ಗುಂಡೆಮ್ಮೆಯ ನೆನಪುಗಳು

– ಬಿ.ಎಸ್. ಮಂಜಪ್ಪ ಬೆಳಗೂರು.

buffalo, emme, ಎಮ್ಮೆ, ಗುಂಡೆಮ್ಮೆ

ಬೆಟ್ಟದಜೀವ ಕಾದಂಬರಿಯನ್ನು ಪೂರ‍್ತಿ ಓದಿದ್ದು ಎರಡನೇ ವರ‍್ಶದ ಡಿಗ್ರಿಯಲ್ಲಿ. ಶಿವರಾಮ ಕಾರಂತರು ಶಿವರಾಮಯ್ಯನಾಗಿ, ಕಳೆದು ಹೋದ ತಮ್ಮ ದನಗಳನ್ನು ಹುಡುಕುತ್ತಾ ದಟ್ಟ ಸಹ್ಯಾದ್ರಿಯ ಕಾಡಿನಲ್ಲಿ ಕಳೆದುಹೋಗಿ, ಬೆಟ್ಟದಂತ ಜೀವದ ಗೋಪಾಲಯ್ಯನವರನ್ನು ಕಂಡು ಅವರನ್ನು ಚಿತ್ರಿಸುವ ಕ್ರುತಿ. ಕನ್ನಡ ಪಟ್ಯವಾಗಿದ್ದ ಅದು ಮಲೆನಾಡಿನ ಬಗೆಗಿನ ಅರಿವಿದುದರಿಂದಲೂ, ಬೇಸಾಯದ, ದನಕರುಗಳ ಕಶ್ಟ ಕಾರ‍್ಪಣ್ಯಗಳನ್ನು ಸ್ವತಹ ಅನುಬವಿಸಿದುದರಿಂದಲೂ ನನ್ನ ಮನಸ್ಸಿಗೆ ತುಂಬಾ ನಾಟಿತ್ತು.

ಬೇಸಿಗೆಯಲ್ಲಿ ಎಮ್ಮೆಗಳನ್ನು ಕಾಯದೇ ಹಾಗೇ ಬಿಚ್ಚಿ ಹೊಡೆಯುವುದು ನಮ್ಮಲ್ಲಿ ಸಾಮಾನ್ಯ. ಹೀಗೆ ಬಿಚ್ಚಿ ಹೊಡೆದ ಎಮ್ಮೆಗಳು ಸಾಮಾನ್ಯವಾಗಿ ತಮ್ಮ ಗುಂಪಿನಿಂದ ಬೇರೆಯಾಗದೆ ಯಾವಾಗಲೂ ಹಿಂಡಿನಲ್ಲೇ ಇದ್ದರೂ ಶಿಸ್ತಾಗಿ ಒಟ್ಟಿಗೇ ಹೋಗುವುದಿಲ್ಲ. ಬೆಳಿಗ್ಗೆ ಮನೆಯಿಂದ ಹೊರಟ ಎಮ್ಮೆಗಳು ಬಿಸಿಲೇರುವವರೆಗೆ ಮನೆಯ ಹಿಂದಿನ ವಿಶಾಲ ಗದ್ದೆಯ ಹೊಲಗಳಲ್ಲಿ ದಿಕ್ಕಾಪಾಲಾಗಿ ಅಡ್ಡಾಡುತ್ತಾ ಬೇಸಗೆಯ ಬಿಸಿಲಿನಲ್ಲಿ ಒಣಗಿದ ಎಲೆ ತರಗೆಲೆಗಳನ್ನು ತಿನ್ನುತ್ತಾ ಗದ್ದೆಗಳ ಬದುಗಳಲ್ಲಿ ಅಲ್ಲಲ್ಲಿ ನೀರಿನ ಪಸೆಯಿಂದ ಚಿಗುರಿರುವ ಹಸಿರನ್ನು ಸವಿಯುತ್ತಾ ಹಾಗೇ ಸಾಗಿ ಗದ್ದೆಗಳ ಮೇಲಿನ ಅಂಚಿನ ಏರಿ ದಾಟಿ ಪಟ್ಟಣ ಶೆಟ್ಟಿಯ ಕಟ್ಟೆಯ ಗುಂಡಿಗಳಲ್ಲಿ ನೀರು ಕುಡಿದು, ಒಂದರ‍್ದ ಗಂಟೆ ನೀರಿನಲ್ಲಿ ಉರುಳಾಡಿ, ಮತ್ತೆ ಎದ್ದು ಕಟ್ಟೆಯ ಆಚೆ ಬದಿಯ ದಿಬ್ಬವನ್ನು ಹತ್ತಿ ಇಳಿಜಾರಿನಲ್ಲಿರುವ ನಮ್ಮದೇ ತೆಂಗಿನ, ಅಡಿಕೆಯ ತೋಟಗಳ ನೆರಳಲ್ಲಿದ್ದರೂ ಬೇಸಗೆಯ ಆಗಸದ ನಡು ನೆತ್ತಿಯಲ್ಲಿ ವಿನಾಕಾರಣ ಕೋಪಿಶ್ಟನಾಗಿರುತ್ತಿದ್ದ ಸೂರ‍್ಯನ ಬಿಸಿಲಿಗೆ ದಸದಸ ಉಸುರು ಬಿಡುತ್ತಾ ಆಗೊಮ್ಮೆ ಈಗೊಮ್ಮೆ ಮೆಲುಕು ಹಾಕುತ್ತಾ, ತೂಕಡಿಸುತ್ತಾ ಬಿದ್ದಿರುತ್ತಿದ್ದವು. ಕೆಲವೊಂದು ಬಿಸಿಲಿನ ಬೇಗೆ ತಣಿಸಲು ಕಟ್ಟೆಯ ಒಂದು ಬದಿಯಲ್ಲಿರುವ ಕೆಸರಿನಲ್ಲಿ ಉರುಳಾಡಿ ತೇಟ್ ಮಹಿಶಿಯ ಕುರೂಪಾವತಾರವನ್ನು ತಳೆದಿರುತ್ತಿದ್ದವು. ಈ ರೀತಿ ಕೆಸರು ನೀರಿನಲ್ಲಿ ಉರುಳಾಡುವುದರಿಂದ ಅವುಗಳಿಗೆ ಎರಡು ಲಾಬವಿದೆ. ಒಂದು ಅವು ಕಪ್ಪಾಗಿರುವುದರಿಂದ ಹಗಲು ಹೊತ್ತಿನಲ್ಲಿ ಸೆಕೆ ಜಾಸ್ತಿಯಾಗುವುದರಿಂದ ಮೈಯ ತಾಪಮಾನವನ್ನು ಕಡಿಮೆ ಮಾಡಿಕೊಳ್ಳುವುದು. ಮತ್ತೊಂದು ಸಾಮಾನ್ಯವಾಗಿ ನಾವು ಮನೆಯಲ್ಲಿ ನಿಯಮಿತವಾಗಿ ಸ್ನಾನ ಮಾಡಿಸದಿದ್ದುದರಿಂದ ಉಂಟಾಗುವ ಕೀಟಬಾದೆಯನ್ನು ಪರಿಹರಿಸಿಕೊಳ್ಳುವುದು. (ಮನೆಯಲ್ಲಿ ಎತ್ತುಗಳಿಗೆ ಮಾತ್ರ ಸ್ನಾನ, ಪೂಜೆ, ಹುರುಳಿನುಚ್ಚು, ಹಸಿ ಮೇವಿನ ಬಾಗ್ಯ)

ಹೊತ್ತು ನೆತ್ತಿಯಿಂದ ಕೆಳಕ್ಕೆ ಇಳಿಯಲು ಶುರುವಾಯ್ತೋ ಪರೀಕ್ಶೆಯ ಹಾಲಿನಲ್ಲಿ ಕೊನೆಯ ಬೆಲ್ಲಿಗೆ ಐದು ನಿಮಿಶವಿರುವಾಗ, ಬಿಟ್ಟು ಹೋಗಿದ್ದ ಹತ್ತು ಮಾರ‍್ಕಿನ ಪ್ರಶ್ನೆಗೆ ಆಗ ಉತ್ತರ ನೆನಪಾಗಿ ಬರೆಯುವಂತೆ ಜೋರು ಜೋರಾಗಿ ಬೇಗ ಬೇಗ ಪರಪರ ಮೇಯುತ್ತಾ, ಕೆಲವೊಮ್ಮೆ ಹುಲ್ಲನ್ನು ಬೇರುಸಮೇತ ಕಿತ್ತೆಸೆಯುತ್ತಾ ಮೇಯುತ್ತಿದ್ದರೆ, ಇವಕ್ಯಾರು ಮೇಯುವ ಸ್ಪರ‍್ದೆ ಇಟ್ಟರೋ ಅನ್ನುವಂತೆ ಮೇಯುತ್ತಿದ್ದವು. ಮೇಯುತ್ತಾ ಮೇಯುತ್ತಾ ಮನೆಯ ಹಾದಿ ಹಿಡಿದು ಹೊತ್ತು ಮುಳುಗುವ ಹೊತ್ತಿಗೆ ಮನೆ ಸೇರುತ್ತಿದ್ದವು. ಒಮ್ಮೊಮ್ಮೆ ಕತ್ತಲಾದರೂ ಮನೆಯ ಹಿಂದಿನ ಗದ್ದೆಯ ಬಯಲಿನಲ್ಲೆಲ್ಲೋ ಮೇಯುತ್ತಲೇ ಇರುತ್ತಿದ್ದ ಅವನ್ನು ನಮ್ಮ ಅಜ್ಜಿಯೋ ಮಾಮನೋ ಹುಡುಕಿ ಹೊಡೆದುಕೊಂಡು ಬರುತ್ತಿದ್ದರು. ಆದರೂ ಒಮ್ಮೊಮ್ಮೆ ಗುಂಪಿನಲ್ಲಿದ್ದ ಕರಿಯೆಮ್ಮೆಯಿಂದಲೋ ಅತವಾ ಬೇರೆಯವರ ತೋಟಕ್ಕೆ ನುಗ್ಗಿದ್ದರಿಂದ ಅವರು ಆಚೀಚೆ ಓಡಿಸಿಯೋ ತಪ್ಪಿಸಿಕೊಂಡು ಮನೆಗೆ ಬರುತ್ತಿರಲಿಲ್ಲ. ಅಲ್ಲಿಂದ ಅವು ತಗ್ಗಿಹಳ್ಳಿ ಕಾವಲಿಗೋ ಇಲ್ಲ ಗಂಗನಹಳ್ಳಿಯ ಕಡೆಗೋ ಹೋಗಿಬಿಡುತ್ತಿದ್ದವು. ಅಲ್ಲಿ ಕೆಲಸ ಮಾಡುವ ಆಳುಗಳೂ ನಮ್ಮೂರಿನವರೇ ಆದ್ದರಿಂದ ಕೆಲವೊಮ್ಮೆ ಅವರೇ ಊರಿನ ಹಾದಿ ಕಡೆ ಹೊಡೆದು ಬಿಡುತ್ತಿದ್ದರು. ಇಲ್ಲವೇ ಆ ಕಡೆಯಿಂದ ಬರುವವರ ಕೈಲಿ ಹೇಳಿ ಕಳಿಸುತ್ತಿದ್ದರು. ಆಗ ದೇವರಾಜ ಮತ್ತು ಅಜ್ಜನೂ ಹೋಗಿ ಹೊಡೆದುಕೊಂಡು ಬರುತ್ತಿದ್ದರು.

ನಮ್ಮ ಮನೆಯಲ್ಲಿ ಈ ಎಮ್ಮೆ ಕಾಯುವ ಕಾಯಕಕ್ಕೆ ದೇವರಾಜನೆಂಬ ಆಳು ಇದ್ದನಾದರೂ, ಶನಿವಾರ ಬಾನುವಾರಗಳಂದು ನಮ್ಮನ್ನು ಈ ಕಾಯಕಕ್ಕೆ ದೂಡಿ ಅವನನ್ನು ತೋಟದ ಕೆಲಸಕ್ಕೆ ಹಚ್ಚುತ್ತಿದ್ದುದು ಸಾಮಾನ್ಯವಾಗಿತ್ತು. ಹಾಗಾಗಿ ಶನಿವಾರ ಬಾನುವಾರಗಳು ನನ್ನ ಪಾಲಿಗೆ ಅಶ್ಟೊಂದು ಕುಶಿ ಕೊಡುವ ದಿನಗಳಾಗಿರುತ್ತಿರಲಿಲ್ಲ. ಇಲ್ಲದಿದ್ದರೆ ರಜೆಯ ದಿನ ಎದುರು ಮನೆಯ ರೇವ, ಯತಿ, ರಮೇಶ ಇವರ ಜೊತೆಯಲ್ಲಿ ಗೋಲಿ, ಚಿನ್ನಿ-ದಾಂಡು, ಬುಗುರಿ ಇಲ್ಲವೇ ಕೊನೇ ಪಕ್ಶ ತೂರ್ ಚೆಂಡನ್ನಾದರೂ ಸಂಜೆಯವರೆಗೆ ಆಡಬಹುದಿತ್ತೆಂಬುದನ್ನು ನೆನೆದು ದುಕ್ಕ ಉಮ್ಮಳಿಸಿ ಬರುತ್ತಿತ್ತು. ಶನಿವಾರದ ಮಾರ‍್ನಿಂಗ್ ಕ್ಲಾಸು ಮುಗಿಸಿ ಹನ್ನೊಂದೂವರೆಗೆ ಹಸಿದುಕೊಂಡು ಬಂದವನಿಗೆ ಹೊಟ್ಟೆಯಲ್ಲಿ ತಾಳ ತಬಲ ತಂಬೂರಿಗಳು ಬಾರಿಸುತ್ತಿದ್ದರೆ, ಇತ್ತ ಈ ಹೊತ್ತು ಎಮ್ಮೆ ಕಾಯುವ ಕಾಯಕ ನನಗೆ ಪಿಕ್ಸಾಗಿದ್ದೇ ಕಣ್ಣಂಚಿನಲ್ಲಿ ನೀರು ಮಡುಗಟ್ಟುತ್ತಿತ್ತು. ಹಸಿದ ಹೊಟ್ಟೆಗೆ ಶನಿವಾರದ ತಿಮ್ಮಪ್ಪನ ಎಡೆಯ ಹಾಲು ಬೆಲ್ಲದ ಅನ್ನ ಬೋಜ್ಯಗಳು ಆ ದಿನ ನಮಗೇ ಮೀಸಲು. ಹೊಟ್ಟೆ ಬಾರವಾಗುವಂತೆ ಉಂಡು, ಮೇಲೆ ಒಂದು ತಟ್ಟೆ ಮಜ್ಜಿಗೆ ಕುಡಿದು ಹೊಸಲು ದಾಟಿ ಹೊರಗೆ ಬಂದರೆ ಬಿಸಿಲಿಗೆ ಕಣ್ಣೇ ಬಿಡಲಾಗುತ್ತಿಲ್ಲ, ಹೊಟ್ಟೆ ಬಾರ, ಎಲ್ಲಾದರೂ ಹಾಗೇ ಮರದ ನೆರಳಿನಲ್ಲಿ ಒರಗಿ ಬಿಟ್ಟರೆ ಸ್ವರ‍್ಗ ಸುಕವೆಂದು ನಿದಾನವಾಗಿ ಬಿಡಿಸಲಾಗದ ಕಣ್ಣಿನ ರೆಪ್ಪೆಗಳ ನಡುವಿನ ಸಣ್ಣ ಜಾಗದಲ್ಲಿ ನೋಡಿದರೆ, ಈ ಹಾಳಾದ ಎಮ್ಮೆಗಳಿಗೆ ಯಾರು ಹೇಳಿದರೋ, ಅವುಗಳನ್ನು ಈ ದಿನ ಕಾಯುವ ಡ್ಯೂಟಿ ನನ್ನದೆಂದು.

ನಾನು ಬಾಗಿಲಿಂದ ಹೊರಗೆ ಕಾಲಿಟ್ಟದ್ದೇ ಒಂದೊಂದೇ ಎದ್ದು ಬಾಲ ಎತ್ತಿ ಗಂಜಲ ಹೊಯ್ದು ಸಗಣಿಯನ್ನು ಇಡುತ್ತಾ ನನ್ನನ್ನು ಸ್ವಾಗತಿಸುತ್ತಿವೆ. ಎಂತ ಅದ್ಬುತ ಸ್ವಾಗತ ಅಲ್ಲವೇ? ಸಾಮಾನ್ಯವಾಗಿ ಈ ವಿಚಿತ್ರ ಲಕ್ಶಣವನ್ನು ಮದ್ಯಾಹ್ನ ಇವುಗಳಿಗೆ ನೀರು ಕುಡಿಸಲು ಕಟ್ಟೆಯ ಕಡೆ ಹೊಡೆದುಕೊಂಡು ಹೋದಾಗಲೂ ನೋಡಿದ್ದೆ. ಕಟ್ಟೆಯಲ್ಲಿ ನೀರು ಕುಡಿಯಲು ಕಾಲು ಇಟ್ಟಾಕ್ಶಣ ಮೊದಲು ಗಂಜಲವೂ ನಂತರ ಸಗಣಿಯನ್ನೂ ಹಾಕುತ್ತಿದ್ದವು. ಕೆಲವು ಕಿರಿಯ ವಯಸ್ಸಿನ ಅವಿವೇಕಿ ಎಮ್ಮೆಗಳು ನೀರಿಗಿಳಿದ ಮೇಲೆ ಸಗಣಿ ಹಾಕುವುದೂ ಉಂಟು. ಅದೇನು ಕೇಡು ಬುದ್ದಿಯೋ ತಾನು ನೀರು ಕುಡಿದು ಬೇರೆಯವು ಇನ್ನೂ ಕುಡಿಯುವಾಗಲೇ ಈ ಕಟ್ಟೆಯ ನೀರಿನ ಒಡೆತನವನ್ನು ಸಾರಲು ಅವಸರ. ಸಾಮಾನ್ಯವಾಗಿ ಪ್ರಾಣಿಗಳು ಮಲ ಮೂತ್ರಗಳನ್ನು ತನ್ನ ಗಡಿಗಳನ್ನು ಗುರ‍್ತಿಸಲು ಮತ್ತು ಆ ಪ್ರದೇಶದ ಒಡೆತನವನ್ನು ಪ್ರಚುರಪಡಿಸಲು ಬಳಸುತ್ತವೆ.

ಈ ಎಮ್ಮೆಗಳ ಇನ್ನೊಂದು ವಿಚಿತ್ರ ಗುಣ ಉಜ್ಜುವುದು. ತೆಂಗಿನ ಮರಗಳನ್ನ, ನೇರಳೆ, ಮಾವಿನ ಇತ್ಯಾದಿ ಮರಗಳನ್ನ, ಗೋಡೆಗಳನ್ನು, ಲೈಟು ಕಂಬಗಳನ್ನು ಕೊನೆಗೆ ಲೈಟುಕಂಬಗಳ ವೈರನ್ನೂ ಬಿಡುವುದಿಲ್ಲ. ಮೊದಮೊದಲು ಮೈ ಕಡಿಯುತ್ತದೇನೋ ಅಂದುಕೊಂಡಿದ್ದ ನಾನು ಅದೂ ಕೂಡ ಅವುಗಳು ತಮ್ಮಗಡಿ ಗುರ‍್ತಿಸಿಕೊಳ್ಳುವ ರೀತಿ ಎಂದು ತಿಳಿದ ಮೇಲೆ ಎಮ್ಮೆಗಳ ಮೇಲೆ ಆಸಕ್ತಿ ಶುರುವಾಗಿತ್ತು. ಅದರ ಮೈಯ ಬೆವರಿನಲ್ಲಿ ಒಂತರಾ ರಾಸಾಯನಿಕವಿದ್ದು, ಎಮ್ಮೆಗಳು ಉಜ್ಜಿದ ಕಡೆ ಅವುಗಳ ಗಡಿ ಗುರುತಿಸಲು ನೆರವಾಗುತ್ತದೆ. ಇದನ್ನು ತಿಳಿದ ಮೇಲೆಯೇ ಎಮ್ಮೆಗಳ ಬಳಿ ಸಗಣಿ ಗಂಜಲಗಳ ಹೊರತಾಗಿ ಇನ್ನೊಂದು ವಿಚಿತ್ರ ವಾಸನೆ ಗುರುತಿಸಿದ್ದೆ. ಆನೆಗಳೂ ಸಹ ಇದೇ ರೀತಿ ಗಡಿ ಗುರ‍್ತಿಸಿಕೊಳ್ಳುವುದನ್ನು ಓದಿದ್ದ ನನಗೆ ಅನೇಕ ವಿಶಯಗಳಲ್ಲಿ ಆನೆಗಳೂ ಎಮ್ಮೆಗಳೂ ದೂರದ ಸಂಬಂದಿಗಳೇನೋ ಅನ್ನಿಸುತ್ತಿತ್ತು.

ಸಾಮಾನ್ಯವಾಗಿ ಎಮ್ಮೆಯೊಂದು ಗಬ್ಬವಾದರೆ(ಗರ‍್ಬ) ಮನೆಯ ಹಿರಿಯರು ಸಾಮಾನ್ಯವಾಗಿ ಅದಕ್ಕೆ ವಿಶೇಶ ಕಾಳಜಿ ವಹಿಸುತ್ತಿದ್ದರು. ಅಪ್ಪಿತಪ್ಪಿಯೂ ಆ ಎಮ್ಮೆಗೆ ಹೊಡೆಯುತ್ತಿರಲಿಲ್ಲ. ಕರು ಹಾಕುವ ದಿನ ಹತ್ತಿರ ಬಂದಾಗ ಮೇಯಲು ದೂರಕ್ಕೆ ಕಳಿಸುತ್ತಿರಲಿಲ್ಲ. ಇನ್ನೂ ಹುಡುಗರಾಗಿದ್ದ ನಮಗೆ ಎಮ್ಮೆಯಿಂದ ಕರು ಹೇಗೆ ಹೊರಗೆ ಬರುತ್ತದೆಂಬ ಕುತೂಹಲ ಇದ್ದರೂ, ಕರು ಹಾಕುವ ಸಮಯದಲ್ಲಿ ಅಲ್ಲಿರುತ್ತಿದ್ದ ಸೂಲಿಗರು(ಎಮ್ಮೆಗೆ ಹೆರಿಗೆ ಮಾಡಿಸು ಗಂಡಸರು) ಎಮ್ಮೆಗೆ ಕರುವಿಗೆ ಆಸರಿಕೆಯಾಗುತ್ತದೆಂದು ನಮ್ಮನ್ನು ಅಲ್ಲಿಂದ ಗದುಮುತ್ತಿದ್ದರು. ವಿಶೇಶವೆಂದರೆ ಕರು ಹಾಕಿದ ಅರ‍್ದ ಗಂಟೆಯೊಳಗೆ ಕರು ಎದ್ದು ಓಡಾಡಲು ಶುರು ಮಾಡುತ್ತಿತ್ತು. ಮತ್ತೊಂದು ವಿಶೇಶವೆಂದರೆ ಎಮ್ಮೆಯೊಂದು ಕರುಹಾಕಿದರೆ ಗುಂಪಿನ ಉಳಿದ ಎಮ್ಮೆಗಳು ಕರುವನ್ನು ನೆಕ್ಕಿ ಗುಂಪಿಗೆ ಸ್ವಾಗತಿಸುವ ಪದ್ದತಿಯೊಂದು ಎಮ್ಮೆಗಳಲ್ಲಿರುವುದು ವಿಶೇಶ ಪದ್ದತಿ. ಬಾಶೆ ಬಾರದ ಮೂಕ ಪ್ರಾಣಿಗಳಲ್ಲಿನ ಪದ್ದತಿಗಳನ್ನು ಉಳಿಸಿ ಮುಂದಿನ ಪೀಳಿಗೆಗೂ ಹೇಗೆ ಕಲಿಸಿಕೊಡುತ್ತವೆ ಅನ್ನುವುದು ತುಂಬಾ ದಿನ ಕಾಡುತ್ತಿತ್ತು.

ನಾನು ಹೈಸ್ಕೂಲಿಗೆ ಹೋಗುವವರೆಗೆ ಮಾತ್ರ ಎಮ್ಮೆ ಕಾಯಲು ಹೋಗುತ್ತಿದ್ದೆ. ಅಶ್ಟು ವರ‍್ಶದ ಒಡನಾಟದಲ್ಲಿ ಈಗಲೂ ನೆನಪಿರುವುದು ಮೂರು ಎಮ್ಮೆಗಳು ಮಾತ್ರ. ಗುಂಡೆಮ್ಮೆ, ಕರಿಯೆಮ್ಮೆ ಮತ್ತು ಬಿಳಿಯೆಮ್ಮೆ. ಇನ್ನುಳಿದವು ಸುಮಾರು ಕರುಗಳನ್ನು ಮಣಕಗಳಾಗುವ ಹೊತ್ತಿಗೆ ಜಾಗದ ಅಬಾವ ಮತ್ತು ಮೇವಿನ ಅಬಾವದಿಂದ ಮಾರುತ್ತಿದ್ದರು. ಹೀಗೆ ಮಾರಿದ ಮಣಕಗಳು ಮನೆಗೆ ಹೋಗುವ ಬರುವದಾರಿ ನೆನಪಿಟ್ಟುಕೊಂಡು ವಾಪಾಸು ಬಂದದ್ದೂ ಉಂಟು. ಅದೂ ಹತ್ತಿಪ್ಪತ್ತು ಕಿಲೋಮೀಟರು ದೂರದಿಂದ. ಇನ್ನು ಇದ್ದ ಎಮ್ಮೆಗಳಲ್ಲಿ ಗುಂಡೆಮ್ಮೆಯೇ ನಾಯಕಿ. ಅದನ್ನು ಯಾವಾಗ ಮನೆಗೆ ತಂದರೋ ನೆನಪಿಲ್ಲ. ನಾನು ಹುಟ್ಟಿದಾಗಿನಿಂದಲೂ ಅದು ಮನೆಯಲ್ಲೇ ಇತ್ತು. ಮದ್ಯ ವಯಸ್ಕೆಯಾಗಿದ್ದ, ಸೌಮ್ಯ ಸ್ವಬಾವದ ಅದು ಸ್ವಲ್ಪ ಕುಳ್ಳಾಗಿದ್ದರೂ ದಶ್ಟಪುಶ್ಟವಾಗಿದುದರಿಂದಲೂ ಮನೆಯ ಹಿರಿಯ ಸದಸ್ಯೆಯಾಗಿದುದರಿಂದ ನಿರ‍್ವಿವಾದಿತ ನಾಯಕಿಯಾಗಿತ್ತು. ಹಾಗಾಗಿ ಇತರೆರಡು ಸದಸ್ಯರು ಗೌರವ ಕೊಡಲೇಬೇಕಿತ್ತು. ಹಾಗೆಯೇ ಬೇರೆಯವರ ಎಮ್ಮೆಗಳೊಂದಿಗೆ ಗದ್ದೆಗಳಲ್ಲಿ, ರಸ್ತೆ ಮಗ್ಗುಲಲ್ಲಿ ಗುದ್ದಾಡುವ ಸಂದರ‍್ಬ ಬಂದಾಗ ಜಗಳ ಬಿಡಿಸುವ ಅತವಾ ಕಾದಾಡುವ ನಾಯಕತ್ವ ವಹಿಸುತ್ತಿತ್ತು. ಜೊತೆಗೆ ಇದು ಕೊಡುವ ಹಾಲು ಎಲ್ಲಾ ಎಮ್ಮೆಗಳ ಹಾಲಿಗಿಂತ ಮಂದವಾಗಿರುತ್ತಿತ್ತು.

ಇನ್ನು ಕರಿಯೆಮ್ಮೆ ರಾಕ್ಶಸಿಯ ಅವತಾರವೇ. ಶಬರಿಮಲೆ ಸ್ವಾಮಿ ಅಯ್ಯಪ್ಪ ಪಿಚ್ಚರ್ ನೋಡಿದ ಮೇಲೆ ಮಹಿಶಿಯೆಂದೇ ನಾನು ಕರೆಯುತ್ತಿದ್ದೆ. ಉಳಿದೆರಡು ಎಮ್ಮೆಗಳಿಗಿಂತ ಎತ್ತರವಾಗಿದ್ದ ಅದು ಕರ‍್ರಗೆ ಇದ್ದಿಲಿನ ಮೈ ಹಾಗೂ ಕೆಂಪು ಕಣ್ಣಿನ ಅದರ ಬಳಿಗೆ ಕೈಯಲ್ಲಿ ಕೋಲು ಹಿಡಿದೇ ಹೋಗಬೇಕಿತ್ತು. ಆದರೂ ಅದನ್ನು ಇಟ್ಟುಕೊಂಡು ಸಾಕಲು ಕಾರಣ ಜಾಸ್ತಿ ಹಾಲು ಕೊಡುತ್ತಿದ್ದುದು. ಮಳೆಗಾಲದಲ್ಲಿ ನಮ್ಮ ಕಣ್ಣು ತಪ್ಪಿಸಿ ಹೊಲದ ಪೈರಿಗೆ ಹೊಂಚು ಹಾಕಿ ಓಡುತ್ತಿದ್ದ ಕಳ್ಳಿಯೂ, ಬೇರೆ ಗುಂಪಿನ ಎಮ್ಮೆಗಳೊಂದಿಗೆ ಕಾಲು ಕೆರೆದು ಗುದ್ದಾಟಕ್ಕಿಳಿಯುತ್ತಿದ್ದ ಹುಂಬಿಯೂ, ನನಗೆ ಉಪದ್ರಕಾರಿಯೂ ಆಗಿತ್ತು. ಏಕೆಂದರೆ ಅದು ಬೆಳೆದು ನಿಂತ ಪೈರು ತಿಂದರೆ ಹೊಲದವರಿಂದ ಬೈಗುಳದ ಉದ್ದ ಮಂಗಳಾರತಿ ನನಗೇ ಸಲ್ಲುತ್ತಿತ್ತು. ಇನ್ನೊಂದು ಬಿಳಿಯೆಮ್ಮೆ ಗುಂಡೆಮ್ಮೆಯ ಮಗಳಾದುದರಿಂದ ಅದರಂತೆಯೇ ಸೌಮ್ಯ ಸ್ವಬಾವದ ಎಮ್ಮೆಯಾಗಿತ್ತು.

ಕಾರಣಾಂತರಗಳಿಂದ ಅಜ್ಜ ಅಜ್ಜಿ ಮತ್ತೆ ನಾನು ಊರೊಳಗಿನ ಮನೆಯಲ್ಲಿರಬೇಕಾದ ಸಂದರ‍್ಬ ಬಂದಿದ್ದರಿಂದ ಜೊತೆಯಲ್ಲಿ ಗುಂಡೆಮ್ಮೆಯನ್ನು ಅಜ್ಜ ಪ್ರೀತಿಯಿಂದ ತನ್ನ ಜೊತೆಯಲ್ಲೇ ಕರೆತಂದಿದ್ದ. ಹಾಗಾಗಿ ನಾನೇ ಅದರ ಸಹವಾಸ, ಕ್ಶೇಮ ನೋಡಿಕೊಳ್ಳುತ್ತಿದ್ದೆ. ಬೆಳಿಗ್ಗೆ ಎದ್ದ ತಕ್ಶಣ ನಿದ್ದೆಗಣ್ಣಿನಲ್ಲಿ ಅದನ್ನು ಹೊರಗೆ ಕಟ್ಟಿ, ಕೊಟ್ಟಿಗೆಯಲ್ಲಿ ಅದರ ಎರಡು ತೊಪ್ಪೆ ಸಗಣಿ ಬಾಚಿ ಶುಚಿ ಮಾಡುತ್ತಿದ್ದೆ. ಮಾವನಿಂದ ಏನನ್ನೂ ಬಯಸದ ಚಲಗಾರ ಅಜ್ಜ ಸಾಯುವವರೆಗೂ ನಮಗೆ ಅದೇ ಆದಾಯದ ಮೂಲವೂ ಆಗಿತ್ತು. ನಿಕ್ಕಿ ಎರಡೂವರೆ ಲೀಟರು ಮಂದಗಿನ ಹಾಲು ಕೊಡುತ್ತಿದ್ದ ಅದರ ಹಾಲನ್ನು ಅಜ್ಜನೇ ಕರೆದು ಕೊಡುತ್ತಿದ್ದ. ಬೆಳಿಗ್ಗೆ ಆರೂವರೆಗೆ ನಾನೇ ಕ್ಯಾನಿಗೆ ತುಂಬಿಸಿ ವೆಂಕಟೇಶಣ್ಣನ ಅಂಗಡಿಗೆ ಕೊಟ್ಟು ಬರುತ್ತಿದ್ದೆ. ಮನೆಯಲ್ಲಿ ಬೆಳಗಿನ ಟೀ ಮಾಡಲು ಎರಡು ರೂಪಾಯಿ ಹಿಡಿದು ಕೊಂಡು ಬಂದಿರುತ್ತಿದ್ದ ಕೆಲವು ಹೆಂಗಸರು, ಕೆಲವು ಮಕ್ಕಳು ಒಂದು ರೂಪಾಯಿಯ ಬೆಲ್ಲ, ಎಂಟಾಣೆ ಟೀ ಪುಡಿ ಕೊಂಡು ಇನ್ನು ಎಂಟಾಣೆ ಹಾಲಿಗಾಗಿ ಅಲ್ಲೇ ಕಾದಿರುತ್ತಿದ್ದರು. ಹಾಲು ಕೊಟ್ಟು ದುಡ್ಡು ತಂದು ಅಜ್ಜನಿಗೆ ಕೊಟ್ಟರೆ ಬೆಳಗಿನ ನನ್ನ ಕೆಲಸ ಮುಗಿಯುತ್ತಿತ್ತು. ಇನ್ನು ಅಜ್ಜ ಸಂಜೆಯವರೆಗೂ ನೋಡಿಕೊಳ್ಳುತ್ತಿದ್ದ. ಸಂಜೆ ಸ್ಕೂಲಿಂದ ಬಂದ ಮೇಲೆ ಹಿತ್ತಿಲಿಗೆ ಹೋಗಿ ಒಂದು ಹೊರೆ ಹುಲ್ಲು ತಂದಿಡುತ್ತಿದ್ದೆ. ಕತ್ತಲಾದ ಮೇಲೆ ಮತ್ತೆ ಹಾಲು ಕರೆದು ವೆಂಕಟೇಶಣ್ಣನ ಅಂಗಡಿಗೆ ಕೊಟ್ಟು ಬರುತ್ತಿದ್ದೆ.

ಊರೊಳಗಿನ ನಮ್ಮ ಮನೆಯು ಊರಿನ ಮದ್ಯದಲ್ಲಿದುದರಿಂದ ನಮ್ಮ ಮನೆಯ ಅಕ್ಕ ಪಕ್ಕದಲ್ಲಿ ಸುಶಿಕ್ಶಿತರೂ, ನೌಕರರು ಬಾಡಿಗೆ ಇದ್ದುದರಿಂದ ನಮ್ಮ ಎಮ್ಮೆಯು ಅವರ ಮನೆಗಳ ಮುಂದೆಯೇ ಓಡಾಡುತ್ತಿದುದರಿಂದ, ಮನೆಯ ಮುಂದೆಯೇ ಕಟ್ಟುತ್ತಿದುದರಿಂದ ಅದು ಇಡುತ್ತಿದ್ದ ಸಗಣಿಯ, ಹೊಯ್ಯುತ್ತಿದ್ದ ಗಂಜಲದ ವಾಸನೆಯಿಂದ ಅವರಿಗೆ ಕಿರಿಕಿರಿಯಾಗುತ್ತಿದ್ದರೂ, ನಮ್ಮಜ್ಜ ಊರಿಗೆ ಪ್ರಮುಕನಾದ್ದರಿಂದ ಯಾರೂ ಎದುರಿಗೆ ಹೇಳುತ್ತಿರಲಿಲ್ಲ. ಆದರೂ ಸ್ವಲ್ಪ ದಿನಗಳ ನಂತರ ಎಮ್ಮೆಯು ಒಂಟಿಯಾದುದರಿಂದ, ಮೇಯಲು ತೋಟಕ್ಕೆ ಹೋಗಿ ಬರಲು ದೂರವಿದ್ದುದರಿಂದ ಹಾಲಿನ ಕರೇವು ಕಡಿಮೆಯಾಯಿತು. ನಂತರ ಹಸಿ ಹುಲ್ಲಿನ ಅಬಾವವಾಗಿ ಹಾಲು ಬತ್ತಿ ಹೋಯಿತು.

ಗುಂಡೆಮ್ಮೆ ಹಾಲು ನಿಲ್ಲಿಸಿದ ಮೇಲೆ ಅಜ್ಜನಿಗೆ ಅದನ್ನು ಏನು ಮಾಡಬೇಕೆಂಬ ಚಡಪಡಿಕೆ ಶುರುವಾಯ್ತು. ಅದನ್ನು ವಾಪಾಸು ಮಾವನ ಎಮ್ಮೆಗಳ ಬಳಿ ಕಳಿಸಲು ಮನಸ್ಸಿರಲಿಲ್ಲ. ಜೊತೆಗೆ ವಯಸ್ಸಾಗಿತ್ತು. ಆದರೂ ನಾನು ನಿತ್ಯದ ನೀರು ಮೇವು ಸಲ್ಲಿಸುತ್ತಿದ್ದೆ. ಒಂದು ವಾರವಾಗಿರಬಹುದು. ಒಂದಿನ ಸ್ಕೂಲಿಂದ ಬಂದ ಮೇಲೆ ಮನೆಯ ಮುಂದಿನ ಗೂಟವು ಎಮ್ಮೆ ಕಟ್ಟಿಲ್ಲದೆ ಕಾಲಿ ಇದ್ದುದು ನೋಡಿ ನನಗೆ ಅರ‍್ತವಾಯಿತು. ಆದರೆ ನಾನು ಬೇಜಾರು ಮಾಡಿಕೊಳ್ಳುತ್ತೇನೆಂದು ಎಶ್ಟು ಕೇಳಿದರೂ ಯಾರಿಗೆ ಮಾರಿದೆನೆಂದು ಅಜ್ಜ ಹೇಳಲೇ ಇಲ್ಲ. ಆದರೆ ಕೊಯ್ದು ತಿನ್ನುವವರಿಗೆ ಕೊಟ್ಟಿರಲಾರನೆಂದು ಮನಸ್ಸಿನಲ್ಲಿ ಗಟ್ಟಿಯಾಗಿ ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ.

ಅದಾದ ಎಶ್ಟೋ ದಿನಗಳ ಮೇಲೆ ನಮ್ಮ ಹೈಸ್ಕೂಲಿನ ತಂತಿಬೇಲಿ ದಾಟಿ ಮೂತ್ರಕ್ಕೆ ಬಯಲಿಗೆ ಹೋಗಿದ್ದಾಗ ಅಲ್ಲಿಯೇ ಪಡುಮನೆ ಮುದುಕಿ ಸಿದ್ದಜ್ಜಿ ಅವರ ಎಮ್ಮೆ ಹಿಂಡನ್ನು ತರುಬಿಕೊಂಡು ಕಾಯುತ್ತಿದ್ದಳು. ಸೌಮ್ಯವಾಗಿ ಆ ಗುಂಪಿನಲ್ಲಿ ಮೇಯುತ್ತಿದ್ದ ಅದೇ ನಮ್ಮ ಗುಂಡೆಮ್ಮೆ ತಕ್ಶಣ ನನ್ನ ಗುರುತು ಹಚ್ಚಿ ಕತ್ತೆತ್ತಿ ನೋಡಿತು. ನೋಡುತ್ತಲೇ ಇತ್ತು. ಮೇಯುವುದ ಮರೆತು. ನಾನೂ ಅದನ್ನು ಹಾಗೇ ನೋಡುತ್ತಾ ಸುಮಾರು ಹೊತ್ತು ನಿಂತಿದ್ದೆ. ಅಜ್ಜ ಅದನ್ನುಪಡುಗಡೆಮನೆ ಸಾಹುಕಾರರಿಗೆ ಹಾಗೆಯೇ ಕೊಟ್ಟಿದ್ದ. ಆದರೆ ಯಾಕೋ ಏನೋ ಹತ್ತಿರ ಹೋಗಲು ಮನಸಾಗಲಿಲ್ಲ. ಕಣ್ಣಂಚಲ್ಲಿ ಸಂತೋಶದ ನೀರು ತುಂಬಿತ್ತೋ ಏನೋ, ಅದು ನಿಮ್ಮ ಎಮ್ಮೆಯೇ ಎಂದು ಸಿದ್ದಜ್ಜಿ ಹೇಳಿದ್ದು ಕೇಳಿಸಿದರೂ ಕೇಳಿಸದವನಂತೆ ತಿರುಗಿ ಬಂದೆ. ನಾನು ತಿರುಗಿ ಬರುವವರೆಗೂ ಕಣ್ಮರೆಯಾಗುವವರೆಗೂ ಮೇಯದೇ ನನ್ನನ್ನು ನೋಡುತ್ತಲೇ ಇತ್ತು. ಯಾಕೋ ಗೊತ್ತಿಲ್ಲ, ಶಾಲೆಯಿಂದ ಮನೆಗೆ ಹೋದವನೇ ಯೂನಿಪಾರ‍್ಮೂ ಬಿಚ್ಚದೇ ತುಂಬಾ ಹೊತ್ತು ಬೋರಲು ಮಲಗಿ ಅತ್ತಿದ್ದೆ. ಅತ್ತಿದ್ದ ಮುಕ ನೋಡಿ ಅಜ್ಜ ಕೇಳಿದ್ದ ಯಾಕೆ ಅತ್ತೆ ಅಂತ. ನಾನು ಹೇಳಲಿಲ್ಲ. ಹೇಳಲಾಗಲಿಲ್ಲ.

(ಚಿತ್ರ ಸೆಲೆ: kn.wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

5 Responses

 1. shashi kumar says:

  ???

 2. Manjunatha says:

  Keep writing

 3. Girish says:

  ಮೂಕ ಪ್ರಾಣಿಯ ಬಗೆಗಿನ ಮೌನ ನೆನಪು ಅಕ್ಷರಗಳಾಗಿ ಅಮೋಘವಾಗಿ ವ್ಯಕ್ತವಾಗಿದೆ.. ?

 4. Google Boy says:

  ಎಸ್.ಜಿ.ಬಿ ಶಾಲೆಯ ನೆನಪುಗಳು?

 5. Shashidhara h says:

  ತುಂಬಾ ಅದ್ಬುತವಾಗಿ ಮೂಡಿಬಂದಿದೆ

ಅನಿಸಿಕೆ ಬರೆಯಿರಿ: