ಕತೆ: ಯಾವ ಹೂವು ಯಾರ ಮುಡಿಗೋ? (ಕೊನೆಯ ಕಂತು)
– ಸುರಬಿ ಲತಾ.
ಊಟಿಯಿಂದ ಮನೆಗೆ ಮರಳಲು ಬೆಳಿಗ್ಗೆ ಎಲ್ಲರೂ ತಯಾರಾಗಿ ಕಾರಿನಲ್ಲಿ ಕುಳಿತರು. ಏಕೋ ಎಲ್ಲರಲ್ಲೂ ಮೌನ ಆವರಿಸಿತ್ತು. ರಾತ್ರಿ 11 ಗಂಟೆಯಾಗಿತ್ತು. ಸುಹಾಸ್ ಸುದಾ, ಕವನಾ ಇಬ್ಬರನ್ನೂ ಮನೆಯಲ್ಲಿ ಬಿಟ್ಟು ಬೆಳಿಗ್ಗೆ ಬರುವುದಾಗಿ ಹೇಳಿ ಹೊರಟ. ಪ್ರಯಾಣ ಮಾಡಿ ದಣಿದಿದ್ದ ಇಬ್ಬರೂ ತಮ್ಮ ತಮ್ಮ ರೂಮ್ ಗಳಲ್ಲಿ ಮಲಗಿದರು.
ಕವನಾಗೆ ಎಚ್ಚರವಾದಾಗ ಸುದಾ ತನ್ನ ದೊಡ್ಡ ಲಗೇಜಿನ ಸಮೇತ ಹೊರಡಲು ತಯಾರಾಗಿದ್ದಳು. ಅವಳನ್ನು ನೋಡಿ ಕವನಾಳಿಗೆ ಆಶ್ಚರ‍್ಯವಾಯಿತು. ಸುದಾ ಕವನಾಳ ಹತ್ತಿರ ಬಂದು “ನಾನು ಅಮೇರಿಕಾಗೆ ಹೋಗುತ್ತಿದ್ದೇನೆ. ಅಮ್ಮ ಬರುವಂತೆ ಕಾಲ್ ಮಾಡಿದ್ದರು” ಎಂದು ಹೇಳಿದಳು.
ಕವನಾ ಗಾಬರಿಯಾಗಿ ಕೇಳಿದಳು, “ನನಗೆ ಹೇಳಲೇ ಇಲ್ಲ ನೀನು”
“ಹಾಂ, ಸಾರಿ, ಬೆಳಿಗ್ಗೆ ಹೇಳೋಣವೆಂದು ಸುಮ್ಮನಾದೆ”
“ನಾನು ಒಬ್ಬಳೇ…..”
“ಇಲ್ಲ ಸುಹಾಸ್ ನಿನ್ನ ಜೊತೆ ಇರುವಂತೆ ಹೇಳಿದ್ದೇನೆ. ಡೋಂಟ್ ವರಿ”
ಅವಳು ಬಾಗಿಲ ಬಳಿ ಹೋಗವುದರೊಳಗೆ ಸುಹಾಸ್ ನಗುಮುಕದೊಂದಿಗೆ ಒಳಬಂದ. ಎಂದಿನಂತೆ ಕವನಾ ಅವನನ್ನು ನೋಡಿದಳು. ಏನೋ ಹೊಸದಾಗಿ ಕಂಡ. ಅದೇ ಮುದ್ದು ಮುಕ, ಮುದ್ದು ನಗು.
ಸುದಾ ಕಾರಿನ ಬಳಿ ನಡೆದಳು. “ನೀನು ರೆಡಿಯಾಗು. ಸುಹಾಸ್ ನನ್ನ ಏರ್ ಪೋರ‍್ಟ್ ಗೆ ಬಿಟ್ಟು ಬರುತ್ತಾನೆ” ಎಂದು ಹೇಳಿ ಸುದಾ ಹೊರಟಳು.
ಹಿಂದೆ ತಿರುಗಿ ‘ಬಾಯ್’ ಎಂದವಳ ಕಣ್ಣು ತುಂಬಿತ್ತು. ಏನೋ ಹೇಳಬೇಕೆನಿಸುವಶ್ಟರಲ್ಲಿ ಕಾರು ಹೊರಟಿತು.
***************************
ಕವನ ಸ್ನಾನ ಮುಗಿಸಿ ರೆಡಿಯಾಗಿ ಬಂದಳು. ಸುಹಾಸ್ ಒಳಬರುವುದು ಕಂಡಿತು. ಬಂದವನು ಅವಳನ್ನು ಅಡಿಯಿಂದ ಮುಡಿಯವರೆಗೂ ನೋಡಿ ಕೈ ಹಿಡಿದು ತಬ್ಬಿದ.
‘ನೀನು ಹುಚ್ಚಿ’ – ಅವಳು ಮಾತನಾಡಲೂ ಅವಕಾಶ ಕೊಡದೆ ನುಡಿದ.
‘ಅಂದು ನಾನು ನನ್ನ ವಾಚ್ ಮರೆತು ಹೋಗಿರದಿದ್ದರೆ, ನಾನು ರೂಮಿಗೆ ಬರದೇ ಹೋಗಿದ್ದಿದ್ದರೆ, ನೀನು ನಿನ್ನ ಪ್ರೀತಿಯನ್ನು ಹಾಗೇ ಕೊಂದು ಹಾಕುತ್ತಿದ್ದೆಯಾ?. ನಾನು, ಸುದಾ ಇಬ್ಬರೂ ಒಳ್ಳೆಯ ಪ್ರೆಂಡ್ಸ್. ನೀನು ಅಂದುಕೊಂಡತೆ ನಮ್ಮ ನಡುವೆ ಏನೂ ಇಲ್ಲ’ ಅಂತ ಹೇಳಿ ಒಂದು ಮುತ್ತನ್ನು ಹಣೆಯಲ್ಲಿ ಒತ್ತಿದ.
ಕವನಾಗೆ ಈಗ ಎಲ್ಲವೂ ಸ್ಪಶ್ಟವಾಗಿತ್ತು. ಸಂತಸದಿ ತಾನೂ ನಿಟ್ಟುಸಿರು ಬಿಟ್ಟಳು.
‘ಸುದಾ ಏಕೆ ನನ್ನ ಬಳಿ ಹೇಳಲಿಲ್ಲ’ ಎಂಬ ಮಾತಿಗೆ ಅವನೇ ಉತ್ತರ ಕೊಟ್ಟ, ‘ನಾನೇ ನಿನಗೆ ಹೇಳುವುದಾಗಿ ಹೇಳಿದೆ ಅದಕ್ಕೆ’.
********************************
ಕಾರಿನಲ್ಲಿ ಕುಳಿತ ಸುದಾಳ ಕಣ್ಣು ತುಂಬಿತ್ತು. ಅಂದು ಹೇಳಬೇಕಾಗಿದ್ದ ಮಾತು ಹೇಳದೇ ಹೋಗಿದ್ದಳು. ಅವಳ ಮಾತು ಅವಳಲ್ಲೇ ಉಳಿದಿತ್ತು. ಅವಳ ತ್ಯಾಗದಿಂದ ಎರಡು ಮನಗಳು ಒಂದಾಗಿದ್ದವು.
(ಮುಗಿಯಿತು)
( ಚಿತ್ರ ಸೆಲೆ: sciencecare.com )
ಇತ್ತೀಚಿನ ಅನಿಸಿಕೆಗಳು