ತೇಜಸ್ವಿಯವರ ’ಕಾಡಿನ ಕತೆಗಳು’ – ನನ್ನ ಅನಿಸಿಕೆ

– ಪ್ರಶಾಂತ. ಆರ್. ಮುಜಗೊಂಡ.

Kaadina Kathegalu, ಕಾಡಿನ ಕತೆಗಳು

ನಮ್ಮ ಎಳೆಯರಿಗೂ ಯುವಕರಿಗೂ ನರಬಕ್ಶಕ ಹುಲಿಗಳ ಬಗ್ಗೆ ತಿಳಿದಿರಲಿ, ಮುಂದೊಮ್ಮೆ ಹುಲಿಗಳನ್ನು ಕತೆಗಳಲ್ಲೇ ಓದಬಾರದು ಎಂಬ ವಿಚಾರಗಳನ್ನಿಟ್ಟುಕೊಂಡು ಆಂಡರ‍್ಸನ್ನರ ಅನುಬವಗಳನ್ನು, ಕೆ.ಪಿ.ಪೂರ‍್ಣಚಂದ್ರ ತೇಜಸ್ವಿಯವರು ತಮ್ಮ ಅನುಬವಗಳೊಂದಿಗೆ ಬಾವಾನುವಾದ ಮಾಡಿರುವ ಹೊತ್ತಗೆಯೇ ’ಕಾಡಿನ ಕತೆಗಳು’.  ಈ ಹೊತ್ತಗೆಗಳ ಎಲ್ಲ ಕತೆಗಳಲ್ಲೂ ಅವರು ಚಿತ್ರಿಸಿರುವ ಕಾಡು-ಕಾಡಿನ ಪಾತ್ರಗಳು, ಸಮಾಜದ ಚಿತ್ರಣ, ಬದುಕಿನ ಸಾಹಸಗಳು ಓದುಗರಿಗೆ ಮೆಚ್ಚುಗೆಯಾಗುವುದು. ಈ ಎಲ್ಲಾ ಕತೆಗಳನ್ನು ನಾವು ಕೇವಲ ಬೇಟೆಯ ಅನುಬವಗಳೆಂದು ಮಾತ್ರ ಓದಬಾರದು, ಓದಿದರೆ ಅದು ದೊಡ್ಡ ತಪ್ಪು ಎಂದು ನನ್ನ ಅನಿಸಿಕೆ.

ಜಾತಿ-ದರ‍್ಮಗಳ ಬೇಲಿಗಳನ್ನ ನಿರ‍್ಮಿಸಿಕೊಂಡು, ಒಬ್ಬರನ್ನೊಬ್ಬರು ತಲುಪಲಾಗದ ಸಾಮಾಜಿಕ ಪರಿಸರದಲ್ಲಿ ಬದುಕುತ್ತಿರುವ ಬಗೆಯನ್ನು, ಇನ್ನೂ ವಿವರವಾಗಿ ತಿಳಿಯಲು ಆಂಡರ‍್ಸನ್ನರಿಗೆ ಕಾಡು ಮತ್ತು ಬೇಟೆಗಳೇ ದಾರಿಯಾಯಿತು. ’ಕಾಡಿನ ಶಕ್ತಿಗಳ ಮೇಲೂ ಪ್ರಬಾವ ಬೀರುವ ಮಂತ್ರ-ತಂತ್ರಗಳಿವೆ, ಮಂತ್ರ ಹಾಕಿ ಕಟ್ಟು ಮಾಡಿದರೆ ಸಾಕು ಯಾವ ಬೇಟೆಗಾರನಿಗೂ ಕಾಡಿನಲ್ಲಿ ಎಶ್ಟು ತಿರುಗಿದರೂ ಅವರ ಕಣ್ಣಿಗೆ ಒಂದೇ ಒಂದು ಪ್ರಾಣಿಯೂ ಕಣ್ಣಿಗೆ ಬೀಳುವುದಿಲ್ಲ’ ಎಂಬ ಜನರ ನಂಬಿಕೆ ಮತ್ತು ಬಾರತದ ಹಳ್ಳಿಗರ ತಾಳ್ಮೆಗೆ ಮಿತಿಯೇ ಇಲ್ಲ, ತಮ್ಮ ತೊಂದರೆಗಳನ್ನೆಲ್ಲಾ ತಮ್ಮ ಕರ‍್ಮಗಳೆಂದೋ ಅತವಾ ತಮಗೆ ದೇವರು ಕೊಡುತ್ತಿರುವ ಶಿಕ್ಶೆ ಎಂದು ಬಾವಿಸಿ ತಲೆ ತಗ್ಗಿಸಿಕೊಂಡು ಅನುಬವಿಸುತ್ತಿದ್ದರು ಎಂಬ ವಿಶಯಗಳನ್ನು ತೇಜಸ್ವಿಯವರು ಕಾಡಿನ ಕತೆಗಳಲ್ಲಿ ಚೆನ್ನಾಗಿ ಸೆರೆ ಹಿಡಿದಿದ್ದಾರೆ.

‘ನರಬಕ್ಶಕ’ ಎಂಬ ಪದವೇ ಸಾಕು, ಎದೆ ಜಲ್ ಎನ್ನುತ್ತದೆ. ಪ್ರಾಣಿಗಳ ಬಗ್ಗೆ ಅಕ್ಕರೆ, ಬರೀ ಶಬ್ದದಿಂದಲೇ ಇಂತದ್ದೇ ಪ್ರಾಣಿ ಅತವಾ ಪಕ್ಶಿ ಎಂದು ಗುರುತಿಸುವಶ್ಟರ ಮಟ್ಟಿಗೆ ಪರಿಣತಿ ಪಡೆದಿದ್ದ ಕೆನೆತ್ ಆಂಡರ‍್ಸನ್ ಜನರ ರಕ್ಶಣೆಗಾಗಿ ಮನುಶ್ಯರನ್ನು ತಿನ್ನುತ್ತಿದ್ದ ಪ್ರಾಣಿಗಳನ್ನಶ್ಟೇ ಕೊಲ್ಲುತ್ತಿದ್ದರು. ಸಾಮಾನ್ಯವಾಗಿ ಚಿರತೆ, ಹುಲಿಗಳು ಮನುಶ್ಯರ ತಂಟೆಗೆ ಬರುವುದಿಲ್ಲ, ಆದರೆ ಒಮ್ಮೊಮ್ಮೆ ನರಮಾಂಸದ ರುಚಿ ಹಿಡಿದು ನರಬಕ್ಶಕಗಳಾದರೆ, ಇವುಗಳು ತೋರುವ ಜಾಣ್ಮೆಯಿಂದ ಇವುಗಳನ್ನು ಬೇಟೆಯಾಡಿ ಕೊಲ್ಲುವುದು ತುಂಬಾ ತೊಡಕಾಗುತ್ತದೆ.  ಮನುಶ್ಯನನ್ನು ಹುಲಿಗಳು ತಮ್ಮ ಆಹಾರಕ್ಕೆ ಬೇಟೆಯಾಡುವದಿಲ್ಲ, ಜಿಂಕೆ ಮುಂತಾದ ಪ್ರಾಣಿಗಳನ್ನು ಬೆನ್ನಟ್ಟಿ ಹಿಡಿಯುವ ಸಾಮರ‍್ತ್ಯ ಕಳೆದುಕೊಂಡಾಗ ನರಬಕ್ಶಕಗಳಾಗಿ ಪರಿವರ‍್ತನೆಗೊಳ್ಳುತ್ತವೆ. ಮನುಶ್ಯನ ಮೇಲಿನ ಬಯ ಹೋಯಿತೆಂದರೆ ಹುಲಿ ಅತ್ಯಂತ ಬಯಾನಕ ಪ್ರಾಣಿಯೇ ಸರಿ!

ಈಗ ಎಣಿಸಬಹುದಾದಶ್ಟು ಸಂಕೆಯಲ್ಲಿ ಮತ್ತು ಅಳಿವಿನಂಚಿನಲ್ಲಿರುವ ಹುಲಿಯಂತಹ ಒಂದು ಪ್ರಾಣಿಯನ್ನು, ಅದು ಮನುಶ್ಯನನ್ನು ತಿಂದಿತು ಎಂಬ ಕಾರಣಕ್ಕೆ ಗುಂಡಿಕ್ಕಿ ಕೊಲ್ಲುವುದು ನ್ಯಾಯವಾದ ತೀರ‍್ಮಾನ ಎಂದೆನಿಸಿಕೊಳ್ಳುವುದಿಲ್ಲ. ಹುಲಿಗಳಿಗೆ ಬೇಕಾದ ನಿರ‍್ಬಯ ಹಾಗು ಮಾನವರ ಪ್ರವೇಶವಿಲ್ಲದ ಕಾಡಿನಲ್ಲಿ ಮುಕ್ತವಾಗಿ ವಾಸಿಸಲು ಜಾಗ ಸಿಗದೇ ಇರುವುದು ಹುಲಿ ಮನುಶ್ಯರನ್ನು ತಿನ್ನಲು ಕಾರಣವಾಗಬಹುದು. ಹೆಚ್ಚು ಹೆಚ್ಚು ಕಾಡು ಬೆಳದಂತೆ ಹುಲಿಯ ಬಲಿಗೆ ಬೇಕಾದ ಪ್ರಾಣಿಗಳೂ ಕೂಡ ಆ ಕಾಡುಗಳಲ್ಲೇ ಸಿಗುತ್ತವೆ. ಹುಲಿಗಳೂ ಕೂಡಾ ಕಾಡಿನಲ್ಲೇ ತನ್ನಿಶ್ಟದ ಬೇಟೆಯಾಡುತ್ತಾ ಕಾಡಿನ ಹೊರಗೆ ಬರಲಾರವು. ಯಾವಾಗ ಅಲ್ಲಿ ಮಾನವನ ಪ್ರವೇಶವಾಗಿ ತೊಂದರೆಗಳು ಹುಟ್ಟುತ್ತವೆಯೋ ಆಗ ಅಲ್ಲಿ ಇಂತಹ ಸಮಸ್ಯೆಗಳು ಬಂದೇ ಬರುತ್ತವೆ ಎಂಬುದನ್ನು ಕಾಡಿನ ಕತೆಗಳ ಎಲ್ಲ ಕಂತುಗಳ  ಕತೆಗಳಲ್ಲಿ ನಾವು ನೋಡಬಹುದು.

ಕಾಡನ್ನು ಹೆಚ್ಚು ಬೆಳೆಸಿ ಹುಲಿಗಳೂ ಬೆಳೆಯಲು ಅವಕಾಶ ನೀಡಬೇಕಿದೆ. ಕಾಡಿನಲ್ಲಿ ಹಾಗೂ ಕಾಡಿನಂಚಿನ ಜನಗಳಿಗೆ ಈ ಬಗ್ಗೆ ತಿಳುವಳಿಕೆಯನ್ನು ನೀಡಿ ಇಂತಹ ಸಂದರ‍್ಬಗಳನ್ನು ನಿಬಾಯಿಸುವ ಬಗ್ಗೆ ಅರಿವು ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಕೆಯವರ ಜವಾಬ್ದಾರಿಯೂ ಬಹು ದೊಡ್ಡದಿದೆ. ಆದರೆ ತಿಳುವಳಿಕೆ ಹೇಳೋದು, ಅರಿವು ಮೂಡಿಸೋದು ಎಲ್ಲಾ ಮುಗಿದ ಕತೆಯಾಗಿದೆ, ಈಗ ಮನುಶ್ಯನೇ ಹುಲಿ ಬಕ್ಶಕನಾಗಿದ್ದಾನೆ. ಆಂಡರ‍್ಸನ್ ನ್ನರ ಕಾಲದಲ್ಲಿ ಇದ್ದ ಕಾಡಿಗೂ, ತೇಜಸ್ವಿಯರ ಕಾಲದಲ್ಲಿದ್ದ ಕಾಡಿಗೂ ಮತ್ತು ನಾವು ನೋಡುತ್ತಿರುವ ಕಾಡಿನ ಹರವಿಗೂ ತುಂಬಾನೆ ವ್ಯತ್ಯಾಸವಿದೆ.  ಮುಂದೆ ಚಿರತೆ, ಸಿಂಹ, ಹುಲಿಗಳನ್ನು ಕತೆಗಳಲ್ಲೇ ಓದಬೇಕಾದ ಕಾಲವೂ ಬರಬಹುದು!

( ಚಿತ್ರ ಸೆಲೆ: sannaprayathna.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Sandeep A says:

    ?

Sandeep A ಗೆ ಅನಿಸಿಕೆ ನೀಡಿ Cancel reply