‘ಜರಿಹುಳ’ – ನೂರಾರು ಕಾಲುಗಳ ಸರದಾರ

– ನಾಗರಾಜ್ ಬದ್ರಾ.

ಕಾಲುಗಳಿಲ್ಲದ ಹಾವು, ಎರಡು ಕಾಲುಗಳನ್ನು ಹೊಂದಿರುವ ನಾವು, ನಾಲ್ಕು ಕಾಲುಗಳಿರುವ ಹಲವಾರು ಉಸಿರಿಗಳ ನಡುವೆ ನೂರಾರು ಕಾಲುಗಳಿರುವ ಜರಿಹುಳಗಳು (Millipede) ಎಲ್ಲರಿಗೆ ಅಚ್ಚರಿ ಮೂಡಿಸಿವೆ. ಜರಿಹುಳಗಳಿಗೆ ಇಶ್ಟೊಂದು ಕಾಲುಗಳು ಏಕಿವೆ? ಅವುಗಳು ನಡಿಗೆಗೆ ಮಾತ್ರ ಸೀಮಿತವಾಗಿವೆಯೇ? ಈ ಕಾಲುಗಳು ಬೇರೆ ಯಾವ ಕೆಲಸಗಳಲ್ಲಿ ನೆರವಾಗುತ್ತವೆ?

ಹೌದು, ನೀವು ಊಹಿಸಲಾಗದಶ್ಟು ಕಾಲುಗಳನ್ನು ಇದು ಹೊಂದಿದೆ!

ಜರಿಹುಳವು ಸುಮಾರು 1000 ಕಾಲುಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಆದರೆ ಅದು ಹುಸಿಯಾಗಿದ್ದು, ಅರಕೆಕಾರ ಪ್ರಕಾರ ಇವು ಸಾಮಾನ್ಯವಾಗಿ 80 ರಿಂದ 400 ಕಾಲುಗಳನ್ನು ಹೊಂದಿರುತ್ತವೆ ಎಂದು ತಿಳಿದು ಬಂದಿದೆ. ಅಮೇರಿಕಾದ ಕ್ಯಾಲಿಪೋರ‍್ನಿಯಾ ರಾಜ್ಯದ ನಡುವಣ ಪ್ರದೇಶದಲ್ಲಿ ಕಂಡುಬರುವ ಇಲ್ಲಾಕ್ಮಿ ಪ್ಲೆನಿಪೀಸ್ (Illacme plenipes) ಎಂಬ ಜಾತಿಯ ಜರಿಹುಳಗಳು ಸುಮಾರು 750 ಕಾಲುಗಳನ್ನು ಹೊಂದಿದ್ದು, ಇದು ಜಗತ್ತಿನಲ್ಲಿ ಅತಿ ಹೆಚ್ಚು ಕಾಲುಗಳನ್ನು ಹೊಂದಿರುವ ಉಸಿರಿ ಎಂಬ ಹೆಗ್ಗಳಿಕೆಗೆ ಪ್ರಾತವಾಗಿದೆ.

ನೂರಾರು ಕಾಲುಗಳಿದ್ದರೂ ನಡೆಯುವುದು ಮಾತ್ರ ತುಂಬಾ ಮೆಲ್ಲಗೆ!

ನೂರಾರು ಕಾಲುಗಳಿರುವ ಜರಿಹುಳವು ತುಂಬಾ ಬಿರುಸಾಗಿ ನಡೆದಾಡಬಹುದು ಅಂದುಕೊಂಡಿದ್ದರೆ ಅದು ತಪ್ಪು. ಇವುಗಳ ಕಾಲುಗಳು ಅಳತೆಯಲ್ಲಿ ತುಂಬಾ ಚಿಕ್ಕದಾಗಿದ್ದು, ಕಾಲುಗಳಿಗೆ ಹೋಲಿಸಿದರೆ ಅದರ ಮೈ ತೂಕವು ತುಂಬಾ ಹೆಚ್ಚಾಗಿರುತ್ತದೆ. ಕಾಲುಗಳ ಅಳತೆ ತುಂಬಾ ಚಿಕ್ಕದಾಗಿರುವುದರಿಂದ ಅದರ ಮೈ ನೆಲದ ಹತ್ತಿರದಲ್ಲಿರುತ್ತದೆ. ಅದರಿಂದ ಜರಿಹುಳಗಳಿಗೆ ದೊಡ್ಡ ಹೆಜ್ಜೆಗಳನ್ನು ಹಾಕಲು ಆಗುವುದಿಲ್ಲ. ಅಲ್ಲದೇ ನಡಿಗೆಯ ಹೊತ್ತಿನಲ್ಲಿ ಇವುಗಳ ಕೆಲವೊಂದು ಕಾಲುಗಳು ಮುಂದಕ್ಕೆ ಹೆಜ್ಜೆ ಹಾಕಿದ್ದರೆ, ಕೆಲವು ಹಿಂದಕ್ಕೆ ಹೆಜ್ಜೆ ಹಾಕುತ್ತವೆ. ಇನ್ನು ಕೆಲವು ಯಾವಾಗಲೂ ನೆಲಕ್ಕೆ ತಗಲಿಕೊಂಡಿರುತ್ತವೆ.

ಕಾಲುಗಳಿಂದ ತಮ್ಮ ಬಿಲವನ್ನು ಅಗೆಯುತ್ತವೆ!

ಸಾಮಾನ್ಯವಾಗಿ ಜರಿಹುಳಗಳು ನೆಲದಡಿಯ ಕಾಲೋನಿಗಳಲ್ಲಿ ಬದುಕುತ್ತವೆ. ಆಕಾರದಲ್ಲಿ ಚಪ್ಪಟೆಯಾಗಿರುವ ಇವು ಮೊದಲಿಗೆ ಬಿಲವನ್ನು ಅಗೆಯಲು ಸೂಕ್ತವಾದ ಜಾಗವನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಬಳಿಕ ಆ ಜಾಗದಲ್ಲಿನ ಯಾವುದಾದರೂ ಒಂದು ಸಂದಿಯನ್ನು ಆರಿಸಿಕೊಂಡು ತಲೆಯನ್ನು ತುರುಕಿ ಅದನ್ನು ಇನ್ನು ಅಗಲ ಮಾಡುತ್ತವೆ. ಆಮೇಲೆ ಕಾಲುಗಳಿಂದ ಸಂದಿಯನ್ನು ಅಗೆಯುವ ಮೂಲಕ ಅದನ್ನು ದೊಡ್ಡದಾಗಿಸುತ್ತವೆ. ಕಾಲೋನಿಗಳಲ್ಲಿ ಹಲವಾರು ಜಾತಿಯ ಜರಿಹುಳಗಳು ಒಗ್ಗಟ್ಟಾಗಿ ಬದುಕುತ್ತಿದ್ದು, ಪ್ರತಿಯೊಂದಕ್ಕೂ ತನ್ನದೇ ಆದ ಬೇರೆ ಬೇರೆ ಕೆಲಸವನ್ನು ನೀಡಲಾಗಿರುತ್ತದೆ. ಸಂದಿನಿಂದ ಮಣ್ಣನ್ನು ಮೇಲಕ್ಕೆ ಎತ್ತಿ ತರುವುದಕ್ಕಾಗಿ ನೇಮಕ ಮಾಡಲಾಗಿರುವ ಹುಳಗಳು ಕೂಡಲೇ ತಮ್ಮ ಕೆಲಸವನ್ನು ಆರಂಬಿಸುತ್ತವೆ. ಬಳಿಕ ಮುಂದುಗಡೆ ಚಿಕ್ಕದಾಗಿರುವ ತುದಿ ಹಾಗೂ ಹಿಂದುಗಡೆ ಹೋದಂತೆ ದಪ್ಪವಾಗಿರುವ ಮೈಯನ್ನು ಹೊಂದಿರುವ ಹುಳಗಳು ಸಂದಿಯ ಒಳಗಡೆ ಹೋಗಿ ಕಾಲುಗಳಿಂದ ಅದನ್ನು ದೊಡ್ಡದಾಗಿ ಕೊರೆಯುತ್ತವೆ. ಇವು ಸಂದಿಯ ಒಳಗಡೆ ಹೋದಂತೆ ಅದು ದೊಡ್ಡದಾಗುತ್ತಾ ಹೋಗಿ ಬಿಲದ ರೂಪ ಪಡೆಯುತ್ತದೆ.

ಇಲ್ಲಾಕ್ಮಿ ಪ್ಲೆನಿಪೀಸ್

ಇಲ್ಲಾಕ್ಮಿ ಪ್ಲೆನಿಪೀಸ್

ಇವುಗಳ ಕಾಲುಗಳು ಲೈಂಗಿಕ ಕ್ರಿಯೆಯಲ್ಲಿ ಮುಕ್ಯ ಪಾತ್ರವಹಿಸುತ್ತವೆ

ಸಾಮಾನ್ಯವಾಗಿ ಎಲ್ಲಾ ಜಾತಿಯ ಜರಿಹುಳವಿನ ಕಾಲುಗಳ ರಚನೆಯು ಒಂದೇ ರೀತಿಯದ್ದಾಗಿದ್ದು, ಗಂಡು ಹುಳವಿನ ಕಾಲುಗಳು ಹೆಣ್ಣಿಗೆ ಹೋಲಿಸಿದರೆ ಸ್ವಲ್ಪ ಉದ್ದವಾಗಿರುತ್ತವೆ. ಗಂಡು ಹುಳವು ಲೈಂಗಿಕ ಕ್ರಿಯೆಗಾಗಿಯೇ ಒಂದು ಅತವಾ ಎರಡು ಜೊತೆಯ ವಿಶೇಶ ಕಾಲುಗಳನ್ನು ಹೊಂದಿದ್ದು, ಅವುಗಳನ್ನು ಗೊನೊಪಾಡ್ಸ್ (gonopods) ಎಂದು ಕರೆಯುತ್ತಾರೆ. ಮೊದಲಿಗೆ ಗಂಡು ಹುಳವಿನ ಮೈಯಲ್ಲಿನ ವಿಶೇಶ ಸುರಿಗೆಗಳು ಗಂಡುಬಿತ್ತುಗಳನ್ನು (Sperm) ಉತ್ಪತ್ತಿ ಮಾಡಿ ಪೊಟ್ಟಣಗಳ ರೂಪದಲ್ಲಿ ಹೊರಹಾಕುತ್ತವೆ. ಬಳಿಕ ಅವುಗಳ ಗೊನೊಪಾಡ್ಸ್ ಕಾಲುಗಳು ಗಂಡುಬಿತ್ತುಗಳ ಪೊಟ್ಟಣಗಳನ್ನು ಹೆಣ್ಣು ಹುಳಕ್ಕೆ ತಲುಪಿಸುತ್ತವೆ.

ಪಾಲಿಕ್ಸಿನಿಡಾ (Polyxenida) ಜಾತಿಯ ಜರಿ ಹುಳಗಳನ್ನು ಹೊರತುಪಡಿಸಿ ಉಳಿದ ಎಲ್ಲವೂ ಇದೇ ಶೈಲಿಯಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತವೆ. ಆದರೆ ಪಾಲಿಕ್ಸಿನಿಡಾ ಜಾತಿಯ ಗಂಡು ಹುಳಗಳು ಗಂಡುಬಿತ್ತುಗಳ ಪೊಟ್ಟಣಗಳನ್ನು ನೆಲದ ಮೇಲೆ ಹೊರಹಾಕುತ್ತವೆ. ಬಳಿಕ ಹೆಣ್ಣು ಹುಳಗಳು ಕಾಲುಗಳ ನೆರವಿನಿಂದ ನೆಲದಿಂದ ಅವುಗಳನ್ನು ತೆಗೆದುಕೊಳ್ಳುತ್ತವೆ.

ಕಾಲುಗಳು ಮೈಯನ್ನು ಚೊಕ್ಕಗೊಳಿಸಲು ಕೂಡ ನೆರವಾಗುತ್ತವೆ

ಜರಿ ಹುಳಗಳು ತುಂಬಾ ಚೊಕ್ಕ ಉಸಿರಿಗಳಾಗಿದ್ದು, ತಮ್ಮ ಮೈಯ ಬೇರೆ ಬೇರೆ ಬಾಗಗಳನ್ನು ಚೊಕ್ಕಗೊಳಿಸುವುದು ಹಾಗೂ ಹೊಳಪು ಬರಿಸುವುದರಲ್ಲಿಯೇ ದಿನದ ತುಂಬಾ ಹೊತ್ತು ಕಳೆಯುತ್ತವೆ. ಇವುಗಳ ಕೆಲವೊಂದು ಜೊತೆಯ ಕಾಲುಗಳು ಕುಂಚದ ಹಾಗೇ ಕೂದಲಿನ ಗುಂಪನ್ನು ಹೊಂದಿದ್ದು, ಅರಿವುಕ (antennae), ಕಣ್ಣು ಹಾಗೂ ಮೈಯ ಇತರೆ ಬಾಗಗಳನ್ನು ಚೊಕ್ಕಗೊಳಿಸಲು ನೆರವಾಗುತ್ತವೆ.

ಕೆಲವೊಂದು ಜಾತಿಯ ಜರಿಹುಳಗಳ ಕಾಲುಗಳು ಅರಿವುಕಗಳಾಗಿ ಕೆಲಸ ಮಾಡುತ್ತವೆ

ಜೈಂಟ್ ಆಪ್ರಿಕನ್ (Giant African) ಜರಿಹುಳಗಳ ಕಣ್ಣುಗಳು ಕಳಪೆ ಮಟ್ಟದ ನೋಟವನ್ನು ಹೊಂದಿದ್ದು, ಯಾವುದೇ ವಸ್ತು ಹಾಗೂ ಉಸಿರಿಗಳನ್ನು ಗುರುತಿಸುವಾಗ ಅವನ್ನು ಮುಟ್ಟಿ ನೋಡಬೇಕಾಗುತ್ತದೆ. ಆದ್ದರಿಂದ ಕಾಲುಗಳಿಂದ ಮುಟ್ಟಿ ಉಸಿರಿಗಳನ್ನು ಕಂಡುಹಿಡಿಯುತ್ತವೆ, ಹಾಗೆಯೇ ಪರಿಮಳದ ಮೂಲಕ ಅವುಗಳನ್ನು ಸಂಪರ‍್ಕಿಸುತ್ತವೆ. ಇವು ಸುಮಾರು 15 ಇಂಚು ಉದ್ದ ಹಾಗೂ 3 ಇಂಚು ಅಗಲವಾಗಿ ಬೆಳೆಯುವುದರಿಂದ ಇವುಗಳನ್ನು ದೈತ್ಯ ಎಂದು ಕರೆಯುತ್ತಾರೆ. ದೈತ್ಯ ಆಪ್ರಿಕನ್ ಜರಿಹುಳಗಳನ್ನು ಕೆಲಮೊಮ್ಮೆ ಸಾಕುಪ್ರಾಣಿಯಾಗಿ ಕೂಡ ಬಳಸಲಾಗುತ್ತದೆ.

ಬಹಳ ಅಪರೂಪದ ಮೈ ರಚನೆಯನ್ನು ಹೊಂದಿವೆ

ಸುರುಳಿ ಜರಿಹುಳ

ಸಾಮಾನ್ಯವಾಗಿ ಜರಿ ಹುಳವಿನ ಮೈಯನ್ನು ತಲೆ ಹಾಗೂ ತುಂಡುಗಳನ್ನು ಒಳಗೊಂಡಿರುವ ಇತರೆ ಬಾಗ ಹೀಗೆ ಎರಡು ಬಾಗಗಳಾಗಿ ಬೇರ‍್ಪಡಿಸಲಾಗುತ್ತದೆ.

  • ಇವುಗಳ ಮೈಯ ರಚನೆಯು ನೋಡಲು ಹಲವಾರು ತುಂಡುಗಳನ್ನು ಒಂದು ಸಾಲಿನಲ್ಲಿ ಉರುಳೆಯಾಕಾರದಂತೆ ಜೋಡಿಸಿದ ಹಾಗೆ ಕಾಣಿಸುತ್ತದೆ.
  • ಮೈಯ ಮೊದಲನೇ ತುಂಡನ್ನು ಬಿಟ್ಟು ಹೆಚ್ಚುಕಡಿಮೆ ಉಳಿದ ಎಲ್ಲಾ ತುಂಡುಗಳು ಕಾಲುಗಳನ್ನು ಹೊಂದಿರುತ್ತವೆ. ಹಾಗೆಯೇ ಇವುಗಳಲ್ಲಿ ಹಲವಾರು ತುಂಡುಗಳು ವೈರಿಗಳನ್ನು ಹಿಮ್ಮೆಟ್ಟಿಸಲು ಬೇಕಿರುವ, ನಂಜಿನ ರಾಸಾಯನಿಕಗಳನ್ನು ಉತ್ಪತ್ತಿ ಮಾಡುವ ವಿಶೇಶ ಸುರಿಗೆಗಳನ್ನು (glands) ಕೂಡ ಹೊಂದಿವೆ.
  • ಮೈಯ ಮೊದಲ ತುಂಡನ್ನು ಕೋಲಂ (collum) ಎಂದು ಕರೆಯುತ್ತಾರೆ. ಇದು ನೇರವಾಗಿ ತಲೆಯ ಹಿಂದಿನ ಬಾಗದಲ್ಲಿದ್ದು, ಕಾಲುಗಳನ್ನು ಹೊಂದಿರುವುದಿಲ್ಲ. ಬಳಿಕ ಎರಡನೆಯ, ಮೂರನೆಯ ಹಾಗೂ ನಾಲ್ಕನೇ ತುಂಡುಗಳು ಒಂದು ಜೊತೆಯ ಕಾಲುಗಳನ್ನು ಹೊಂದಿದ್ದು, ಅವುಗಳನ್ನು ಹ್ಯಾಪ್ಲೊ ಸೆಗ್ಮೆಂಟ್ಸ್ (haplosegments) ಎಂದು ಕರೆಯಲಾಗುತ್ತದೆ.
    ಇನ್ನು ಐದನೇ ತುಂಡಿನಿಂದ ಮೈಯ ಕೊನೆಯ ಬಾಗದವರೆಗಿನ ಎಲ್ಲಾ ತುಂಡುಗಳು ಎರಡು ಜೊತೆಯ ಕಾಲುಗಳನ್ನು ಹೊಂದಿರುತ್ತವೆ. ಕೊನೆಯ ತುಂಡನ್ನು ಟೆಲ್ಸನ್ (telson) ಎಂದು ಕರೆಯುತ್ತಾರೆ, ಇದಕ್ಕೆ ಕಾಲುಗಳು ಇರುವುದಿಲ್ಲ.
  • ಇವುಗಳು ಗಟ್ಟಿಯಾದ ಹೊರ ಎಲುಬುಹಂದರವನ್ನು (exoskeleton) ಹೊಂದಿದ್ದು, ಅದು ಬೇಟೆಯಿಂದ ತಪ್ಪಿಸಿಕೊಳ್ಳಲು ನೆರವಾಗುತ್ತದೆ. ಇವು ಜೀವಕ್ಕೆ ಅಪಾಯ ಉಂಟುಮಾಡಬಹುದಾದ ಉಸಿರಿಗಳನ್ನು ಕಂಡಕೂಡಲೇ ಮೈಯನ್ನು ಚೆಂಡಿನ ಆಕಾರದಂತೆ ಸುರುಳಿ ಸುತ್ತಿಕೊಂಡು ಅದನ್ನು ಯಾಮಾರಿಸುತ್ತವೆ.

ಜರಿಹುಳವಿನ ಕಾಲುಗಳು ನಡಿಗೆಯಲ್ಲಿ ತುಂಬಾ ಮೆಲ್ಲಗಿದ್ದರು, ಅವು ಅದರ ಬದುಕಿನ ಹಲವಾರು ಕೆಲಸಗಳಲ್ಲಿ ನೆರವಾಗಿವೆ.

(ಮಾಹಿತಿ ಸೆಲೆ: wiki, asknature.org, animals.mom.meenchantedlearning.comanimalcorner.co.ukanimals.sandiegozoo.org, thoughtco.com)
(ಚಿತ್ರ ಸೆಲೆ: Wiki/Millipede , Wiki/Illacme, arizonensis)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. gautham hegde says:

    ಬರಹ ಚನ್ನಾಗಿದೆ

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *