ರುಚಿ ರುಚಿಯಾದ ತಿಂಡಿ ಗೊಜ್ಜವಲಕ್ಕಿ
– ಕಲ್ಪನಾ ಹೆಗಡೆ.
ಗಟ್ಟಿ ಅವಲಕ್ಕಿಗೆ ಹುಳಿ, ಸಿಹಿ ಹಾಗೂ ಕಾರವಿರುವ ಗೊಜ್ಜನ್ನು ಮಾಡಿ ಸೇರಿಸಿ, ಒಗ್ಗರಣೆ ಹಾಕಿದರೆ ರುಚಿಯಾದ ಗೊಜ್ಜವಲಕ್ಕಿ ಸಿದ್ದವಾಗುತ್ತದೆ. ಹಬ್ಬಗಳಲ್ಲಿ ಗುಳ್ಪಟ್, ಸಜ್ಜಿಗೆ, ಉಪ್ಪಿಟ್ಟಿನ ಜೊತೆಗೆ ಗೊಜ್ಜವಲಕ್ಕಿಯನ್ನು ವಿಶೇಶ ತಿಂಡಿಯಾಗಿ ಸವಿಯುತ್ತಾರೆ. ಬನ್ನಿ, ಈ ಇದನ್ನು ಹೇಗೆ ಮಾಡುವುದೆಂದು ನೋಡೋಣ.
ಬೇಕಾಗುವ ಸಾಮಾಗ್ರಿಗಳು
1/2 ಕೆ.ಜಿ ಗಟ್ಟಿ ಅವಲಕ್ಕಿ
4 ಚಮಚ ಸಾರಿನ ಪುಡಿ
ಅರ‍್ದ ಚಮಚ ಜೀರಿಗೆ ಪುಡಿ
ಕಾಲು ಚಮಚ ಕಾಳುಮೆಣಸಿನಪುಡಿ
1 ಹಿಡಿ ಕಡ್ಲೆಬೀಜ
1 ಸಣ್ಣ ಅಚ್ಚು ಬೆಲ್ಲ (ಇಲ್ಲವೇ ಸಿಹಿಗೆ ಬೇಕಾದಶ್ಟು)
2 ಒಣಮೆಣಸಿನಕಾಯಿ
ಸ್ವಲ್ಪ ಕಾಯಿತುರಿ, ಸಾಸಿವೆ, ಹುಣಸೆಹಣ್ಣಿನ ರಸ, ಚಿಟಿಕೆ ಇಂಗು, ಕಡ್ಲೆಬೇಳೆ, ಕರಿಬೇವು ಹಾಗೂ ರುಚಿಗೆ ತಕ್ಕಶ್ಟು ಉಪ್ಪು.
ಮಾಡುವ ಬಗೆ
ಮೊದಲು ಅವಲಕ್ಕಿಯನ್ನು ಸ್ವಲ್ಪ ನೆನೆಹಾಕಿ ಎಲ್ಲ ನೀರನ್ನು ಚೆನ್ನಾಗಿ ಬಸಿದು ಅದಕ್ಕೆ ಸಾರಿನ ಪುಡಿ, ಉಪ್ಪು, ಬೆಲ್ಲ ಹಾಕಿ ಒಂದು ಸುತ್ತು ಮಿಕ್ಸರಿನಲ್ಲಿ ರುಬ್ಬಿಕೊಳ್ಳಿ (ನುಣ್ಣಗೆ ರುಬ್ಬುವುದು ಬೇಡ. ಒಂದು ಸುತ್ತು ರುಬ್ಬಿದರೆ ಸಾಕು). ಆಮೇಲೆ ಅದಕ್ಕೆ ಹುಣಸೆಹಣ್ಣಿನ ರಸ, ಕಾಯಿತುರಿ, ಜೀರಿಗೆಪುಡಿ, ಕಾಳುಮೆಣಸಿನಪುಡಿ ಹಾಕಿ ಚೆನ್ನಾಗಿ ಕಲಸಿ. ಬಳಿಕ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಉದ್ದಿನಬೇಳೆ, ಕಡ್ಲೆಬೀಜ, ಕಡ್ಲೆಬೇಳೆ, ಇಂಗು, ಕರಿಬೇವು, ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಈ ಒಗ್ಗರಣೆಗೆ ಮೊದಲು ರುಬ್ಬಿಟ್ಟುಕೊಂಡ ಅವಲಕ್ಕಿಯನ್ನು ಹಾಕಿ ಕಲಸಿದರೆ ಗೊಜ್ಜವಲಕ್ಕಿ ಸಿದ್ದ. ಸಂಜೆಯ ಹೊತ್ತು ಟೀ, ಕಾಪಿಯ ಜೊತೆಗೂ ತಿನ್ನಲು ನೀಡಬಹುದು.
(ಚಿತ್ರ ಸೆಲೆ: ಕಲ್ಪನಾ ಹೆಗಡೆ )
ಇತ್ತೀಚಿನ ಅನಿಸಿಕೆಗಳು