ಆಪ್ರಿಕಾದ ಮರಳುಗಾಡಿನಲ್ಲೊಂದು ‘ಹಸಿರು ಗೋಡೆ’
ಗ್ರೇಟ್ ವಾಲ್ ಆಪ್ ಚೈನಾ ಗೊತ್ತು, ಇದೇನಿದು ಗ್ರೇಟ್ ಗ್ರೀನ್ ವಾಲ್ ಎಂದು ಯೋಚಿಸುತ್ತಿದ್ದೀರಾ? ಗ್ರೇಟ್ ಗ್ರೀನ್ ವಾಲ್ ಎಂಬುದು ಆಪ್ರಿಕಾ ಕಂಡದಲ್ಲಿ ನೆಲ ಬರಡಾಗುವುದನ್ನು ತಡೆಯಲು ಕೈಗೊಂಡಿರುವ ಹಮ್ಮುಗೆಯ ಹೆಸರು.
ಆಪ್ರಿಕಾ ಕಂಡದ ಬಡಗಣದಲ್ಲಿ ಸಹಾರ ಮರಳುಗಾಡು, ಅದರ ತೆಂಕಣಕ್ಕೆ ಸಹೇಲ್ ಎಂಬ ಅರೆ ಒಣಬೂಮಿ ಕಾಣಸಿಗುತ್ತದೆ. ಈ ಸಹೇಲ್ ಅರೆಒಣಬೂಮಿ, ಸಹಾರ ಮರಳುಗಾಡು ಹಾಗು ಸವಾನ ಹುಲ್ಲುಗಾವಲಿನ ನಡುವಿನಲ್ಲಿದ್ದು, ಈ ಎರಡಕ್ಕೂ ನಡುವಿನ ಮಾರ‍್ಪುನೆಲದ(transition land) ರೀತಿಯಲ್ಲಿದೆ. ಮೂಡಣದಲ್ಲಿ ಕೆಂಪು ಕಡಲಿನಿಂದ ಪಡುವಣದಲ್ಲಿ ಅಟ್ಲಾಂಟಿಕ್ ಹೆಗ್ಗಡಲಿನವರೆಗೂ ಹಬ್ಬಿರುವ ಈ ಜಾಗದಲ್ಲಿ ಹೆಚ್ಚಿನ ಬಾಗ ಹುಲ್ಲುಗಾವಲಿದೆ ಮತ್ತು ಅಲ್ಲಲ್ಲಿ ಕುರುಚಲು ಗಿಡಮರಗಳು ಕಾಣಸಿಗುತ್ತದೆ.
ನೆಲಕಚ್ಚಿದ ಬೇಸಾಯ – ಹೆಚ್ಚುತ್ತಿರುವ ವಲಸೆ
ಈ ಹಿಂದೆ ಈ ಪ್ರದೇಶಗಳು ಉಸಿರುಹಲತನದಿಂದ(bio diversity) ಕೂಡಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ವಾತಾವರಣ ಬದಲಾವಣೆಯಿಂದ, ಸರಿಯಾದ ನೆಲದಾರೈಕೆ ಇಲ್ಲದುದರಿಂದಾಗಿ (ಅತಿಯಾದ ಬೇಸಾಯ, ಅತಿಯಾದ ಮೇಯಿಸುವಿಕೆ) ಇಂದು ಇಲ್ಲಿನ ಕ್ರುಶಿ ಬೂಮಿ ದಿನದಿಂದ ದಿನಕ್ಕೆ ಬರಡಾಗುತ್ತಿದೆ. ಹೀಗೆ ನೆಲ ಬರಡಾಗುತ್ತಿರುವುದರಿಂದ ಆಹಾರ ಕೊರತೆ, ನಿರುದ್ಯೋಗ ಹಾಗು ಅಲ್ಲಿನ ಜನರ ಜೀವನ ಮಟ್ಟ ಕುಸಿತದಂತಹ ಹಲವಾರು ತೊಂದರೆಗಳಾಗುತ್ತಿವೆ. ಇಂದು ಸುಮಾರು 5 ಕೋಟಿ ಮಂದಿ ಇದರಿಂದ ತೊಂದರೆಗೆ ಒಳಗಾಗುತ್ತಿದ್ದಾರೆ. ಜೀವನ ಮಟ್ಟ ಕುಸಿತದಿಂದಾಗಿ ಇಲ್ಲಿನ ಮಂದಿ ಬೇರೆ ಕೆಲಸ ಹುಡುಕಿ ಯೂರೋಪ್ ಹಾಗು ಮುಂತಾದ ಜಾಗಗಳಿಗೆ ದೊಡ್ಡ ಮಟ್ಟದಲ್ಲಿ ವಲಸೆ ಹೊರಟಿದ್ದಾರೆ.
ಏನಿದು ‘ಹಸಿರು ಗೋಡೆ’?
ಈ ಎಲ್ಲ ಸಮಸ್ಯೆಗಳನ್ನು ಉತ್ತರಿಸಲು ಕಂಡುಕೊಂಡ ಹಮ್ಮುಗೆಯೇ “ಗ್ರೇಟ್ ಗ್ರೀನ್ ವಾಲ್”. ಅಟ್ಲಾಂಟಿಕ್ ಹೆಗ್ಗಡಲಿನಿಂದ ಶುರುವಾಗಿ ಕೆಂಪು ಕಡಲಿನವರೆಗು 15 ಕಿಲೋಮೀಟರ್ ಅಗಲದ, 7,775 ಕಿಲೋಮೀಟರ್ ಉದ್ದದ ನೆಲಪಟ್ಟಿಯಲ್ಲಿ ಗಿಡ ನೆಟ್ಟು ಹಸಿರಾಗಿಸುವ ಸಲುವಾಗಿ ಶುರುವಾಯಿತು ಈ ಹಮ್ಮುಗೆ. ಆದರೆ ಇಂದು ಸಹಾರ-ಸಹೇಲ್ ಪ್ರಾಂತ್ಯದ ಜನರ ಬೇರೆ ಬೇರೆ ಸವಾಲುಗಳಿಗೆ ಉತ್ತರಿಸುವ ಬಹುಮುಕಿ ಹಮ್ಮುಗೆಯಾಗಿ ಬೆಳೆದಿದೆ. ಈ ಹಮ್ಮುಗೆಗೆ ಇಪ್ಪತ್ತು ದೇಶಗಳು ಒಳಗೊಂಡಿವೆ. ಯೂರೋಪಿಯನ್ ಯೂನಿಯನ್, ಪುಡ್ ಅಂಡ್ ಅಗ್ರಿಕಲ್ಚರಲ್ ಆರ‍್ಗನೈಸೇಶನ್, ಯುನೈಟೆಡ್ ನೇಶನ್ಸ್ ಅವರ GM-UNCCD, ದಿ ಆಪ್ರಿಕನ್ ಯೂನಿಯನ್ ಕಮೀಶನ್ನಿನ 13 ಸಂಗಡ ದೇಶಗಳು ಹಾಗು ಇತರೆ ಸಂಗಡ ದೇಶಗಳು ಈ ಹಮ್ಮುಗೆಗೆ ಬೆಂಬಲಿಸಿವೆ. ಈಗಾಗಲೆ 8 ಬಿಲಿಯನ್ ಡಾಲರಿನಶ್ಟು ಹಣವನ್ನು ಹೊಂದಿಸಲಾಗಿದೆ.
ಅಟ್ಲಾಂಟಿಕ್ ಹೆಗ್ಗಡಲಿನಿಂದ ಕೆಂಪು ಕಡಲಿನವರೆಗೂ ಹಬ್ಬಿರುವ ಈ ಉದ್ದದ ನೆಲಪಟ್ಟಿಯಲ್ಲಿ ಮರಗಳನ್ನು ನೆಡಲಾಗುತ್ತದೆ. ಇದಕ್ಕೆ ಸ್ತಳೀಯವಾಗಿ ಸಿಗುವ ಮರದ ತಳಿಗಳನ್ನೆ ಆಯ್ಕೆ ಮಾಡಲಾಗುತ್ತದೆ. ಹೆಚ್ಚಾಗಿ ಅಲ್ಲಿನ ಪರಿಸರಕ್ಕೆ ಒಗ್ಗುವ ಅಕೇಶಿಯಾ ಮರಗಳನ್ನೇ ಬೆಳಸಲಾಗುತ್ತಿದೆ. ಇದರಿಂದ ಅಲ್ಲಿನ ಕಿರುವಾತಾವರಣ(micro climate) ಬದಲಾಗುತ್ತದೆ. ಮರಳುಗಾಡಿನಲ್ಲಿ ಬೀಸುವಂತೆ ಜೋರಾಗಿ ಬೀಸುವ ಗಾಳಿ ನೆಲದ ಮೇಲ್ಮೈ ನ ಮಣ್ಣನ್ನು ಅದರೊಟ್ಟಿಗೆ ಹಾರಿಸಿಕೊಂಡು ಹೋಗುತ್ತಿರುವುದರಿಂದ ನೆಲ ಬರಡಾಗುತ್ತಿದೆ. ನೆಡಲಾಗುವ ಗಿಡಗಳು ಮರಗಳಾಗಿ ಬೆಳೆದು ಗಾಳಿತಡೆಯಂತೆ(wind break) ಕೆಲಸ ಮಾಡುವುದರಿಂದ ಗಾಳಿಯ ಬಿರುಸು ಹೆಚ್ಚಿರುವುದಿಲ್ಲ. ಹಾಗಾಗಿ ಮೇಲ್ಮೈ ನ ಮಣ್ಣಿನ ಸವೆತ ಕಡಿಮೆಯಾಗುತ್ತದೆ. ಇದರಿಂದ ಮಣ್ಣಿನ ಕನಿಜಾಂಶ ಹಾಗೆ ಉಳಿದು ಮಣ್ಣಿನ ಪಲವತ್ತತೆ ಹಾಳಾಗುವುದು ತಡೆಯುತ್ತದೆ. ಮರಗಳು ಮಣ್ಣಿನಲ್ಲಿನ ತೇವಾಂಶ ಆವಿಯಾಗದಂತೆ ತಡೆಯುವುದರಿಂದ ನೀರಿನ ನಶ್ಟವೂ ಸಾಕಶ್ಟು ಕಡಿಮೆಯಾಗಲಿದೆ.
ಕಾಡು ಬೆಳೆಸುವುದಶ್ಟೇ ಈ ಹಮ್ಮುಗೆಯ ಉದ್ದೇಶವಲ್ಲ
ಗ್ರೇಟ್ ಗ್ರೀನ್ ವಾಲ್ ಹಮ್ಮುಗೆಯನ್ನು ನೋಡಿ ಇದೊಂದು ಕಾಡನ್ನು ಬೆಳೆಸುವ ಹಮ್ಮುಗೆ ಎಂದುಕೊಂಡರೆ ತಪ್ಪಾಗುತ್ತದೆ. ಸಾಕಶ್ಟು ಮರಗಳನ್ನು ನೆಡುವುದರ ಮೂಲಕ ಅಲ್ಲಿನ ಮಣ್ಣಿನ ಪಲವತ್ತತೆ, ನೀರನ್ನು ಹಿಡಿದಿಡುವ ಕಸುವನ್ನು ಹೆಚ್ಚಿಸಲಾಗುತ್ತದೆ, ಅದರ ಮೂಲಕ ಅಲ್ಲಿನ ಬೇಸಾಯಕ್ಕೆ ಮರುಜೀವ ನೀಡುವುದೇ ಇದರ ಉದ್ದೇಶವಾಗಿದೆ. ಇದರಿಂದ ಅಲ್ಲಿ ಬರಡಾಗಿರುವ ಹಾಗು ಬರಡಾಗುತ್ತಿರುವ ಜಾಗದಲ್ಲಿ ಹಸಿರು ಮತ್ತೆ ಕಾಣುವಂತೆ ಮಾಡುವುದು ಇದರ ಗುರಿ. ಬೇಸಾಯದಿಂದ ಜನರಿಗೆ ಆಹಾರ ಮತ್ತು ಕೆಲಸ ಸಿಗುವುದರಿಂದ ಆರ‍್ತಿಕ ಬೆಳವಣಿಗೆಯಾಗಲಿದೆ. ಇದರಿಂದ ಅಲ್ಲಿನವರು ಹೊರಗೆ ವಲಸೆ ಹೋಗುವುದು ತಪ್ಪಲಿದೆ ಮತ್ತು ಕೆಲಸ ಸಿಗುವುದರಿಂದ ಹಲವು ಕಡೆ ಬಯೋತ್ಪಾದನೆ ಕೂಡ ಕಡಿಮೆಯಾಗಲಿದೆ ಎಂಬ ನಂಬಿಕೆಯಿದೆ.
ಗ್ರೇಟ್ ಗ್ರೀನ್ ವಾಲ್ ಸಹಾರ ಮರುಬೂಮಿಯು ತೆಂಕಣಕ್ಕೆ ಹರಡುತ್ತಿರುವುದನ್ನು ತಡೆಯಲು ಬೆಳೆಸಲಾಗುತ್ತಿರುವ ಹಸಿರು ಗೋಡೆ ಎಂದು ಹಲವಾರು ಮಾದ್ಯಮಗಳಲ್ಲಿ ಹೇಳಲಾಗಿದೆ. ಆದರೆ ಇದೊಂದು ತಪ್ಪು ಕಲ್ಪನೆ ಎನ್ನುತ್ತಾರೆ ‘ಗ್ಲೋಬಲ್ ಎನ್ವಿರಾನ್ಮೆಂಟ್ ಪೆಸಿಲಿಟಿ’ಯ ಪರಿಸರ ತಗ್ನರಾದ ಜೀನ್ ಮಾರ‍್ಕ್ ಸಿನ್ನಸಾಮಿ. ಸಿನ್ನಸಾಮಿ ಅವರ ಪ್ರಕಾರ ಸಹಾರ ಮರುಬೂಮಿ ಸಾಕಶ್ಟು ನೆಲೆಗೊಂಡಿದೆ(stable ecosystem) ಹಾಗು ಅದು ತೆಂಕಣಕ್ಕೆ ಹರಡುತ್ತಿಲ್ಲ. ಅಲ್ಲಲ್ಲಿ ಕೆಲವು ಕಡೆ ಮರುಬೂಮಿಯ ಮರಳು ತೆಂಕಣಕ್ಕೆ ಬರುತ್ತಿದೆಯಾದರೂ, ಅದು ಅಲ್ಲಿನ ಸ್ತಳೀಯ ಬದಲಾವಣೆಯಶ್ಟೇ. ಅದನ್ನು ಹಿಡಿದು ಇಡೀ ಮರಳುಗಾಡೇ ತೆಂಕಣಕ್ಕೆ ಬರುತ್ತಿದೆ ಎಂದರೆ ತಪ್ಪಾಗುತ್ತದೆ ಎನ್ನುತ್ತಾರೆ ಸಿನ್ನಸಾಮಿಯವರು.
ಹಸನಾಗುತ್ತಿದೆ ಬಂಜರು ನೆಲ
2007 ರಲ್ಲಿ ಪ್ರಾರಂಬವಾದ ಈ ಹಮ್ಮುಗೆಯು ಈಗಾಗಲೇ ಬಹಳಶ್ಟು ಕಡೆ ಮಣ್ಣಿನ ಪಲವತ್ತತೆ ಹೆಚ್ಚಿಸುವಲ್ಲಿ ಸಾಕಶ್ಟು ಏಳಿಗೆ ಕಂಡಿದೆ. ಇತಿಯೋಪಿಯಾದಲ್ಲಿ 15 ಮಿಲಿಯನ್ ಹೆಕ್ಟೇರಿನಶ್ಟು ಬರಡು ಬೂಮಿಯನ್ನು ಮತ್ತೆ ಹಸನುಗೊಳಿಸಲಾಗಿದೆ. ಸೆನೆಗಲ್‌ನ 25000 ಹೆಕ್ಟೇರ್ ನೆಲದಲ್ಲಿ 11.4 ಮಿಲಿಯನ್ ಮರಗಳನ್ನು ನೆಡಲಾಗಿದೆ. ನೈಜೀರಿಯಾದಲ್ಲಿ 5 ಮಿಲಿಯನ್ ಹೆಕ್ಟೇರ್, ಸುಡಾನಿನಲ್ಲಿ 2000 ಹೆಕ್ಟೇರ್ ಬಂಜರು ನೆಲವನ್ನು ಹಸನಾಗಿಸಲಾಗಿದೆ. ಮಾಲಿ, ಬರ‍್ಕಿನಾ ಪಾಸೋ, ನೈಜರ್ ದೇಶಗಳಲ್ಲಿ 2500 ಹೆಕ್ಟೇರಿನಶ್ಟು ಬರಡು ಹಾಗು ಒಣನೆಲವನ್ನು ಸ್ತಳೀಯರನ್ನು ಸೇರಿಸಿಕೊಂಡು ಹಸಿರು ಪಟ್ಟಿಗಳನ್ನು (green belt) ಬೆಳಸಲಾಗಿದೆ. ಇಲ್ಲಿ 50 ತಳಿಗಳ ಸುಮಾರು ಎರಡು ಮಿಲಿಯನ್ ಬೀಜಗಳನ್ನು ಹಾಗು ಸಸಿಗಳನ್ನು ನೆಡಲಾಗಿದೆ.
(ಮಾಹಿತಿ ಹಾಗು ಚಿತ್ರ ಸೆಲೆ: nationalgeographic.org, UNCCD, greatgreenwall.org, YouTube )
ಇತ್ತೀಚಿನ ಅನಿಸಿಕೆಗಳು