ಬಹುದೂರದ ದ್ವೀಪ – ಟ್ರಿಸ್ಟನ್ ಡ ಕುನ್ಹ

– ಕೆ.ವಿ.ಶಶಿದರ.

ಟ್ರಿಸ್ಟನ್ ಡ ಕುನ್ಹ ದ್ವೀಪ ದಕ್ಶಿಣ ಆಪ್ರಿಕಾದ ಬೂಮಿಯಿಂದ ಅಂದಾಜು 1491 ಹಾಗೂ ಕೇಪ್ ಟೌನ್ ನಿಂದ 1511 ಮೈಲಿಗಳಶ್ಟು ದೂರದಲ್ಲಿದೆ. ಇದರ ಅತಿ ಹತ್ತಿರದ ದ್ವೀಪ ಸೈಂಟ್ ಹೆಲೆನಾ. ಇದು ದಕ್ಶಿಣ ಅಮೇರಿಕದಿಂದ 2088 ಮೈಲಿ ದೂರದಲ್ಲಿದೆ. ಈ ದ್ವೀಪವನ್ನು ತಲುಪಲು ಜಲಸಾರಿಗೆಯೊಂದೇ ಆದಾರ. ಅದರ ಮೇಲೆಯೇ ಇಲ್ಲಿನ ಜನಜೀವನ ಪೂರ‍್ಣ ಅವಲಂಬಿತ. ಜಲಸಾರಿಗೆ ಬೇರೆಲ್ಲಾ ಸಾರಿಗೆಗಿಂತ ತೀರಾ ನಿದಾನವಾದ ಹಿನ್ನೆಲೆಯಲ್ಲಿ ಈ ದ್ವೀಪವನ್ನು ತಲುಪಲು ಕನಿಶ್ಟ ಹತ್ತರಿಂದ ಹದಿನೈದು ದಿನಗಳ ಕಾಲಾವಕಾಶದ ಅವಶ್ಯಕತೆಯಿದೆ. ಸ್ಪೀಡ್ ಬೋಟ್ ಬಳಸಿದಲ್ಲಿ ತ್ವರಿತವಾಗಿ ಅಂದರೆ ಏಳು ದಿನಗಳಲ್ಲಿ ಈ ದ್ವೀಪವನ್ನು ತಲುಪಬಹುದು. ಟ್ರಿಸ್ಟನ್ ದ್ವೀಪ ಸಮೂಹದಲ್ಲಿ ನಾಲ್ಕು ಪ್ರದಾನ ದ್ವೀಪಗಳಿವೆ. ಟ್ರಿಸ್ಟನ್ ಡ ಕುನ್ಹ, ಇನ್‍ಆಕ್ಸೆಸಬಲ್ ದ್ವೀಪ, ನೈಟಿಂಗೇಲ್ ದ್ವೀಪ ಮತ್ತು ಗೌ ದ್ವೀಪ. ಇವುಗಳೆಲ್ಲದರ ಒಟ್ಟಾರೆ ವಿಸ್ತೀರ‍್ಣ 80 ಚದರ ಮೈಲಿಗಳು.

ಟ್ರಿಸ್ಟನ್ ಡ ಕುನ್ಹ ಎಂಬ ನಾವಿಕ ಈ ದ್ವೀಪವನ್ನು 1506ರಲ್ಲಿ ಹುಡುಕಿದ. ನಂತರ ಅಂದರೆ 260ಕ್ಕೂ ಹೆಚ್ಚು ವರ‍್ಶ ಇದು ಅಜ್ನಾತವಾಗಿತ್ತು. 1767ರಲ್ಲಿ ಪ್ರೆಂಚ್‍ನ ಸಣ್ಣ ಯುದ್ದ ನೌಕೆಯೊಂದು ಟ್ರಿಸ್ಟನ್ ದ್ವೀಪದ ಸಮೀಕ್ಶೆ ನಡೆಸಿ ಅದರ ನಕ್ಶೆ ತಯಾರಿಸಿತು. ನಕ್ಶೆ ತಯಾರಿಸುವಶ್ಟು ಸಮೀಕ್ಶೆ ನಡೆಸಿದರೂ ಸಹ ಅಲ್ಲಿ ತಂಗಲು ಪ್ರಯತ್ನವನ್ನು ಮಾಡಲಿಲ್ಲ. ಯಾಕಾಗಿ ಎಂಬುದು ಇಂದಿಗೂ ಯಕ್ಶ ಪ್ರಶ್ನೆಯಾಗಿಯೇ ಉಳಿದಿದೆ.

ಜೊನಾತನ್ ಲ್ಯಾಂಬರ‍್ಟ್ ಇಲ್ಲಿನ ಮೊದಲ ಕಾಯಂ ನಿವಾಸಿ. ಈತ ಅಮೇರಿಕಾ ಪ್ರಜೆ. 1810ರಲ್ಲಿ ಇಲ್ಲಿಗೆ ಬಂದ. ಈ ದ್ವೀಪದ ಆಡಳಿತಗಾರನೆಂದು ತನ್ನನ್ನು ತಾನೇ ಗೋಶಿಸಿಕೊಂಡ. ತನ್ನ ಇಚ್ಚೆಯಂತೆ ಈ ದ್ವೀಪದ ಹೆಸರನ್ನು ಐಲೆಂಡ್ ಆಪ್ ರಿಪ್ರೆಶ್‍ಮೆಂಟ್ ಎಂದು ಬದಲಾಯಿಸಿದ. ದುರ‍್ದೈವವೆಂದರೆ ಆತ ಎರಡು ವರ‍್ಶಗಳ ನಂತರ ಆದ ಬೋಟ್ ಅಪಗಾತದಲ್ಲಿ ಅಸುನೀಗಿದ. ಆತನ ಸಾವಿನ ನಂತರ ಇದು ಮತ್ತೆ ಟ್ರಿಸ್ಟನ್ ಡ ಕುನ್ಹ ಎಂದಾಯಿತು.

ಬರೀ 7 ಮೈಲಿ ಉದ್ದವಿರುವ ಈ ದ್ವೀಪ ಬ್ರಿಟೀಶರ ಹಲವಾರು ಕಾಳಗಕ್ಕೆ ನೆರವಾಗಿದೆ

ಅತಿ ದೂರವಿರುವ ದ್ವೀಪವಾದ ಕಾರಣ ಯುನೈಟೆಡ್ ಕಿಂಗ್‍ಡಮ್ ಯುದ್ದ ಸಮಯದಲ್ಲಿ ತಮ್ಮ ಕಾರ‍್ಯತಂತ್ರವನ್ನು ಗೌಪ್ಯವಾಗಿ ರೂಪಿಸಲು ಹಾಗೂ ಪ್ರಯೋಗಿಸಲು ಈ ದ್ವೀಪ ಸಮೂಹವನ್ನು ಬಳಸಿಕೊಂಡಿತ್ತು. ರೆಡಿಯೋ ಹಾಗೂ ಹವಾಮಾನ ಕೇಂದ್ರಗಳನ್ನು ಬ್ರಿಟೀಶರ ರಾಯಲ್ ನೇವಿಯವರು ಎರಡನೇ ಮಹಾಯುದ್ದದ ಸಮಯದಲ್ಲಿ ಗುಪ್ತವಾಗಿ ಇಲ್ಲಿ ಸ್ತಾಪಿಸಿದ್ದರು. ಸಣ್ಣ ದ್ವೀಪವಾದ್ದರಿಂದ ಇಲ್ಲಿ ಕೊಂಡುಕೊಳ್ಳುವಿಕೆ ಇರಲಿಲ್ಲ. ಅಲ್ಲಿನ ನಿವಾಸಿಗಳು ತಮ್ಮ ಬೇಕು ಬೇಡಗಳಿಗೆ ವಿನಿಮಯ ಪದ್ದತಿಯನ್ನು ಬಳಸುತ್ತಿದ್ದರು. ಎರಡನೇ ಮಹಾಯುದ್ದದ ಸಮಯದಲ್ಲಿ ರಾಯಲ್ ನೇವಿಯವರು ಕೆಲವೊಂದನ್ನು ಸಾಮಾನು ಸರಂಜಾಮುಗಳನ್ನು ಪೂರೈಕೆ ಮಾಡುತ್ತಿದ್ದುದರಿಂದ ವಿನಿಮಯದ ಪದ್ದತಿಗೆ ಕಡಿವಾಣ ಬಿತ್ತು. ನಂತರ ಬ್ರಿಟೀಶರ ಪೌಂಡ್ ಇಲ್ಲಿಯೂ ಚಾಲ್ತಿಗೆ ಬಂತು.

ಎರಡನೇ ಮಹಾಯುದ್ದದ ನಂತರ ಈ ದ್ವೀಪದ ಮೊದಲನೆಯ ದಿನಪತ್ರಿಕೆ ‘ದ ಟ್ರಿಸ್ಟನ್ ಟೈಮ್ಸ್’ ಪ್ರಾರಂಬವಾಯಿತು. ಬ್ರಿಟೀಶ್ ಸರ‍್ಕಾರವು ಇದೇ ಸಮಯದಲ್ಲಿ ಈ ದ್ವೀಪ ಸಮೂಹಕ್ಕೆ ಮೊದಲ ಆಡಳಿತಗಾರನನ್ನು ನೇಮಿಸಿ ದ್ವೀಪದ ಮೇಲೆ ತನ್ನ ಪ್ರಬುತ್ವವನ್ನು ಸಾರಿತು. ಟ್ರಿಸ್ಟನ್ ದ್ವೀಪವು ಕೇವಲ 7 ಮೈಲಿಗಳಶ್ಟು ಉದ್ದವಿದ್ದು 37.8 ಚದರ ಮೈಲಿಗಳಶ್ಟು ಹರಡಿದೆ. ಇಲ್ಲಿನ ಬಹಳಶ್ಟು ಜನ ನೆಲೆಸಿರುವುದು 6765 ಅಡಿ ಎತ್ತರದ ಕ್ವೀನ್ ಮೇರಿ ಪರ‍್ವತ ಶ್ರೇಣಿಯ ಬುಡದಲ್ಲಿ. ಇಲ್ಲಿ ಕೇವಲ 275 ಜನ ಮಾತ್ರ ವಾಸಿಸುತ್ತಿದ್ದಾರೆ. ಹೊರಗಿನಿಂದ ಬರುವವರಿಗೆ ಇಲ್ಲಿ ಸ್ತಳವಿಲ್ಲ. ಹಾಗಾಗಿ ಇಲ್ಲಿನ ಜನಸಂಕ್ಯೆ ಅಶ್ಟಾಗಿ ಏರುಪೇರಾಗುತ್ತಿಲ್ಲ.

ಇಲ್ಲಿನವರೆಲ್ಲಾ ಕ್ರಿಶ್ಚಿಯನ್ ಮತವನ್ನು ಅನುಸರಿಸುತ್ತಿದ್ದಾರೆ. ಇಂಗ್ಲೀಶ್ ಆಡು ಬಾಶೆ. ಅತಿ ಕಡಿಮೆ ಜನಸಂಕ್ಯೆ ಇರುವ ಕಾರಣ ಸಂಬಂದಗಳಲ್ಲಿ ವಿವಾಹ ಅನಿವಾರ‍್ಯ. ತೀರ ಹತ್ತಿರದ ಸಂಬಂದಿಗಳಲ್ಲಿ ವಿವಾಹವಾಗಿರುವುದರಿಂದ ಹುಟ್ಟುವ ಮಕ್ಕಳಲ್ಲಿ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಾದ ಅಸ್ತಮಾ, ಗ್ಲುಕೊಮಾ ಮುಂತಾದವು ಇವರಲ್ಲೂ ಕಾಣಿಸಿಕೊಂಡಿದೆ. ಈ ದ್ವೀಪವಾಸಿಗರಲ್ಲಿ ಕೇವಲ 80 ಕುಟುಂಬಗಳಿವೆ. ಇವರೆಲ್ಲಾ ಗ್ಲಾಸ್, ಗ್ರೀನ್, ಹಾಗನ್, ಲವರೆಲ್ಲೊ, ರೆಪೆಟ್ಟೊ, ರೋಜರ‍್ಸ್ ಮತ್ತು ಸ್ವೈನ್ ಎಂಬ ಏಳು ಉಪನಾಮಗಳನ್ನು ಹೊಂದಿದ್ದಾರೆ.

ಟ್ರಿಸ್ಟನ್ ದ್ವೀಪದಲ್ಲಿ ಒಬ್ಬ ಡಾಕ್ಟರ್ ಹಾಗೂ ಐದು ನರ‍್ಸ್‍ಗಳಿದ್ದಾರೆ. ಇಲ್ಲಿ ಆರೋಗ್ಯ ತಪಾಸಣೆ ಪೂರ‍್ಣ ಉಚಿತ. ಸಣ್ಣ ಪುಟ್ಟ ಕಾಯಿಲೆಗಳಿಗೆ ಇಲ್ಲೇ ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಅವರುಗಳು ಹತ್ತಿರದ ಸೌತ್ ಆಪ್ರಿಕಾದ ಕೇಪ್ ಟೌನ್‍ಗೆ ಹೋಗದೇ ವಿದಿಯಿಲ್ಲ. ಈ ದ್ವೀಪ ಸಮೂಹಗಳು ಜ್ವಾಲಾಮುಕಿಯಿಂದ ಉದ್ಬವವಾಗಿರಬಹುದು ಎಂಬೊಂದು ವಾದವಿದೆ. ಇಲ್ಲಿ ಬೆಳೆಯುವ ಬಹುತೇಕ ಸಸ್ಯಗಳು ದಕ್ಶಿಣ ಅಮೇರಿಕ ಮತ್ತು ಆಪ್ರಿಕಾದ ಬೂಪ್ರದೇಶದಲ್ಲಿ ಬೆಳೆಯುವಂತಹುದು. ಕೆಲವೊಂದು ಮಾತ್ರ ನ್ಯೂಜಿಲ್ಯಾಂಡ್‍ಗೆ ಸೇರಿದೆ.

ಇಲ್ಲಿ ಉಳುವವನೇ ನೆಲದೊಡೆಯನಲ್ಲ! ಎಲ್ಲರೂ ಇಲ್ಲಿನ ನೆಲಕ್ಕೆ ಒಡೆಯರು.

ಇಲ್ಲಿನ ಎಲ್ಲರೂ ರೈತಾಪಿ ಕೆಲಸ ಮಾಡುವವರೆ. ಮೀನುಗಾರಿಕೆ, ಅದರ ಸಂಸ್ಕರಣೆ ಹಾಗೂ ಮಾರಾಟ ಇವರುಗಳ ಹಣ ಸಂಪಾದನೆಯ ಏಕೈಕ ಮಾರ‍್ಗ. ಲಾಬ್‍ಸ್ಟರ್‍ಗಳನ್ನು ಸಂಸ್ಕರಿಸಿ ‘ಓವನ್‍ಸ್ಟೋನ್’ ಎಂಬ ದಕ್ಶಿಣ ಆಪ್ರಿಕಾದ ಕಂಪನಿಯ ಮೂಲಕ ಅಮೇರಿಕಾ ಹಾಗೂ ಜಪಾನ್ ದೇಶಗಳಿಗೆ ರಪ್ತು ಮಾಡುವುದು ಮುಕ್ಯ ಕಸುಬು. ಇಲ್ಲಿರುವ ಅಶ್ಟೂ ವ್ಯವಸಾಯ ಯೋಗ್ಯ ಬೂಮಿ ಸಾರ‍್ವಜನಿಕ ಸ್ವತ್ತು. ಯಾರೊಬ್ಬರೂ ಇದಕ್ಕೆ ಒಡೆಯರಲ್ಲ. ಹಣ ಹರಿದು ಒಬ್ಬರಲ್ಲೇ ಸೇರುವುದನ್ನು ತಡೆಯಲು ಈ ಕ್ರಮ.

ಟ್ರಿಸ್ಟನ್ ಡ ಕುನ್ಹ ದ್ವೀಪ ಸಕ್ರಿಯ ಜ್ವಾಲಾಮುಕಿಯನ್ನು ಹೊಂದಿದೆ. 1961ರಲ್ಲಿ ಈ ಜ್ವಾಲಾಮುಕಿ ಆಸ್ಪೋಟಗೊಂಡಾಗ ಈ ದ್ವೀಪದ ಜೀವನಾಡಿಯಾಗಿದ್ದ ಕ್ರೇಪಿಶ್ ಕಾರ‍್ಕಾನೆಯು ಸಂಪೂರ‍್ಣವಾಗಿ ನಾಶವಾಯಿತು. ಇದು ಒಂದೆಡೆಯಾದರೆ 13ನೇ ಪೆಬ್ರವರಿ 2008ರಲ್ಲಾದ ಬೆಂಕಿಯ ಅನಾಹುತದಿಂದ ನವೀಕರಣಗೊಂಡಿದ್ದ ಮೀನಿನ ಪ್ಯಾಕ್ಟರಿ ಹಾಗೂ ಜನರೇಟರ್‍ಗಳು ನಾಶವಾದವು. ಜ್ವಾಲಾಮುಕಿಯ ಪ್ರಬಾವದ ನಂತರದ ದಿನಗಳಲ್ಲಿ ನಿದಾನವಾಗಿ ಆರ‍್ತಿಕತೆಯಲ್ಲಿ ಚೇತರಿಕೆ ಕಂಡುಕೊಳ್ಳುತ್ತಿದ್ದ ಈ ದ್ವೀಪ ಮತ್ತೆ ಆದ ಬೆಂಕಿಯ ಅನಾಹುತದಿಂದ ಪೂರ‍್ಣವಾಗಿ ಕುಸಿದು ನೆಲ ಕಚ್ಚಿತು.

ಜನರೇಟರ್‍ಗಳೇ ಇಲ್ಲಿನ ವಿದ್ಯುತ್‍ಗೆ ಮೂಲ. ಜನರೇಟರ್‍ಗಳಿಗೆ ಬೇಕಿರುವ ಇಂದನ ಹಾಗೂ ಹಲವೊಂದು ದೈನಂದಿನ ಅವಶ್ಯಕತೆಗಳನ್ನು ದಕ್ಶಿಣ ಆಪ್ರಿಕಾದಿಂದ ವಾರಕ್ಕೊಮ್ಮೆ ಬರುವ ಸ್ಪೀಡ್ ಬೋಟ್‍ನಿಂದ ಕರೀದಿಸಿ ಪಡೆಯುತ್ತಾರೆ. ಈ ದ್ವೀಪ ಸಮೂಹಗಳಲ್ಲಿ ಒಂದಾದ ನೈಟಿಂಗೇಲ್ ದ್ವೀಪದಲ್ಲಿ ಜನವಸತಿಯಿಲ್ಲ. ಆದರೆ ಇಲ್ಲಿ ಹಳದಿ ಮೂಗಿನ ಉದ್ದ ಕತ್ತಿನ ಕಡಲಕೋಳಿಗಳು ಹೇರಳವಾಗಿದೆ. ರಾಕ್‍ಹಾಪರ್ ಪೆಂಗ್ವಿನ್‍ಗಳು ಈ ದ್ವೀಪ ಸಮೂಹದ ನಾಲ್ಕೂ ದ್ವೀಪಗಳಲ್ಲಿ ಕಾಣಬಹುದು. ಟ್ರಿಸ್ಟನ್ ದ್ವೀಪದಲ್ಲಿ ಪ್ರವಾಸಿಗರಿಗಾಗಿ ಬೇರಾವುದೇ ವ್ಯವಸ್ತೆ ಇಲ್ಲದ ಕಾರಣ ಹೋಂ ಸ್ಟೇಯಾಗಿ ತಮ್ಮ ಮನೆಗಳನ್ನೇ ಬಾಡಿಗೆಗೆ ನೀಡುವ ಪರಿಪಾಟ ಇಲ್ಲಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: dailymail.co.uk)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: