ಇನಿಯನಗಲಿಕೆಯಲಿ
– ರಶ್ಮಿ ಹೆಗಡೆ.
ಎತ್ತೆತ್ತಲೂ ಕಡುಗತ್ತಲಾವರಿಸಿದಂತೆ
ಮೂಕವೇದನೆಗೆ ಇತಿಮಿತಿ ಇಲ್ಲದಂತೆ
ಮಿಂಚಿನಾರ‍್ಬಟಕ್ಕೆ ಕಣ್ಣು ಕಿವಿಗಳು ಸ್ತಬ್ದವಾದಂತೆ
ಬಾಸವಾಗುತಿದೆ ಇಂದೇಕೋ ಕಾಣೆ ನಾ
ಬರಹೇಳು ಸಕಿ ನನ್ನಿನಿಯನ ನಾನಿದ್ದಲ್ಲಿಗೆ
ಮುಂಗಾರಿನ ಎರಡು ಹನಿಗಳಿಗೆ ಕಾದಂತೆ ಚಾತಕವು
ಅದರಗಳು ಮಿಡಿಯುತಿವೆ ನಿನ್ನೆರೆಡು ಮುತ್ತಿನ ಹನಿಗಳಿಗೆ
ಇಂದು ಬರುವನೋ ಅಂದು ಬರುವನೋ ಎಂದು
ತವಕಿಸುತ ಮುಚ್ಚದಾಗಿವೆ ಕಣ್ಣ ರೆಪ್ಪೆಗಳು
ನಡೆದು ಸೋತಿವೆ ಒಂಟಿ ಹೆಜ್ಜೆಗಳು
ಬಾ ಇನಿಯ ನನ್ನೆಡೆಗೆ ಪ್ರೇಮ ಪಯಣಿಗನಾಗಿ
ಅತ್ತು ಕೆಂಪಾಗಿವೆ ನೀ ಮುತ್ತಿಟ್ಟ ನಯನಗಳು
ಕೈಯಲ್ಲಿ ಕಸುವಿಲ್ಲ, ಮೊಗದಲ್ಲಿ ಸೊಗಸಿಲ್ಲ
ಜೀವವಿಲ್ಲ ನೀನೆಂದೋ ಬೆರಳಾಡಿದ ಕೇಶಗಳಲಿ
ಬಾ ಇನಿಯ ನಿನ್ನವಳೆಡೆಗೆ ಕಾಡಿಸದೆ ಪೀಡಿಸದೆ
ನೀನಿಲ್ಲವೆಂಬ ನೋವು ವಿರಹವಾಗಿ ಕಾಡುತಿದೆ
ನೊಂದು ಬೆಂದು ಹಂಬಲಿಸಿಹೆ ಮನವಿಂದು
ಮರೀಚಿಕೆಯಂತೆ ಕಾಡಿ, ನಕ್ಕು, ಚೇಡಿಸುತಿವೆ ನೆನಪುಗಳು
ನಿಮಿಶ ವರುಶವಾಗಿ, ವರುಶ ಯುಗವಾಗಿ
ಮುನ್ನಡೆಯದೆ ನಿಂತಿವೆ ಸುಮ್ಮನೆ ಮೌನತಾಳಿ
ಉಸಿರಿನಲಿ ಹಸಿರಿಲ್ಲ ಹೆಜ್ಜೆಗಳ ಗುರುತಿಲ್ಲ
ತಿಂಗಳಾವರಿಸಿ ಕಳೆದ ವಸಂತ, ನೀನಿಲ್ಲ ನಿನ್ನ ಸದ್ದಿಲ್ಲ
ಕಳೆದುಹೋದ ಪ್ರೀತಿಯ ಕ್ಶಣಗಳನು
ಮತ್ತೆ ಮರುಕಳಿಸಲು ಬಾ ನನ್ನಿನಿಯ
ನನ್ನೆಡೆಗೆ ಬಾ
(ಚಿತ್ರ ಸೆಲೆ: pixabay.com)
ಮನಮುಟ್ಟುವ ಕವನ
ಧನ್ಯವಾದಗಳು ಮೋಹನ್ ಕುಮಾರ್ ಅವರಿಗೆ….ರಶ್ಮಿ ಹೆಗಡೆ