ಕವಿತೆ: ಅಂದು ಇಂದು
– ಸುರಬಿ ಲತಾ.
ಹೊಸದರಲ್ಲಿ ಕರೆದ ನನ್ನಿನಿಯ
“ಚಿನ್ನ ರನ್ನ”
ನೆಗೆದು ಕುಣಿಯುತ್ತಿತ್ತು ನಾಚುತ್ತ ಮನ
ಬರುವಾಗ ಬರಿಗೈಯಲ್ಲಿ ಬರನು
ತರುವನು ಮಲ್ಲಿಗೆಯ ದಿಂಡನು
ಚಂದಿರನ ಕಾಣುತಲಿ ಒಲವ ಸೂಸುವನು
ನಕ್ಕರೆ ಅಕ್ಕರೆಯಲ್ಲಿ ನಡುವ ಬಳಸುವನು
ವರುಶ ಕಳೆಯುವುದರೊಳಗೆ ಮುದ್ದು
ಕಂದಮ್ಮ ನಕ್ಕನು ತೊಟ್ಟಿಲೊಳಗೆ
ಅತ್ತೆ ಮಾವರ ವಾತ್ಸಲ್ಯ ಹೇಳತೀರದು
ಒಬ್ಬಳೆ ಸೊಸೆ, ಸೊಸೆಯಲ್ಲ ಮಗಳೆಂದು ಬೀಗಿದರು
ಈಗಂತೂ ಕಳೆದು ಹೋಯಿತು ಐದು ವರುಶ
ಇನಿಯನೇನೋ ಕರೆವ ಮುದ್ದಿನ ಹೆಸರು ಮರೆತ
“ಚಿನ್ನ” ಎಂದಾಗ ನಾ ಓಡಿ ಬಂದು ಇಣುಕುವೆ
ಆ ಕರೆ ಮಗನಿಗೆಂದು ಅರಿತು ಬಂದ ದಾರಿಯಲಿ ಹಿಂತಿರುಗುವೆ
(ಚಿತ್ರ ಸೆಲೆ: pixabay )
ಇತ್ತೀಚಿನ ಅನಿಸಿಕೆಗಳು