‘ಕೋಪ ಬಿಡೋಣ, ಪ್ರೀತಿ ಹಂಚೋಣ’

– ಕೆ.ವಿ.ಶಶಿದರ.

ಕೋಪ-ಪ್ರೀತಿ, Anger-Love

ಕೋಪ, ಮಾನವರಲ್ಲಿ ತುಂಬಾ ಸಾಮಾನ್ಯವಾದ ಬಾವನೆ/ಗುಣ. ಜೀವನದಲ್ಲಿ ಒಮ್ಮೆಯಾದರೂ ಕೋಪಮಾಡಿಕೊಳ್ಳದ ವ್ಯಕ್ತಿಯನ್ನು ನೋಡಲು ಸಾದ್ಯವಿಲ್ಲ ಎಂದೆನಿಸುತ್ತದೆ.. ಜೀವನ ಪರ‍್ಯಂತ ತಪಸ್ಸು ಮಾಡಿ, ಎಲ್ಲಾ ದೇವರುಗಳಿಂದಲೂ ಸೈ ಎನಿಸಿಕೊಂಡ ದೂರ‍್ವಾಸ ಮಹಾ ಮುನಿಗೂ ಕೂಡ ಕೋಪವನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಸಾದ್ಯವಾಗಲಿಲ್ಲವಂತೆ. ಹಾಗಾಗಿ ಮೂಗಿನ ತುದಿಯಲ್ಲಿ ಕೋಪವಿರುವವರನ್ನು ದೂರ‍್ವಾಸ ಮುನಿ ಎಂಬ ಅಡ್ಡ ಹೆಸರಿನಿಂದ ಕರೆಯುವುದು ರೂಡಿಯಾಗಿದೆ.

ಕೋಪ ಅಶ್ಟು ಸಾರ‍್ವತ್ರಿಕ. ಕೆಲವು ಸಂದರ‍್ಬಗಳಲ್ಲಿ ಮಾನವನ ಕೋಪ ಆರೋಗ್ಯಕರವಾದ ಸಾಮಾನ್ಯ ಬಾವನೆ. ಆದರೆ ಇದು ಹಾನಿಕಾರಕವಾದರೆ ಅತವಾ ನಿಯಂತ್ರಣ ತಪ್ಪಿ ಹೋದರೆ, ವ್ಯತಿರಿಕ್ತ ಪರಿಣಾಮ ಶತಸಿದ್ದ. ವೈಯುಕ್ತಿಕ ಜೀವನ ಅತವಾ ವ್ರುತ್ತಿ ಜೀವನದ ಮೇಲೆ ಅನಾರೋಗ್ಯಕರ ಪರಿಣಾಮ ಬೀರುವಂತಹ ಗಂಬೀರ ಸಮಸ್ಯೆಗಳಿಗೆ ಕೋಪ ಕಾರಣವಾಗಲೂಬಹುದು.

ಕೋಪ ಯಾರನ್ನಾದರೂ ಆವರಿಸಿಕೊಂಡರೆ ಅಂತವರು ಬೇರೆಯವರ ದ್ರುಶ್ಟಿಯಲ್ಲಿ ಊಹಿಸಲಾಗದ ವ್ಯಕ್ತಿತ್ವದ ವ್ಯಕ್ತಿಯಾಗುತ್ತಾರೆ. ಇದು ಯಾರಿಗೆ ಬೇಕಾದರೂ ಆಗಬಹುದು. ಕೋಪಿಸಿಕೊಂಡವರಿಗೆ ಕೋಪ ಇತರರ ಉತ್ತೇಜನದಿಂದ ಬಂದಿದೆ ಅನಿಸಬಹುದು, ಆದರೆ ಅದು ತಪ್ಪು ತಿಳುವಳಿಕೆ. ಇದು ನಾವು ಯೋಚಿಸುವ ಪರಿ ಮತ್ತು ನಮಗೆ ಮಾತ್ರ ಸಂಬಂದಿಸಿದೆ ಎಂದು ತಿಳಿದರೆ ಕ್ಶೇಮಕರ. ನಾವು ಮಾಡುವ ಪ್ರತಿಯೊಂದು ಕೆಲಸಕ್ಕೂ ನಾವೇ ಜವಬ್ದಾರರಾಗಿರುತ್ತೇವೆ. ಇದರ ಪರಿಣಾಮಕ್ಕೆ ನಾವೇ ಹೆಗಲು ಕೊಡಬೇಕೆ ಹೊರತು ಇತರರನ್ನು ದೂಶಿಸಿದಲ್ಲಿ ಯಾವುದೇ ಪ್ರಯೋಜನ ಇಲ್ಲ.

ಅನವಶ್ಯಕವಾಗಿ ದೂಶಿಸಿದರೆ ಅತವಾ ಮಾಡಿದ ತಪ್ಪನ್ನು ಪದೇ ಪದೇ ಎತ್ತಿ ತೋರಿ ಹೀಯಾಳಿಸಿದರೆ ಯಾರಾದರೂ ಕೋಪಗೊಳ್ಳುವುದು ಸ್ವಾಬಾವಿಕ. ಇದು ಕೀಳರಿಮೆಯಿಂದ ಆಗಬಹುದು ಅತವಾ ಆ ಸಮಯದ ವಾತಾವರಣದ ಪ್ರಚೋದನೆಯಿಂದ ಆಗಬಹುದು. ಕೋಪವನ್ನು ಹೇಗೆ ಎದುರಿಸಬೇಕು ಎಂದು ತಿಳಿಯಬೇಕಾದರೆ ಈ ದ್ರುಶ್ಟಾಂತವನ್ನು ಓದಿ. ಇದರಿಂದ ಕೋಪದ ಬಗೆಗಿನ ದ್ರುಶ್ಟಿಕೋನ ಬದಲಾಗಬಹುದು.

ಬಿಸಿಲಿನ ದಿನ. ಬುದ್ದ ಒಂದು ಸಣ್ಣ ಹಳ್ಳಿಯಲ್ಲಿ ಬಿಕ್ಶಾಟನೆಗೆ ಹೊರಟಿದ್ದ. ಇದ್ದಕ್ಕಿದ್ದಂತೆ, ಒಬ್ಬ ಯುವಕ ಅವನ ಎದುರು ಹಾಜರಾದ. ತನ್ನ ಹಳ್ಳಿಯಲ್ಲಿ ಬುದ್ದ ಬಿಕ್ಶೆ ಬೇಡುವುದಕ್ಕೆ ಆಕ್ಶೇಪ ವ್ಯಕ್ತ ಪಡಿಸಿದ್ದೇ ಅಲ್ಲದೆ, ‘ನೀವೇನು ಲೋಕೋದ್ದಾರಕ್ಕಾಗಿ ಹುಟ್ಟಿದವರೆ? ವಿಶ್ವಕ್ಕೆ ಬೋದಿಸಲು ನೀವು ಯಾರು? ಜಗತ್ತಿನ ಅಸಂಕ್ಯಾತ ಜನರಂತೆ ನೀವೂ ಒಬ್ಬರು. ಅನ್ಯಾಯವಾಗಿ ಇಲ್ಲ ಸಲ್ಲದ ವಿಶ ಬೀಜ ಬಿತ್ತಿ, ಸಾಮಾನ್ಯರ ಮನಸ್ಸನ್ನು ಹಾಳು ಮಾಡುತ್ತಿರುವವರು ನೀವು’ ಎಂದು ವಾಚಾಮಗೋಚರವಾಗಿ ಏನೆಲ್ಲಾ ಹೀಯಾಳಿಸಿದರೂ ಬುದ್ದದೇವ ಮಾತ್ರ ಕೊಂಚವೂ ವಿಚಲಿತನಾಗಲಿಲ್ಲ. ಸ್ತಿತಪ್ರಗ್ನನಂತೆ ಅದೇ ಬಾವವನ್ನು ಹೊಂದಿದ್ದ.

ಯುವಕನ ಹೀಯಾಳಿಕೆಯ ಮಾತೆಲ್ಲವೂ ಮುಗಿದ ನಂತರ ಬುದ್ದ ಯುವಕನನ್ನು ಉದ್ದೇಶಿಸಿ ‘ಯುವಕನೇ, ನನ್ನ ಒಂದು ಸಣ್ಣ ಪ್ರಶ್ನೆಗೆ ಉತ್ತರ ನೀಡುವಶ್ಟು ಸಹನೆ ಇದೆಯೇ?’ ಎಂದು ಅವನತ್ತ ನೋಡಿದ.

ಈ ಬೈರಾಗಿಯ ಪ್ರಶ್ನೆ ನನಗೆ ಎಶ್ಟರ ಮಟ್ಟಿನದು ಎನ್ನುತ್ತಾ ಮುಕ ಸಿಂಡರಿಸಿಕೊಂಡು ‘ಕೇಳಿ’ ಎನ್ನುವಂತೆ ಯುವಕ ಅವರತ್ತ ನೋಡಿದ.

ಬುದ್ದ ತನ್ನ ವರ‍್ಚಸ್ಸಿಗೆ ತಕ್ಕಂತ ಗಾಂಬೀರ‍್ಯದಿಂದ ‘ಉಡುಗೊರೆಯೊಂದನ್ನು ನೀನು ಕರೀದಿಸಿ ಅದನ್ನು ತಲುಪಿಸಲು ಹೋದಾಗ, ಕಾರಣವೇನಾದರೂ ಇರಬಹುದು, ಆ ವ್ಯಕ್ತಿ ಅದನ್ನು ಸ್ವೀಕರಿಸದಿದ್ದಲ್ಲಿ, ಆ ಉಡುಗೊರೆ ಯಾರಿಗೆ ಸೇರುತ್ತದೆ?’ ಎಂದು ಕೇಳಿದ.

ಯುವಕ ಯಾವುದೇ ಅಡೆತಡೆಯಿಲ್ಲದೆ ‘ಅದು ನನಗಲ್ಲದೆ ಬೇರಾರಿಗೆ ಸೇರಲಿಕ್ಕೆ ಸಾದ್ಯ? ಅದರ ಮೇಲೆ ಹಣ ಹೂಡಿ ಕರೀದಿಸಿದವನು ನಾನಲ್ಲವೆ?’ ಎಂದು ಉತ್ತರಿಸುವಂತೆಯೇ ಮರುಪ್ರಶ್ನೆ ಹಾಕಿದ.

ಯುವಕನ ಉತ್ತರ ಕೇಳಿ ಮುಗುಳ್ನಕ್ಕ ಬುದ್ದ ‘ಅದು ಸರಿ. ನಿನ್ನ ಉತ್ತರ ನೂರಕ್ಕೆ ನೂರು ಸರಿ. ನೋಡು ಯುವಕನೇ ನೀನು ಕರೀದಿಸಿದ ಉಡುಗೊರೆ ಮತ್ತು ನಿನ್ನಲ್ಲಿ ಮನೆಮಾಡಿರುವ ಕೋಪ ಎರೆಡೂ ಒಂದೆ. ನೀನು ಕೋಪದಿಂದ ನನ್ನನ್ನು ನಿಂದಿಸಿದಾಗ ನಾನು ಅದನ್ನು ಸ್ವೀಕರಿಸದೇ ಹೋದಲ್ಲಿ ಅದು ಹೋಗುವುದಾದರೂ ಎಲ್ಲಿಗೆ? ಎಲ್ಲೋ ಹೋಗದೆ ಅದರ ವಾರಸುದಾರನಾದ ನಿನ್ನಲ್ಲೇ ಉಳಿಯುತ್ತದಲ್ಲವೆ?’ ಎಂದು ತನ್ನ ಎಂದಿನ ಗಾಂಬೀರ‍್ಯದಲ್ಲಿ ಯುವಕನಿಗೆ ಮನದಟ್ಟಾಗುವಂತೆ ತಿಳಿ ಹೇಳಿದ.

‘ಇದರಿಂದ ನಿಮಗೇ ಅತ್ರುಪ್ತಿಯೇ ಹೊರೆತು ನನಗಲ್ಲ. ಆಗ ನೀವು ಏನು ಮಾಡಿತ್ತೀರಿ? ನಿಮ್ಮನ್ನು ನೀವು ಗಾಸಿಗೊಳಿಸಿಕೊಳ್ಳುತ್ತೀರಿ, ನಿಮ್ಮ ಮನಸ್ಸು ಚಂಚಲವಾಗಿ ಇಲ್ಲ ಸಲ್ಲದ ಕೆಲಸಕ್ಕೆ ಕೈ ಹಾಕುತ್ತೀರಿ. ಹೌದಲ್ಲವೆ?’

ಬುದ್ದನ ಮತು ಕೇಳಿ ಯುವಕನ ಮನ ಜಾಗ್ರುತವಾಯಿತು. ತದೇಕ ಚಿತ್ತದಿಂದ ಬುದ್ದನನ್ನೇ ದ್ರುಶ್ಟಿಸಿದ. ತನ್ನ ವ್ಯಾಕ್ಯಾನವನ್ನು ಮುಂದುವರೆಸಿದ ಬುದ್ದ, ‘ಸ್ವಯಂ ಗಾಸಿಗೊಳಿಸಿಕೊಳ್ಳುವುದನ್ನು ತಡೆಯಬೇಕಾದರೆ, ನೀವು ಮಾಡಬೇಕಾದ ಮೊದಲನೇ ಕೆಲಸ, ಕೋಪವನ್ನು ಬಿಡುವುದು ಹಾಗೂ ಅದನ್ನು ಪ್ರೀತಿಯಾಗಿ ಪರಿವರ‍್ತಿಸುವುದು. ಇದಕ್ಕೆ ಅತ್ಯಂತ ಸುಲಬ ದಾರಿ, ಕೋಪ ಬರುತ್ತದೆ ಎನ್ನುವಾಗ, ಮಾತನಾಡದೇ ಒಂದೆರೆಡು ನಿಮಿಶ ತಡೆಯಿರಿ. ಅರ‍್ದ ಕೋಪ ತಣ್ಣಗಾಗುತ್ತದೆ. ನೀವು ವಿವೇಚನಾ ಶೀಲರಾಗುತ್ತೀರಿ. ನೀವು ಯಾರನ್ನಾದರೂ ದ್ವೇಶಿಸಿದರೆ, ಮೊದಲು ಅತ್ರುಪ್ತರಾಗುವುದು ನೀವು. ಅದೇ ನೀವು ಅವರನ್ನು ಪ್ರೀತಿಸಿದಾಗ, ಅವರಲ್ಲೂ ಸಂತೋಶ ಹುಟ್ಟಿ, ಪ್ರತಿಯೊಬ್ಬರೂ ಸಂತೋಶವಾಗಿರಲು ಸಾದ್ಯ’ ಎಂದು ಯುವಕನಿಗೆ ಬುದ್ದ ತಿಳಿಹೇಳಿದ.

ಹುಟ್ಟು ಸಾವಿನ ನಡುವೆ ಇರುವ ಅಂತರ ಬಹಳ ಕಡಿಮೆ. ಆದ್ದರಿಂದ, ಈ ಅವದಿಯಲ್ಲಿ ಎಲ್ಲರನ್ನೂ ಪ್ರೀತಿಸಿ, ಪ್ರೀತಿಯನ್ನು ಹಂಚಿ, ಸಂತಸ ನಮ್ಮದಾಗಿಸಿಕೊಳ್ಳೋಣ.

ಚಿತ್ರ ಸೆಲೆ: innerself.com )  

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications