ಉರಿಲಿಂಗಪೆದ್ದಿಯ ವಚನದ ಓದು

– ಸಿ.ಪಿ.ನಾಗರಾಜ.

ವಚನಗಳು, Vachanas

ಹೆಸರು: ಉರಿಲಿಂಗಪೆದ್ದಿ

ಕಾಲ: ಕ್ರಿ.ಶ.1100—1200

ಊರು: ಹುಟ್ಟಿದ್ದು ಆಂದ್ರಪ್ರದೇಶ. ಅನಂತರ ಬಸವಣ್ಣನವರು ಇದ್ದ ಕಲ್ಯಾಣನಗರಕ್ಕೆ ಬಂದು ನೆಲಸುತ್ತಾರೆ.

ಹೆಂಡತಿ: ಕಾಳವ್ವೆ

ದೊರೆತಿರುವ ವಚನಗಳು: 358

ವಚನಗಳ ಅಂಕಿತನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

========================================================================

ಅಮೃತ ಸರ್ವರಿಗೂ
ಅಮೃತವಾಗಿಪ್ಪುದಲ್ಲದೆ
ಕೆಲಬರಿಗೆ ಅಮೃತವಾಗಿ
ಕೆಲಬರಿಗೆ ವಿಷವಾಗದು ನೋಡಾ
ಎಂತು ಅಂತೆ
ಶ್ರೀಗುರು ಸರ್ವರಿಗೆಯೂ
ಗುರುವಾಗಿರಬೇಕಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ಗುರುವಾದವನು ತನ್ನ ಬಳಿ ಬಂದ ಮಕ್ಕಳನ್ನು ಜಾತಿ/ಮತ/ಲಿಂಗ/ಸಂಪತ್ತು/ಗದ್ದುಗೆ/ಪ್ರಾಂತ್ಯದ ಹಿನ್ನೆಲೆಯಲ್ಲಿ ಒಬ್ಬರು ಮೇಲು/ಮತ್ತೊಬ್ಬರು ಕೀಳು ಎಂದು ತಾರತಮ್ಯ ಮಾಡದೆ, ಎಲ್ಲರಿಗೂ ವಿದ್ಯೆಯನ್ನು ಒಲವಿನಿಂದ ಹೇಳಿಕೊಡಬೇಕು ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

( ಅಮೃತ=ಜನಮನದ ಕಲ್ಪನೆಯಲ್ಲಿ ರೂಪುಗೊಂಡಿರುವ ಒಂದು ಬಗೆಯ ಪಾನೀಯ. ಇದನ್ನು ಕುಡಿದ ವ್ಯಕ್ತಿಗಳು ಅಮರರಾಗುತ್ತಾರೆ ಅಂದರೆ ಸಾವಿಲ್ಲದವರಾಗುತ್ತಾರೆ ಎಂಬ ದಂತಕತೆಯು ಜನಸಮುದಾಯದ ಮನದಲ್ಲಿದೆ; ಸರ್ವ=ಸಕಲ/ಎಲ್ಲ/ಸಮಸ್ತ/ಎಲ್ಲವನ್ನು ಒಳಗೊಂಡಿರುವುದು; ಸರ್ವರಿಗೂ=ಎಲ್ಲರಿಗೂ/ಸಕಲರಿಗೂ/ಸಮಸ್ತರಿಗೂ/ಇರುವ ಜನರೆಲ್ಲರಿಗೂ; ಅಮೃತ+ಆಗಿ+ಇಪ್ಪುದು+ಅಲ್ಲದೆ;

ಆಗು=ಇರು/ವರ‍್ತಿಸು; ಇಪ್ಪುದು=ಇರುವುದು; ಆಗಿರ್ಪುದು=ಆಗಿರುವುದು;

ಅಮೃತ ಸರ್ವರಿಗೂ ಅಮೃತವಾಗಿಪ್ಪುದು=ಕುಡಿದವರೆಲ್ಲರಿಗೂ ಅಮ್ರುತವು ಒಳ್ಳೆಯದನ್ನೇ ಉಂಟುಮಾಡುತ್ತದೆ;

ಅಲ್ಲದೆ=ಅದಕ್ಕೆ ಹೊರತಾಗಿ/ಬದಲಾಗಿ; ಕೆಲ=ತುಸು/ಕೊಂಚ/ಸ್ವಲ್ಪ; ಕೆಲಬರಿಗೆ=ಕೆಲವರಿಗೆ ಮಾತ್ರ; ಅಮೃತ+ಆಗಿ; ವಿಷ+ಆಗದು; ವಿಷ=ನಂಜು/ಗರಳ/ಸೇವಿಸಿದವರಿಗೆ ಸಾವನ್ನು ಉಂಟುಮಾಡುವ ವಸ್ತು; ಆಗದು=ಆಗುವುದಿಲ್ಲ; ನೋಡು=ಕಾಣು/ತಿಳಿ; ನೋಡಾ=ವಿಚಾರಿಸಿ ತಿಳಿಯುವುದು/ಆಲೋಚನೆಯನ್ನು ಮಾಡಿದಾಗ ತಿಳಿದುಬರುವ ವಾಸ್ತವ/ದಿಟ/ಸತ್ಯ;

ಕೆಲಬರಿಗೆ ಅಮೃತವಾಗಿ ಕೆಲಬರಿಗೆ ವಿಷವಾಗದು=ಜನರೆಲ್ಲರೂ ಅಮ್ರುತವನ್ನು ಕುಡಿದಾಗ, ಅದು ಕೆಲವರ ಪಾಲಿಗೆ ಅಮ್ರುತವಾಗಿ , ಮತ್ತೆ ಕೆಲವರ ಪಾಲಿಗೆ ನಂಜಾಗುವುದಿಲ್ಲ. ಅಂದರೆ ಎಲ್ಲರಿಗೂ ಒಂದೇ ರೀತಿಯಲ್ಲಿ ಒಳಿತನ್ನುಂಟು ಮಾಡುತ್ತದೆ;

ಎಂತು=ಯಾವ ರೀತಿಯಲ್ಲಿ/ಬಗೆಯಲ್ಲಿ; ಅಂತೆ=ಅಂತೆ/ಹಾಗೆ;

ಶ್ರೀ+ಗುರು; ಶ್ರೀ=ಮಂಗಳಕರವಾದ/ಒಳಿತನ್ನುಂಟು ಮಾಡುವ/ಗುರುಹಿರಿಯರಿಗೆ ಒಲವು ನಲಿವನ್ನು ಸೂಚಿಸುವಾಗ ಬಳಸುವ ಪದ; ಗುರು=ತನ್ನ ಬಳಿ ಬಂದ ವ್ಯಕ್ತಿಗಳಿಗೆ/ಗುಡ್ಡರಿಗೆ ತಿಳುವಳಿಕೆಯನ್ನು ನೀಡಿ, ಅವರ ನಡೆನುಡಿಗಳನ್ನು ತಿದ್ದಿ ತೀಡಿ, ಅವರನ್ನು ಒಳ್ಳೆಯ ಬಗೆಯಲ್ಲಿ ರೂಪಿಸುವ ವ್ಯಕ್ತಿ; ಶ್ರೀಗುರು=ಗುಡ್ಡರಿಗೆ ಅರಿವನ್ನು ನೀಡಿ ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸುವ ವ್ಯಕ್ತಿ; ಸರ್ವರಿಗೆಯೂ=ಎಲ್ಲರಿಗೂ/ಸಕಲರಿಗೂ/ಯಾರೊಬ್ಬರನ್ನು ಹೊರತುಪಡಿಸದೆ/ಎಲ್ಲರನ್ನೂ ಒಳಗೊಂಡು; ಗುರು+ಆಗಿ+ಇರಬೇಕು+ಅಯ್ಯಾ; ಅಯ್ಯಾ=ಇತರರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ;

ಶ್ರೀಗುರು ಸರ್ವರಿಗೂ ಗುರುವಾಗಿರಬೇಕು=ತನ್ನ ಬಳಿ ಬಂದ ಮಕ್ಕಳೆಲ್ಲರನ್ನೂ/ವ್ಯಕ್ತಿಗಳೆಲ್ಲರನ್ನೂ ಸಮಾನವಾದ ಒಲವು ನಲಿವಿನಿಂದ ಕಂಡು, ಎಲ್ಲರ ಏಳಿಗೆಗಾಗಿ ಮಿಡಿಯುವ ಮನಸ್ಸನ್ನು ಮತ್ತು ಎಲ್ಲರ ವ್ಯಕ್ತಿತ್ವವನ್ನು ಒಳ್ಳೆಯ ರೀತಿಯಲ್ಲಿ ರೂಪಿಸುವ ಹೊಣೆಗಾರಿಕೆಯನ್ನು ಹೊಂದಿರಬೇಕು; ಉರಿಲಿಂಗಪೆದ್ದಿ ಪ್ರಿಯ ವಿಶ್ವೇಶ್ವರಾ=ಶಿವ/ಈಶ್ವರ/ದೇವರ ಹೆಸರು/ವಚನಕಾರನ ವಚನಗಳ ಅಂಕಿತನಾಮ )

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: