ನೀನೇಕೆ ಇಶ್ಟು ಸುಂದರವಾಗಿದ್ದೀ?

– ಮಾರಿಸನ್ ಮನೋಹರ್.

girl, evening, love, ಒಲವು, ಸಂಜೆ

ಈ ಹ್ರುದಯಕೆ ನೀನು ಬೇಕು
ನೀನಿಲ್ಲದಿರುವಾಗ ತಳಮಳ
ಕಂಡ ಹೊತ್ತಿಗೆ ಅರೆಗಳಿಗೆ ಸುಸ್ತು
ನೀನೇಕೆ ಇಶ್ಟು ಸುಂದರವಾಗಿದ್ದೀ?

ನೀನು ಚುಕ್ಕಿಯ ಹಾಗೆ ಇರುವೆ
ದೂರ ಹೋದಶ್ಟು ಚೆನ್ನಾಗಿ ಕಂಡೆ
ಹತ್ತಿರ ಬಂದಶ್ಟು ನನಗೆ ಮುದ
ಬೆಳದಿಂಗಳು ತುಂಬಿಕೊಂಡಿತು

ತುಂಟ ಮಿಂಚುಹುಳಗಳ ಕಾಲುಕಟ್ಟಿ
ಅವುಗಳನ್ನು ಪೋಣಿಸಿದ್ದೇನೆ
ಹ್ರುದಯದ ಸುತ್ತಮುತ್ತ ನೀನು
ಬರುವುದ ಕಾದು ನನ್ನ ಬೈಯುತಿವೆ

ಇದು ಕೇವಲ ಇಶ್ಟವಲ್ಲ
ಇದು ಕೇವಲ ಸೆಳೆತವಲ್ಲ
ಬಂದವಿದು ಬಿಡಿಸಲಾಗದು
ನಲುಮೆಯಿದು ಹೇಳಲಾಗದು
ಅಗಲಿಕೆಯಿದು ತಾಳಲಾಗದು
ನೀನೇಕೆ ಇಶ್ಟು ಸುಂದರವಾಗಿದ್ದೀ?

ಹೊತ್ತುಮುಳುಗುವಾಗ ಕೆಂಪು ನೀಲಿ ಅರಿಶಿನ
ಆಗಸದಲ್ಲಿ ಎಲ್ಲಿ ನೋಡಿದರಲ್ಲಿ ನೀನೇ
ಹಕ್ಕಿಗಳು ಹಿಂದಿರುಗಿವೆ, ನೀನು ಬರಬಾರದೇಕೆ?
ನನ್ನ ಜೋಡಿಯ ಬಗ್ಗೆ ಅವುಗಳಿಗೇನು ಹೇಳಲಿ?
ಮರುಕಪಡುತ್ತಿವೆ ಬೆಳ್ಳಕ್ಕಿ ಸಾಲು, ಗುಬ್ಬಚ್ಚಿ ಹಿಂಡು

(ಚಿತ್ರ ಸೆಲೆ: eyewillnotcry.wordpress.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: