ಆಸೆ ಎಂಬ ಕುದುರೆ ಏರಿ…

– ವೆಂಕಟೇಶ ಚಾಗಿ.

ಸುಕ-ದುಕ್ಕ, happiness-sadnees

ಆಸೆ ಎಂಬುದು ಯಾರಿಗಿಲ್ಲ ಹೇಳಿ. ಆಸೆ ಇಲ್ಲದ ವ್ಯಕ್ತಿಯೇ ಇಲ್ಲ ಎಂದೆನಬಹುದು. ಬೂಮಿಯ ಮೇಲಿನ ಪ್ರತೀ ಜೀವಿಗೂ ದೇವರು ಕೊಟ್ಟ ಗುಣಗಳಲ್ಲಿ ಆಸೆ ಎಂಬುದೂ ಒಂದು. ಪ್ರತಿಯೊಬ್ಬ ವ್ಯಕ್ತಿಗೂ ಚೆನ್ನಾಗಿ ಜೀವಿಸಬೇಕೆಂಬ ಆಸೆ. ತಾನು ಬಯಸಿದ್ದೆಲ್ಲ ಸಿಗಬೇಕೆಂಬ ಆಸೆ.  ಒಳ್ಳೆಯ ದುಡಿಮೆ, ಮನೆ,  ಸಂಗಾತಿ, ಮಕ್ಕಳು – ಹೀಗೆ ಹಲವಾರು ಆಸೆಗಳು ಪ್ರತಿಯೊಬ್ಬರ ಬದುಕಿನಲ್ಲೂ ಇಣುಕುತ್ತವೆ, ಅಲ್ಲವೇ?

ಮನುಶ್ಯನ ಬೆಳವಣಿಗೆಯಲ್ಲಿ ವಯೋಮಾನಕ್ಕೆ ತಕ್ಕ ಹಾಗೆ ಆಸೆಗಳು ಮೂಡುವುದು ಸಾಮಾನ್ಯ. ಆಸೆ ಇಲ್ಲದೆ ಬದುಕುವುದಕ್ಕೆ ಸಾದ್ಯವೇ? ಕಂಡಿತ ಇಲ್ಲ. ಆಸೆ ಇರುವುದರಿಂದಲೇ ಮನುಶ್ಯ ಬೂಮಿಯ ಮೇಲೆ ಬದುಕನ್ನು ಕಟ್ಟಿಕೊಳ್ಳುತ್ತಾನೆ. ತನ್ನ ಆಸೆಗಳ ಈಡೇರಿಕೆಗಾಗಿ ಗುರಿಗಳನ್ನು ಹಾಕಿಕೊಳ್ಳುತ್ತಾನೆ. ಶ್ರಮಪಟ್ಟು ತನ್ನ ಆಸೆಯನ್ನು ಈಡೇರಿಸಿಕೊಂಡಾಗಲೇ ಅವನಿಗೆ ತ್ರುಪ್ತಿ.

ಚಿಕ್ಕ ಮಕ್ಕಳಿಗೆ ಅಂಗಡಿಯ ತಿಂಡಿ-ತಿನಿಸುಗಳನ್ನು ತಿನ್ನುವ ಆಸೆಯಿಂದಾಗಿ ಹಿರಿಯರನ್ನು ಕಾಡಿ-ಬೇಡಿ, ಹಿರಿಯರು ಹೇಳುವ ಕೆಲಸಗಳನ್ನು ಮಾಡಿ ಅವರ ಮನವೊಲಿಸಿ ತಮ್ಮ ಆಸೆಯನ್ನು ಈಡೇರಿಸಿಕೊಂಡಾಗಲೇ ಅವರಿಗೆ ಸಮಾದಾನ. ಯೌವನದ ವಯಸು ಜೀವನ ರೂಪಿಸಿಕೊಳ್ಳುವ ಹಂತ. ಚೆಂದವಾಗಿ ಕಾಣಬೇಕೆನ್ನುವ ಆಸೆ, ಗೆಳೆಯರೊಡಗೂಡಿ ಸುತ್ತಾಡುವ, ಬೇರೆ ಬೇರೆ ತಾಣಗಳನ್ನು ನೋಡುವ ಆಸೆ. ಮದುಮೇಹ ಇದ್ದರೂ ಸಿಹಿ ತಿನ್ನುವ ಆಸೆ. ವ್ರುದ್ಯಾಪ್ಯದಲ್ಲಿ ಮಕ್ಕಳು ಮೊಮ್ಮಕ್ಕಳು ಕುಟುಂಬದೊಂದಿಗೆ ನೆಮ್ಮದಿಯ ಜೀವನ ಕಳೆಯುವ ಆಸೆ. ಹೀಗೆ ಆಸೆಗಳ ಪಟ್ಟಿ ಮಾಡುತ್ತಾ ಹೋದರೆ ಅದಕ್ಕೆ ಕೊನೆಯೇ ಇಲ್ಲದಾಗಿ ಬಿಡುತ್ತದೆ.

ಆಸೆ ಪ್ರತಿಯೊಬ್ಬರಿಗೂ ಸಾಮಾನ್ಯ.  ಆಸೆ ಎಂಬುದು ಅತೀ ಆಗಬಾರದು ಎಂಬ ಹಲವಾರು ಕತೆಗಳನ್ನು ಚಿಕ್ಕ ವಯಸ್ಸಿನಿಂದಲೂ ಕೇಳುತ್ತಾ ಬಂದಿದ್ದೇವೆ. ಆಸೆಯೇ ದುಕ್ಕಕ್ಕೆ ಮೂಲ ಎಂಬ ಮಾತನ್ನು ಕೇಳಿ ಕೇಳಿ, ಅದು ಮನಸ್ಸಿನಲ್ಲಿ ಅಚ್ಚಳಿಯದಂತಾಗಿರುತ್ತದೆ. ಆಸೆಯ ಬಗ್ಗೆ ಯಾರಾದರೂ ಮಾತನಾಡಲು ಹೇಳಿದಾಗ ಗಂಟೆಗಟ್ಟಲೆ ಮಾತನಾಡುತ್ತೇವೆ. ಉಚಿತವಾಗಿ ಆಸೆಯ ಕುರಿತು ಇತರರಿಗೆ ಬುದ್ದಿವಾದ, ಉಪದೇಶ ಹೇಳುತ್ತೇವೆ. ಆದರೆ ನಾವು ಆಸೆಯನ್ನು ಬಿಡುವುದಿಲ್ಲ.

ಆಸೆಯ ಸೆಳೆತಕ್ಕೆ ಒಳಗಾಗಿ “ಆಸೆಯೇ ದುಕ್ಕಕ್ಕೆ ಮೂಲ” ಎಂಬುದನ್ನು ಮರೆತುಬಿಡುತ್ತೇವೆ. ಉಪದೇಶ ಹೇಳಿದ ನಾವೇ ದುಕ್ಕಿತರಾಗುತ್ತೇವೆ. ಆಸೆಗಳಿಂದ ಏಳಿಗೆಯನ್ನೂ ಹೊಂದಬಹುದಲ್ಲವೇ? ಆದ್ದರಿಂದ ಆಸೆಗಳು ಇರಬಾರದಂತಲ್ಲ. ಆಸೆಗಳಿರಬೇಕು, ಆದರೆ ಅತಿ ಆಸೆಯಿಂದ ಕೆಡುಕು ಕಟ್ಟಿಟ್ಟ ಬುತ್ತಿ. ಆ ಬುತ್ತಿಯನ್ನು ತಿನ್ನಲೇಬೇಕಾಗುವುದು.

ಆಸೆ ನಮ್ಮ ಜೀವನಕ್ಕೆ, ಉತ್ತಮ ಸಮಾಜಕ್ಕೆ ಒಳ್ಳೆಯ ಅಡಿಪಾಯವಾಗಬೇಕೇ ಹೊರತು ಮುಳುವಾಗಬಾರದು. ಆಗ ಮಾತ್ರ ನಮ್ಮ ಬದುಕಿಗೆ ಸಾರ‍್ತಕತೆ ಇರುತ್ತದೆ.

(ಚಿತ್ರ ಸೆಲೆ: sciencenews.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: