ತಾಳಿಕೋಟೆ ದ್ಯಾಮವ್ವ – ಜನಪದ ಕತೆ

– ಅನಿಲಕುಮಾರ ಇರಾಜ.

ಈಗಿರುವ ವಿಜಯಪುರ ಜಿಲ್ಲೆಯಲ್ಲಿ ಒಂದು ದೊಡ್ಡ ಪಟ್ಟಣ, ಡೋಣಿ ನದಿಯ ದಡದಲ್ಲಿರುವ ಪ್ರಮುಕ ವ್ಯಾಪಾರಿ ಕೇಂದ್ರ, ಅದುವೆ ತಾಳಿಕೋಟೆ. ಊರು ಅಂದಮೇಲೆ ಅದಕ್ಕೊಂದು ಇತಿಹಾಸ ಇದ್ದೇ ಇರುತ್ತದೆ. ಕರ‍್ನಾಟಕದ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದ ಕೆಲವು ಊರುಗಳ ಹೆಸರುಗಳಲ್ಲಿ ತಾಳಿಕೋಟೆಯೂ ಒಂದು. ವಿಜಯನಗರ ಸಾಮ್ರಾಜ್ಯದ ಅಂತಿಮ ಕದನ 1565 ರಲ್ಲಿ ನಡೆದ ‘ರಕ್ಕಸಗಿ ತಂಗಡಗಿ’ ಕದನಕ್ಕೆ ತಾಳಿಕೋಟೆ ಕದನ ಎಂದು ಹೇಳಲಾಗುತ್ತದೆ.

ಈ ಊರಿನ ಕೋಟೆ ತಾಳಿ ಆಕಾರದಲ್ಲಿ ಇದ್ದುದಕ್ಕೆ ತಾಳಿಕೋಟೆ ಎಂದು ಹೆಸರು ಬಂತು ಅಂತ ಒಂದು ನಂಬಿಕೆ. ತಾಳೆಯ ಮರಗಳಿಂದ ಈ ಕೂಡಿದ ಈ ಊರಿನ ಕೋಟೆಗೆ ತಾಳಿಕೋಟೆ ಎಂಬ ಹೆಸರು ಬಂತು ಅಂತ ಇನ್ನೊಂದು ನಂಬಿಕೆ. ಇನ್ನು ಕೋಟೆ ಗೋಡೆ ಬದ್ರವಾಗಿ ನಿಲ್ಲಲು ಜೀವಂತವಾಗಿ ಬಲಿ ಹೋಗಿ ಅನೇಕ ವರ‍್ಶಗಳವರೆಗೆ ಬೇಡಿಕೊಂಡವರಿಗೆ ಮದುವೆಗೆಂದು ತನ್ನ ತಾಳಿಯನ್ನೇ ಕೊಡುತಿದ್ದ ‘ದ್ಯಾಮವ್ವ’ನಿಂದಾಗಿ ‘ತಾಳಿ ಕೊಡುವ ಕೋಟೆ’ ಮುಂದೆ ತಾಳಿಕೋಟೆಯಾಯಿತು ಎಂದು ಕೂಡ ಹೇಳಲಾಗುತ್ತದೆ. ತಾಳದ ಕೋಟೆ (ಗಟ್ಟಿ ನಿಲ್ಲದ್ದರಿಂದ) ತಾಳಿಕೋಟೆಯೂ ಆಗಿರಬಹುದು.

ದ್ಯಾಮವ್ವ ಉತ್ತರ ಕರ‍್ನಾಟಕದ ಅನೇಕ ಹಳ್ಳಿ ಪಟ್ಟಣಗಳಲ್ಲಿ ಗ್ರಾಮದೇವತೆಯಾಗಿ ಪೂಜಿಸಲ್ಪಡುವ ರೀತಿಯಲ್ಲಿ ತಾಳಿಕೋಟೆಯಲ್ಲಿಯೂ ಕೂಡ ಪೂಜಿಸಲ್ಪಡುತ್ತಾಳೆ. ಆದರೆ ಇಲ್ಲಿ ಹೇಳುತ್ತಿರುವದು ಗ್ರಾಮ ದೇವತೆ ದ್ಯಾಮವ್ವಳ ಕತೆಯಲ್ಲ. ಅದು ಕೋಟೆಯ ಗೋಡೆಯಲ್ಲಿ ಜೀವಂತವಾಗಿ ತನ್ನ ತಮ್ಮ ಸುಲಿಯಲ್ಲ ನೊಂದಿಗೆ ಬಲಿ ಹೋದ ದ್ಯಾಮವ್ವನ ದುರಂತ ಜನಪದ ಕತೆ.

ಗಟ್ಟಿಯಾದ ಕೋಟೆ ಬೇಕೆಂದು, ತಾಳಿಕೋಟೆಯಲ್ಲಿ ಬ್ರುಹದಾಕಾರದ ಬಂಡೆಗಳನ್ನು ಹೊಂದಿಸಿ ಕೋಟೆ ಕಟ್ಟುವ ಕೆಲಸ ಸಾಗಿತ್ತು. ಆದರೆ ಎಶ್ಟೇ ಪ್ರಯತ್ನ ಪಟ್ಟರೂ ಗೋಡೆ ಗಟ್ಟಿಯಾಗಿ ನಿಲ್ಲುತ್ತಿರಲಿಲ್ಲ. ಅನೇಕ ಶಿಲ್ಪಿಗಳು ಪ್ರಯತ್ನಿಸಿ ಕೈ ಚೆಲ್ಲಿ ಕುಳಿತರು. ದೊರೆಗೆ ಚಿಂತೆಯಾಯಿತು. ಯಾರದೋ ಸಲಹೆ ಮೇರೆಗೆ ಹೊತ್ತಗೆ ತೆಗೆಸಿ ನೋಡಲಾಗಿ ಕೋಟೆಗೆ ನರಬಲಿ ಕೊಡಬೇಕು, ಅಮವಾಸ್ಯೆಯ ದಿನ ಪೂರ‍್ವ ದಿಕ್ಕಿನಿಂದ ಬರುವ ಬಾಲಕನೇ ಆಗಿರಬೇಕು ಅಂತ ತಿಳಿಯಿತು. ದೊರೆಯ ಆದೇಶದಂತೆ ಎಲ್ಲಾ ದಿಕ್ಕಿನ ಪ್ರವೇಶದ್ವಾರಗಳಲ್ಲಿ ಕಾವಲುಗಾರರು ನೇಮಕಗೊಂಡರು. ಪಹರೆ ಶುರುವಾಯಿತು. ಪೂರ‍್ವ ದಿಕ್ಕಿನ ದ್ವಾರಕ್ಕೆ ವಿಶೇಶ ಪಹರೆ ಹಾಕಿದರು. ತಿಂಗಳುಗಳು ಉರುಳಿದರೂ ಆ ದಿಕ್ಕಿನಿಂದ ಯಾವೊಬ್ಬ ಬಾಲಕ ಬರಲಿಲ್ಲ.

ದ್ಯಾಮವ್ವನದು ಬಾಲ್ಯ ವಿವಾಹ. ತಾಳಿಕೋಟೆ ಪೂರ‍್ವದಿಕ್ಕಿನಲ್ಲಿರುವ ಈಗಿನ ಯಾದಗಿರಿ ಜಿಲ್ಲೆಯ ರುಕುಮಾಪುರ ಅವಳ ತವರೂರು. ಆರಾರಾಯರ ಮನೆತನದ ಮಗಳು ದ್ಯಾಮವ್ವ (ದ್ಯಾವಮ್ಮ), ತಾಳಿಕೋಟೆಯ ಬೂರಾರಾಯರ ಮನೆಗೆ ಸೊಸೆಯಾಗಿ ಬಂದವಳು. ಮರಳಿ ತವರು ಮನೆ ಕಂಡಿರಲಿಲ್ಲ. ಅತ್ತೆ ಮಾವನವರ ಸೇವೆ ಮಾಡುತ್ತ ವರ‍್ಶಗಳು ಕಳೆದಿದ್ದವು.

ದ್ಯಾಮವ್ವಳ ಮದುವೆಯಾದ ಬಹಳ ದಿನಗಳ ಬಳಿಕ ಆರಾರಾಯರಿಗೆ ಗಂಡು ಮಗು ಹುಟ್ಟಿತು. ಅವನೇ ‘ಸುಲಿಯಲ್ಲ’. ಈ ಸಂಗತಿ ದ್ಯಾಮವ್ವಳಿಗೆ ತಿಳಿದಿರಲಿಲ್ಲ. ಸುಲಿಯಲ್ಲ ತಂದೆ ತಾಯಿಯ ಪ್ರೀತಿಯಲ್ಲಿ ಬಲು ಚುರುಕಾಗಿ, ಚೂಟಿಯಾಗಿ ಬೆಳೆಯುತ್ತಿದ್ದ. ಓಣಿಯ ಹುಡುಗರೊಂದಿಗೆ ಕೂಡಿ ಚಿಣಿ-ಪಣಿಯಾಟ, ಬಗರಿಯಾಟ ಆಡುತ್ತಿದ್ದ. ಒಂದು ದಿನ ಚಿಣಿ-ಪಣಿ(ಚಿನ್ನಿ-ದಾಂಡು) ಆಡುವಾಗ ಅದು ಹೆಂಗಳೆಯರು ತಲೆಯ ಮೇಲೆ ಹೊತ್ತೊಯ್ಯುತಿದ್ದ ಮಣ್ಣಿನ ಕೊಡಕ್ಕೆ ತಾಗಿ ಕೊಡ ಒಡೆದು ಹೋಯಿತು. ಆ ಹೆಣ್ಣುಮಗಳು – ‘ಅಕ್ಕ ತಂಗಿಯರಿಲ್ಲದ ಮೂಳ’ ಎಂದು ಸಿಟ್ಟಿನಿಂದ ಬೈದು ಹೋದಳು.

ಮನೆಗೆ ಬಂದ ಸುಲಿಯಲ್ಲ ತಾಯಿಯನ್ನು ಕೇಳಿದ ‘ನನಗೆ ಅಕ್ಕ ತಂಗಿಯರಿಲ್ಲವೇ?‘ ಎಂದು ಕೇಳಿದ. ಹಿರಿಯ ಮಗಳು ಗಂಗಮ್ಮ ಏಳು ವರ‍್ಶದವಳಿದ್ದಾಗ ತೀರಿದಳು, ಕಿರಿಯವಳು ದ್ಯಾಮವ್ವ ತಾಳಿಕೋಟೆಯ ಬೂರಾರಾಯರ ಮನೆಗೆ ಲಗ್ನ ಮಾಡಿ ಕೊಟ್ಟಿರುವದಾಗಿ ತಾಯಿ ಹೇಳಿದಳು. ಅಕ್ಕ ತಾಳಿಕೋಟೆಯಲ್ಲಿರುವ ವಿಶಯ ತಿಳಿದೊಡನೆ ಅವಳನ್ನ ನೋಡಬೇಕು, ಬೇಟಿಯಾಗಬೇಕು ಅಂತ ಕೂಡಲೆ ತಾಳಿಕೋಟೆಗೆ ಹೋಗಲು ಸುಲಿಯಲ್ಲ ಅಣಿಯಾದ. ಆದರೆ ತಾಯಿ ‘ಈಗಲೆ ಹೋಗಬೇಡ’ ಎಂದು ಎಶ್ಟು ಹೇಳಿದರು ಕೇಳದೆ ಹಟಹಿಡಿದ.

ಮನೆಯಿಂದ ಹೋಗುವಾಗ ಬೆಕ್ಕು ಅಡ್ಡ ಬಂದಿತು. ಅದು ಅಪಶಕುನವಾಯಿತು ಬೇಡ ಹೋಗಬೇಡ ಎಂದಳು. ಅಶ್ಟರಲ್ಲಿ ಗುದ್ದಲಿ ಸಲಕೆ ಎದುರಿಗೆ ಬಂದವು. ಅದು ಕೂಡ ಅಪಶಕುನ ಬೇಡ ಹೋಗ ಬೇಡ ಎಂದು ತಾಯಿ ಹೇಳಿದಳು. ಆದರೂ ಕೇಳಲಿಲ್ಲ, ಮನೆಯ ಮುಕ್ಯದ್ವಾರ ದಾಟುವಾಗ ಹೊಸ್ತಿಲ ಎಡವಿದ. ಆಗಲೂ ಅವ್ವ ಬೇಡ ಹೋಗಬೇಡ ಅಪಶಕುನಗಳಾಗಿವೆ ಎಂದು ಎಶ್ಟೇ ಹೇಳಿದರೂ ಕೇಳದಿದ್ದಾಗ, ಮರಳಿ ಯಾವಾಗ ಬರುವಿ ಅಂತ ಕೇಳಿದಳು ಹಡೆದ ತಾಯಿ. ಅದಕ್ಕೆ ಸುಲಿಯಲ್ಲ ಹೇಳಿದ “ಅವ್ವ, ತುಂಬಿದ ಕೊಡದಲ್ಲಿ ನೀರು ತುಂಬಿಸಿ ಅದರಲ್ಲಿ ನಿಂಬೆಹಣ್ಣು ಹಾಕು. ಅದು ತೇಲಿದರ ಮಗ ಬರತಾನ ಮುಳಗಿದರ ಮಗ ಮುಳಗ್ಯಾನ ಅಂತ ತಿಳಿ” ಅಂತ ಹೇಳಿದ. ಹಡೆದ ತಾಯಿ ಕೊನೆಗೊಂದು ಮಾತು ಹೆಳುತ್ತಾಳೆ “ಹೋಗುವ ದಾರಿಯಲ್ಲಿ ಬಾವಿಯಲ್ಲಿ ಇಣುಕಿ ನೋಡಬೇಡ” ಎಂದು.

ದಾರಿಯಲ್ಲಿ ಹೊಲಗಳಲ್ಲಿ ಗಳೆ ಹೊಡೆಯುವ ರೈತರನ್ನು, ಕುರಿ ಕಾಯುವ ಕುರುಬರನ್ನು ತಾಳಿಕೋಟೆಗೆ ಹೋಗಲು ದಾರಿ ಕೇಳುತ್ತಾನೆ. ಆದರೆ ಅವರು ಚಿಕ್ಕ ಬಾಲಕ ಮರಳಿ ಮನೆಗೆ ಹೋಗಲಿ ಎಂದು ಯಾರು ದಾರಿ ತೋರಿಸಲಿಲ್ಲ. ಅವರಿಗೆಲ್ಲ “ಬಾರುಕೋಲು ಹಾವಾಗಲಿ, ಕುರುಬರ ಜೋಡು ಚೇಳಾಗಲಿ” ಅಂತ ಶಾಪ ಹಾಕುತ್ತ ಮುನ್ನಡೆದು ತಾಳಿಕೋಟೆ ತಲುಪಿದ.

ಮೊದಲಬಾರಿಗೆ ಅಕ್ಕನ ಬೇಟಿಯಾಗಲು ಬಂದವ ಬಾಲಕ ಸುಲಿಯಲ್ಲ, ಅವಳಿಗೆ ಮುತ್ತೈದೆ ಬಾಗಿನಗಳನ್ನು ಕರೀದಿಸಲು ಮೊದಲಿಗೆ ಜಾಡರ ಮನೆಗೆ ಹೋಗಿ ದ್ಯಾಮವ್ವಗ ಒಪ್ಪುವಂತ ಸೀರೆ ಕೊಡಿರೆಂದು ಕೇಳಿ ಸೀರೆ ಕೊಳ್ಳುತ್ತಾನೆ .ಅಲ್ಲಿಂದ ಮುಂದೆ ಸಿಂಪಿಗೇರ ಮನೆಗೆ ಹೋಗಿ ಕುಪ್ಪಸ ಕೇಳಿ ಕೊಳ್ಳುತ್ತಾನೆ. ಹೀಗೆ ಬಳೆಗಾರ ಮನೆಯಿಂದ ಬಳೆ, ಬುಗುಟಗೇರ ಮನೆಯಿಂದ ಚಂದ್ರ, ಜೀರ ಮನೆಯಿಂದ ಹೂ ದಂಡಿ, ಸ್ವಾಮಿಗಳ ಮನೆಯಿಂದ ಲಿಂಗ, ಅರಿಸಿನ, ಕುಂಕುಮ, ಹೀಗೆ ಚಾಜ (ಗೌರವ) ಮತ್ತು ಮಂಗಲಕರವಾದ ವಸ್ತುಗಳನ್ನು ಕಟ್ಟಿಕೊಂಡು ಊರ ಮುಂದಿನ ಬಾವಿಯ ಹತ್ತಿರ ಬಂದು ನೀರು ತರಲು ಬಂದಿದ್ದ ನಾರಿಯರಿಗೆ, ದ್ಯಾಮವ್ವಳಿಗೆ ಅವಳ ತಮ್ಮ ಸುಲಿಯಲ್ಲ ಬಂದಿರುವ ಸುದ್ದಿ ತಿಳಿಸಲು ಕೋರಿದ.

ನಾರಿಯರು ಈ ಸುದ್ದಿ ಹೇಳಿದಾಗ ಅದನ್ನು ನಂಬದ ದ್ಯಾಮವ್ವ ‘ನನಗ ಅಣ್ಣ ತಮ್ಮಂದಿರು ಇಲ್ಲ ಅಂತ ಅಣಕು ಮಾಡತೀರಿ’ ಅಂತ ಕೇಳಿದಳು. ನಾರಿಯರೆಲ್ಲ ಸೂರ‍್ಯ ಚಂದ್ರರ ಮೇಲಾಣೆ, ಹೊತ್ತ ಕೊಡದ ಮೇಲೆ ಆಣೆ ಮಾಡಿ ಹೇಳಿದಾಗ ನಂಬಿ ಅವರೊಂದಿಗೆ ಬಾವಿಯತ್ತ ಹೊರಟಳು. ದ್ಯಾಮವ್ವಳ ಲಗ್ನ ಮಾಡಿಕೊಟ್ಟ ಮೇಲೆ ಸುಲಿಯಲ್ಲ ಹುಟ್ಟಿದ್ದು. ಅವಳಿಗೆ ತಮ್ಮ ಹುಟ್ಟಿರುವ ಸುದ್ದಿ ಗೊತ್ತಿರಲಿಲ್ಲ. ಬಾವಿಯ ಹತ್ತಿರ ಬಂದು ತಮ್ಮನನ್ನು ಕಂಡು ಸಂತೋಶದಿಂದ ಬಿಗಿದಪ್ಪಿಕೊಳ್ಳುತ್ತಾಳೆ. ಮನೆಗೆ ಕರೆತಂದು ಪ್ರೀತಿಯಿಂದ ಎಣ್ಣೆ ಸ್ನಾನ ಮಾಡಿಸಿ ಹೋಳಿಗೆ ಊಟ ಬಡಿಸುವ ತಯಾರಿ ನಡೆಸಿದಳು.

ಆದರೆ ಅವಳಿಗೊಂದು ಆಗಾತ ಕಾದಿತ್ತು. ಅಮವಾಸ್ಯೆಯ ದಿನ ಪೂರ‍್ವ ದಿಕ್ಕಿನಿಂದ ಬರುವ ಬಾಲಕನಿಗಾಗಿ ಕಾಯುತಿದ್ದ ಪಹರೆದಾರನಿಗೆ ದ್ಯಾಮವ್ವಳ ನಾದಿನಿ ಸುದ್ದಿ ತಲುಪಿಸಿ ಬಿಟ್ಟಿದ್ದಳು. ತಡಮಾಡದೆ ಬಂದ ಪಹರೆದಾರರು ಮನೆಹೊಕ್ಕು ಸುಲಿಯಲ್ಲನ ರಟ್ಟೆಗೆ ಹಗ್ಗ ಕಟ್ಟಿ ಎಳೆದೊಯ್ಯಲಾರಂಬಿಸಿದರು.

ಈ ಪ್ರಸಂಗವನ್ನು ಜನಪದ ಗರತಿಯರ ಕೋಲಾಟದ ಪದಗಳ ಹಾಡಿನಲ್ಲಿ ಕೇಳಬೇಕು. ಎಳೆದುಕೊಂಡು ಹೊರಟ ಪಹರೆದಾರರಿಂದ ತಮ್ಮನ ಕಾಪಾಡಿ ಅಂತ ಅಕ್ಕ ಓಣಿಯ ಜನರನ್ನ ಪರಿ ಪರಿಯಾಗಿ ಕೇಳುತ್ತಾಳೆ. ಅದಕ್ಕೆ ಅವರು ‘ಅದೇನು ಸಾಲ ಸಮದ ಆಗಿದ್ದರ ಕೊಟ್ಟ ಬಿಡಿಸಿ ಕೊಳ್ಳತಿದ್ದೆವ’ ಎಂದು ತಮ್ಮ ಅಸಹಾಯಕತೆಯನ್ನ ವ್ಯಕ್ತ ಪಡಿಸುತ್ತಾರೆ. ಯಾಕೆಂದರೆ ಊರಿನ ಸುರಕ್ಶೆಗಾಗಿ ಕೋಟೆ ಗೋಡೆಯನ್ನು ಕಟ್ಟಿಸಲಾಗುತಿತ್ತು. ಅದು ಊರಿನ ಸಮಸ್ಯೆಯೊಂದಕ್ಕೆ ಪರಿಹಾರವಾಗಿತ್ತು. ಹೀಗಾಗಿ ಯಾರೂ ಅವಳ ವಿನಂತಿಗೆ ಸ್ಪಂದಿಸಲಿಲ್ಲ. ಮುಂದೆ ಮುಂದೆ ಸುಲಿಯಲ್ಲ, ಹಿಂದೆ ಹಿಂದೆ ದ್ಯಾಮವ್ವ.

‘ಅಕ್ಕ ನೀ ಬರಬೇಡ ನಿನ ಮಾವ ಬೈದಾನು,
ಅಕ್ಕ ನೀ ಬರಬೇಡ ನಿನ ಅತ್ತೆ ಬೈದಾಳು’

ಅಂತ ಸುಲಿಯಲ್ಲ ಅಕ್ಕನಿಗೆ ಹೇಳುತ್ತಿದ್ದ. ಅದಕ್ಕೆ ಉತ್ತರವಾಗಿ

‘ಮಾವ ಇಲ್ಲಂದರ ಮಾವನ ಕಂಡೇನು,
ಅತ್ತೆ ಇಲ್ಲಂದರ ಅತ್ತೇನ ಕಂಡೇನು,
ತಮ್ಮ ನೀ ಹೋದರ ನಿನ ಕಂಡೇನೇನ’

ಅಂತ ಹೇಳಿ ಕಣ್ಣೀರಿಡುತ್ತ ತಮ್ಮನೊಂದಿಗೆ ಅಗಸಿ ಬಾಗಿಲಿಗೆ ಬಂದು ಬಲಿ ಕೊಡಬೇಡಿ ಎಂದು ಪಹರೆಯವರ ಕಾಲಿಗೆ ಬಿದ್ದು ಸೆರಗೊಡ್ಡಿ ತಮ್ಮನ ಪ್ರಾಣ ಬಿಕ್ಶ ಕೇಳಿದಳು.ಆದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಬಲಿ ಕೊಡುವುದಾದರೆ ಮೊದಲು ನನ್ನನ್ನು ಬಲಿಕೊಡಿ ಆಮೇಲೆ ಸುಲಿಯಲ್ಲನ ಬಲಿಕೊಡಿ ಎಂದು ಹಟ ಮಾಡಿದಳು. ತಮ್ಮ ‘ನೀ ಬರಬ್ಯಾಡ ಅಕ್ಕ, ಬ್ಯಾಡ’ ಅಂತ ಎಶ್ಟು ಕೇಳಿಕೊಂಡರೂ ಅವಳು ಕೇಳಲಿಲ್ಲ. ಆಗ ಅಕ್ಕನಿಗೆ ಎಡಗಡೆ ಕುಳಿತರೆ ಹೆಂಡತಿ ಅಂದಾರು ಅಂತ ಬಲಗಡೆ ಕುಳಿತುಕೊಳ್ಳಲು ಹೇಳಿದ. ಸುಲಿಯಲ್ಲ ಮತ್ತು ದ್ಯಾಮವ್ವಳನ್ನು ಜೀವಂತವಾಗಿ ಕೋಟೆಯ ಗೋಡೆಯಲ್ಲಿ ಕುಳ್ಳಿರಿಸಿ ಕೋಟೆ ಗೋಡೆ ಕಟ್ಟಿ ಮುಗಿಸಿದರು. ಅಕ್ಕ ದ್ಯಾಮವ್ವ ಮತ್ತು ತಮ್ಮ ಸುಲಿಯಲ್ಲ ತಾಳಿಕೋಟೆಯ ಕೋಟೆ ಗೋಡೆಯಲ್ಲಿ ಜೀವಂತ ಸಮಾದಿಯಾದರು.

ಬಾವಿಯಲ್ಲಿ ನೀರು ಬರದಾದಾಗ ಹಿರಿಯ ಸೊಸೆ ಬಾಗೀರತಿಯನ್ನು ಬಲಿ ಕೊಟ್ಟ ಜನಪದ ಕತೆ ನಮಗೆಲ್ಲ ಗೊತ್ತಿದೆ. ಅದೇ ರೀತಿಯ ಜನಪದ ಕತೆಯೊಂದು ತಾಳಿಕೋಟೆ ಹಾಗೂ ಸುತ್ತಲಿನ ಜನರ ಮನದಲ್ಲಿ ಇವತ್ತಿಗೂ ಜೀವಂತವಾಗಿದೆ. ತಾಳಿಕೋಟೆಯ ರಾಜವಾಡೆ ಪ್ರದೇಶದ ಅಗಸಿ ಬಾಗಿಲಲ್ಲಿ ಚಿಕ್ಕದೊಂದು ಕಿಂಡಿ ಇದೆ. ಅಲ್ಲಿಂದಲೆ ಬಡ ಹೆಣ್ಣು ಮಕ್ಕಳ ಮದುವೆಗೆಂದು ತನ್ನ ತಾಳಿಯನ್ನು ದ್ಯಾಮವ್ವ ಕೊಡುತಿದ್ದಳು, ಲಗ್ನದ ನಂತರ ಮತ್ತೆ ಅಲ್ಲಿಗೆ ತಂದು ಮರಳಿ ಕೊಡುತಿದ್ದರು ಎಂದು ನಂಬಲಾಗುತ್ತದೆ. ಇಂದಿಗೂ ಅಲ್ಲಿ ದಿನಾಲೂ ರಾಜವಾಡೆ ಪರಿಸರದ ತಾಯಂದಿರು ದೀಪ ಬೆಳಗಿಸಿ ಪೂಜೆ ಸಲ್ಲಿಸುತ್ತಾರೆ. ಮನೆಗಳಲ್ಲಿ ನಡೆಯುವ ಶುಬ ಕಾರ‍್ಯಗಳ ಆರಂಬಕ್ಕೂ ಮೊದಲು ದ್ಯಾಮವ್ವಳಿಗೆ ಮೊದಲ ಪೂಜೆ ಸಲ್ಲುತ್ತದೆ.

ದ್ಯಾಮವ್ವ ನಸುಕಲ್ಲಿ ಎದ್ದು ಜೋಳ ಬೀಸುತಿದ್ದಳು ಎನ್ನಲಾಗುವ ಬ್ರುಹತ್ ಬೀಸುಕಲ್ಲು ರಾಜವಾಡೆಯ ಅಗಸಿ ಬಾಗಿಲ ಹತ್ತಿರದ ಶಿವಬವಾನಿ ಮಂದಿರದ ಆವರಣದಲ್ಲಿದೆ. ಅಗಸಿ ಬಾಗಿಲ ಪ್ರವೇಶ ದ್ವಾರದ ಹತ್ತಿರದಲ್ಲಿ ಸುಲಿಯಲ್ಲ ಮತ್ತು ದ್ಯಾಮವ್ವರದ್ದು ಎಂದು ಹೇಳಲಾಗುವ ಶಿಲ್ಪ ಕೂಡ ಇದೆ.

( ಮಾಹಿತಿ ಸೆಲೆ : ಜನಪದ ಹಾಡು ಕೇಳಿದ್ದು ಹಾಗೂ ‘ತಾಳಿಕೋಟೆ ದ್ಯಾಮವ್ವ ಕ್ರುತಿ’ಯಿಂದ ಪಡೆದಿದ್ದು )

(ಚಿತ್ರ ಸೆಲೆ: ಬರಹಗಾರರ ಆಯ್ಕೆ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: