ಗುಳ್ಟು – ಈ ಸಿನೆಮಾನ ನೀವು ನೋಡಲೇಬೇಕು
‘ಗುಳ್ಟು’ ಸಿನಿಮಾ ವರ‍್ತಮಾನದ ಅಂಶಗಳನ್ನ ಹೊತ್ತು ತಂದಿರುವ, ಹೊಸಬರ ಬರವಸೆಯ, ಹೊಸ ಅಲೆಯ ಸಿನಿಮಾ. ಸಂಪೂರ‍್ಣ ತಾಂತ್ರಿಕ ಸಿನಿಮಾ. ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಡಿರುವ ಸರಕಾರದ ಯೋಜನೆ ಎಂದರೆ “ಆದಾರ‍್”. ಅದರಲ್ಲಿ ನಾವೆಲ್ಲರೂ ನಮ್ಮ ಎಲ್ಲಾ ವಿವರಗಳನ್ನೂ ಜೋಡಿಸಿದ್ದೇವೆ. ಅಂದ್ರೆ ಒಬ್ಬ ವ್ಯಕ್ತಿಯ ಬಹುತೇಕ ಎಲ್ಲಾ ಮಾಹಿತಿಯೂ ಆದಾರ್ ಮೂಲಕ ಸಲ್ಲಿಕೆಯಾಗಿದೆ. ಹಾಗೇ, ಸಾಮಾಜಿಕ ಜಾಲತಾಣಗಳಾದ ಪೇಸ್ಬುಕ್, ಟ್ವಿಟರ್ ಮುಂತಾದುವುಗಳನ್ನು ಬಳಸಲು ನೀಡಿರುವ ಬಳಕೆದಾರರ ಮಾಹಿತಿ ಕೂಡ ಒಂದೆಡೆ ಇದೆ. ಈ ಮಾಹಿತಿಗೆ ಅತ್ಯಮೂಲ್ಯ ಬೆಲೆಯೂ ಸಿಗುತ್ತದೆ ಅಂತ ಗೊತ್ತಾದ್ರೆ ಅದನ್ನ ಕದಿಯೋಕೆ ಪ್ರಯತ್ನ ಪಡುವವರು ಹುಟ್ಕೋತಾರೆ!
ಅರೆ, ಎಶ್ಟು ವಿಚಿತ್ರ ಅಲ್ವಾ? ಮೊದಲೆಲ್ಲಾ ನಮ್ಮ ಬಳಿ ಇರುವ ವಸ್ತುಗಳು, ಬಂಗಾರ, ದುಡ್ಡು, ಇಂತವುಗಳನ್ನು ಮಾತ್ರ ಕದಿಯೋರು. ಈಗ ಇದೆಂತದ್ದು? ನನ್ನ ಮಾಹಿತಿಯಿಂದ ಏನು ಪ್ರಯೋಜನ ಅದನ್ನೇಕೆ ಕದಿಯಬೇಕು? ಅಂತೀರಾ. ನಮ್ಮ ಊಟ-ಉಡುಗೆ-ತೊಡುಗೆ-ನೋಟ-ಪಾಟ-ಆಟದ ಆಯ್ಕೆಗಳು ಎಲ್ಲವೂ ಆನ್‌ಲೈನ್ ಆಗಿರುವಾಗ ಕ್ರೈಂ ಕೂಡ ಆನ್‌ಲೈನ್ ಅನ್ನುವ ರೂಪ ಪಡೆಯತ್ತೆ. ನಿಮ್ಮ ಬೆರಳಿನ ಗುರುತಿನಿಂದ ನಿಮ್ಮ ಮೊಬೈಲ್ ಅನ್ಲಾಕ್ ಆಗುತ್ತೆ, ಮೊಬೈಲ್ ಮೂಲಕ ಬ್ಯಾಂಕಿಗ್ ವಹಿವಾಟುಗಳನ್ನು ನಡೆಸುತ್ತಿದ್ದರೆ, ನಿಮ್ಮ ಬ್ಯಾಂಕ್ ಲಾಕರ‍್ಗಳನ್ನೂ ಅದರಿಂದ ತೆರೆಯಬಹುದು. ಹಾಗಾದ್ರೆ ಏನ್ಮಾಡೋದು ಅನ್ನೋ ಯೋಚನೆ ಈ ಸಿನಿಮಾ ನೋಡಿದ ಮೇಲೆ ಕಂಡಿತಾ ಬಂದೇ ಬರುತ್ತದೆ. ಇಂಟರ‍್ನೆಟ್ ನ, ಆನ್ಲೈನ್ ಜಗತ್ತಿನ ಮತ್ತೊಂದು ಮಗ್ಗುಲನ್ನು ತೋರಿಸುವಲ್ಲಿ ಈ ಸಿನೆಮಾ ಗೆದ್ದಿದೆ ಎಂದರೆ ತಪ್ಪಾಗಲಾರದು.
ಇನ್ನು, ಸಿನಿಮಾದ ತಾಂತ್ರಿಕತೆಗೆ ಬಂದ್ರೆ ಚಾಯಾಗ್ರಹಣ, ಸಂಕಲನ ಎಲ್ಲವೂ ಅಚ್ಚುಕಟ್ಟಾಗಿದೆ. ಈ ಸಿನಿಮಾ ವಿಶಯವೇ ತಂತ್ರಗ್ನಾನದ ಸುತ್ತ ಇದ್ದು, ಅದರ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳುವಂತೆ ಮಾಡುತ್ತದೆ. ಉಳಿದವುಗಳ ಕಡೆ ಗಮನ ಹೋಗದಂತೆ ಮಾಡುತ್ತದೆ. ಅಮಿತ್ ಆನಂದ್ ಅವರ ಹಾಡುಗಳು ಪರ‍್ವಾಗಿಲ್ಲ, ಯಾವೂ ನೆನಪಿನಲ್ಲಿ ಉಳಿಯುವುದಿಲ್ಲ. ಆದ್ರೆ ಹಿನ್ನೆಲೆ ಸಂಗೀತ ಚೆನ್ನಾಗಿದೆ. ಇನ್ನು ಪಾತ್ರವರ‍್ಗಕ್ಕೆ ಬಂದರೆ, ಅವಿನಾಶ್, ರಂಗಾಯಣ ರಗು ಎಂದಿನಂತೆ ಅವರವರ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಲೂಸಿಯಾ ಪವನ್ ಕುಮಾರ್ ಸಹ ಒಂದು ಮುಕ್ಯ ಪಾತ್ರ ನಿರ‍್ವಹಿಸಿದ್ದಾರೆ. ನಾಯಕ ನವೀನ್ ಶಂಕರ್ ಮತ್ತು ನಾಯಕಿ ಸೋನು ಗೌಡ ಇಬ್ಬರೂ ಅದ್ಬುತವಾಗಿ ನಟಿಸಿದ್ದಾರೆ. ನವೀನ್ ಈ ರೀತಿಯ ಪಾತ್ರಗಳಲ್ಲಿ ಹೀರೋ ಆದ್ರೆ ಉತ್ತಮ ಬವಿಶ್ಯ ಕಂಡಿತ.
ಇಶ್ಟೆಲ್ಲಾ ಮಾಡಿರೋರು, ಅಂದ್ರೆ ನಿರ‍್ದೇಶಕರ ಬಗ್ಗೆ ಹೇಳಲೇಬೇಕು. ಜನಾರ‍್ದನ್ ಚಿಕ್ಕಣ್ಣ ಅವರ ಚಿತ್ರಕತೆ-ಸಂಬಾಶಣೆ ಎಲ್ಲವೂ ಅಚ್ಚುಕಟ್ಟಾಗಿದೆ. ಸಿನೆಮಾದ ವಿಶಯವನ್ನು ತೀರಾ ಟೆಕ್ನಿಕಲ್ ಆಗಿಸಿದ್ರೆ, ಸಾಮಾನ್ಯ ಜನರಿಗೆ ಸಿನೆಮಾದ ವಿಶಯ ತಿಳಿಯದೇ ಇರುವ ಸಾದ್ಯತೆ ಇತ್ತು. ಆದ್ದರಿಂದ ಚಿತ್ರಕತೆಯನ್ನು ಗೋಜಲುಗೊಳಿಸದಿರುವ ನಿರ‍್ದೇಶಕರ ಜಾಣ್ಮೆಯನ್ನು ಮೆಚ್ಚಬೇಕು.
ನೀವು ಯಾವ ಕನ್ನಡ ಸಿನಿಮಾ ನೋಡ್ಲಿಲ್ಲ ಅಂದ್ರು ಪರ‍್ವಾಗಿಲ್ಲ,
“ಆದ್ರೆ ಗುಳ್ಟು ಅಂತ ಒಂದ್ ಸಿನೆಮಾ ಇದೆ, ಅದನ್ನ ಮಾತ್ರ ನೀವು ನೋಡಲೇ ಬೇಕು. ಹೋಗಿ, ನೋಡಿ ಬನ್ನಿ”.
( ಚಿತ್ರ ಸೆಲೆ: kannada.thebelgaumnews.com )
?…. ಕತೆ ನಿರ್ದೇಶನದ ಸೂಕ್ಶ್ಮಗಳ ಬಗ್ಗೆ ಬೆಳಕು ಚೆಲ್ಲಿದ್ದಿರಿ