ಬಾನ್ಪೋ ಸೇತುವೆ – ಕಣ್ಮನ ಸೆಳೆಯುವ ಬಣ್ಣದ ಕಾರಂಜಿ

– ಕೆ.ವಿ.ಶಶಿದರ.

ಕಾಮನಬಿಲ್ಲಿನ ಸೇತುವೆಕಳೆದ ಶತಮಾನದ 70ರ ದಶಕದಲ್ಲಿ ಉದ್ಯಾನವನಗಳಲ್ಲಿ ಹಾಗೂ ಸುತ್ತಾಟದ ಸ್ತಳಗಳಲ್ಲಿ ಜನಸಾಮಾನ್ಯರನ್ನು ಸೆಳೆಯಲು ಕಾರಂಜಿಗಳು ಮೈದಾಳಿದವು. ಮುಂದಿನ ವರುಶಗಳಲ್ಲಿ ಹೊಸ ಹೊಸ ಬಗೆಗಳು ಹುಟ್ಟಿ, ಸಂಗೀತ ಕಾರಂಜಿ ನ್ರುತ್ಯ ಕಾರಂಜಿಗಳಿಗೆ ಬಣ್ಣದ ಮೆರುಗನ್ನು ನೀಡಿ ಹೊಸ ಮಾಯಾಲೋಕವನ್ನೇ ಹುಟ್ಟುಹಾಕಿದವು. ಕಾಮನಬಿಲ್ಲಿನ ಬಣ್ಣಗಳ ಜೊತೆಗೆ ನ್ರುತ್ಯ ಕಾರಂಜಿಯ ಕುಣಿತವನ್ನು ಹಾಗೂ ಸಂಗೀತ ಕಾರಂಜಿಯ ಲಾಸ್ಯವನ್ನು, ಮುಸ್ಸಂಜೆಯ ತಂಪಿನ ವಾತಾವರಣದಲ್ಲಿ ನೋಡುವುದು ಮನೋಲ್ಲಾಸಕ್ಕೆ ದಾರಿಯಾಯಿತು.

ವರುಶಗಳು ಉರುಳಿದಂತೆ ಕಾರಂಜಿಯ ಹೊಸ ಹೊಸ ಕಲ್ಪನೆಗಳು ಜನಸಾಮಾನ್ಯರಿಗೆ ಹೊಸ ಹೊಸ ಅನುಬವ ನೀಡಲು ಮುಂದಾಯಿತು. ಹೊಸ ಅವಿಶ್ಕಾರದ ಮತ್ತೊಂದು ಆಯಾಮವೇ ಸೌತ್ ಕೊರಿಯಾದ ಸಿಯೋಲ್‍ನ ಬಾನ್ಪೋ ಸೇತುವೆಗೆ ಅಳವಡಿಸಿರುವ ಕಾಮನಬಿಲ್ಲಿನ ಕಾರಂಜಿ. ಕತ್ತಲಲ್ಲಿ ಬಾನ್ಪೋ ಸೇತುವೆಯ ಮೇಲೊಮ್ಮೆ ಹೋದರೆ ಕಣ್ಮನ ತಣಿಸುವ ಬಣ್ಣಬಣ್ಣದ ಕಾರಂಜಿ, ಸುಮಾರು ದೂರ ಚಿಮ್ಮುವ ನಯನ ಮನೋಹರ ದ್ರುಶ್ಯವನ್ನು ನೋಡಿ ಕಣ್ತುಂಬಿಸಿಕೊಳ್ಳಬಹುದು. ಮಾಮೂಲಿ ಕಾರಂಜಿಗೂ ಇದಕ್ಕೂ ಇರುವ ಮೂಲ ವ್ಯತ್ಯಾಸವೆಂದರೆ ಈ ಸೇತುವೆಯ ಇಕ್ಕೆಲಗಳಿಂದ ಹಾರುವ ನೀರಿನ ಕಾರಂಜಿ ಅಡ್ಡಡ್ಡವಾಗಿ ಪಕ್ಕಕ್ಕೆ ಚಿಮ್ಮುವುದು.

ಒಂದು ಸೇತುವೆಯ ಮೇಲೆ ಮತ್ತೊಂದು ಸೇತುವೆಯನ್ನು ಕಟ್ಟಿದ್ದಾದರೂ ಏಕೆ?

ಬಾನ್ಪೋ ಸೇತುವೆ ಸಿಯೋಲ್‍ನ ಒಂದು ದೊಡ್ಡ ಸೇತುವೆ. ಸಿಚೋ ಮತ್ತು ಯಾಂಗಸನ್ ಜಿಲ್ಲೆಗಳಿಗೆ ಇದು ಮೂಲ ಸಂಪರ‍್ಕ ಸೇತು. ಹಾನ್ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಸೇತುವೆ ಕೆಳಗೆ ಹಳೆಯ ಜಮ್ಶು ಸೇತುವೆ ಈಗಲೂ ಹಾಗೆಯೇ ಇದೆ. ಮಳೆ ಹೆಚ್ಚಾದಲ್ಲಿ ನದಿ ಉಕ್ಕಿ ಹಳೆಯ ಸೇತುವೆ ಮೇಲೆ ನೀರು ಹರಿಯುವುದು ಸಾಮಾನ್ಯ ಸಂಗತಿಯಾಗಿತ್ತು. ಆ ಸಮಯದಲ್ಲಿ ಜಿಲ್ಲೆಗಳ ನಡುವಣ ಸಂಪರ‍್ಕ ಕಡಿದು ಜನ ಪರದಾಡುವಂತಾಗಿತ್ತು. ಈ ಅವ್ಯವಸ್ತೆಯಿಂದ ಹೊರಬರಲು ಹೊಸ ಸೇತುವೆಯೊಂದರ ಅವಶ್ಯಕತೆ ತೀರಾ ಅನಿವಾರ‍್ಯವೆನಿಸಿತು.

ಸಿಯೋಲ್ ನಗರದಲ್ಲಿ ಬೂಮಿಯ ಬೆಲೆ ಗಗನಕ್ಕೆ ಏರಿತ್ತು. ಅಲ್ಲದೇ ಹೊಸ ಸ್ತಳದಲ್ಲಿ ಸೇತುವೆಯನ್ನು ಕಟ್ಟುವುದು ಅತಿ ದುಬಾರಿಯಾದ ಕೆಲಸವಾಗಿತ್ತು. ಅದಕ್ಕಾಗಿ ಈಗಿದ್ದ ಜಮ್ಶು ಸೇತುವೆಯ ಮೇಲೆಯೇ ಮತ್ತೊಂದು ಸೇತುವೆಯನ್ನು ಕಟ್ಟಲು ಅಲ್ಲಿನ ಆಳ್ವಿಕೆ ತೀರ‍್ಮಾನಿಸಿತು. ಅದರಂತೆ ಸುಗಮ ಸಂಚಾರಕ್ಕಾಗಿ ಮತ್ತೊಂದು ಸೇತುವೆಯ ನಿರ‍್ಮಾಣಕ್ಕೆ ಜನವರಿ 11, 1980ರಂದು ಶಂಕುಸ್ತಾಪನೆ ಮಾಡಿ, ಎರಡೂವರೆ ವರ‍್ಶದಲ್ಲಿ ನಿರ‍್ಮಾಣ ಮುಗಿಸಿ ಜೂನ್ 25 1982ರಂದು ಲೋಕಾರ‍್ಪಣೆ ಮಾಡಿತು. ಇದೇ ಬಾನ್ಪೋ ಸೇತುವೆ.

ಇದು ವಿಶ್ವದ ಅತಿ ಉದ್ದದ ‘ಕಾರಂಜಿ ಸೇತುವೆ’ ಎಂಬ ಗಿನ್ನೆಸ್ ದಾಕಲೆ ಮಾಡಿದೆ

ಬಾನ್ಪೋ ಸೇತುವೆಯ ಒಟ್ಟು ಉದ್ದ 1495 ಮೀಟರ್‍ಗಳು ಹಾಗೂ ಅಗಲ 25 ಮೀಟರ್‍ಗಳು. 2009ರಲ್ಲಿ ಈ ಸೇತುವೆಯ ಇಬ್ಬದಿಯಲ್ಲೂ ನೀರಿನ ಕಾರಂಜಿಯನ್ನು ಹಾಗೂ ಅದಕ್ಕೆ ಪೂರಕವಾಗಿ ಬಣ್ಣಬಣ್ಣದ ದೀಪಗಳನ್ನು ಅಳವಡಿಸಲಾಯಿತು. ಹಾಗಾಗಿ ಇದು ವಿಶ್ವದ ಅತಿ ಉದ್ದದ ಕಾರಂಜಿ ಸೇತುವೆ ಎಂದು ಗಿನ್ನೆಸ್ ದಾಕಲೆಯನ್ನು ತನ್ನದಾಗಿಸಿಕೊಂಡಿತು.

ಬಾನ್ಪೋ ಸೇತುವೆಯ ಎರಡೂ ಬದಿಯಲ್ಲಿ ವಿವಿದ ಬಣ್ಣದ ಒಟ್ಟಾರೆ 10,000 ಎಲ್‍ಇಡಿ ದೀಪಗಳನ್ನು ಅಳವಡಿಸಲಾಗಿದೆ. ಪ್ರತಿ ನಿಮಿಶಕ್ಕೆ ನೀರಿನ ಕಾರಂಜಿಗಳಿಂದ ಹೊರ ಚಿಮ್ಮುವ 190 ಟನ್ ನೀರು ಎಲ್‍ಇಡಿ ದೀಪದ ವಿವಿದ ಬಣ್ಣಗಳಿಂದಾಗಿ ವರ‍್ಣಮಯವಾಗಿ ಕಂಗೊಳಿಸುತ್ತದೆ. ಬಣ್ಣದ ನೀರು ಸೇತುವೆ ಒಂದೂವರೆ ಕಿಲೋಮೀಟರ್ ಉದ್ದಕ್ಕೂ ಚಿಮ್ಮುವ ಕಾರಣ ಬಾನ್ಪೋ ಸೇತುವೆಯನ್ನು ಬೆಳದಿಂಗಳಲ್ಲಿ ಕಾಣುವ ಕಾಮನಬಿಲ್ಲಿನ ಸೇತುವೆ ಎಂತಲೂ ಕರೆಯುವುದುಂಟು.

ಬಾನ್ಪೋ ಸೇತುವೆ

ಬಾನ್ಪೋ ಸೇತುವೆಯ ಮೇಲೆ ಅಳವಡಿಸಿರುವ ಕಾರಂಜಿಗೆ ನೀರನ್ನು ಕೆಳಗೆ ಹರಿಯುವ ಹಾನ್ ನದಿಯಿಂದಲೇ ಪಡೆಯಲಾಗತ್ತದೆ. 38 ದೊಡ್ಡ ಗಾತ್ರದ ನೀರಿನ ಪಂಪುಗಳನ್ನು ಈ ಕಾರ‍್ಯಕ್ಕೆ ಅಳವಡಿಸಿದ್ದು ಪ್ರತಿ ನಿಮಿಶಕ್ಕೆ 190ಟನ್ ನೀರನ್ನು 20 ಮೀಟರ್ ಎತ್ತರಕ್ಕೆ ಎತ್ತಿ ಕಾರಂಜಿಗೆ ಉಣಬಡಿಸುತ್ತದೆ. ಈ ನೀರು ಹೊರ ಚಿಮ್ಮುವುದು ಸೇತುವೆ ಇಕ್ಕೆಲಗಳಲ್ಲಿ ಅಳವಡಿಸಿರುವ 720 ನೀರಿನ ಕಾಂಜಿಗಳಿಂದ. ಹೀಗೆ ಅಡ್ಡಡ್ಡವಾಗಿ ಹೊರ ಬರುವ ನೀರು ಪಂಪಿನ ಸಾಮರ‍್ತ್ಯಕ್ಕೆ ಅನುಗುಣವಾಗಿ 43 ಮೀಟರ್ ದೂರದವರೆಗೂ ಚಿಮ್ಮುತ್ತದೆ. ಚಿಮ್ಮುವ ರಬಸಕ್ಕೆ ನೀರಿನಿಂದ ಸಿಡಿಯುವ ಸಣ್ಣ ಸಣ್ಣ ಕಣಗಳು ಬಣ್ಣ ಬಣ್ಣದ ಎಲ್‍ಇಡಿ ದೀಪದ ಬೆಳಕಿನಲ್ಲಿ ಬಣ್ಣವನ್ನು ಬದಲಾಯಿಸಿಕೊಳ್ಳುತ್ತಾ ಗಾಳಿಯಲ್ಲಿ ಲಾಸ್ಯವಾಡುತ್ತಾ ಮೆಲ್ಲ ಮೆಲ್ಲನೆ ಮತ್ತೆ ನದಿ ಸೇರುವ ದ್ರುಶ್ಯ ವರ‍್ಣನಾತೀತ.

(ಮಾಹಿತಿ ಸೆಲೆ: theseoulguide.comlonelyplanet.comfountainsource.net)

(ಚಿತ್ರ ಸೆಲೆ: fountainsource.net )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *