ಕುಟುಂಬಗಳಲ್ಲಿ ಬೇಕು ಮುಕ್ತ ವಾತಾವರಣ
ಕುಟುಂಬ ಎಂದ ಮೇಲೆ ಸದಸ್ಯರ ನಡುವೆ ಸಣ್ಣ-ಪುಟ್ಟ ಜಗಳ ಕಿತ್ತಾಟಗಳು ಸಹಜ. ಕೆಲವರನ್ನು ಜಗಳಗಂಟರೆಂದು ಜರಿಯವುದು ಸಾಮಾನ್ಯವಾಗಿಬಿಟ್ಟಿರುತ್ತದೆ. ಹೇಗೆ ಒಂದೇ ಕೈಯಿಂದ ಚಪ್ಪಾಳೆ ಸಾದ್ಯವಿಲ್ಲವೋ ಹಾಗೆ ಒಬ್ಬರನ್ನೇ ಜಗಳಕ್ಕೆ ಕಾರಣ ಮಾಡಿ ದೂರುವುದು ಸಲ್ಲದು.
ಐದೂ ಬೆರಳು ಸರಿಸಮಾನವಾಗಿ ಇರುವುದಿಲ್ಲ. ಹಾಗೆಯೇ ಎಲ್ಲರ ವಿಚಾರಗಳೂ ಬೇರೆಬೇರೆಯಾಗಿರುತ್ತವೆ. ಸಮಾನವಲ್ಲದ ಬೆರಳುಗಳು ಒಗ್ಗೂಡಿದಾಗ ಮಾತ್ರ ಕೆಲಸ ಮಾಡಲು ಸಾದ್ಯ. ಹಾಗೆಯೇ ಕುಟುಂಬದಲ್ಲಿ ಎಲ್ಲರೂ ಒಬ್ಬರಿಗೊಬ್ಬರು ಹೊಂದಿಕೊಂಡು ನಡೆದಾಗಲೇ ಅದಕ್ಕೆ ಒಂದು ಅರ‍್ತವಿರುತ್ತದೆ.
ವಿಶಯವನ್ನು ವಾಸ್ತವಿಕವಾಗಿ ನೋಡದೆಯೇ, ಬಾವನಾತ್ಮಕವಾಗಿಸುತ್ತಾರೆ
ನಮ್ಮ ಸಂಸ್ಕ್ರುತಿಯಲ್ಲಿ ನೋಡುವುದಾದರೆ ಸಂಸಾರಗಳಲ್ಲಿ ಬಾವನೆಗಳೇ ಮುಕ್ಯ. ವಾಸ್ತವಿಕತೆಗೆ ಹೆಚ್ಚಿನ ಮಹತ್ವ ಇಲ್ಲ. ಮೊದಲೇ ಪಿತ್ರುಪ್ರದಾನ ಸಮಾಜವಾದ್ದರಿಂದ ಇದರ ಹೊರೆಯೆಲ್ಲಾ ಬೀಳುವುದು ಹೆಣ್ಣಿನ ಮೇಲೆಯೇ. ‘ತುತ್ತಾ-ಮುತ್ತಾ’ ಎಂಬ ಪರಿಸ್ತಿತಿಯ ನಡುವೆ ಮಗನಾದವನು ‘ಅತ್ತ-ಇತ್ತ-ಎತ್ತ’ ಎನ್ನುತ್ತಾ ಹೆಣಗುವುದನ್ನು ಸಾಮಾನ್ಯವಾಗಿ ಕಾಣಬಹುದು.
ಕುಟುಂಬ ವ್ಯವಸ್ತೆಯಲ್ಲಿ ಹಿರಿಯರು ಅಕಸ್ಮಾತ್ ತಪ್ಪು ಮಾಡಿದರೂ ಅದನ್ನು ಪ್ರಶ್ನಿಸುವ ಹಕ್ಕು ಕಿರಿಯರಿಗಿಲ್ಲ. ವಿಶಯವನ್ನು ವಾಸ್ತವಿಕವಾಗಿ ನೋಡದೆಯೇ, ಬಾವನಾತ್ಮಕವಾಗಿಸುತ್ತಾರೆ. ಹಿರಿಯರನ್ನು ಪ್ರಶ್ನಿಸುವುದು ದೊಡ್ಡ ತಪ್ಪು ಎಂದೂ, ಅಪ್ಪ-ಅಮ್ಮ ಹೇಳಿಕೊಟ್ಟಿರುವುದು ಸರಿಯಿಲ್ಲವೆನ್ನುವ ಮಾತುಗಳು ಬರುತ್ತವೆ. ಇನ್ನು ಸೊಸೆ ಏನಾದರೂ ತನ್ನ ಅತ್ತೆ ಮಾವನ ತಪ್ಪುಗಳನ್ನು ಪ್ರಶ್ನಿಸಿದರೆ ಮುಗಿಯಿತು ಕತೆ. ಅವರ ತವರು ಮನೆಯ ಕುಲಗೋತ್ರವನ್ನೆಲ್ಲಾ ಜಾಲಾಡಿಬಿಡುತ್ತಾರೆ.
ಮುಕ್ತ ವಾತಾವರಣ ಇದ್ದರೆ ಕುಟುಂಬದಲ್ಲಿ ಸಾಮರಸ್ಯ ಮೂಡುತ್ತದೆ
ಚಿಕ್ಕ-ಪುಟ್ಟ ಜಗಳಗಳಲ್ಲಿ ಯಾವುದೂ ಅತಿರೇಕಕ್ಕೆ ಹೋಗಬಾರದು. ಕುಟುಂಬದ ಯಜಮಾನನಾದವನು ಸಮಸ್ಯೆಯ ಮೂಲವನ್ನು ಪತ್ತೆಹಚ್ಚಿ ಅದನ್ನು ಸರಿಪಡಿಸುವತ್ತ ನೋಡಬೇಕೇ ಹೊರತು ಒಬ್ಬರ ಪರ ವಹಿಸಿ ಮತ್ತೊಬ್ಬರನ್ನು ಕಡೆಗಾಣಿಸುವುದು ಕೂಡದು. ತಪ್ಪು ಮಾಡಿದವರು ಹಿರಿಯರೇ ಇದ್ದರೂ, ಮಕ್ಕಳೇ ಆದರೂ, ಹೆಂಡತಿಯೇ ಆದರೂ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಮುಕ್ತವಾಗಿ ಎಲ್ಲರ ವಿಚಾರಗಳನ್ನು ಕೇಳಿ ತಿಳಿದು ಸರಿಹೊಂದಿಕೊಂಡು ಹೋಗುವಂತೆ ತಿಳಿಹೇಳಬೇಕು. ಯಾರೇ ಆದರೂ ಆಗಲಿ, ಅವರಿಗೆ ನೀವಿಲ್ಲಿ ತಪ್ಪು ಮಾಡುತ್ತಿದ್ದೀರಿ ಎಂದು ನೇರವಾಗಿ ಹೇಳುವ ಗಟ್ಟಿತನವೂ ಇರಬೇಕು. ಆಗ ಮಾತ್ರ ಕುಟುಂಬದಲ್ಲಿ ಒಬ್ಬರಿಗೊಬ್ಬರು ಕೆಸರೆರೆಚುವ ಮುನ್ನ ಯೋಚಿಸುತ್ತಾರೆ. ಕುಟುಂಬದಲ್ಲಿ ಸಾಮರಸ್ಯ ಮೂಡುವುದು ಬಹುಶ ಮುಕ್ತ ವಾತಾವರಣ ಕಲ್ಪಿಸಿದಾಗ ಎನಿಸುತ್ತದೆ.
ಮಕ್ಕಳ ಏಳಿಗೆಗೆ ಬೇಕು ಮುಕ್ತ ವಾತಾವರಣ
ಮಕ್ಕಳ ವಿಶಯದಲ್ಲಿ ನಮ್ಮ ಸಮಾಜದಲ್ಲಿ ಹಲವು ನಡಾವಳಿಗಳಿವೆ. ಅಪ್ಪ ಎಂದರೆ ಹೆದರಿಕೆ, ಅಮ್ಮ ಎಂದರೆ ಸಲಿಗೆ ಎನ್ನುವಂತಹ ಪರಿಸ್ತಿತಿ ಅನೇಕ ಕುಟುಂಬಗಳಲ್ಲಿ ಕಾಣಬಹುದು. ಮಕ್ಕಳು ತಂದೆಯ ಜೊತೆ ಸಹಜವಾಗಿ ಮಾತನಾಡಲೂ ಹಿಂಜರಿಯುವುದು ಬಹಳಶ್ಟು ಸಂಸಾರಗಳಲ್ಲಿ ಕಾಣುತ್ತೇವೆ. ತಾಯಂದಿರು ಬಹುತೇಕ ಹೆಣ್ಣುಮಕ್ಕಳ ಹದಿಹರೆಯದ ಸಮಸ್ಯೆಗಳ ಪ್ರಶ್ನೆಗೆ ಉತ್ತರಿಸಲು ತಡವರಿಸಿ ಅಂತಹ ಪ್ರಶ್ನೆಗಳನ್ನು ಕೇಳಬಾರದು ಎಂದು ಬಾಯಿಮುಚ್ಚಿಸುವುದು ಸಾಮಾನ್ಯ. ತಂದೆ ತಾಯಿಗಳು ತಮ್ಮ ಮಕ್ಕಳೊಂದಿಗೆ ಸ್ನೇಹಪರತೆಯಿಂದ ಬೆರೆಯಬೇಕು. ಅವರ ಪ್ರತಿಯೊಂದು ಸಮಸ್ಯೆಗಳನ್ನೂ ಮುಕ್ತವಾಗಿ ಹಂಚಿಕೊಳ್ಳಲು ವಾತಾವರಣ ಕಲ್ಪಿಸಬೇಕು. ಮಕ್ಕಳ ಆಸೆ ಈಡೇರಿಸುವತ್ತ ಮಾತ್ರ ಗಮನ ಕೊಡದೆ, ಜೀವನದಲ್ಲಿ ಸೋಲಿನ ಕಹಿಯನ್ನು ಸಹಿಸುವುದೂ, ಗೆಲುವಿನ ರುಚಿಯನ್ನು ಸವಿಯುವುದೂ ಕಲಿಸಬೇಕು. ಇದು ಮಕ್ಕಳ ಏಳಿಗೆಗೆ ಪೂರಕವಾಗಿರುತ್ತದೆ. ತಮ್ಮ ತಪ್ಪುಗಳನ್ನೂ ಕೂಡ ಒಪ್ಪಿಕೊಳ್ಳುವ ದೈರ‍್ಯವಿರಬೇಕು. ಬಹುಶ ಆಗ ಕುಟುಂಬದಲ್ಲಿ ಶಾಂತಿ, ನೆಮ್ಮದಿ ತಾನಾಗೇ ನೆಲೆಯೂರುತ್ತದೆ.
(ಚಿತ್ರ ಸೆಲೆ: pixabay.com)
chennagidhe
Thank you