ಕ್ರೈಸ್ತರ ಅತಿದೊಡ್ಡ ಹಬ್ಬ – ಈಸ್ಟರ್
– ಅಜಯ್ ರಾಜ್.
ಎರಡು ಸಾವಿರ ವರ‍್ಶಗಳ ಹಿಂದೆ ಇಸ್ರೇಲ್ ದೇಶದ ಬೇತ್ಲೆಹೆಂ ಎಂಬಲ್ಲಿ ಜನಿಸಿದ ಯೇಸುಕ್ರಿಸ್ತ, ತನ್ನ ಕ್ರಾಂತಿಕಾರಿ ಬೋದನೆಗಳಿಂದ ಅಲ್ಲಿನ ದರ‍್ಮಶಾಸ್ತ್ರಿಗಳ ಹಾಗು ಪುರೋಹಿತಶಾಹಿ ವರ‍್ಗದವರ ದ್ವೇಶ ಕಟ್ಟಿಕೊಂಡು ಮರಣದಂಡನೆಗೆ ಗುರಿಯಾದ. ಕ್ರಿಸ್ತನ ಮರಣ ಮತ್ತು ಪುನರುತ್ತಾನವನ್ನು ಕ್ರೈಸ್ತರು ಏಳುದಿನಗಳ ಕಾಲ ಆತನನ್ನು ನೆನೆಸಿಕೊಳ್ಳುತ್ತಾ ಆಚರಿಸುತ್ತಾರೆ. ಗರಿಗಳ ಬಾನುವಾರದಿಂದ ಹಿಡಿದು ಸಬ್ಬತ್ ಶನಿವಾರದವರೆಗಿನ ಈ ಏಳು ದಿನಗಳು ಕ್ರೈಸ್ತರಿಗೆ ಅತ್ಯಂತ ಪ್ರಮುಕ ಹಾಗು ಪವಿತ್ರ ದಿನಗಳಾಗಿವೆ. ಎರಡು ಸಾವಿರ ವರ‍್ಶಗಳ ಹಿಂದೆ ಕ್ರಿಸ್ತನ ಬದುಕಿನಲ್ಲಿ ನಡೆದ, ಅದರಲ್ಲೂ ವಿಶೇಶವಾಗಿ ಆತನ ಜೀವನದ ಕೊನೆಯ ಏಳುದಿನಗಳಲ್ಲಿ ನಡೆದ ಆ ಗಟನೆಗಳನ್ನು ಮೆಲುಕು ಹಾಕುವುದೇ ಈ ಪವಿತ್ರ ವಾರದ ಆಚರಣೆ. ಈ ಪವಿತ್ರ ವಾರ ಮುಗಿದ ಮರುದಿನ ಅಂದರೆ ಬಾನುವಾರವೇ ಈಸ್ಟರ್.
************************************************
ಈ ಏಳು ದಿನಗಳು ಅತವ ಸಪ್ತಾಹವೆಂದರೆ…
ಕ್ರೈಸ್ತರ ಪವಿತ್ರವಾರ ಪ್ರಾರಂಬವಾಗುವುದು ‘ಗರಿಗಳ ಬಾನುವಾರ’ದಿಂದ. ಏಸು ಕ್ರಿಸ್ತರ ಜೆರುಸಲೇಂ ಪ್ರವೇಶವನ್ನು ಜೆರುಸಲೇಮಿನ ಜನರು ವಿಜಯೋತ್ಸವವೆಂದು ಆಚರಿಸಿದ ಈ ಸಂದರ‍್ಬವೇ ಗರಿಗಳ ಬಾನುವಾರ. ಯೇಸುಕ್ರಿಸ್ತನಲ್ಲಿ ಒಬ್ಬ ನಾಯಕನನ್ನು ಕಂಡ ಜೆರುಸಲೇಮಿನ ಜನರು, ಈ ವಿಜಯೋತ್ಸವದ ಅಂಗವಾಗಿ ಗರಿಗಳನ್ನು ಹಿಡಿದು ಕ್ರಿಸ್ತ ಬರುವ ದಾರಿಯಲ್ಲಿ ಬಟ್ಟೆಗಳನ್ನು ಹಾಸಿ, ಒಡ್ಡೋಲಗದೊಂದಿಗೆ ಮೆರವಣಿಗೆಯಲ್ಲಿ ಆತನನ್ನು ಕರೆತಂದದ್ದನ್ನು ಸಾಂಕೇತಿಕವಾಗಿ ಇಂದಿಗೂ ಚರ‍್ಚುಗಳಲ್ಲಿ ಆಚರಿಸಲಾಗುತ್ತದೆ. ಮೆರವಣಿಗೆಗೆ ಯೇಸುಕ್ರಿಸ್ತ ಕುದುರೆಯೋ ಅತವ ಆನೆಯನ್ನೋ ಆರಿಸಿಕೊಳ್ಳಲಿಲ್ಲ. ಬದಲಿಗೆ ಆತ ಆರಿಸಿಕೊಂಡಿದ್ದು ಒಂದು ಹೇಸರಗತ್ತೆಯನ್ನು. ಇದು ಸಮಾಜದಲ್ಲಿ ಕಡೆಗಣಿಸಲ್ಪಟ್ಟವರನ್ನು ಮುಕ್ಯವಾಹಿನಿಗೆ ತರಬೇಕು ಎನ್ನುವ ಮತ್ತು ತನ್ನನ್ನು ರಾಜಕೀಯ ನಾಯಕನೆಂದು ಪರಿಬಾವಿಸಿದ್ದ ಜನರಿಗೆ ತಾನು ಶಾಂತಿ ಸ್ತಾಪಿಸ ಬಂದ ದೇವಪುತ್ರ ಎಂಬ ಸಂದೇಶದ ಸೂಚಕವೆಂದು ನಂಬಲಾಗುತ್ತದೆ.
************************************************
ಯೇಸು ಜೆರುಸಲೇಮಿನ ಮಹಾದೇವಾಲಯಕ್ಕೆ ಬಂದಾಗ ದಂದೆಕೋರರು ಮಹಾದೇವಾಲಯವನ್ನು ಮಾರುಕಟ್ಟೆಯನ್ನಾಗಿಯೂ, ಕಳ್ಳಕಾಕರ ಗುಹೆಯನ್ನಾಗಿಯೂ ಮಾಡಿದ್ದರು. ಯೇಸುಕ್ರಿಸ್ತ ಅಲ್ಲಿಂದ ಅವರೆಲ್ಲರನ್ನು ಓಡಿಸಿ, ದೇವಾಲಯವನ್ನು ಚೊಕ್ಕಗೊಳಿಸುತ್ತಾನೆ. ತದನಂತರ ದೀನದಲಿತರ, ಕುಶ್ಟರೋಗಿಗಳ ಜೊತೆ ಬೋಜನ ಮಾಡುವ ಕ್ರಿಸ್ತ ಸಮಾನತೆಯ ಸಂದೇಶ ಸಾರುತ್ತಾನೆ. ಪಾಪಿ ಹೆಣ್ಣೊಬ್ಬಳು ಯೇಸುಕ್ರಿಸ್ತನ ಪಾದಗಳನ್ನು ಸುಗಂದ ತೈಲ ಹಚ್ಚಿ, ತನ್ನ ಕಣ್ಣೀರಿನಿಂದ ತೊಳೆಯುತ್ತಾಳೆ. ಇದನ್ನು ಕಂಡ ಪುರೋಹಿತಶಾಹಿ ಪರಿಸಾಯರು ಕುಹಕವಾಡಿದಾಗ, ಕ್ರಿಸ್ತ ಅದನ್ನು ಕಂಡಿಸಿ, ಶುದ್ದ ಮನಸ್ಸಿನಿಂದ ಮಾಡಿದ ಕಾರ‍್ಯಗಳೆಲ್ಲವೂ ಶ್ರೇಶ್ಟವಾದುದೆಂದು ಹೇಳುತ್ತಾನೆ.
************************************************
ಪವಿತ್ರ ಗುರುವಾರದಂದು ಕ್ರಿಸ್ತ ತನ್ನ ಕಟ್ಟಕಡೆಯ ಬೋಜನವನ್ನು [ದಿ ಲಾಸ್ಟ್ ಸಪ್ಪರ್] ತನ್ನ ಶಿಶ್ಯರೊಂದಿಗೆ ಮಾಡುತ್ತಾನೆ. ತನ್ನ ದೇಹ ಮತ್ತು ರಕ್ತವನ್ನು ಸಾಂಕೇತಿಕವಾಗಿ ನೀಡುವ ಈ ಸಂಸ್ಕಾರವೇ, ಇಂದಿಗೂ ಪ್ರತಿದಿನ ಕ್ರೈಸ್ತರು ಬಾಗವಹಿಸುವ ಪೂಜೆಗಳಲ್ಲಿ ಆತನ ಸ್ಮರಣೆಯಂತೆ ನೆರವೇರಿಸಲಾಗುತ್ತದೆ. ಇದಲ್ಲದೆ ಇದೇ ದಿನದಂದು ಯೇಸುಕ್ರಿಸ್ತ ತನ್ನ ಶಿಶ್ಯರ ಪಾದಗಳನ್ನು ತೊಳೆದು ಇಡೀ ಮನುಕುಲಕ್ಕೆ ಸೋದರತ್ವದ ಶ್ರೇಶ್ಟ ಮೌಲ್ಯಗಳನ್ನು ಹೇಳಿಕೊಡುತ್ತಾನೆ. ಕ್ರಿಸ್ತ ಅಂದು ಪ್ರಾರಂಬಿಸಿದ ಈ ಆಚರಣೆ ಇಂದಿಗೂ ಕ್ರೈಸ್ತರು ತಮ್ಮ ಮನೆಗಳಲ್ಲಿ ಚಿಕ್ಕಮಕ್ಕಳ ಪಾದ ತೊಳೆಯುವುದರಲ್ಲಿಯೂ ಮತ್ತು ಚರ‍್ಚಿನಲ್ಲಿ ಗುರುಗಳು ಊರಿನ ಹನ್ನೆರಡು ಮಂದಿ ಹಿರಿಯರ ಪಾದಗಳನ್ನು ತೊಳೆಯುವುದರಲ್ಲಿಯೂ ಪ್ರಸ್ತುತವಾಗಿದೆ.
************************************************
ಇನ್ನು ಪವಿತ್ರ ಶುಕ್ರವಾರ ಅತವ ಶುಬ ಶುಕ್ರವಾರ(Good Friday) ಯೇಸುಕ್ರಿಸ್ತ ಶಿಲುಬೆಯ ಮೇಲೆ ಪ್ರಾಣತ್ಯಾಗ ಮಾಡಿದ ದಿನ. ಯೇಸು ಮರಣ ಹೊಂದಿದ ಈ ಶುಕ್ರವಾರವನ್ನು “ಶುಬ” ಶುಕ್ರವಾರವೆನ್ನುವುದು ವಿಚಿತ್ರವಾಗಿ ಕಂಡರೂ ಕ್ರೈಸ್ತರಿಗೆ ಅಂದು ಶುಬವೇ. ಕಾರಣ ಕ್ರಿಸ್ತ ಮನುಕುಲದ ಪಾಪ ಪರಿಹಾರಕ್ಕಾಗಿ ಪ್ರಾಣತ್ಯಾಗ ಮಾಡಿದ ದಿನ. ಅವಮಾನ, ಅಪಮಾನಗಳ ಸಂಕೇತವಾಗಿದ್ದ ಶಿಲುಬೆ, ಕ್ರೈಸ್ತರಿಗೆ ರಕ್ಶಣೆಯ ಸಂಕೇತವಾಯಿತೆಂದು ನಂಬುತ್ತಾರೆ. ಶುಬ ಶುಕ್ರವಾರದಂದು ಯಾವುದೇ ಚರ‍್ಚಿನ ಗಂಟೆ ಮೊಳಗುವುದಿಲ್ಲ, ಮೊಂಬತ್ತಿ ಉರಿಯುವುದಿಲ್ಲ, ಅಲಂಕಾರಗಳಂತೂ ಇಲ್ಲವೇ ಇಲ್ಲ. ಎಲ್ಲೆಲ್ಲಿಯೂ ನೀರವ ಮೌನ ಕವಿದಿರುತ್ತದೆ.
************************************************
ಯೇಸುಕ್ರಿಸ್ತ ಮರಣ ಹೊಂದಿದ ನಂತರದ ಮೂರನೇ ದಿನವೇ ಈಸ್ಟರ್. ಕ್ರಿಸ್ತ ಸಾವಿನಿಂದ ಎದ್ದು, ಪುನರುತ್ತಾನ ಹೊಂದಿ, ಮರಣವನ್ನೇ ಜಯಿಸಿದರು ಎಂದು ಕ್ರೈಸ್ತರು ವಿಶ್ವಾಸಿಸುತ್ತಾರೆ. ಇದು ಕ್ರೈಸ್ತರ ಅತಿದೊಡ್ಡ ಹಬ್ಬ. ನಲ್ವತ್ತು ದಿನಗಳು ಅಂದರೆ ವಿಬೂತಿ ಬುದವಾರದಿಂದ ಹಿಡಿದು ಪವಿತ್ರ ಶನಿವಾರದವರೆಗೂ ಉಪವಾಸ ಮತ್ತು ಮಾಂಸ ಸೇವಿಸದ ದಿನಗಳನ್ನು ಆಚರಿಸಿದ ಕ್ರೈಸ್ತರಿಗೆ ಇಂದು ಯೇಸುಕ್ರಿಸ್ತನ ಪುನರುತ್ತಾನದ ಸಂಬ್ರಮ ಸಡಗರ. ಈ ಈಸ್ಟರ್ ಹಬ್ಬದಲ್ಲಿ ಹೊಸ ಉಡುಪುಗಳನ್ನು ತೊಟ್ಟು, ಬಗೆ ಬಗೆಯಾದ ಬಾಡೂಟವನ್ನು ಮಾಡಿ, ನೆಂಟರಿಶ್ಟರಿಗೆ ಬಡಿಸಿ, ತಾವೂ ಸವಿಯುವ ಕ್ರೈಸ್ತರಿಗೆ ಅಂದು ಎಲ್ಲಿಲ್ಲದ ಸಂಬ್ರಮ.
ಈಸ್ಟರ್ ಹಬ್ಬ ಇದಶ್ಟೇ ಅಲ್ಲದೆ ಯೇಸುಕ್ರಿಸ್ತ ಮರಣವನ್ನು ಜಯಿಸಿದಂತೆ, ಕ್ರೈಸ್ತರೂ ಕೂಡ ಸೈತಾನನ ಶೋದನೆಗಳನ್ನು ಮೆಟ್ಟಿನಿಂತು, ಒಳ್ಳೆಯ ನಡತೆ ಹೊಂದಬೇಕೆಂದು ಪ್ರತಿಯೊಬ್ಬ ಕ್ರೈಸ್ತನಿಗೂ ಕರೆ ನೀಡುವ ಹಬ್ಬವಾಗಿದೆ.
( ಚಿತ್ರಸೆಲೆ: thesouthafrican.com )
ಇತ್ತೀಚಿನ ಅನಿಸಿಕೆಗಳು