ಸಿನೆಮಾಗಳಲ್ಲಿ ಆಶ್ಚರ‍್ಯ, ರಹಸ್ಯ ಮತ್ತು ಕುತೂಹಲ!

– ಕರಣ ಪ್ರಸಾದ.

ಸಿನೆಮಾ

ಚಲನಚಿತ್ರಗಳಲ್ಲಿ ಆಶ್ಚರ‍್ಯ, ರಹಸ್ಯ ಮತ್ತು ಕುತೂಹಲ ಹುಟ್ಟಿಸುವ ಸನ್ನಿವೇಶಗಳ ಬಗ್ಗೆ ಒಂದು ಇಣುಕು ನೋಟ.

ನಾವು ನೋಡುವ ಸಿನೆಮಾಗಳಲ್ಲಿ ಕೆಲವು ನಮ್ಮನ್ನು ಸೆಳೆಯುತ್ತವೆ, ಇನ್ನು ಕೆಲವು ನಮ್ಮನ್ನು ಸೀಟಿನ ತುದಿಯಲ್ಲಿ ಕೂರುವ ಹಾಗೆ ಮಾಡುತ್ತವೆ. ಮತ್ತೆ ಕೆಲವು ಸಿನೆಮಾಗಳು ಮುಗಿದ ಬಳಿಕವೂ ಯೋಚನೆಗೀಡು ಮಾಡುತ್ತವೆ. ಹೀಗೆ ಇನ್ನು ಹಲವು ರೀತಿಯಿಂದ ನಮ್ಮ ಇಂದ್ರಿಯಗಳನ್ನು ಸೆಳೆದು ರಂಜಿಸುತ್ತವೆ.

ಆದರೆ ಇವೆಲ್ಲಾ ಒಬ್ಬ ನೋಡುಗನ ಅನುಬವಕ್ಕೆ ಬರಲು ಹಲವು ಕಾರಣಗಳಿರುತ್ತವೆ. ಅದರಲ್ಲಿ ಮುಕ್ಯವಾಗಿ “ದ್ರುಶ್ಯ ಕಟ್ಟುವಿಕೆ”ಯು ಒಂದು. ಇದು ನಿರ‍್ದೇಶಕರ ಸ್ರುಜನಶೀಲತೆ ಮತ್ತು ಅವರ ಕತೆಹೇಳುವ ಚಾಕಚಕ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ. ಈ ದ್ರುಶ್ಯ ಕಟ್ಟುವಿಕೆಯಲ್ಲಿ ಮುಕ್ಯವಾಗಿ ಬರುವ ಅಂಶವೇ ದ್ರುಶ್ಯದ ಮಹತ್ವ, ಆ ಮಹತ್ವನ್ನು ಹಲವು ಪ್ರಕಾರವಾಗಿ ತೋರಿಸಬಹುದು.

ಉದಾಹರಣೆಗೆ:

  1.  ಆಶ್ಚರ‍್ಯ
  2. ರಹಸ್ಯ
  3. ಕುತೂಹಲ

ಈ ಮೂರನ್ನು ವಿವರಿಸಲು ನಾವು ಈಗ ಒಂದು ಸರಳ ಕಾಲ್ಪನಿಕ ದ್ರುಶ್ಯವನ್ನು ತೆಗೆದುಕೊಂಡು ಇವುಗಳನ್ನು ದ್ರುಶ್ಯ ಕಟ್ಟುವಿಕೆಯಲ್ಲಿ ಹೇಗೆ ಉಪಯೋಗಿಸಬಹುದೆಂದು ನೋಡೋಣ.

ಇಬ್ಬರು ವ್ಯಕ್ತಿಗಳು ಮಾತಾಡುತ್ತಿದ್ದಾರೆ.
ಬಾಂಬ್ ಬ್ಲಾಸ್ಟ್ ಆಗುತ್ತದೆ.
ವ್ಯಕ್ತಿಗಳಿಬ್ಬರು ಸಾಯುತ್ತಾರೆ.

ಈಗ ಮೇಲಿಂದ ಕ್ರಮವಾಗಿ ಬಂದರೆ, ಮಾತನಾಡುತ್ತಿರುವ ವ್ಯಕ್ತಿಗಳು ಬಾಂಬ್ ಬ್ಲಾಸ್ಟ್ ಆಗಿ ಸಾಯುತ್ತಾರೆ. ಇಲ್ಲಿ ಬಾಂಬ್ ಇರುವಿಕೆಯನ್ನು ಮೊದಲೆಲ್ಲೂ ತೋರಿಸಿಲ್ಲ, ಆದ್ದರಿಂದ ಬಾಂಬ್ ಬ್ಲಾಸ್ಟ್ ನಮಗೆ ಆಶ್ಚರ‍್ಯವನ್ನುಂಟು ಮಾಡುತ್ತದೆ. (ನೋಡುಗರು ಆಶ್ಚರ‍್ಯಕ್ಕೊಳಗಾಗುತ್ತಾರೆ).

ಯಾರೋ ಒಬ್ಬ ಬಂದು ಟೇಬಲ್ ಕೆಳಗೆ ಬಾಂಬ್ ಇಡುತ್ತಾನೆ.
ಇಬ್ಬರು ವ್ಯಕ್ತಿಗಳು ಅದರ ಬಳಿ ಬಂದು ಮಾತನಾಡುತ್ತಿದ್ದಾರೆ.
ಬಾಂಬ್ ಬ್ಲಾಸ್ಟ್ ಆಗುತ್ತದೆ.
ವ್ಯಕ್ತಿಗಳು ಸಾಯುತ್ತಾರೆ.

ಈ ದ್ರುಶ್ಯದಲ್ಲಿ ಪ್ರೇಕ್ಶಕರಿಗೆ ಬಾಂಬ್ ಇರುವ ಬಗ್ಗೆ ಮಾಹಿತಿ ಇರುತ್ತದೆ ಆದರೆ ಬಾಂಬ್ ಯಾರಿಟ್ಟಿದ್ದಾರೆ ಎಂಬ ಮಾಹಿತಿ ಇರುವುದಿಲ್ಲ. ಇದು ನೋಡುಗರಲ್ಲಿ ರಹಸ್ಯದ ಅನುಬವವನ್ನು ನೀಡುತ್ತದೆ ಹಾಗೂ ದ್ರುಶ್ಯದಲ್ಲಿರುವ ಪಾತ್ರಗಳಿಗೆ ಬಾಂಬ್ ಇರುವಿಕೆಯ ಯಾವುದೇ ಮಾಹಿತಿ ಇರುವುದಿಲ್ಲ. ಇಲ್ಲಿ ಪ್ರೇಕ್ಶಕರು ಮುಂದಾಗುವ ಪರಿಣಾಮವನ್ನು ಮೊದಲೇ ಊಹಿಸಿರುತ್ತಾರೆ ಮತ್ತು ಪಾತ್ರಗಳ ಬಗ್ಗೆ ಕನಿಕರ ತೋರುತ್ತಾರೆ.

ಬಾಂಬ್ ಬ್ಲಾಸ್ಟ್ ಆಗುತ್ತದೆ.
ವ್ಯಕ್ತಿಗಳು ಸಾಯುತ್ತಾರೆ.

ಈ ಸನ್ನಿವೇಶದಲ್ಲಿ ಬಾಂಬ್ ಮೊದಲೇ ಬ್ಲಾಸ್ಟ್ ಆಗಿರುತ್ತದೆ, ನೋಡುಗರಲ್ಲಿ ಹಲವಾರು ಪ್ರಶ್ನೆಗಳು ಮೂಡುತ್ತವೆ, ಯಾರು ಸತ್ತದ್ದು? ಯಾರು ಸಾಯಿಸಿದ್ದು? ಯಾಕೆ? ಹೀಗೆ ಹಲವಾರು ಪ್ರಶ್ನೆಗಳು ಹುಟ್ಟುತ್ತವೆ. ಆದ್ದರಿಂದ ನೋಡುಗರಿಗೆ ದ್ರುಶ್ಯದ ಮೇಲಿನ ಕೂತುಹಲ ಹೆಚುತ್ತದೆ.

ಒಟ್ಟಾಗಿ ಒಂದೇ ದ್ರುಶ್ಯವನ್ನು ಮೂರು ಬಗೆಯ ಅನುಬವಗಳನ್ನು ನೀಡುವ ಹಾಗೆ ಕಟ್ಟಬಹುದು. ಸಿನೆಮಾ ನಿರ‍್ದೇಶನ ಮಾಡುವಾಗ ಇದರ ಬಗ್ಗೆ ಚೆನ್ನಾಗಿ ಅರಿತಿರಬೇಕಾಗುತ್ತದೆ. ಈ ಅರಿವು ಒಳ್ಳೆಯ ದ್ರುಶ್ಯ ಕಟ್ಟುವಿಕೆಯಲ್ಲಿ ನೆರವಾಗುತ್ತದೆ.

(ಚಿತ್ರ ಸೆಲೆ: pixabay)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.