಗು
ನೀಲಬಿಂಬ ಹೊತ್ತ
ಪುಟ್ಟ ಕೆರೆಯಲ್ಲಿ
ತಳತಳಿಸುತ್ತಿದೆ ಬೆಳಗು

ಹಸುರು ಅವರೆ
ರಾಗಿ ತೆನೆಗಳು
ತಂಗಾಳಿಗೆ ಕಂಪು ತುಂಬಿ
ತೊನೆದಾಡಿವೆ

ಹಕ್ಕಿಗಳ ಚಿಲಿಪಿಲಿ
ಹಳ್ಳಿಯ ಬದುಕು
ಆರಂಬ

ಹಿತ್ತಲಲ್ಲಿ ಮಲ್ಲಿಗೆ,
ಸಂಪಿಗೆ, ಕಣಗಿಲೆ
ಹೂಗಳ ಗಮಲು
ಅಡುಗೆ ಮನೆಯಲ್ಲಿ
ಸೌದೆ ಒಲೆಯ
ಸರಬರ ಸದ್ದು

ಕಾಸಿದ ಹಾಲಿನ
ಬೆಣ್ಣೆಯ ಗಮಲು
ಬೆಲ್ಲದ ಕಾಪಿ
ತುಪ್ಪ ಸುರಿದು ಮಾಡಿದ
ಉಪ್ಪಿಟ್ಟಿಗೆ ಮನೆಯೆಲ್ಲಾ
ಹಸಿವು

ಬಸಿರಿಯ ಬಯಕೆ
ಬಾಣಂತಿಯ ಆರೈಕೆಗೆ
ಅವ್ವ ಅಜ್ಜಿಯ ಸಡಗರದ ಓಡಾಟ

ಅಂಗಳದಲ್ಲಿ ಎಲೆ
ಅಡಿಕೆಯ ಕೊಟ್ಟಣದ
ಸದ್ದು
ಹೈಕಳ ಆಟದ ಜೋರಿಗೆ
ಅಜ್ಜಿಯ ವಟವಟವೂ
ಸೇರಿದೆ

ಹೆಂಚಿನ ಮನೆ ಮೇಲೆಲ್ಲಾ
ಹೊಗೆಯದೇ ಕಾರುಬಾರು
ನೀರುಮನೆಯಲ್ಲಿ
ಹರಳೆಣ್ಣೆ ಸೀಗೆಯ
ಜೊತೆಗೆ ಎಳೆಯ
ಕಂದನ ಕೀರಲು
ದನಿ ಜೋರು

ಅವ್ವ ಅಜ್ಜಿಯ ಮುದ್ದು
ಗರೆತದ ಮಾತಿನ
ಹಿತ
ಅಂಗಳದ ತುಂಬೆಲ್ಲಾ
ಹಸು ಮೇಕೆ
ಕುರಿ, ಕೋಳಿಯ
ಆಲಾಪಕ್ಕೆ ಮನೆಯಾಕೆಯ
ಮಾತಿನ ಮೇಳ

(ಚಿತ್ರ ಸೆಲೆ:  outdoor-photos.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: