ಮನುಶ್ಯ ಮತ್ತು ನಾಯಿಗಳ ನಡುವಿನ ನಂಟು – ಏನಿದರ ಗುಟ್ಟು?

– ನಾಗರಾಜ್ ಬದ್ರಾ.

ಮನುಶ್ಯ ಬೆಕ್ಕು, ನಾಯಿ, ಕುದುರೆ ಹೀಗೆ ಹಲವಾರು ಪ್ರಾಣಿಗಳನ್ನು ಸಾಕುತ್ತಾನೆ. ಅದರಲ್ಲೂ ನಾಯಿಗಳೊಡನೆ ಮನಶ್ಯನ ಒಡನಾಟ ವಿಶೇಶವಾದುದು. ಅವನಿಗೆ ನಾಯಿಗಳೊಡನೆ ಇರುವ ನಂಟು ಬೇರೆ ಪ್ರಾಣಿಗಳೊಡನೆ ಕಾಣದು.  ಹಾಗಾದರೆ ನಾಯಿಯಲ್ಲಿ ಅಂತಹ ವಿಶಯಗಳೇನಿವೆ? ಮನುಶ್ಯನಿಗೆ ನಾಯಿಯ ಮೇಲೆ ಏಕೆ ಅಪಾರವಾದ ನಂಬಿಕೆ? ಇದರ ಬಗ್ಗೆ ತಿಳಿಯೋಣ ಬನ್ನಿ.

ಮನುಶ್ಯ ಮತ್ತು ನಾಯಿಗಳ ನಡುವಿನ ನಂಟು ಸಾವಿರಾರು ವರುಶ ಹಳೆಯದು

ಮನುಶ್ಯನ ಹಾಗೂ ನಾಯಿಯ ನಡುವಿನ ನಂಟು ತುಂಬಾ ಹಳೆಯದು. ಇದು ಸುಮಾರು 14,000  ವರ‍್ಶಗಳ ಹಳೆಯ ನಂಟು ಎಂದು ಅರಕೆಗಳಿಂದ (research) ತಿಳಿದುಬಂದಿದೆ. ಬಹಳ ವರುಶಗಳ ಹಿಂದೆ ಮನುಶ್ಯ ಕಾಡಿನಲ್ಲಿ ಬದುಕು ಸಾಗಿಸುತ್ತಿದ್ದ ಕಾಲದಲ್ಲಿ ಮನುಶ್ಯ ಮತ್ತು ನಾಯಿಯ ನಡುವಿನ ನಂಟು ಹುಟ್ಟುಪಡೆಯಿತು ಎನ್ನಲಾಗುತ್ತದೆ.

ಕಾಡಿನಲ್ಲಿದ್ದ ಮನುಶ್ಯರು ಕೊರೆಯುವ ಚಳಿಯಿಂದ ಕಾಪಾಡಿಕೊಳ್ಳಲು ಒಂದು ಜಾಗದಲ್ಲಿ ಗುಂಪಾಗಿ ಸೇರಿ ಬೆಂಕಿ ಹಚ್ಚಿ ಕಾಯಿಸಿಕೊಳ್ಳುತ್ತಿದ್ದರು. ಸಾಮಾನ್ಯವಾಗಿ ಪ್ರಾಣಿಗಳಿಗೆ ಬೆಂಕಿ ಕಂಡರೆ ಹೆದರಿಕೆ, ಅವು ಕೂಡಲೇ ಆ ಜಾಗದಿಂದ ಓಡಿ ಹೋಗುತ್ತವೆ. ಆದರೆ ಕಾಡಿನಲ್ಲಿನ ಕೆಲವೊಂದು ಪ್ರಾಣಿಗಳು ಬೆಂಕಿಗೆ ಹೆದರದೆ, ಮನುಶ್ಯರ ಹತ್ತಿರ ಬಂದು ಅವರನ್ನೇ  ನೋಡುತ್ತಾ ನಿಂತು ಕೊಳ್ಳುತ್ತಿದ್ದವು. ಕಾಡಿನ ಆ ಕೊರೆಯುವ ಚಳಿಗೆ ತತ್ತರಿಸಿದ ಅವುಗಳ ಕಣ್ಣುಗಳಲ್ಲಿ ಪ್ರೀತಿ ಹಾಗೂ ಬೆಚ್ಚನೆ ಆಸರೆಯ ಬಯಕೆ ಕಾಣಿಸುತ್ತಿತ್ತು. ಇದನ್ನು ಗಮನಿಸಿದ ಮನುಶ್ಯರು ಅವುಗಳಿಗೆ ತಮ್ಮ ಬೀಡುಗಳಲ್ಲಿ ಆಸರೆ ನೀಡಿ, ನಾಯಿ ಎಂಬ ಹೆಸರಿನಿಂದ ಕರೆದರು ಎನ್ನಲಾಗುತ್ತದೆ.

ನಾಯಿಗಳು ಮನುಶ್ಯರಿಗೆ ಬೇಟೆಯಾಡಲು ನೆರವಾಗತೊಡಗಿದವು. ಮೊದಲಿಗೆ ಇವು ಬೇಟೆಯನ್ನು ಪತ್ತೆ ಹಚ್ಚುತ್ತಿದ್ದವು, ಬಳಿಕ ಕಾಡಿನಲ್ಲಿದ್ದ ಮನುಶ್ಯರು ಬೇಟೆಯನ್ನು ಕೊಂದು, ಸ್ವಲ್ಪ ಮಾಂಸವನ್ನು ಇವುಗಳಿಗೆ ನೀಡುತ್ತಿದ್ದರು. ಹೀಗೆ ಕ್ರಮೇಣವಾಗಿ ಇಬ್ಬರ ನಡುವೆ ಒಂದು ಅಪರೂಪದ ನಂಟು ಮೂಡಿತು ಎಂದು ಹೇಳಲಾಗುತ್ತದೆ.

ಮನುಶ್ಯನೊಡನೆ ನಾಯಿಗಳು ಬೆರೆಯಲು ಅವುಗಳ ಕ್ರೊಮೊಸೋಮ್ ಕಾರಣ

ನಾಯಿಗಳು ಹೋಲಿಕೆಯಲ್ಲಿ ತೋಳಗಳಿಗೆ ಬಲು ಹತ್ತಿರ ಆಗಿದ್ದರೂ, ಕೆಲವೊಂದು ಪ್ರಮುಕ ಪೀಳಿಗಳಲ್ಲಿ(Gene) ವ್ಯತ್ಯಾಸ ಕಂಡು ಬರುತ್ತದೆ. ಮೈಟೋಕಾಂಡ್ರಿಯಲ್ ಡಿ.ಎನ್.ಎ ಗಳು (DNA) ನಾಯಿ ಹಾಗೂ ತೋಳಗಳಲ್ಲಿ ಶೇಕಡಾ 99.9 ರಶ್ಟು ಒಂದೇ ಬಗೆಯದ್ದಾಗಿವೆ. ಆದರೆ ಜೀನೋಮ್‌ಗಳಲ್ಲಿ(Genome) ಕೆಲವು ಜೀನ್ ಗಳು ನಾಯಿ ಹಾಗೂ ತೋಳಗಳಲ್ಲಿ  ಬೇರೆ ಬಗೆಯದಾಗಿದ್ದು, ಎರಡರ ನಡುವೆ ತುಂಬಾ ಪ್ರಬಲವಾದ ವ್ಯತ್ಯಾಸ ಉಂಟು ಮಾಡುತ್ತವೆ.

ಮನುಶ್ಯ ಮತ್ತು ನಾಯಿಯ ನಡುವಿನ  ನಂಟು ಗಟ್ಟಿಯಾಗಲು ಇನ್ನೊಂದು ಪ್ರಮುಕವಾದ ಕಾರಣವಿದೆ. ನಾಯಿಗಳಲ್ಲಿ ಕ್ರೋಮೋಸೋಮ್ 6 ರಲ್ಲಿ 3 ಹೆಚ್ಚು ಬೆರೆಯುವ (hyper-sociability)  ಜೀನ್ ಗಳು ಇರುವುದು ತಿಳಿದುಬಂದಿದ್ದು, ಇದು ಅವುಗಳು ಪ್ರಾಣಿ ಅತವಾ ಇತರರೊಂದಿಗೆ ಬೇಗನೇ ಬೆರೆಯಲು ಪ್ರಮುಕ ಕಾರಣವಾಗಿದೆ ಎಂದು ಹೇಳಲಾಗುತ್ತದೆ. ಅಚ್ಚರಿಯ ವಿಶಯವೆಂದರೆ  ಮನುಶ್ಯರಲ್ಲಿಯೂ ಇದೇ ಬಗೆಯ ಇತರರೊಂದಿಗೆ ಬೆರೆಯುವ ಜೀನ್ ಗಳು ಕಂಡುಬರುತ್ತವೆ. ಆದ್ದರಿಂದ ಮನುಶ್ಯನ ಹಾಗೂ ನಾಯಿಗಳ ನಡುವೆ ಅಪರೂಪದ ನಂಟು ಮೂಡಿದೆ ಎನ್ನಲಾಗುತ್ತದೆ.

ವರುಶಗಳು ಕಳೆದಂತೆ ಮನುಶ್ಯನ ಜೀವನ ಶೈಲಿ ಬದಲಾಗುತ್ತಾ ಹೋಯಿತು. ಅವನು ಕಾಡಿನ ಹೊರಗೆ ಬದುಕು ಕಟ್ಟಿಕೊಳ್ಳಲು ಹೊರಟ. ನಾಯಿಗಳು ಕೂಡ ಅವನ ಜೊತೆಗೆ ಹೊರಟವು. ಆದರೆ ಇವುಗಳ ನಿಕಟ ಸಂಬಂದಿ ಪ್ರಾಣಿಗಳಾದ ತೋಳ, ನರಿ ಮುಂತಾದವುಗಳು ಕಾಡಿನಲ್ಲಿಯೇ ಉಳಿದುಕೊಂಡವು ಎಂದು ಹೇಳಲಾಗುತ್ತದೆ.

(ಮಾಹಿತಿ ಮತ್ತು ಚಿತ್ರ ಸೆಲೆ: time.comsalon.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications