‘ಇದು ಟೀ ಪುರಾಣ’

– ವಿಜಯಮಹಾಂತೇಶ ಮುಜಗೊಂಡ.

ಚೈನಾದ ಪುರಾಣ ಕತೆಯೊಂದರಲ್ಲಿ ಕಾಡಿನಲ್ಲಿ ಗಿಡ ಮತ್ತು ನಾರುಬೇರುಗಳ ಹುಡುಕಾಡುತ್ತಿದ್ದ ಶೆನ್ನಾಂಗ್ ಎಂಬ ವ್ಯಕ್ತಿಯ ಉಲ್ಲೇಕ ಇದೆ. ಮೊದಲು ಉಳುಮೆ ಶುರು ಮಾಡಿದ್ದು ಕೂಡ ಶೆನ್ನಾಂಗ್ ಎನ್ನುವ ನಂಬಿಕೆಯೂ ಅಲ್ಲಿನ ಪುರಾಣ ಕತೆಗಳಲ್ಲಿದೆ. ಒಮ್ಮೆ ಗಿಡಮೂಲಿಕೆಗಳ ಹುಡುಕಾಟದಲ್ಲಿ ತೊಡಗಿದ್ದಾಗ ಶೆನ್ನಾಂಗ್ ಅಕಸ್ಮಾತ್ ಆಗಿ ನಂಜು ಹೊಂದಿರುವ ಗಿಡಗಳನ್ನು ತಿಂದ. ಒಂದೆರಡು ಬಾರಿ ಅಲ್ಲ, ಎಪ್ಪತ್ತೆರಡು ಬಾರಿ!. ಇನ್ನೇನು ಶೆನ್ನಾಂಗ್ ಸತ್ತೇ ಹೋದ ಎನ್ನುವಶ್ಟರಲ್ಲಿ ಗಾಳಿಯಲ್ಲಿ ತೂರಿಬಂದ ಎಲೆಯೊಂದು ಅವನ ಬಾಯಿಗೆ ಬಿತ್ತು. ಸಾಯುವ ಸ್ತಿತಿಯಲ್ಲಿದ್ದ ಶೆನ್ನಾಂಗ್ ಈ ಎಲೆಯನ್ನು ತಿಂದು ಬದುಕುಳಿದ ಎಂದು ಆ ಪುರಾಣದಲ್ಲಿದೆ. ನಂಜಿನಿಂದ ಸಾಯುತ್ತಿದ್ದ ಮನುಶ್ಯನನ್ನು ಬದುಕಿಸಿದ ಆ ಎಲೆ ಬೇರೆ ಯಾವುದೂ ಅಲ್ಲ, ಅದು ಟೀ ಎಲೆ. ಇಲ್ಲಿಂದಲೇ ಟೀ ಬಳಕೆ ಹುಟ್ಟಿಕೊಂಡಿದ್ದು ಎನ್ನುವ ನಂಬಿಕೆ ಚೈನಾದಲ್ಲಿದೆ.

ಟೀ ಎಲೆ ತಿಂದು ಶೆನ್ನಾಂಗ್ ಬದುಕಿದ ಕತೆ ದಿಟವೋ, ಸುಳ್ಳೋ ಗೊತ್ತಿಲ್ಲ. ಆದರೆ ಬೆಳಗೆದ್ದು ಟೀ ಕುಡಿಯದೇ ಹೋದರೆ ಹುರುಪು ಕಡಿಮೆ ಎಂಬುದು ಹಲವರ ಅನಿಸಿಕೆ. ಹಳಮೆಯರಿಮೆಯ(archaeology) ಪ್ರಕಾರ ಮೊದಲು ಚಹಾ ಬೆಳೆದದ್ದು ಚೀನಾದಲ್ಲಿ. 6000 ವರುಶಗಳಶ್ಟು ಹಿಂದೆಯೇ ಟೀ ಬಳಕೆ ಇತ್ತೆಂದೂ ಹೇಳಲಾಗುತ್ತದೆ. ಮೊದಲು ಟೀ ಎಲೆಗಳನ್ನು ತರಕಾರಿಗಳಂತೆ ಹಸಿಯಾಗಿಯೇ ತಿನ್ನುತ್ತಿದ್ದರು ಇಲ್ಲವೇ ಗಂಜಿಯೊಂದಿಗೆ ಬೆರೆಸಿ ಬಳಕೆ ಮಾಡುತ್ತಿದ್ದರು. ಟೀ ಎಲೆಗಳು ಬಿಸಿನೀರಿನೊಂದಿಗೆ ಬೆರೆತರೆ ಒಂದು ಬಗೆಯ ವಿಶೇಶ ರುಚಿ ನೀಡಬಲ್ಲುವು ಎಂದು ತಿಳಿದ ಬಳಿಕವೇ ಟೀ ಒಂದು ಕುಡಿಗೆಯಾಗಿ(drink) ಬದಲಾಯಿತು, ಅದೂ ಸುಮಾರು 1500 ವರುಶಗಳಶ್ಟು ಹಿಂದೆಯಶ್ಟೇ.

ಮೊದಮೊದಲಿಗೆ ಟೀ ಎಲೆಗಳನ್ನು ಒಣಗಿಸಿ ಕೇಕ್‍ನಂತೆ ಮಾಡಿ, ಬಳಿಕ ಅದನ್ನು ಪುಡಿಮಾಡಿ ನೀರಿನೊಂದಿಗೆ ಕುದಿಸಿ ಮೋಚಾ ಇಲ್ಲವೇ ಮಾಚಾ ಎಂದು ಕರೆಯಲ್ಪಡುವ ಟೀಯನ್ನು ತಯಾರಿಸಲಾಗುತ್ತಿತ್ತು. ಇದು ಚೈನಾದಲ್ಲಿ ಎಶ್ಟೊಂದು ಪ್ರಸಿದ್ದವಾದುದೆಂದರೆ ಮಾಚಾ ಟೀ ಎನ್ನುವುದು ಒಂದು ಟೀ ಸಂಸ್ಕ್ರುತಿಯೇ ಆಗಿದೆ ಎನ್ನವಶ್ಟು! ಮಾಚಾ ಟೀ ಇಂದಿಗೂ ಉಳಿದುಕೊಂಡಿದೆ. ಟೀ ಅಲ್ಲಿನ ಆಳ್ವಿಗರ ಮೆಚ್ಚಿನ ಕುಡಿಗೆ ಆಗಿತ್ತು, ಅಲ್ಲದೇ ಅದು ಕಲೆಗಾರರಿಗೂ ಮೆಚ್ಚಿನದಾಗಿತ್ತು. ಕಲಾವಿದರು ಟೀ ನೊರೆಯ ಮೇಲೆ ಚಿತ್ರಗಳನ್ನು ಬಿಡಿಸುತ್ತಿದ್ದರು ಮತ್ತು ಇವತ್ತಿನವರೆಗೂ ಅದು ಮುಂದುವರೆಕೊಂಡು ಬಂದಿದೆ.

ಜಗತ್ತಿನಲ್ಲೆಡೆ ಹರಡತೊಡಗಿದ ಟೀ

9ನೆಯ ನೂರೇಡಿನಲ್ಲಿ(century) ಟಾಂಗ್ ರಾಜಮನೆತನದ ಆಳ್ವಿಕೆಯ ಹೊತ್ತಿನಲ್ಲಿ, ಒಬ್ಬ ಜಪಾನೀ ಸನ್ಯಾಸಿ ಟೀ ಗಿಡವನ್ನು ಜಪಾನ್‍ಗೆ ಕೊಂಡೊಯ್ದ. ಬಳಿಕ ಜಪಾನೀಯರು ತಮ್ಮದೇ ರೀತಿಯಲ್ಲಿ ಟೀ ಬಳಸತೊಡಗಿದರು. ಇದು ಜಪಾನೀ ಟೀ ಸಂಸ್ಕ್ರುತಿಯನ್ನು ಹುಟ್ಟುಹಾಕಿದ್ದು, ಈ ಟೀ ಸಂಸ್ಕ್ರುತಿ ಇಂದಿಗೂ ಜೀವಂತವಾಗಿದೆ. 15ನೇ ನೂರೇಡಿನಲ್ಲಿ ಚೀನಾದ ಮಿಂಗ್ ರಾಜಮನೆತನದ ಆಳ್ವಿಕೆಯ ಹೊತ್ತಿನಲ್ಲಿ, ಟೀ ಎಲೆಗಳನ್ನು ಪುಡಿಮಾಡಿ ಟೀ ತಯಾರಿಸುವ ಹೊಸ ಬಗೆ ಶುರು ಆಯಿತು. ಆಗಲೂ ಟೀ ಬೆಳೆಯುವುದರಲ್ಲಿ ಚೀನಾ ಮುಂಚೂಣಿಯಲ್ಲಿತ್ತು. ಚೈನಾದಿಂದ ಅತೀ ಹೆಚ್ಚು ಹೊರಮಾರುಗೆಯಾಗುತ್ತಿದ್ದ(export) ಮೂರು ಸರಕುಗಳಲ್ಲಿ ಟೀ ಒಂದಾಗಿತ್ತು. ಇನ್ನೆರಡು ಸರಕುಗಳೆಂದರೆ ರೇಶ್ಮೆ ಮತ್ತು ಪಿಂಗಾಣಿ ವಸ್ತುಗಳು.
16ನೆಯ ನೂರೇಡಿನ ಮೊದಲ ಹೊತ್ತಿನಲ್ಲಿ ಡಚ್ಚರು ಹೆಚ್ಚು ಹೆಚ್ಚು ಟೀ ಅನ್ನು ಯುರೋಪಿಗೆ ಕೊಂಡೊಯ್ದರು. ಇದೇ ಹೊತ್ತಿನಲ್ಲಿ ಇಂಗ್ಲೀಶರು ಬ್ರಿಟನ್‍ನಿಂದ ಆಚೆಯ ಪ್ರದೇಶಗಳನ್ನು ತಮ್ಮ ವಸಾಹತುಗಳನ್ನಾಗಿ ಮಾಡಲು ತೊಡಗಿದ್ದರು. ಮುಂದಿನ ನೂರಿನ್ನೂರು ವರುಶಗಳಲ್ಲಿ ಬ್ರಿಟೀಶ್ ಪಾರುಪತ್ಯ ಜಗತ್ತಿನೆಲ್ಲೆಡೆ ಹಬ್ಬುತ್ತಿದ್ದಂತೆ ಟೀ ಕೂಡ ಹಲವು ನಾಡುಗಳಿಗೆ ತಲುಪಿತು. 1700ನೆಯ ಇಸವಿಯ ಹೊತ್ತಿಗೆ ಟೀ ತುಂಬಾ ತುಟ್ಟಿಯಾಗಿತ್ತು, ಕಾಪಿಗೆ ಹೋಲಿಸಿದಲ್ಲಿ ಸುಮಾರು 10 ಪಟ್ಟು ತುಟ್ಟಿ!. ಆಗಲೂ ಹೆಚ್ಚಿನ ಟೀ ಬೆಳೆ ಚೀನಾದಲ್ಲೇ ಇತ್ತು. ಜಗತ್ತಿನಲ್ಲೆಡೆ ಟೀ ಬೇಡಿಕೆ ಹೆಚ್ಚುತ್ತಿದ್ದಂತೆ, ಪಡುವಣದ ವ್ಯಾಪಾರ ಸಂಸ್ತೆಗಳ ನಡುವೆ ಪೈಪೋಟಿ ಉಂಟಾಯಿತು. ಬೇಗ ಬೇಗ ಟೀ ಸಾಗಿಸಲು ವೇಗದ ಹಾಯಿಹಡಗುಗಳ ಬಳಕೆ ಇಲ್ಲಿಂದಲೇ ಶುರುವಾಯಿತು.

ಯುದ್ದಕ್ಕೆ ಕಾರಣವಾಯ್ತು ‘ಟೀ’

ಚೈನಾದಿಂದ ಟೀ ಕೊಳ್ಳಲು ಬ್ರಿಟನ್ ಮೊದಲು ಬೆಳ್ಳಿಯನ್ನು ನೀಡುತ್ತಿತ್ತು. ಬೆಳ್ಳಿ ತುಟ್ಟಿ ವಸ್ತುವಾದ್ದರಿಂದ, ಬೆಳ್ಳಿಯ ಬದಲಾಗಿ ಟೀ ಕೊಳ್ಳಲು ಅಪೀಮನ್ನು ನೀಡಲು ಶುರುಮಾಡಿತು. ಅಪೀಮಿನ ಚಟಕ್ಕೆ ಬಿದ್ದ ಚೀನೀಯರಿಗೆ ಮಯ್ಯೊಳಿತಿನ ತೊಂದರೆಗಳು ಶುರುವಾದವು. ಬ್ರಿಟೀಶರು ತಮ್ಮ ಮೇಲೆ ಪ್ರಬುತ್ವ ಸಾದಿಸಲು ಹೊಂಚುಹಾಕುತ್ತಿದ್ದಾರೆಂದು 1839ರಲ್ಲಿ ಚೀನಾದ ಅದಿಕಾರಿಗಳು ಅಪೀಮು ಹೊತ್ತುತಂದಿದ್ದ ಹಡಗುಗಳನ್ನು ಹಾಳುಮಾಡಲು ಆದೇಶ ನೀಡಿದರು. ಇದು ಮೊದಲ ಅಪೀಮು ಕಾಳಗಕ್ಕೆ ಕಾರಣವಾಯಿತು. 1842ರಲ್ಲಿ ಮುಗಿದ ಈ ಯುದ್ದದಲ್ಲಿ ಸೋತ ಚೀನಾ ಹಾಂಗ್‍ಕಾಂಗ್ ಬಂದರನ್ನು ಬಿಟ್ಟುಕೊಟ್ಟಿತು. ಇದರಿಂದ ಚೀನಾ ಬೆಳೆದ ಟೀ ಮಾರಾಟದ ಹಕ್ಕು ಬ್ರಿಟೀಶರ ಪಾಲಾಯಿತು.

ಟೀ ಇಂಡಿಯಾಗೆ ಬಂದದ್ದು ಹೇಗೆ?

ಬ್ರಿಟಿಶ್ ಈಸ್ಟ್ ಇಂಡಿಯಾ ಕಂಪನಿ ತಾನೇ ಟೀ ಬೆಳೆದು, ಟೀ ಮಾರಾಟದ ಮೇಲೆ ಪೂರ‍್ತಿ ಹತೋಟಿ ಹೊಂದಬೇಕೆಂದುಕೊಂಡಿತ್ತು. ಇದಕ್ಕಾಗಿ ಗಿಡದರಿಗ(botanist) ರಾಬರ‍್ಟ್ ಪಾರ‍್ಚ್ಯೂನ್ ಅವರೊಂದಿಗೆ, ಗುಟ್ಟಾಗಿ ಟೀ ಗಿಡಗಳನ್ನು ಕದಿಯುವ ಯೋಜನೆ ಹಾಕಿಕೊಂಡಿತು. ತನ್ನ ಗುರುತು ಹಿಡಿಯದಂತೆ ವೇಶ ಬದಲಿಸಿಕೊಂಡ ರಾಬರ‍್ಟ್, ಚೀನಾದ ಅಪಾಯಕಾರಿ ಕಾಡುಗಳ ಮೂಲಕ ಟೀ ಗಿಡಗಳನ್ನು ಮತ್ತು ಟೀ ಬೆಳೆಯುವ ಅನುಬವವುಳ್ಳ ಹಲವು ಕೆಲಸಗಾರರನ್ನು ಚೀನೀಯರ ಕಣ್ತಪ್ಪಿಸಿ ಇಂಡಿಯಾದ ಡಾರ‍್ಜೀಲಿಂಗ್‍ಗೆ ಕರೆತಂದ. ಅಲ್ಲಿಂದ ಟೀ ಚೀನಾದಿಂದ ಹೊರಗಿನ ನಾಡುಗಳಿಗೂ ಹಬ್ಬಿತು.

ಇಂದು ಜಗತ್ತಿನಲ್ಲಿಯೇ ಹೆಚ್ಚು ಬಳಸಲಾಗುವ ಕುಡಿಗೆಗಳಲ್ಲಿ ಟೀ ಎರಡನೆಯ ಸ್ತಾನದಲ್ಲಿದೆ. ಅಲ್ಲದೇ, ಟೀ ಮಾಡುವ ಬಗೆಗಳೂ ತುಂಬಾ ಇವೆ.

(ಮಾಹಿತಿ ಮತ್ತು ಚಿತ್ರ ಸೆಲೆ: ted.compixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: