‘ಹಾಲಿಡೇ ಹೋಂ’ ಆದ ಹೆಲಿಕಾಪ್ಟರ್!

– ಕೆ.ವಿ.ಶಶಿದರ.

ಅದೊಂದು ದೊಡ್ಡ ಹೆಲಿಕಾಪ್ಟರ್. ಅದರಲ್ಲಿ ಮೂರು ಬೆಡ್ ರೂಂ, ಒಂದು ಮೊಗಸಾಲೆ, ಬಚ್ಚಲು ಕೋಣೆ ಹಾಗೂ ಅಡುಗೆ ಕೋಣೆಗಳಿವೆ. ಪ್ರಕ್ರುತಿಯ ಸೊಬಗನ್ನು ಆಸ್ವಾದಿಸಲು ಇಬ್ಬರಿಗೆ ಬೇಕಾಗಿರುವಶ್ಟು ಸ್ತಳಾವಕಾಶವನ್ನು ಹೆಲಿಕಾಪ್ಟರ್‍ನ ಕಾಕ್‍ಪಿಟ್‍ನಲ್ಲಿ ಕಲ್ಪಿಸಲಾಗಿದೆ. ಈ ಮರುಬಳಕೆಯಾದ ಹೆಲಿಕಾಪ್ಟರ್‍ನಲ್ಲಿ ರಾತ್ರಿ ಆರು ಜನ ತಂಗಲು ಸಾದ್ಯವಿದೆ.

ಆ ಹೆಲಿಕಾಪ್ಟರ್‍ನ ಉದ್ದ 55 ಅಡಿ. ಸಿ ಕಿಂಗ್ ZA127 ಎಂಬ ಇಂಗ್ಲೆಂಡಿನ ನೇವಿಯ ಹೆಲಿಕಾಪ್ಟರ್. ರಾಯಲ್ ನೇವಿಯಲ್ಲಿ ಹುಡುಕಾಟ ಮತ್ತು ಪಾರುಮಾಡುವ ಕೆಲಸಕ್ಕೆ ನಿಯೋಜಿತವಾಗಿದ್ದುದು 1994ಕ್ಕೂ ಹಿಂದಿನ ವರ‍್ಶಗಳಲ್ಲಿ. ಹೊಸ ಹೊಸ ತಂತ್ರಜ್ನಾನವನ್ನು ಹೊಂದಿದ ಹೆಲಿಕಾಪ್ಟರ್‍ಗಳನ್ನು ರಾಯಲ್ ನೇವಿಗೆ ನಿಯೋಜಿಸಿದ ನಂತರ ಹಳೆಯ ತಂತ್ರಜ್ನಾನದ ಸಿ ಕಿಂಗ್‍ನಂತಹ ಹೆಲಿಕಾಪ್ಟರ್‍ಗಳ ಉಪಯೋಗ ಕಡಿಮೆಯಾಯಿತು. ಹಾಗಾಗಿ 1994ರಲ್ಲಿ ರಾಯಲ್ ನೇವಿ ಸೇವೆಯಿಂದ ಈ ಹೆಲಿಪಾಪ್ಟರ್ ನಿವ್ರುತ್ತಿಯಾಯಿತು.

ಎಂಟು ವರ‍್ಶಗಳು ಅಂದರೆ 2002ರವರೆಗೂ ಸಿ ಕಿಂಗ್ ZA127 ಹೆಲಿಕಾಪ್ಟರ್‍ನ್ನು ನೌಕೆಯ ತರಬೇತಿ ಕಾರ‍್ಯಕ್ರಮದಲ್ಲಿ ಬಳಸಲಾಗುತ್ತಿತ್ತು. ತರಬೇತಿ ಕಾರ‍್ಯಕ್ರಮದಿಂದಲೂ ನಿವ್ರುತ್ತಿಯಾದ ನಂತರ ಉಳಿದಿದ್ದು ಒಂದೇ ದಾರಿ. ಅದನ್ನು ಸಂಪೂರ‍್ಣವಾಗಿ ಕಿತ್ತು ತುಂಡು ತುಂಡು ಮಾಡಿ ತೂಕಕ್ಕೆ ಹಾಕುವುದು. ಆದಕ್ಕಾಗಿ ಹೆಲಿಕಾಪ್ಟರ್ ಅನ್ನು ಹರಾಜು ಹಾಕಲು ನಿರ‍್ದರಿಸಲಾಯಿತು. ZA127 ಹೆಲಿಕಾಪ್ಟರ್‍ನ ಸವಿಸ್ತಾರ ಒಳಬಾಗವನ್ನು ನೋಡಿದ ಮಾರ‍್ಟಿನ್ ಸ್ಟೀಡ್ಮನ್ ಮತ್ತು ಆತನ ಹೆಂಡತಿ ಬೇರೆಯದೇ ಉದ್ದೇಶಕ್ಕೆ ಇದನ್ನು ಬಳಸಲು ಉತ್ಸುಕರಾದರು.

ಹರಾಜಿನಲ್ಲಿ ಹೆಲಿಕಾಪ್ಟರ್ ಅನ್ನು ಈ ದಂಪತಿಗಳು ಕರೀದಿಸಿದರು. ತಮ್ಮ ಮನೆಯ ಮೇಲೆ ಆಗಾಗ್ಗೆ ಹಾರಾಡುತ್ತಿದ್ದ ಬಾರೀ ಗಾತ್ರದ ಈ ಹೆಲಿಕಾಪ್ಟರ್ ಅನ್ನು ಬೆರಗಿನಿಂದ ನೋಡುತ್ತಿದ್ದ ಇವರು ಆಗಲೇ ಇದನ್ನು ನೆಲದ ಮೇಲೆ ಅತಿ ವಿಬಿನ್ನವಾಗಿ ಬಳಸುವ ಬಗ್ಗೆ ತಕ್ಕ ರೂಪುರೇಶೆಗಳನ್ನು ಹೆಣೆದಿದ್ದರು. ಹಾಲಿಡೇ ಹೋಂ ಮಾಡುವ ಉದ್ದೇಶದಿಂದಲೇ 40000 ಡಾಲರ್ ಹಣವನ್ನು ಕರ‍್ಚು ಮಾಡಿ ತಾವು ಕಂಡಿದ್ದ ಕನಸಿಗೆ ಸಾಕಾರ ರೂಪ ನೀಡಿದರು. ನವನವೀನ ವಿನ್ಯಾಸದ ಹಾಲಿಡೇ ಹೋಂ ಆಗಿ ZA127 ಹೆಲಿಕಾಪ್ಟರ್ ಮಾರ‍್ಪಾಡಾಯಿತು.

ಮಾರ‍್ಟಿನ್ ಸ್ಟೀಡ್ಮನ್ ದಂಪತಿಗಳು ಹರಾಜಿನಲ್ಲಿ ಕೊಂಡ ನಂತರ ಮಾಡಿದ ಮೊದಲ ಕೆಲಸ ಗ್ರಾಂತಮ್, ಲಿಂಕನ್‍ಶೈರ್‍ನಲ್ಲಿದ್ದ ಈ ಹೆಲಿಕಾಪ್ಟರ್ ಅನ್ನು ತಮ್ಮ ಹಳ್ಳಿಗೆ ಸ್ತಳಾಂತರಿಸಿದ್ದು. ಅದಕ್ಕಾಗೇ ಮೀಸಲಿಟ್ಟಿದ್ದ ಸ್ತಳ ಅಂದರೆ 320 ಮೈಲಿ ದೂರದಲ್ಲಿರುವ ಇಂಗ್ಲೆಂಡಿನ ಸ್ಟಿರ‍್ಲಿಂಗ್ ಬಳಿಯ ತಾರ‍್ನ್ ಹಿಲ್ ಹಳ್ಳಿಯ ಹೊರಬಾಗದಲ್ಲಿದ್ದ, ತಮ್ಮದೇ ಆದ ಮೈನ್ಸ್ ಪಾರ‍್ಮ್ ವಿಗ್‍ವಾಮ್ಸ್ ಗೆ ರಸ್ತೆ ಮೂಲಕ ಸಾಗಿಸಲಾಯಿತು.

17 ಮೀಟರ್ ಉದ್ದದ ZA127 ಹೆಲಿಕಾಪ್ಟರ್‍ನಲ್ಲಿದ್ದ ಬಹುತೇಕ ಎಲ್ಲಾ ಬಾಗಗಳನ್ನು ಹಾಗೆಯೇ ಉಳಿಸಿಕೊಂಡರು. ಇದರಲ್ಲಿದ್ದ ಸೋನಾರ್ ಸ್ಟೇಶನ್ ಅನ್ನು ಮಾತ್ರ ಹೊರತೆಗೆದು ವೆಸ್ಟನ್-ಸೂಪರ‍್-ಮರೆಯಲ್ಲಿರುವ ಹೆಲಿಕಾಪ್ಟರ್ ಮ್ಯೂಸಿಯಮ್‍ಗೆ ದಾನವಾಗಿ ನೀಡಿದರು. ಸೋನಾರ್ ಸ್ಟೇಶನ್ ಇದ್ದ ಜಾಗದಲ್ಲೇ ಬಚ್ಚಲು ಹಾಗೂ ಅಡುಗೆ ಕೋಣೆಗಳಿಗೆ ಸ್ತಳಾವಕಾಶ ಮಾಡಿಕೊಂಡರು.

ಈ ಹೆಲಿಕಾಪ್ಟರ್ ಹಾಲಿಡೇ ಹೋಂನಲ್ಲಿ ಒಟ್ಟು ಮೂರು ಕೋಣೆಗಳಿವೆ. ಹೆಲಿಕಾಪ್ಟರ್‍ನ ಬಾಲದಲ್ಲಿ ಸ್ತಳಾವಕಾಶ ಕಡಿಮೆಯಿದ್ದ ಕಾರಣ ಅಲ್ಲಿ ಒಂದು ಹಾಸಿಗೆ ಇರುವ ಮಲಗುವ ಕೋಣೆಯಿದೆ. ಹೆಲಿಕಾಪ್ಟರ್‍ನ ನಡುವಿರುವ ಒಂದು ಕೋಣೆಯಲ್ಲಿ ಎರಡು ಹಾಸಿಗೆಗಳು ಹಾಗೂ ಉಳಿದ ಇನ್ನೊಂದು ಕೋಣೆಯಲ್ಲಿ ಮೂರು ಹಾಸಿಗೆಗಳನ್ನು ಹಾಕಲಾಗಿದೆ. ವಿಶ್ರಾಮಕ್ಕೆ ಹೆಚ್ಚಿನ ಸ್ತಳಾವಕಾಶ ಕಲ್ಪಿಸುವ ದ್ರುಶ್ಟಿಯಿಂದ ಇವುಗಳಲ್ಲಿ ಸೋಪಾ ಕಮ್ ಬೆಡ್‍ಗಳನ್ನು ಅಳವಡಿಸಿದೆ.

ಹೆಲಿಕಾಪ್ಟರ್‍ನ ಮೊಗಸಾಲೆಗೆ ಒಳಬರುತ್ತಿದ್ದಂತೆ ಅಲ್ಲಿ ಮೇಜನ್ನು ಜೋಡಿಸಿದ್ದು ಅದರ ಸುತ್ತ ಸ್ತಳಾವಕಾಶಕ್ಕೆ ತಕ್ಕಂತೆ ಕುಳಿತುಕೊಳ್ಳಲು ಕುದುರೆ ಲಾಳದ ವಿನ್ಯಾಸದ ಬೆಂಚನ್ನು ಹಾಕಲಾಗಿದೆ. ಕಡುನೀಲಿ, ಬೂದು ಹಾಗೂ ತೆಳುಬೂದು ಬಣ್ಣಗಳಿಂದ ಇದರ ಒಳಾಂಗಣವನ್ನು ಸಿಂಗರಿಸಿದ್ದಾರೆ. ಬಣ್ಣಗಳ ಆಯ್ಕೆ ಮತ್ತು ಸಂಯೋಜನೆ ಪ್ರಶಾಂತ ವಾತವರಣವನ್ನು ಇಮ್ಮಡಿಸಿದ್ದು ಮನಸ್ಸಿಗೆ ಮುದ ನೀಡುವಂತಿದೆ.

ಇದರಲ್ಲಿನ ಅತ್ಯಂತ ಕುತೂಹಲಕಾರಿಯಾದ ಸಂಗತಿಯೆಂದರೆ ಹೆಲಿಕಾಪ್ಟರ್‍ನ ಬಹಳಶ್ಟು ವಿನ್ಯಾಸವನ್ನು ಹಾಗೆಯೇ ಕಾಪಾಡಿಕೊಂಡಿರುವುದು. ಅದರಲ್ಲೂ ಹೊರಮೈ ವಿನ್ಯಾಸವನ್ನು ಹಿಂದಿನ ಸ್ತಿತಿಯಂತೆ ಪುನರ್ ರಚಿಸಲಾಗಿದೆ. ಕಾಕ್‍ಪಿಟ್‍ನಲ್ಲಿದ್ದ ಮೂಲ ಲಕ್ಶಣಗಳು ಅಂದರೆ ಡ್ಯಾಶ್ ಬೋರ‍್ಡ್, ದೀಪದ ವಿನ್ಯಾಸ, ಚಾವಣಿಯಲ್ಲಿ ಅಳವಡಿಸಿರುವ ಸ್ವಿಚ್‍ಗಳು, ಪುಟ್ ಪೆಡಲ್‍ಗಳು ಮುಂತಾದವುಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇದರಿಂದ ಹೆಲಿಕಾಪ್ಟರ್‍ನ ಹಿಂದಿನ ವೈಬವವನ್ನು ಸ್ವತಹ ಅನುಬವಿಸಲು ಸಾದ್ಯ ಎಂಬುದು ನವೀಕರಣ ತಂಡದ ಅನಿಸಿಕೆ. ಹಾಲಿಡೇ ಹೋಂ ಹೆಲಿಕಾಪ್ಟರ್‍ನ ಕಾಕ್‍ಪಿಟ್‍ನಲ್ಲಿ ಕುಳಿತರೆ ಸ್ಟಿರ‍್ಲಿಂಗ್‍ನ ವಾಯುಪ್ರದೇಶದ ವಿಹಂಗಮ ನೋಟವನ್ನೂ ಆಸ್ವಾದಿಸಬಹುದು.

ಬದಲಾವಣೆ ಹಾಗೂ ಪ್ರಕ್ರುತಿಯ ಸೊಬಗನ್ನು ಆಸ್ವಾದಿಸಲು ಬಯಸುವ ಸಾರ‍್ವಜನಿಕರಿಗೆ ಹಾಲಿಡೇ ಹೋಂ ಹೆಲಿಕಾಪ್ಟರ್ ಇನ್ನೇನು ತೆರೆದುಕೊಳ್ಳಲಿದೆ. ಒಂದು ರಾತ್ರಿಯ ಬಿಡಾರಕ್ಕೆ ಜೋಡಿಗೆ 200 ಡಾಲರ್ ತೆರಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

(ಮಾಹಿತಿ ಹಾಗೂ ಚಿತ್ರ ಸೆಲೆ: dailymail.co.uk)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications