ಟಗರು ಬಂತು ಟಗರು…
ಸೂರಿಯವರ ಮೈಮೇಲೆ ಉಪೇಂದ್ರ ಬಂದ್ರೆ ಏನಾಗತ್ತೆ ಅಂದ್ರೆ ಟಗರು ಆಗತ್ತೆ. ಈ ರೀತಿಯ ಗೋಜಲು ಗೋಜಲಿನ ಚಿತ್ರಕತೆ ಉಪೇಂದ್ರರ ಬಂಡವಾಳ. ಅದನ್ನೇ ಸೂರಿ ಟಗರುಗೆ ಅಳವಡಿಸಿದ್ದಾರೆ. ಹಾಗೆ ನೋಡಿದರೆ ಸಿನಿಮಾ ಕತೆ ಹೊಸತೇನಲ್ಲ. ಒಬ್ಬ ಪೋಲೀಸ್ ಆಪೀಸರ್ ಮತ್ತು ಒಂದಿಶ್ಟು ರೌಡಿಗಳ ಜಿದ್ದಾಜಿದ್ದಿ ಕತೆಗಳು ಸಾಕಶ್ಟು ಬಂದು ಹೋಗಿವೆ. ಇಂತದನ್ನು ಸೀದಾ ಹೇಳಿದ್ರೆ ಟಗರು ಇವತ್ತಿಗೆ ಮಕಾಡೆ ಮಲಗಿಬಿಡ್ತಿತ್ತು. ಆದ್ರೆ ಅದು ಇವತ್ತೂ ಪೊಗರಿನಿಂದ ಮುನ್ನುಗ್ಗುತ್ತಿರೋದಕ್ಕೆ ಕಾರಣ ಬಿಗಿಯಾದ ಸ್ಕ್ರೀನ್ ಪ್ಲೇ.
ಟಗರಿನ ಅಬ್ಬರ ಜೋರು
ಶಿವಣ್ಣರ ‘ಮಪ್ತಿ’ ನಂತರ ಸಾಕಶ್ಟು ಬರವಸೆ ಇದ್ದ ‘ಟಗರು’ ಅಬ್ಬರದಲ್ಲೇನೂ ಕಡಿಮೆ ಇಲ್ಲ. ಶಿವಣ್ಣರಿಗೆ ‘ಮಪ್ತಿ’ಯ ಪಾತ್ರ ಕೊಟ್ಟ ಇಮೇಜಿಗೆ ಈ ಪಾತ್ರ ಇನ್ನಶ್ಟು ಪುಶ್ಟಿ ಕೊಡುತ್ತೆ, ಎಲ್ಲೂ ಬೇಜಾರು ಅಂತ ಅನ್ನಿಸುವುದಿಲ್ಲ. ಶಿವಣ್ಣರ ಅಬಿನಯ ಎಂದಿನಂತೆ ಪರಕಾಯ ಪ್ರವೇಶ. ಉಳಿದಂತೆ ಮತ್ತೊಂದು ಪಾತ್ರ ತಲೆಯಲ್ಲಿ ಉಳಿಯೋದು ಅಂದ್ರೆ ಡಾಲಿ ಅಲಿಯಾಸ್ ದನಂಜಯ. ವಸಿಶ್ಟ ಚಿಟ್ಟೆಯಾಗಿ ಹಾರಿ ಬಂದು ಕುಳಿತುಕೊಳ್ಳದೇ ಹಾರಿ ಹೋಗಿದ್ದಾರೆ. ಉಳಿದ ಎಲ್ಲಾ ಪಾತ್ರಗಳೂ ತಮ್ಮ ಇರುವಿಕೆಯನ್ನ ನೆನಪಿಸುತ್ತವೆ.
ಈ ಸಿನೆಮಾ ಒಂದು ಒಗಟಿನ ಪೆಟ್ಟಿಗೆ
ಅಚ್ಚರಿಯ ವಿಶಯ ಅಂದ್ರೆ ಹೆಣ್ಣುಮಕ್ಕಳಿಗೂ ಇಶ್ಟ ಆಗಿದೆ ಟಗರಿನ ಪೊಗರು. ಸಿನೆಮಾ ಕೊನೆಯಲ್ಲಿರುವ ಒಂದೊಳ್ಳೆ ಸಂದೇಶ ಮತ್ತು ಮುದ್ದಾದ ಪ್ರೇಮ ಕತೆ ಹೆಂಗಳೆಯರ ಮನಸ್ಸು ಗೆದ್ದಿದೆ. ಸಿನಿಮಾ ಒಗಟಿನ ಪೆಟ್ಟಿಗೆ ತರ ಇದ್ದು, ನಿಮ್ಮ ಮೆದುಳು ಮೊದಲಿಂದಾನೆ ಸನ್ನಿವೇಶಗಳನ್ನು ಜೋಡಿಸುವುದಕ್ಕೆ ಶುರು ಮಾಡುವುದು. ಹಾಗಾಗಿ ಸಿನೆಮಾ ಎಲ್ಲೂ ನಿದಾನ ಅಂತ ಅನ್ನಿಸುವುದಿಲ್ಲ. ಸಿನೆಮಾ ಜೊತೆ ಜೊತೆಯೇ ನಿಮ್ಮ ಮೆದುಳು ಓಡುತ್ತಿರುತ್ತದೆ.
ಚರಣ್ ರಾಜ್ ಒಬ್ಬ ಬೇರೆ ರೀತಿಯ ಕಂಪೋಸರ್
ಟಗರು ಚಿತ್ರದ ಸಂಗೀತ ಅದ್ಬುತವಾಗಿದೆ. 5 ಹಾಡುಗಳೂ ಸೂಪರ್. ಚರಣ್ ರಾಜ್ ಒಬ್ಬ ವಿಬಿನ್ನ ಕಂಪೋಸರ್. ‘ಟಗರು ಬಂತು ಟಗರು’ ಹಾಡು ಮಂದಿ ಮೆಚ್ಚುಗೆಗಳಿಸಿದ್ದು, ಸದಾ ಕುಣಿಯುವಂತಿದೆ. ಜೀವಸಕಿಯೇ, ಮೆಂಟಲ್, ಹೋಲ್ಡ್ ಆನ್ – ಎಲ್ಲಾ ಹಾಡುಗಳು ವಿಬಿನ್ನ. ಕಾಯ್ಕಿಣಿಯವರ ಬದುಕಿನ ಬಣ್ಣವೇ ಹಾಡು ಸದಾ ಗುನುಗುವಂತಿದೆ. ಹಾಗೇ ಹಿನ್ನೆಲೆ ಸಂಗೀತವನ್ನೂ ಕೂಡ ಅದ್ಬುತವಾಗಿ ನೀಡಿದ್ದಾರೆ ಚರಣ್. ಟಗರಿನ ಗಂಟೆ ಸದ್ದು, ಸಾವಿನ ಸೂತಕಕ್ಕೆ ನೀಡಿರುವ ಸಂಗೀತ – ಈ ಎಲ್ಲಾ ಹೊಸ ಪ್ರಯೋಗಗಳಿಗೆ ಚರಣ್ ಪೂರ‍್ತಿ ಅಂಕ ಗಳಿಸುತ್ತಾರೆ.
ಸಿನಿಮಾದ ಉಸಿರೇ ಸಂಕಲನ
ಈ ಸಿನಿಮಾದ ಉಸಿರೇ ಸಂಕಲನ. ಈ ತರಹದ ಚಿತ್ರ ಮಾಡೋಕೆ ನಿರ‍್ದೇಶಕನಿಗೆ ಗುಂಡಿಗೆ ಬೇಕು. ಆ ಗುಂಡಿಗೆಯ ಸದ್ದನ್ನು ಸರಿಯಾಗಿ ಆಲಿಸಿ ಸಂಕಲನ ಮಾಡಿದ್ದಾರೆ ದೀಪು ಎಸ್ ಕುಮಾರ್. ಕ್ಯಾಮರಾ ಕೆಲಸ ಮಹೇಂದ್ರ ಸಿಂಹ ಅಚ್ಚುಕಟ್ಟಾಗಿ ನಿರ‍್ವಹಿಸಿದ್ದಾರೆ. ಅದರಲ್ಲಿ ಕಚ್ಚಾತನ ಎದ್ದು ಕಾಣುತ್ತೆ. ಸೂರಿಯವರ ತಂಡ ಅವರ ಯೋಚನೆಗಳನ್ನ ಪರದೆ ಮೇಲೆ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಈ ಗೋಜಲನ್ನು ಸರಿಯಾಗಿ ಬಿಡಿಸುವುದಕ್ಕೆ ಒಂದು ಪ್ರಯತ್ನ ಮಾಡಿ. ಒಂದೊಳ್ಳೆ ಸಿನಿಮಾ ನೋಡಿ ಬನ್ನಿ 🙂
( ಚಿತ್ರ ಸೆಲೆ: dailyhunt.in )
ಇತ್ತೀಚಿನ ಅನಿಸಿಕೆಗಳು