ಕಲೀಲ್ ಗಿಬ್ರಾನ್ ನ ಕತೆ: ಸೇತುವೆ ಕಟ್ಟಿದವರು
ಆ ನದಿ ಪಟ್ಟಣವನ್ನು ಇಬ್ಬಾಗ ಮಾಡಿತ್ತು. ಜನರಿಗೆ ಅನುಕೂಲವಾಗಲೆಂದು ಆ ನದಿಗೆ ಅಡ್ಡವಾಗಿ ಸೇತುವೆ ಕಟ್ಟಲಾಯಿತು. ಸೇತುವೆಯನ್ನು ದೊಡ್ಡ ಕಲ್ಲುಗಳಿಂದ ಕಟ್ಟಲಾಗಿತ್ತು. ಈ ಕಲ್ಲುಗಳನ್ನು, ಕಲ್ಲುಗಣೆಯಿಂದ ಹೇಸರಗತ್ತೆಗಳ ಮೇಲೆ ಸಾಗಿಸಲಾಗಿತ್ತು.
ಸೇತುವೆಯ ಕೆಲಸ ಮುಗಿದ ಮೇಲೆ ಅದರ ಒಂದು ಕಂಬದ ಮೇಲೆ ಅರಮಾಯಿಕ್ ಬಾಶೆಯಲ್ಲಿ ಹೀಗೆ ಬರೆಯಲಾಗಿತ್ತು.
“ ಮಹಾರಾಜಾದಿರಾಜ, ಅಂಟಿಯೋಕಸ್ ಈ ಸೇತುವೆಯನ್ನು ನಿರ‍್ಮಿಸಿದ್ದಾನೆ”
ಪ್ರಜೆಗಳು ಈ ಸೇತುವೆಯನ್ನು ಬಳಸಲು ಶುರುಮಾಡಿದರು. ಒಂದು ದಿನ ಓರ‍್ವ ತರುಣ ಈ ಕಂಬದ ಮೇಲೆ ಹತ್ತಿದ. ಬರೆದಿದ್ದನ್ನು ಅಳಿಸಿ ಹಾಕಿ ಹೊಸದಾಗಿ, ಕಲ್ಲಿದ್ದಲಿನಿಂದ ಹೀಗೆ ಬರೆದ.
“ಈ ಸೇತುವೆ ನಿರ‍್ಮಾಣಕ್ಕಾಗಿ, ಕಲ್ಲುಗಣಿಯಿಂದ ಹೇಸರಗತ್ತೆಗಳು ಕಲ್ಲುಗಳನ್ನು ತಂದು ಹಾಕಿದ್ದವು, ಹಾಗೆ ನೋಡಿದರೆ ಈ ಸೇತುವೆ ಮೇಲೆ ಓಡಾಡಿದಾಗೆಲ್ಲಾ ನಾವು ಈ ಕತ್ತೆಗಳ ಬೆನ್ನು ಮೇಲೆ ಸವಾರಿ ಮಾಡುತ್ತಿದ್ದೇವೆ”
ಇದನ್ನು ಸಾಮಾನ್ಯ ಪ್ರಜೆಗಳು ಓದಿದಾಗ ಕೆಲವು ಮಂದಿ ನಕ್ಕರೆ, ಇನ್ನೂ ಕೆಲವು ಜನ ತರುಣನ ಜಾಣ್ಮೆಯನ್ನು ಪ್ರಶಂಸಿದರು. ಇನ್ನೂ ಕೆಲವರು ಇದು ಯಾವನೋ ಅವಿವೇಕಿ ಮಾಡಿರುವ ಕೆಲಸ ಎಂದುಕೊಂಡರು.
ಇದನ್ನೆಲ್ಲಾ ನೋಡಿದ ಒಂದು ಹೇಸರಗತ್ತೆ ನಗುತ್ತಾ ಇನ್ನೊಂದು ಹೇಸರಗತ್ತೆಗೆ ಹೀಗೆ ನುಡಿಯಿತು:
“ಈ ಸೇತುವೆಗಾಗಿ ನಾವು ಕಶ್ಟಪಟ್ಟು ಕಲ್ಲುಗಳನ್ನು ತಂದು ಹಾಕಿದ್ದು ನೆನಪಿದೆಯೇ? ಆದರೂ ಕೂಡ ಈ ಸೇತುವೆಯನ್ನು ಅಂಟಿಯೋಕಸ್ ಕಟ್ಟಿದ್ದಾನೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ!”
( ಮಾಹಿತಿ ಸೆಲೆ: gutenberg.net.au )
( ಚಿತ್ರ ಸೆಲೆ: wendyleedyart.com )
ಇತ್ತೀಚಿನ ಅನಿಸಿಕೆಗಳು