ಸಂಪಿಗೆ ಹೂವಿನ ಒಲವಿನ ಕತೆ

– ಶಾಂತ್ ಸಂಪಿಗೆ.

ಸುಂದರವಾದ ಕಾಡಿನ ನಡುವೆ
ಸಂಪಿಗೆ ಎನ್ನುವ ಹೂವಿತ್ತು
ಸುಗಂದ ಪರಿಮಳ ಹರಡುತ ಎಲ್ಲೆಡೆ
ಸುಮದುರ ಕಂಪನು ತುಂಬಿತ್ತು

ಮದುವನು ಅರಸಿ ಹೂವನು ಹುಡುಕುತ
ಹಾಡುತ ಹೊರಟಿತ್ತು, ದುಂಬಿಗೆ ಚಂದ್ರನ ಚೆಲುವಿತ್ತು
ಸಂಪಿಗೆ ಹೂವಿನ ಪರಿಮಳ ಇಂಪಿಗೆ
ದುಂಬಿಯು ಸೋತಿತ್ತು, ಹೂವಿನ ಸಂಗವ ಬಯಸಿತ್ತು

ಹೂವಿನ ಅಂದಕೆ ಕರಗಿದ ದುಂಬಿಯು
ಸನಿಹಕೆ ಬಂದಿತ್ತು, ಒಲವಲಿ ಹೆಸರನು ಕೇಳಿತ್ತು
ನಾಚುತ ನಲಿಯುತ ನುಲಿಯುತ ಹೂವು
ಸಂಪಿಗೆ ಎಂದಿತ್ತು, ಮಾತಲಿ ಜೇನು ತುಂಬಿತ್ತು

ದುಂಬಿಯ ಹೂವಿನ ಮೊದಲನೆ ಬೇಟಿಗೆ
ಪ್ರೀತಿಯು ಚಿಗುರಿತ್ತು, ಕಣ್ಣಲಿ ಒಲವಿನ ಬೆಳಕಿತ್ತು
ಜೊತೆಯಲಿ ಸಾಗುವ ದೂರದ ಪಯಣಕೆ
ಸಾವಿರ ಕನಸಿತ್ತು, ಹೂವಿಗೆ ಮದುವೆಯ ಸೊಗಸಿತ್ತು

ಇಬ್ಬರ ಪ್ರೀತಿಯ ಮದುರ ಮೈತ್ರಿಯನು
ಹೇಳಲು ಬಯವಿತ್ತು, ಮನೆಯಲಿ ನಡುಗುತ ಹೇಳಿತ್ತು
ಪ್ರೀತಿ ಪ್ರೇಮದ ಮಾತನು ಕೇಳಿದ ತಾಯಿಗೆ
ಕೋಪವು ಬಂದಿತ್ತು, ಹೂವಿಗೆ ಶಿಕ್ಶೆಯು ಕಾದಿತ್ತು

ಮನೆತನ ಗೌರವ ಹೋಗುವುದೆಂದು
ತಾಯಿಗೆ ಕೊರಗಿತ್ತು, ಮನೆಯಲಿ ಬಯವೇ ತುಂಬಿತ್ತು
ಪ್ರೀತಿಯ ಬಂದನ ಮುರಿಯಲು ಹೂವಿಗೆ
ಮನದಲಿ ನೋವಿತ್ತು, ಹೂವಿಗೆ ದುಗುಡವು ತುಂಬಿತ್ತು

ಹೂವಿನ ಸಂಗವ ಬಯಸಿದ ದುಂಬಿಗೆ
ವಿರಹವೆ ವಿಶವಾಯ್ತು, ನೆನಪಲಿ ಪ್ರಾಣವ ತೊರೆದಿತ್ತು
ಪ್ರೀತಿಗೆ ಪ್ರಾಣವ ನೀಡಿದ ಸುದ್ದಿಯು
ಹೂವಿಗೆ ತಲುಪಿತ್ತು, ಕ್ಶಣದಲಿ ತಾನು ಮಡಿದಿತ್ತು

ಕೊಟ್ಟಮಾತಿಗೆ ತಪ್ಪದೆ ನಡೆಯುವ
ನಿಜ ಪ್ರೀತಿ ಹೂವಿನದು
ತ್ಯಾಗದಿ ಪ್ರೀತಿಯ ಉಳಿಸಿದ
ಕತೆಯು ಸಂಪಿಗೆ ಊರಿನದು

(ಚಿತ್ರ ಸೆಲೆ: australianseed.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: