ವಿಶ್ವದ ಎರಡನೇ ಅತಿ ವಿಶಾಲವಾದ ಜಲಪಾತ – ಡೆಟಿಯನ್ ಪಾಲ್ಸ್
– ಕೆ.ವಿ.ಶಶಿದರ.
ಇದು ಏಶ್ಯಾದಲ್ಲಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಈ ಜಲಪಾತ ಚೀನಾ ಮತ್ತು ವಿಯೆಟ್ನಾಮ್ ದೇಶದ ಗಡಿ ಬಾಗದಲ್ಲಿದೆ. ವಿಶ್ವ ಬೂಪಟದಲ್ಲಿ ಎರಡು ದೇಶಗಳ ಗಡಿಬಾಗದಲ್ಲಿರುವ ಜಲಪಾತಗಳನ್ನು ಗಣನೆಗೆ ತೆಗೆದುಕೊಂಡಾಗ ಈ ಜಲಪಾತಕ್ಕೆ ನಾಲ್ಕನೇ ಸ್ತಾನ. ಬ್ರೆಜಿಲ್-ಅರ‍್ಜೆಂಟೀನಾದ ಇಗುವಾಜು, ಜಾಂಬಿಯಾ-ಜಿಂಬಾಬ್ವೆಯ ವಿಕ್ಟೋರಿಯಾ ಹಾಗೂ ಅಮೇರಿಕಾ-ಕೆನಡಾದ ನಯಾಗರಾ ಮೊದಲ ಮೂರು ಸ್ತಾನಗಳನ್ನು ಕ್ರಮವಾಗಿ ಅಲಂಕರಿಸಿವೆ.
ಡೆಟಿಯನ್ ಜಲಪಾತದ ಪ್ರಮುಕ ಬಾಗವು ದಕ್ಶಿಣ ಚೀನಾದ ಬೂ ಪ್ರದೇಶದಲ್ಲಿದೆ. ವಿಯೆಟ್ನಾಮ್ ಕೇವಲ ಕೆಲವೊಂದು ಹೊಳೆಯನ್ನು ಮಾತ್ರ ಹೊಂದಿದೆ. ಚೀನಾದಲ್ಲಿ ಹಬ್ಬಿರುವ ಡಾಕ್ಸಿನ್ ಕೌಂಟಿಯ ಕಾರ‍್ಸ್ಟ್ ಬೆಟ್ಟಗಳು ಮತ್ತು ವಿಯೆಟ್ನಾಮಿನ ಕಾವೊ ಬಂಗ್ ಪ್ರಾಂತ್ಯದಲ್ಲಿ ಹರಿಯುವ ಕ್ವಾಯ್ ಸೋನ್ ನದಿಯು ಈ ನೈಸರ‍್ಗಿಕ ಪವಾಡದ ರೂವಾರಿ ಎನ್ನಲು ಅಡ್ಡಿಯಿಲ್ಲ. ಇದು ಏಶ್ಯಾ ಕಂಡದಲ್ಲಿ ಅತ್ಯಂತ ಸುಂದರ ರಮಣೀಯ ಜಲಪಾತಗಳಲ್ಲಿ ಒಂದಾಗಿದೆ.
120 ಮೀಟರ್ ಎತ್ತರದಿಂದ ಜಿಗಿಯುವ ನೀರು!
ಈ ಜಲಪಾತದ ವೈಶಿಶ್ಟ್ಯವೆಂದರೆ ಇದು ಮೂರು ದೊಡ್ಡ ಕಲ್ಲುಬಂಡೆಗಳ ಮೇಲಿಂದ ಕೆಳಗೆ ದುಮುಕುತ್ತದೆ. ಒಂದೊಂದೂ 120 ಮೀಟರ್ ಗಳಶ್ಟು ಎತ್ತರದಿಂದ ದುಮುಕುವ ಪರಿ ಕಣ್ಣಿಗೆ ಆನಂದ. ಮಳೆಗಾಲದಲ್ಲಿ ನದಿಯ ನೀರಿನ ಹರಿವು ಹೆಚ್ಚಾದಂತೆ ಈ ಮೂರೂ ಜಲಪಾತಗಳು ಒಂದಾಗುತ್ತವೆ. ಆಗ ಈ ಜಲಪಾತವು 208 ಮೀಟರಿನಶ್ಟು ಪ್ರಬಲವಾದ ಹಾಗೂ ವಿಶಾಲವಾದ ಜಲಪಾತವಾಗುತ್ತದೆ. ವಸಂತದಲ್ಲಿ ಇದರ ನೋಟವೇ ಆತ್ಯದ್ಬುತ. ಜೀವನದ ವಿಜಯೋತ್ಸವ, ಸ್ವಾಬಾವಿಕ ಸ್ವಾತಂತ್ರ್ಯ, ಸೌಹಾರ‍್ದತೆ, ತಳಮಳಿಸುವ ನೀರಿನ ಮಹತ್ವ ಹಾಗೂ ನೀರು ನೆಲಕ್ಕೆ ಅಪ್ಪಳಿಸಿದಾಗ ಸಿಡಿಯುವ ಮಂಜಿನ ಕಣಗಳು ಅಪರಿಮಿತ ಆನಂದವನ್ನು ನೋಡುಗರ ಕಣ್ಣಲ್ಲಿ ತುಂಬುತ್ತದೆ.
ಜಲಪಾತದ ಸುತ್ತಮುತ್ತ ನೋಡಲು ಹಲವಾರು ಚೆಂದದ ಜಾಗಗಳಿವೆ
ಡೆಟಿಯನ್ ಜಲಪಾತ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಸಜ್ಜಿತವಾದ ಮೂಲ ಸೌಕರ‍್ಯಗಳನ್ನು ಒದಗಿಸುವುದರೊಂದಿಗೆ ಇದು ಪ್ರವಾಸಿಗರನ್ನು ಸೆಳೆಯುವ ತಾಣವನ್ನಾಗಿ ಅಬಿವ್ರುದ್ದಿ ಪಡಿಸಲಾಗಿದೆ. ಈ ಜಲಪಾತದ ಸಮೀಪವಿರುವ ಲೈಪಿಂಗ್ ಸ್ಟೋನ್ ಪಾರೆಸ್ಟ್ ಹಾಗೂ ರಮಣೀಯ ಬೂದ್ರುಶ್ಯಗಳು, ಟಾಂಗ್ಲಿನ್ ಕಣಿವೆ ತಮ್ಮ ಅಸಾಮಾನ್ಯತೆಯಿಂದ ಪ್ರವಾಸಿಗರನ್ನು ಸೆಳೆಯುತ್ತವೆ. ಬೇರೆಲ್ಲೂ ಬೆಳೆಯದಂತಹ, ಇಲ್ಲಿ ಮಾತ್ರ ಬೆಳೆಯುವ ಅನೇಕ ಸ್ತಳೀಯ ಸಸ್ಯಗಳನ್ನು ಇಲ್ಲಿ ಕಾಪಾಡಲಾಗಿದೆ.
ರಬಸದಿಂದ ದುಮ್ಮಿಕ್ಕುವ ಈ ಬಹುರಾಶ್ಟ್ರೀಯ ಜಲಪಾತದ ಅಡಿಯಲ್ಲಿ ನೀರು ಆಕರ‍್ಶಕವಾದ ಶಾಂತ ಸರೋವರವಾಗಿ ರೂಪಗೊಳ್ಳುತ್ತದೆ. ಇದು ಪ್ರವಾಸಿಗರ ನೆಚ್ಚಿನ ತಾಣ. ಸರೋವರದ ನೀರಿನಲ್ಲಿ ಬಿದಿರಿನ ತೇಲೊಡ್ಡುವಿನಲ್ಲಿ ಸವಾರಿ ಮಾಡಲು ಅವಕಾಶವಿದೆ. ಇಲ್ಲಿ ಈಜಬಹುದು. ಅಲ್ಲಲ್ಲೇ ಸೂಕ್ತ ವೇದಿಕೆಗಳನ್ನು ನಿರ‍್ಮಿಸಿ ಸುತ್ತಮುತ್ತಲಿನ ಸೊಬಗನ್ನು ಪ್ರವಾಸಿಗರು ನೋಡಿ ಆಸ್ವಾದಿಸಲು ಅನುಕೂಲವನ್ನು ಕಲ್ಪಿಸಲಾಗಿದೆ.
ನವೆಂಬರ್ ನಿಂದ ಏಪ್ರಿಲ್ ತಿಂಗಳಲ್ಲಿ ಇಲ್ಲಿಗೆ ಬೇಟಿ ನೀಡಿದರೆ ಒಳ್ಳೆಯದು
ಈ ಜಲಪಾತದ ಕಣ್ಮನ ಸೆಳೆಯುವ ದ್ರುಶ್ಯಗಳನ್ನು ಕಣ್ಣಲ್ಲಿ ತುಂಬಿಕೊಳ್ಳಲು ಅತ್ಯಂತ ಪ್ರಶಸ್ತವಾದ ಸಮಯವೆಂದರೆ ನವೆಂಬರ್ ನಿಂದ ಏಪ್ರಿಲ್‍ವರೆಗಿನ ಕಾಲ. ಈ ಕಾಲದಲ್ಲಿ ನೀರು ಗರಿಶ್ಟ ಮಟ್ಟದಲ್ಲಿರುತ್ತೆ. ಪ್ರವಾಸಿಗರ ಅನಕೂಲಕ್ಕಾಗಿ ಕೆಪೆಗಳು, ರೆಸ್ಟೋರೆಂಟ್‍ಗಳು, ಸ್ಮಾರಕ ಮಾರಾಟ ಮಳಿಗೆಗಳು ಸರೋವರದ ಸುತ್ತಲೂ ಇವೆ. ಇಲ್ಲಿರುವ ಸ್ತಳೀಯ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದಲ್ಲಿ ಕಿಟಕಿಯ ಮೂಲಕ ಜಲಪಾತದ ಅದ್ಬುತ ನೋಟಗಳನ್ನು ಸವಿಯಬಹುದು.
ಡೆಟಿಯನ್ ಜಲಪಾತ ಚೀನಾ ಮತ್ತು ವಿಯಟ್ನಾಮ್ ನಡುವಿನ ಗಡಿರೇಕೆಯಲ್ಲಿದೆ. ಸೈನೂ-ವಿಯಟ್ನಾಮ್ ಯುದ್ದದ ಸಮಯದಲ್ಲಿ ಚೀನಾ ದೇಶವು ಜಲಪಾತದ ರಕ್ಶಣೆಗಾಗಿ ಅದರ ಸುತ್ತಮುತ್ತ ತನ್ನ ಸೈನ್ಯವನ್ನು ನಿಯೋಜಿಸಿತ್ತು. ಎರಡು ದೇಶಗಳ ನಡುವಿನ ದೀರ‍್ಗಕಾಲದ ಗಡಿ ವಿವಾದ 1999ರಲ್ಲಿ ಅಂತ್ಯ ಕಂಡಿರುವುದು ಅಲ್ಲಿಗೆ ಹೋಗುವ ಪ್ರವಾಸಿಗರಿಗೆ ನಿಜಕ್ಕೂ ಸಂತಸದ ಸಂಗತಿ.
(ಮಾಹಿತಿ ಸೆಲೆ: world-of-waterfalls.com, worldtoptop.com, travel.davidmbyrne.com, travelchinaguide.com)
(ಚಿತ್ರ ಸೆಲೆ: pixabay.com, wikimedia)
ಇತ್ತೀಚಿನ ಅನಿಸಿಕೆಗಳು