ಜಪಾನಿನ ರಸ್ತೆಗಳೇಕೆ ತುಂಬಾ ಚೊಕ್ಕ?
ಜಪಾನೀಯರು ದುಡಿಮೆಯಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ, ತಮ್ಮ ನಾಡಿನ ಬಗ್ಗೆ ಅಪಾರವಾದ ಹೆಮ್ಮೆ ಹೊಂದಿದವರು. ಸುನಾಮಿ ಮತ್ತು ನೆಲನಡುಕದಿಂದಾಗಿ ಹಾಳಾದ ರಸ್ತೆಯೊಂದನ್ನು ಕೇವಲ ಒಂದು ವಾರದಲ್ಲಿ ಮೊದಲಿದ್ದ ಸ್ತಿತಿಗೆ ತಂದು ತಮ್ಮ ಬದ್ದತೆಯನ್ನು ತೋರಿಸಿದವರು.
ದುಡಿಮೆಯಲ್ಲಶ್ಟೇ ಅಲ್ಲ, ಶಿಸ್ತಿನಲ್ಲಿಯೂ ಜಪಾನೀಯರದ್ದು ಎತ್ತಿದ ಕೈ. ಜಪಾನಿನ ರಸ್ತೆಗಳು ತುಂಬಾ ಚೊಕ್ಕವಾಗಿರುತ್ತವೆ. ಅಲ್ಲಿನ ರಸ್ತೆಗಳಲ್ಲಿ ಕಸದ ಡಬ್ಬಿಗಳು ಅಶ್ಟಾಗಿ ಕಾಣಸಿಗುವುದಿಲ್ಲ. ಹಲವು ಕಡೆ ತಿಂಡಿಮನೆಗಳಲ್ಲಿ(hotels) ಕೂಡ ಕಸದ ಡಬ್ಬಿಗಳಿರುವುದಿಲ್ಲ. ಆದರೂ ಅಲ್ಲಿನ ರಸ್ತೆಬದಿಗಳಲ್ಲಿ ಕಸ ಕಾಣದು. ಹೊಸದಾಗಿ ಜಪಾನಿಗೆ ಬೇಟಿ ನೀಡಿದವರು ಕಸ ಚೆಲ್ಲಲು ಜಾಗ ಹುಡುಕಿಕೊಂಡು ಹೋದರೂ ಕಸದ ಡಬ್ಬಿಯೊಂದು ಕಣ್ಣಿಗೆ ಬೀಳುವುದು ಬಲು ಕಶ್ಟ. ಕಂಡಕಂಡಲ್ಲಿ ಕಸ ಎಸೆಯಬಾರದೆಂಬುದು ಅಲ್ಲಿನ ಸಂಸ್ಕ್ರುತಿಯ ಬಾಗವೇ ಆಗಿಬಿಟ್ಟಿದೆ.
ಯಾಕೆ ಹೀಗೆ?
ಎರಡನೇ ವಿಶ್ವ ಕಾಳಗದ ಬಳಿಕ, ಜಪಾನಿನಲ್ಲಿ ಕೈಗಾರಿಕೆಗಳು ಬೇಗಬೇಗನೇ ಬೆಳೆಯುತ್ತಿದ್ದಂತೆ ಕಸದ ಸಮಸ್ಯೆ ದೊಡ್ಡ ತಲೆನೋವಾಗಿತ್ತು. ಅದರಲ್ಲೂ ಟೋಕಿಯೋ ನಗರದಲ್ಲಿ ಕಸದ ಸಮಸ್ಯೆ ಯಾವ ಮಟ್ಟಿಗೆ ಇತ್ತೆಂದರೆ, ಕಸವನ್ನು ನೆಲದಡಿಯಲ್ಲಿ ಹುಗಿಯಲೂ ಸಹ ಜಾಗ ಸಿಗದಂತಾಗಿತ್ತು. 1990ರಲ್ಲಿ ಜಾರಿಗೆ ಬಂದ ಕಸ ನಿರ‍್ವಹಣೆ ಕುರಿತಾದ ಹಲವು ಕಟ್ಟಲೆಗಳು ಕಸದ ಸಮಸ್ಯೆಯನ್ನು ತೊಡೆದು ಹಾಕುವಲ್ಲಿ ತುಂಬಾ ಮುಕ್ಯವಾದ ಕೆಲಸ ಮಾಡಿವೆ. ಈ ಕಟ್ಟಲೆಗಳು ಹೆಚ್ಚಿನ ಕಸವನ್ನು ನೆಲದಡಿಯಲ್ಲಿ ಹುಗಿಯುವದನ್ನು ತಪ್ಪಿಸಿದ್ದಲ್ಲದೇ ಕಸ ಮರುಬಳಕೆಗೆ ಹೆಚ್ಚಿನ ಒತ್ತು ನೀಡಿದವು.
ಬೀದಿಯಲ್ಲಿ ತಿನ್ನುತ್ತಾ ನಡೆದುಕೊಂಡು ಹೋಗುವಂತಿಲ್ಲ
ರಸ್ತೆಯಲ್ಲಿ ಏನಾದರು ತಿನ್ನುತ್ತಾ ನಡೆದುಕೊಂಡು ಹೋಗುವುದನ್ನು ತುಂಬಾ ಒರಟು ನಡೆ ಎಂದು ಜಪಾನೀಯರು ತಿಳಿದಿದ್ದಾರೆ. ಬೀದಿ ಬದಿಯಲ್ಲಿ ತಿನ್ನುವುದಿದ್ದರೂ, ಅಲ್ಲಿಯೇ ನಿಂತುಕೊಂಡು ತಿನ್ನುವರು. ವೆಂಡಿಂಗ್ ಮಶೀನುಗಳಿದ್ದರೂ ಅಶ್ಟೇ. ಕೆಲವು ವೆಂಡಿಂಗ್ ಮಶೀನುಗಳ ಬಳಿ ಕಸದ ಡಬ್ಬಿಗಳಿರುತ್ತವೆ. ಜಪಾನೀಯರು ತಿಂಡಿ ತಿಂದ ಬಳಿಕ ಕವರ್ ಇಲ್ಲವೇ ಉಳಿದಿದ್ದನ್ನು ಅಂಗಡಿಯವನಿಗೆ ಹಿಂದಿರುಗಿಸುವರು, ಇಲ್ಲ, ಮನೆಗೆ ಕೊಂಡೊಯ್ಯುವರು.
ಹೆಚ್ಚಿನ ಕಸ ಮರುಬಳಕೆಯನ್ನು ಮಾಡುವ ನಾಡು ಜಪಾನ್
ಸಾರ‍್ವಜನಿಕ ಸ್ತಳಗಳಲ್ಲಿ ಕಸದ ತೊಟ್ಟಿಗಳು ಇಲ್ಲವೇ ಇಲ್ಲ ಎಂದಲ್ಲ, ತುಂಬಾ ಕಡಿಮೆ. ಕಸದ ತೊಟ್ಟಿಗಳು ಇರುವೆಡೆ ಕಸವನ್ನು ಬೇರ‍್ಪಡಿಸಿ ಎಸೆಯಲು ಹಲವರು ಡಬ್ಬಿಗಳಿರುತ್ತವೆ. ಮರುಬಳಕೆ ಮಾಡಬಹುದಾದ, ನೆಲದಡಿಯಲ್ಲಿ ಹುಗಿಯಬೇಕಾದ – ಹೀಗೆ ಹಲವು ಬಗೆಯಲ್ಲಿ ಕಸವನ್ನು ಬೇರ‍್ಪಡಿಸಲಾಗುತ್ತದೆ. ಎತ್ತುಗೆಗೆ, ನೀರಿನ ಬಾಟಲ್‌ಗಳು ಒಂದು ತೊಟ್ಟಿಗೆ ಹೋದರೆ, ಬಾಟಲ್‌ನ ಮುಚ್ಚಳಗಳು ಇನ್ನೊಂದು ತೊಟ್ಟಿಯನ್ನು ಸೇರುತ್ತವೆ. ಕಸವನ್ನು ಬೇರ‍್ಪಡಿಸಲು ನೆರವಾಗುವಂತೆ ಮಂದಿಗೆ ಮಾಹಿತಿ ನೀಡಲು ಹಲವು ಪುಟಗಳ ‘ಗೋಮಿ ಗೈಡ್'(Gomi guide) ಎಂಬ ಕಿರುಹೊತ್ತಗೆಯನ್ನು ನೀಡಲಾಗುತ್ತದೆ. ಆಯಾ ನಗರಗಳಿಗೆ ಅನ್ವಯಿಸುವಂತೆ, ಮರುಬಳಕೆ ಮತ್ತು 30ಕ್ಕಿಂತ ಹೆಚ್ಚು ಗುಂಪುಗಳಲ್ಲಿ ಕಸವನ್ನು ಬೇರ‍್ಪಡಿಸಲು ಬೇಕಾದ ಮಾಹಿತಿ ಈ ‘ಗೋಮಿ ಗೈಡ್’ಗಳಲ್ಲಿ ಇರುತ್ತದೆ. ಪ್ಲಾಸ್ಟಿಕ್ ವೇಸ್ಟ್ ಮ್ಯಾನೇಜ್‌ಮೆಂಟ್ ಇನಸ್ಟಿಟ್ಯೂಟ್ ನೀಡುವ ಮಾಹಿತಿಯಂತೆ, ಇಂದು ಜಪಾನ್ ಸುಮಾರು 77% ರಶ್ಟು ಕಸವನ್ನು ಮರುಬಳಕೆ ಮಾಡುತ್ತದೆ.
ಹೀಗೊಂದು ಮಾದರಿ ಊರು
ಶಿಕೊಕು ನಡುಗಡ್ಡೆಯಲ್ಲಿರುವ(Island) ಕಾಮಿಕಾಟ್ಸು(Kamikatsu) ಎನ್ನುವ ಊರು ಕಸ ಮರುಬಳಕೆಯಲ್ಲಿ ಮಾದರಿಯಾಗಿದೆ. 1990ರ ಕೊನೆಯವರೆಗೂ, ಕಸ ವಿಲೇವಾರಿಯಲ್ಲಿ ಈ ಊರು ತುಂಬಾ ಹಿಂದೆ ಇತ್ತು. ಹೆಚ್ಚಿನ ಕಸವನ್ನು ಹಾಗೆಯೇ ಸುಡಲಾಗುತ್ತಿತ್ತು. ಸರಕಾರದ ಒತ್ತಡದ ಮೇರೆಗೆ ಕಸ ಸುಡುವ ಯಂತ್ರವೊಂದನ್ನು ಬಳಸಲು ಶುರುಮಾಡಿದ ಮೇಲೆ ಸಾಕಶ್ಟು ಬದಲಾವಣೆಗಳಾದುವು. ಕಸವನ್ನು 40 ಬಗೆಗಳಲ್ಲಿ ಬೇರ‍್ಪಡಿಸಿ, ಮರುಬಳಸಿ ಇಲ್ಲವೇ ಬೇರೆ ಬೇರೆ ಬಗೆಯಲ್ಲಿ ಸಂಸ್ಕರಿಸಿ ಸುಮಾರು 80% ರಶ್ಟು ಕಸವನ್ನು ನೆಲದಡಿಯಲ್ಲಿ ಹುಗಿಯುವುದನ್ನು ತಪ್ಪಿಸಲಾಗಿದೆ. ಸುಮಾರು 1,700 ಮಂದಿಯೆಣಿಕೆ ಹೊಂದಿರುವ ಈ ಊರು 2020 ರ ಹೊತ್ತಿಗೆ ‘ಜೀರೋ ವೇಸ್ಟ್’ ಆಗುವತ್ತ ದಾಪುಗಾಲಿಡುತ್ತಿದೆ.
ಕಂಡಕಂಡಲ್ಲಿ ಕಸ ಎಸೆಯುವುದನ್ನು ತಪ್ಪಿಸಿರುವುದಲ್ಲದೇ, ಕಸವನ್ನು ಬೇರ‍್ಪಡಿಸಿ ಸರಿಯಾದ ಮರುಬಳಕೆ ಮಾಡುವುದರಿಂದ ಜಪಾನ್ ಇಂದು ಸ್ವಚ್ಚತೆಯಲ್ಲಿ ಮುಂದಿದೆ. ಇಂತಹ ಏರ‍್ಪಾಟು ನಮ್ಮಲ್ಲೂ ಬಂದರೆ ಕಸ ವಿಲೇವಾರಿಯ ತಲೆನೋವು ದೂರವಾಗಬಹುದೇನೋ?
(ಮಾಹಿತಿ ಸೆಲೆ: weforum.org, businessinsider.com, weforum.org, dailymail.co.uk )
( ಚಿತ್ರ ಸೆಲೆ: thefitworldtraveler, businessinsider, thealternative.in )
ಇತ್ತೀಚಿನ ಅನಿಸಿಕೆಗಳು