ಬೂತಾಳೆ, ಟೆಕಿಲಾ ಮತ್ತು ಕಾರು
ಪೋರ‍್ಡ್ ಕೂಟದವರಿಗೆ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ. ಗಿಡ-ಸಸಿ, ಹಣ್ಣು-ಕಾಯಿಪಲ್ಲೆ ಮುಂತಾದ ವಸ್ತುಗಳನ್ನು ಮರುಬಳಸಿ ತಮ್ಮ ಕಾರುಗಳಲ್ಲಿ ಅಳವಡಿಸಿಕೊಳ್ಳುವುದರಲ್ಲಿ ಅವರು ಯಾವಾಗಲೂ ಮುಂದು. ಹೆಂಜ್(Heinz) ಕೂಟದವರು ತಕ್ಕಾಳಿ(Tomato) ಗೊಜ್ಜಿಗೆ ಬಳಸಿದ ತಕ್ಕಾಳಿಗಳನ್ನೇ ಮರುಬಳಸಿ ಕಾರಿನ ಬಿಡಿಬಾಗ ತಯಾರಿಸಿದ್ದರ ಬಗ್ಗೆ ಹೊನಲಿನಲ್ಲಿ ಈ ಹಿಂದೆ ಓದಿದ್ದೀರಿ. ಅದೇ ರೀತಿ ಟೆಕಿಲಾ(Tequila) ಕುಡಿಗೆ(Drink) ತಯಾರಿಸಲು ಬಳಸಲ್ಪಡುವ ಬೂತಾಳೆಯನ್ನು(Agave) ಮರುಬಳಕೆ ಮಾಡಿ ತನ್ನ ಕಾರುಗಳ ಬಿಡಿಬಾಗ ತಯಾರಿಸಲು ಪೋರ‍್ಡ್ ಕೂಟ ಮುಂದೆ ಬಂದಿದೆ. ‘ಟೆಕಿಲಾ’ ಈ ಪದ ಕೇಳಿದ ತಕ್ಶಣ ಹೆಂಡದೊಲವಿಗರಿಗೆ ಕಿವಿ ಚುರುಕಾಗಬಹುದು. ಟೆಕಿಲಾ ಎಂಬುದು ಮತ್ತೇರಿಸುವ ಕುಡಿಗೆ ಬಗೆಗಳಲ್ಲೊಂದು. ಚಿಕ್ಕ ಗ್ಲಾಸುಗಳಲ್ಲಿ ಚಕ್ಕನೆ ಕುಡಿದು ಮತ್ತೇರಿಸುವಂತೆ ಮಾಡುವ ಕುಡಿಗೆಯೆಂದೇ ಇದು ಹೆಸರುವಾಸಿ.
ಟೆಕಿಲಾ ತಯಾರಿಸುವ ಕೂರ‍್ವೋ ಮತ್ತು ಪೋರ‍್ಡ್ ನಡುವಿನ ಒಪ್ಪಂದ
ಮೆಕ್ಸಿಕೋ ಮೂಲದ ಹೂಸೆ ಕೂರ‍್ವೋ(Jose Cuervo) ಟೆಕಿಲಾ ಕುಡಿಗೆ ತಯಾರಿಸುವ ಜಗತ್ತಿನ ಅತಿ ದೊಡ್ಡ ಕೂಟ. ಪೋರ‍್ಡ್ ಕಂಪನಿ ಹಾಗೂ ಹೂಸೆ ಕೂರ‍್ವೋ ಇದೀಗ ಒಟ್ಟಾಗಿ ಹೊಸ ಒಪ್ಪಂದ ಮಾಡಿಕೊಂಡಿವೆ. ಈ ಒಪ್ಪಂದದ ಪ್ರಕಾರ ಹೂಸೆ ಕೂರ‍್ವೋ ಕೂಟದವರು ಕುಡಿಗೆ ತಯಾರಿಸಲು ಬಳಸಿ ಬಿಸಾಡುವ ಬೂತಾಳೆಯನ್ನು ಪೋರ‍್ಡ್ ಕೂಟಕ್ಕೆ ಸಾಗಿಸುತ್ತಾರೆ. ಪೋರ‍್ಡ್‌ನವರ ಅರಕೆಮನೆಯಲ್ಲಿ ಇದನ್ನು ಬಳಸಿ, ಬಂಡಿಯ ಸೇರುವೆ, ತಂತಿಗಳು ಮುಂತಾದ ಬಿಡಿ ಬಾಗಗಳನ್ನು ತಯಾರಿಸಿ, ಅದನ್ನು ಬಗೆ ಬಗೆಯ ಒರೆಹಚ್ಚುವಿಕೆಗೆ ಒಳಪಡಿಸಿ, ತಮ್ಮ ಬಂಡಿಯಲ್ಲಿ ಅಳವಡಿಸಿಕೊಳ್ಳುತ್ತಾರೆ. “ಪ್ಲಾಸ್ಟಿಕ್ ಬಳಕೆಯನ್ನು ತಗ್ಗಿಸುವ ಮೂಲಕ ಪರಿಸರ ಹಾಳಾಗದಂತೆ ನೋಡಿಕೊಳ್ಳುವ ಗುರಿ ನಮ್ಮದು” ಎನ್ನುತ್ತಾರೆ ಪೋರ‍್ಡ್ ಅರಕೆಮನೆಯ ಹಿರಿಯ ಮೇಲಾಳು ಡೆಬ್ಬೀ ಮೀಲೆವ್ಸ್ಕಿ(Debbie Mielewski). “ಪರಿಸರ ಕಾಪಾಡಲು ಪೋರ‍್ಡ್ ಯಾವಾಗಲೂ ಮುಂದೆ. ಬಳಸಿ ಬಿಸಾಡಲ್ಪಡುವ ಕಾಯಿಪಲ್ಲೆ, ಕಸ-ಕಡ್ಡಿಗಳನ್ನು ಮರುಬಳಕೆ ಮಾಡಿ ಕಾರುಗಳಲ್ಲಿ ಬಳಸಿ, ಬಂಡಿಗಳನ್ನು ಹಗುರವಾಗಿಸಿ, ಅವುಗಳ ಮೈಲಿಯೋಟ(Mileage) ಹೆಚ್ಚಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದೇವೆ” ಎಂದು ವಿವರಿಸಿದ್ದಾರೆ ಮೀಲೆವ್ಸ್ಕಿ.
ಟೆಕಿಲಾ ಹೊರತೆಗೆದ ಬಳಿಕ ಬೂತಾಳೆಯನ್ನು ಬಿಸಾಡುವ ಮುನ್ನ…
ಬೂತಾಳೆ ಬೆಳೆಯಲು ಸುಮಾರು 7 ವರುಶಗಳ ಹೊತ್ತು ಬೇಕು. ಬೆಳೆ ಕಟಾವು ನಡೆಸಿ ಅದನ್ನು ಹೂಸೆ ಕೂರ‍್ವೋ ಕಾರ‍್ಕಾನೆಗಳಿಗೆ ಕಳುಹಿಸಿ ಕೊಡಲಾಗುತ್ತದೆ. ಅಲ್ಲಿ ಬೂತಾಳೆಯ ನಡುಬಾಗವನ್ನು ಸುಟ್ಟು, ರುಬ್ಬಿ ಅದರಿಂದ ರಸವನ್ನು ಹೊರತೆಗೆದು ಟೆಕಿಲಾ ಕುಡಿಗೆ ತಯಾರಿಸಲಾಗುತ್ತದೆ. ನಂತರ ಉಳಿದ ಬೂತಾಳೆಯ ನಾರನ್ನು ಇದೇ ಬೆಳೆಗೆ ಗೊಬ್ಬರವಾಗಿಯೋ, ಇತರೆ ಗುಡಿ ಕೈಗಾರಿಕೆಯ ವಸ್ತು ತಯಾರಿಸಲೋ ಇಲ್ಲವೇ ಹಾಳೆ ತಯಾರಿಸಲು ಕಳುಹಿಸಿ ಕೊಡಲಾಗುತ್ತದೆ. ಆದರೆ ಇದೀಗ ಇದೇ ನಾರನ್ನು ಪೋರ‍್ಡ್ ಅರಕೆಮನೆಗೆ ಸಾಗಿಸಿ ಅವುಗಳಿಂದ ಕಾರುಗಳ ಬಿಡಿಬಾಗ ತಯಾರಿಸಲು ಬಳಸಲಾಗುವುದು. ಹೂಸೆ ಕೂರ‍್ವೋ ಕೂಟ ಸುಮಾರು 1795ರಿಂದ ಟೆಕಿಲಾ ಕುಡಿಗೆ ತಯಾರಿಕೆ ಮಾಡುತ್ತ ಬಂದಿದೆ. 220 ವರುಶಕ್ಕೂ ಹೆಚ್ಚು ಬೂತಾಳೆ ಸಸಿಗಳ ಬಗ್ಗೆ ಅನುಬವ ಹೊಂದಿರುವ ಕೂರ‍್ವೋ ಮತ್ತು 100ಕ್ಕೂ ಹೆಚ್ಚಿನ ವರುಶ ಬಂಡಿ ತಯಾರಿಕೆಯಲ್ಲಿ ಅನುಬವ ಹೊಂದಿರುವ ಪೋರ‍್ಡ್ ಕೂಟ, ಇವರಿಬ್ಬರೂ ಸೇರಿ ಪರಿಸರದ ಹೊಣೆಗಾರಿಕೆ ಹೊತ್ತಿರುವುದು ಒಳ್ಳೆಯ ವಿಚಾರ. ಈ ಹಮ್ಮುಗೆಯ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಕೂರ‍್ವೋ ಕೂಟದ ಮೇಲಾಳು ಸೋನಿಯಾ ಈಸ್ಪಿನೋಲಾ(Sonia Espinola) ಹೇಳಿಕೊಂಡಿದ್ದಾರೆ.
ಮರುಬಳಕೆಯ ಅನುಕೂಲಗಳು
“ಯುನೈಟೆಡ್ ನೇಶನ್ಸ್(United Nations) ಸಂಸ್ತೆಯ ಅಂಕಿ-ಸಂಕೆಗಳ ಪ್ರಕಾರ, ಪ್ರತಿ ವರುಶ ಜಗತ್ತಿನಲ್ಲಿ ಸುಮಾರು 5 ಬಿಲಿಯನ್ ಮೆಟ್ರಿಕ್ ಟನ್‌ಗಳಶ್ಟು ಕಸ ಕ್ರುಶಿಯಿಂದ ಹೊರಬರುತ್ತದೆ. ಇದರ ಮರುಬಳಕೆ ತುಂಬಾ ಕಡಿಮೆ. ಕ್ರುಶಿಯಿಂದ ಹೊರಬರುವ ಇಂತಹ ಕಸವನ್ನು ಬಳಸಿದರೆ ಅಗ್ಗದ ದರದಲ್ಲಿ ಹಲವು ಬಗೆಯ ವಸ್ತುಗಳನ್ನು ತಯಾರಿಸಬಹುದು, ಅತಿಯಾದ ಪ್ಲಾಸ್ಟಿಕ್ ಬಳಕೆಯನ್ನು ತಡೆದು ನಮ್ಮ ಪರಿಸರವನ್ನು ಹಸನಾಗಿಡಬಹುದು. ಒಂದು ಕಾರಿನಲ್ಲಿ ಏನಿಲ್ಲವೆಂದರೂ 400 ಪೌಂಡ್‌ಗಳಶ್ಟು ಪ್ಲಾಸ್ಟಿಕ್ ಇರುತ್ತದೆ. ಪ್ಲಾಸ್ಟಿಕ್ ಬದಲು ಮರುಬಳಕೆಯಾಗಬಲ್ಲ ನಾರು ಅತವಾ ಕ್ರುಶಿಯಿಂದ ಹೊರಬರುವ ವಸ್ತುಗಳನ್ನು ಹೆಚ್ಚಾಗಿ ಎಲ್ಲ ಕೈಗಾರಿಕೆಗಳಲ್ಲಿ ಬಳಸಿದರೆ, ಅದೇ ನಾವು ಪರಿಸರಕ್ಕೆ ಮಾಡುವ ದೊಡ್ಡ ಉಪಕಾರ” ಎನ್ನುತ್ತಾರೆ ಮೀಲೆವ್ಸ್ಕಿ.
(ಮಾಹಿತಿ ಮತ್ತು ಚಿತ್ರ ಸೆಲೆ: ford.com, technabob.com, cuervo.com, wikipedia.org)
ಇತ್ತೀಚಿನ ಅನಿಸಿಕೆಗಳು