ವಿಶ್ವದ ಅತಿ ಎತ್ತರದ ಹೊರಾಂಗಣದ ಏರಿಳಿ

– ಕೆ.ವಿ.ಶಶಿದರ.

ಹಂಡ್ರೆಡ್ ಡ್ರಾಗನ್ಸ್ ಏರಿಳಿ, Hundred Dragons Elevator

ಕೆಲವು ಜನರಿಗೆ ಬೆಟ್ಟಗಳ ಚಾರಣ ಬಹು ಇಶ್ಟ. ಕಾಲುಹಾದಿಯ ಅಡೆ-ತಡೆಗಳನ್ನು ದಾಟಿ ಬೆಟ್ಟದ ತುದಿಯನ್ನು ತಲುಪಿದರೆ ವಿಜಯ ಸಾದಿಸಿದ ತ್ರುಪ್ತಿ. ಮತ್ತೆ ಕೆಲವರಿಗೆ ಬೆಟ್ಟದ ತುತ್ತ ತುದಿಯಲ್ಲಿ, ಆಕಾಶದಡಿಯಲ್ಲಿ ನಿಂತು ಪ್ರಕ್ರುತಿಯ ಸೊಬಗನ್ನು ನೋಡುವ ಉತ್ಕಟವಾದ ಬಯಕೆ. ಎರಡನೆಯವರ ಇಚ್ಚೆಯನ್ನು ಪೂರೈಸುವ ಸಲುವಾಗಿ ಜನ್ಮತಾಳಿರುವುದೇ ಚೀನಾದಲ್ಲಿನ ವಿಶ್ವದ ಅತಿ ಎತ್ತರದ ಹೊರಾಂಗಣದ ಏರಿಳಿ(Elevator) –  ಹಂಡ್ರೆಡ್ ಡ್ರಾಗನ್ಸ್ ಎಲಿವೇಟರ್.

‘ಹಂಡ್ರೆಡ್ ಡ್ರಾಗನ್ಸ್ ಎಲಿವೇಟರ‍್’ ಅನ್ನು ‘ಬೈಲಾಂಗ್ ಎಲಿವೇಟರ್ ಎಂದೂ ಗುರುತಿಸುತ್ತಾರೆ. ಗಾಜಿನ ಗೂಡನ್ನು ಹೊಂದಿರುವ ಈ ಏರಿಳಿ, ಕಲ್ಲಿನ ಪರ‍್ವತ ಶ್ರೇಣಿಗೆ ಆತುಕೊಂಡಿದೆ.

330 ಮೀಟರ್ ಎತ್ತರದ ಏರಿಳಿ

ಚೀನಾದ ಹುನಾನ್ ಪ್ರಾಂತ್ಯದ ಜಂಗ್-ಜಿಯಾ-ಜಾ ದ (Zhangjiajie) ವೂಲಿಂಗ್ಯುವನ್ (Wulingyuan) ಪ್ರದೇಶದಲ್ಲಿ ಈ ಏರಿಳಿ ಇದೆ. ಈ ಪ್ರದೇಶ 3670 ಚದರ ಮೈಲಿ ಅರಣ್ಯವನ್ನು ಹೊಂದಿದೆ. 330 ಮೀಟರ್ ಎತ್ತರದ ಈ ಏರಿಳಿಯ ನಿರ‍್ಮಾಣ ಕಾರ‍್ಯ 1999ರಲ್ಲಿ ಪ್ರಾರಂಬವಾಗಿ 3 ವರ‍್ಶಗಳ ತರುವಾಯ 2002ರಲ್ಲಿ ಪೂರ‍್ಣಗೊಂಡು ಸಾರ‍್ವಜನಿಕರ ಬಳಕೆಗೆ ತೆರೆದುಕೊಂಡಿತು. ಈ ಪ್ರದೇಶವು ವಿಶ್ವ ಪರಂಪರೆಯ ತಾಣವೆಂದು ಗುರುತಿಸಲ್ಪಟ್ಟ ಕಾರಣ, ಪರಿಸರವಾದಿ ಗುಂಪುಗಳಿಂದ ಏರಿಳಿಯ ಈ ಯೋಜನೆ ತೀವ್ರ ವಿರೋದ ಎದುರಿಸಬೇಕಾಯಿತು. ಈ ಯೋಜನೆಯ ಅಂದಾಜು ವೆಚ್ಚ 20 ದಶಲಕ್ಶ ಡಾಲರ್‍ಗಳು. ಪ್ರತಿ ವರ‍್ಶ 5 ದಶಲಕ್ಶ ಪ್ರವಾಸಿಗರು ಈ ಅದ್ಬುತ ಯೋಜನೆಯನ್ನು ನೋಡಲು ಬರುತ್ತಿದ್ದು, ಪ್ರವಾಸಿಗರ ಎಣಿಕೆ ನಿರೀಕ್ಶೆಗಿಂತ ಬಹಳಶ್ಟು ಹೆಚ್ಚಿನದ್ದಾಗಿದೆ.

ಈ ಎಲಿವೇಟರ್ ನ ಗಿನ್ನೆಸ್ ದಾಕಲೆಗಳು

ಹಂಡ್ರೆಡ್ ಡ್ರಾಗನ್ಸ್ ಏರಿಳಿ ಕೆಳಗಿನ ಗಿನ್ನೆಸ್ ದಾಕಲೆಗಳನ್ನು ತನ್ನದಾಗಿಸಿಕೊಂಡಿದೆ. ಹಂಡ್ರೆಡ್ ಡ್ರಾಗನ್ಸ್ ಏರಿಳಿ, Hundred Dragons Elevator

>  ಅತಿ ಎತ್ತರದ ಹೊರಾಂಗಣದ ಏರಿಳಿ
>  ಅತಿ ಎತ್ತರದ ದ್ರುಶ್ಯ ವೀಕ್ಶಣೆಯ ಏರಿಳಿ
>  ಅತಿ ಹೆಚ್ಚು ಜನರನ್ನು ಒಮ್ಮೆಲೆ ಹೊತ್ತೊಯ್ಯಬಹುದಾದ ಏರಿಳಿ
>  ಅತಿ ವೇಗವಾಗಿ ಚಲಿಸುವ ಏರಿಳಿ

1099 ಅಡಿ ಎತ್ತರವನ್ನು ಕ್ರಮಿಸಲು 66 ಸೆಕೆಂಡುಗಳು  ಸಾಕು!

ಯುನೈಟೆಡ್ ಕಿಂಗ್‍ಡಮ್‍ನ ಅತಿ ಎತ್ತರದ ಕಟ್ಟಡ ‘ದಿ ಶಾರ‍್ಡ್’ಗಿಂತ ಎತ್ತರವಾಗಿರುವ ಈ ಏರಿಳಿ 1099 ಅಡಿ ಎತ್ತರವನ್ನು ಕ್ರಮಿಸಲು ತೆಗೆದುಕೊಳ್ಳುತ್ತಿದ್ದದ್ದು ಸಮಯ ಕೇವಲ 2 ನಿಮಿಶ. ಪ್ರಾರಂಬದಲ್ಲಿ 3 ಮೀಟರ್ ದೂರ ಕ್ರಮಿಸಲು ಒಂದು ಸೆಕೆಂಡ್ ತೆಗೆದುಕೊಳ್ಳುತ್ತಿದ್ದ ಇದರ ವೇಗವನ್ನು 2013 ರಲ್ಲಿ ಪ್ರತಿ ಸೆಕೆಂಡಿಗೆ 5 ಮೀಟರ್ ಗೆ ಏರಿಸಲಾಯಿತು. ವೇಗವನ್ನು ಹೆಚ್ಚಿಸಿದ್ದರ ಪರಿಣಾಮವಾಗಿ ಮೇಲೇರಲು ತೆಗೆದುಕೊಳ್ಳುತ್ತಿದ್ದ 1 ನಿಮಿಶ 58 ಸೆಕೆಂಡುಗಳು,  ಬರೇ 66 ಸೆಕೆಂಡುಗಳಿಗೆ ಇಳಿಯಿತು. ಇದರಲ್ಲಿ ಒಮ್ಮೆಲೆ ಅತಿ ಹೆಚ್ಚೆಂದರೆ 50 ಜನ ಪ್ರಯಾಣಿಸಬಹುದು. ಇದರಲ್ಲಿರುವ ಮೂರೂ ಏರಿಳಿಗಳು ಏಕಕಾಲದಲ್ಲಿ ಕೆಲಸ ನಿರ‍್ವಹಿಸಿದಲ್ಲಿ ಒಟ್ಟಾರೆ ಒಂದು ಗಂಟೆಯಲ್ಲಿ 4000 ಪ್ರಯಾಣಿಕರು  ಬೆಟ್ಟದ ತುದಿ ತಲುಪಬಹುದು.

ಪ್ರವಾಸಿಗರ ನೆಚ್ಚಿನ ತಾಣ

2002ರಲ್ಲಿ ಸಾರ‍್ವಜನಿಕ ಬಳಕೆಗೆ ತೆರೆದುಕೊಂಡ ಇದನ್ನು ಕೆಲ ತಿಂಗಳುಗಳಲ್ಲಿಯೇ ಸುರಕ್ಶತಾ ಕಾರಣಗಳಿಗಾಗಿ ಮುಚ್ಚಲಾಗಿತ್ತು. ಪೂರ‍್ಣ ಪ್ರಮಾಣದಲ್ಲಿ ಎಲ್ಲಾ ಸುರಕ್ಶತಾ ಕ್ರಮದ ವ್ಯವಸ್ತೆಯಾದ ನಂತರ 2003ರಲ್ಲಿ ಪುನಹ ಪ್ರಾರಂಬಿಸಲಾಯಿತು. ಬಹಳಶ್ಟು ಪ್ರವಾಸಿಗರು ಕೆಲವೇ ಸೆಕೆಂಡುಗಳಲ್ಲಿ, ನೆಲಕ್ಕೆ ಅಪ್ಪಳಿಸುವಂತೆ ದುಮುಕುವ ರೋಚಕ ಅನುಬವವನ್ನು ಅನುಬವಿಸಲು ಹಾತೊರೆಯುತ್ತಾರೆ. ಅದಕ್ಕಾಗಿ ಮತ್ತೆ ಮತ್ತೆ ಮೇಲಕ್ಕೆ ಹೋಗಿ ಬರುವುದೂ ಸಾಮಾನ್ಯವೇ.

ಅನೇಕ ಹಿನ್ನಡೆಗಳನ್ನು ಕಂಡರೂ ಜಗದ್ವಿಕ್ಯಾತವಾದ ಈ ಏರಿಳಿಯ ಅನುಬವವನ್ನು ಪಡೆಯಲು ವಿಶ್ವದಾದ್ಯಂತ ಪ್ರವಾಸಿಗರು ವರ‍್ಶ ಪೂರ‍್ತಿ ಇಲ್ಲಿಗೆ ಬರುತ್ತಿರುತ್ತಾರೆ.

( ಮಾಹಿತಿ ಮತ್ತು ಚಿತ್ರ ಸೆಲೆ: wonderfulengineering.com, dailymail.co.uk )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Suresh kulkarni says:

    Uttamavagide

ಅನಿಸಿಕೆ ಬರೆಯಿರಿ: