ಚೆಪ್ಚೋಯನ್ – ಮೊರೊಕ್ಕೋದ ನೀಲಿ ನಗರ

– ಕೆ.ವಿ.ಶಶಿದರ.

ಚೆಪ್ಚೋಯನ್ chefchaouen

ಹೆಚ್ಚಿನ ಜನರಿಗೆ ತಾವು ವಾಸಿಸುವ ಮನೆಯನ್ನು ಕಣ್ಣು ಕೋರೈಸುವ ಬಣ್ಣಗಳಿಂದ ಶ್ರುಂಗಾರ ಮಾಡುವ ಬಯಕೆ ಇರುತ್ತದೆ. ಕೆಲವೆಡೆ ಇಡೀ ಬಡಾವಣೆಯ ಮನೆಗಳ ಗೋಡೆ ಹಾಗೂ ರಸ್ತೆಗಳನ್ನು ಬಣ್ಣ ಬಣ್ಣದ ಚಿತ್ತಾರಗಳಿಂದ ಅಲಂಕರಿಸಿರುವುದನ್ನೂ ಕಾಣಬಹುದು. ಆದರೆ ಇಡೀ ನಗರವನ್ನು ಒಂದೇ ಬಣ್ಣದಲ್ಲಿ ಮುಳುಗಿಸಿರುವುದು ತುಂಬಾ ಅಪರೂಪ. ಅಂತಹ ಒಂದು ಸುಂದರ ಪಟ್ಟಣವೇ ಚೆಪ್ಚೋಯನ್.

ಈಶಾನ್ಯ ಮೊರೊಕ್ಕೋದ ಮೆಡಿಟರೇನಿಯನ್ ಸಮುದ್ರದ ಹತ್ತಿರವಿರುವ ಅಂದಾಜು 40,000 ಜನಸಂಕ್ಯೆಯುಳ್ಳ ಚೆಪ್ಚೋಯನ್ ಪಟ್ಟಣವು ಪೌಡರ್ ಬ್ಲೂ ಬಣ್ಣವನ್ನು ತನ್ನದಾಗಿಸಿಕೊಂಡಿರುವ ಒಂದು ನಗರ. ಹಾಗಾಗಿ ಈ ನಗರವನ್ನು ‘ಬ್ಲೂ ಪರ‍್ಲ್ ಆಪ್ ಮೊರೊಕ್ಕೊ’ ಎಂಬ ಅಡ್ಡ ಹೆಸರಿನಿಂದಲೂ ಗುರುತಿಸುತ್ತಾರೆ.

ಸುತ್ತಲೂ ಚಿತ್ತಾಕರ‍್ಶಕವಾಗಿ ಹಬ್ಬಿರುವ ರಿಪ್ ಪರ‍್ವತ ಶ್ರೇಣಿಗಳ ಹ್ರುದಯ ಬಾಗದಲ್ಲಿರುವ ಚೆಪ್ಚೋಯನ್ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಪ್ರವಾಸಿಗರ ಅವಶ್ಯಕತೆ ಮತ್ತು ಅನುಕೂಲವನ್ನು ಗಮನದಲ್ಲಿರಿಸಿಕೊಂಡು ಕಟ್ಟಲಾದ ಹಲವಾರು ವಸತಿ ಸೌಕರ‍್ಯಗಳನ್ನು ಈ ನಗರ ಹೊಂದಿದೆ.

ಈ ಪಟ್ಟಣ ನೀಲಿ ಬಣ್ಣದಲ್ಲಿ ಏಕಿದೆ?

1930ರ ದಶಕದಲ್ಲಿ ಅಲ್ಲಿನ ನಿವಾಸಿಗಳಾಗಿದ್ದ ಯಹೂದಿಯರು ಚೆಪ್ಚೋಯನ್ ನಗರಕ್ಕೆ ನೀಲಿ ಬಣ್ಣವನ್ನು ಕೊಟ್ಟರು. ಯಾತಕ್ಕಾಗಿ ನೀಲಿ ಬಣ್ಣವನ್ನು ಯಹೂದಿಯರು ಈ ನಗರಕ್ಕೆ ಕೊಟ್ಟರು ಎಂಬ ಬಗ್ಗೆ ಹಲವಾರು ಉಹಾಪೋಹಗಳಿವೆ. ಕೆಲವರು ಅಲ್ಲಿನ ಸೊಳ್ಳೆಗಳಿಂದ ತಮ್ಮನ್ನು ತಾವು ಕಾಪಾಡಿಕೊಳ್ಳಲು ಎಂದರೆ ಮತ್ತೆ ಕೆಲವರು ಹಿಟ್ಲರ್ ನಿಂದ ತಪ್ಪಿಸಿಕೊಂಡು ಬಂದ ಯಹೂದಿಯರು ತಮ್ಮ ಇರುವಿಕೆಯನ್ನು ಮುಚ್ಚಿಡಲು ಸಮುದ್ರದಂತೆ ಕಾಣುವ ನೀಲಿ ಬಣ್ಣವನ್ನು ಬಳಸಿರಬೇಕು ಎನ್ನಲಾಗಿದೆ.

ಮನೆಯ ಗೋಡೆಗಳು, ಓಣಿಗಳು, ರಸ್ತೆಗಳು ಎಲ್ಲಿ ಅಡಿಯಿಟ್ಟರೆ ಅಲ್ಲೆಲ್ಲಾ ನೀಲಿ ಬಣ್ಣ ಆವರಿಸಿದೆ. ಸುತ್ತಲಿನ ಪರ‍್ವತ ಶ್ರೇಣಿಗಳ ಸೌಂದರ‍್ಯವನ್ನು ಮತ್ತೂ ಹೆಚ್ಚಿಸುವಂತೆ ಮಾಡಿರುವುದು ಮದೀನಾದ (ಹಳೆ ಪಟ್ಟಣ) ಹೊಳೆಯುವ ನೀಲಿ ಬಣ್ಣ. ಇಂತಹ ಸುಂದರವಾದ ಹಾಗೂ ಪ್ರಶಾಂತ ವಾತಾವರಣ ಹೊಂದಿರುವ ಈ ನಗರ ವರ‍್ಶವಿಡೀ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ ಎನ್ನುವುದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ. ಇದು ಇಲ್ಲಿಗೆ ಎಡತಾಕುವ ಪ್ರವಾಸಿಗರಿಗೆ ಮೊದಲನೆಯ ಆಕರ‍್ಶಣೆಯಾದರೆ ಮಾದಕ ದ್ರವ್ಯಗಳ ಸುಲಬ ಲಬ್ಯತೆ ನಂತರದ್ದು. ಚೆಪ್ಚೋಯನ್ನಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಗಾಂಜಾ ಬೆಳೆ ಹೆಚ್ಚು. ಗಾಂಜಾ ಸೇವನೆಯ ಚಟಕ್ಕೆ ಬಿದ್ದ ಪ್ರವಾಸಿಗರು ಇಲ್ಲಿಗೆ ವರ‍್ಶವಿಡೀ ಬರುವುದುಂಟು.

ಚೆಪ್ಚೋಯನ್ chefchaouen

ಯುರೋಪಿಯನ್ನರ ನೆಚ್ಚಿನ ಪ್ರವಾಸಿ ತಾಣ

ಹಳೆಯ ಪಟ್ಟಣ ಮದೀನಾದ ಮುಕ್ಯ ಚೌಕವು ಕೆಪೆಗಳಿಂದ ತುಂಬಿದೆ. ಸ್ತಳೀಯರಿಂದ ಹಾಗೂ ಪ್ರವಾಸಿಗರಿಂದ ಈ ಜಾಗವು ಗಿಜಿಗುಡುತ್ತಿರುತ್ತದೆ. ಬೇಸಿಗೆಯಲ್ಲಿ ಯೂರೋಪಿಯನ್ ಪ್ರವಾಸಿಗರು ಹೆಚ್ಚು. ಇದಕ್ಕೆ ಮೂಲ ಇಲ್ಲಿನ ವಾತಾವರಣ. ಸುಮಾರು ಇನ್ನೂರು ಹೋಟೆಲ್‍ಗಳು ಪ್ರವಾಸಿಗರ ಬೇಕು-ಬೇಡಗಳನ್ನು ಪೂರೈಸಲು ಈ ಅವದಿಯಲ್ಲಿ ಸಜ್ಜಾಗುತ್ತವೆ.

ಸುಂದರ ವಾತಾವರಣದ ಜೊತೆಗೆ ಚೆಪ್ಚೋಯನ್ ಪಟ್ಟಣ ಜನಪ್ರಿಯ ಶಾಪಿಂಗ್ ತಾಣವಾಗಿದೆ. ಇಲ್ಲಿ ಮೊರೊಕ್ಕೋದ ಅನೇಕ ಸ್ತಳೀಯ ಕರಕುಶಲ ವಸ್ತುಗಳು, ಉಣ್ಣೆ ಉಡುಪುಗಳು, ನೇಯ್ದ ಕಂಬಳಿಗಳು ಸಿಗುತ್ತವೆ. ಮೇಕೆ ಹಾಲಿನಿಂದ ತಯಾರಿಸಿದ ಚೀಸ್ ಪ್ರವಾಸಿಗರಿಗೆ ಅಚ್ಚುಮೆಚ್ಚು.

ಚೆಪ್ಚೋಯನ್ ನಗರದ ಇತಿಹಾಸವನ್ನು ಗಮನಿಸಿದರೆ 1471ರಲ್ಲಿ ಇದರ ಸ್ತಾಪನೆ ಆಗಿರಬಹುದು ಎನಿಸುತ್ತದೆ. 15ನೇ ಹಾಗೂ 17ನೇ ಶತಮಾದಲ್ಲಿ ಸ್ಪೇಯ್ನ್ ನಿಂದ ಹೊರಹಾಕಲ್ಪಟ್ಟ ಮೊರಿಸ್ಕೊಸ್ ಹಾಗೂ ಯಹೂದಿಗಳ ಬರುವಿಕೆಯಿಂದ ನಗರವು ಗಣನೀಯವಾಗಿ ಬೆಳೆಯಿತು. 1920ರಲ್ಲಿ ಸ್ಪ್ಯಾನಿಶರು ಚೆಪ್ಚೋಯನ್ ಅನ್ನು ಆಕ್ರಮಿಸಿಕೊಂಡು ಸ್ಪಾನಿಶ್-ಮೊರೊಕ್ಕೋದ ಬಾಗವಾಗಿಸಿದರು. 1956ರಲ್ಲಿ ಮೊರೊಕ್ಕೋಗೆ ಸ್ವಾತಂತ್ರ್ಯ ದೊರಕಿದಾಗ ಸ್ಪ್ಯಾನಿಶರು ಚೆಪ್ಚೋಯನ್ ಅನ್ನು ಮೊರೊಕ್ಕೋಗೆ ಮರಳಿಸಿದರು.

(ಮಾಹಿತಿ ಸೆಲೆ: edition.cnn.com, vogue.com, heartmybackpack.com, lonelyplanet.com )
(ಚಿತ್ರ ಸೆಲೆ: pixabay1, pixabay2  )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: