ಕವಿತೆ: ಯಜಮಾನ

– ವೆಂಕಟೇಶ ಚಾಗಿ.

ರೈತ, farmer

ಸುರಿವ ಬಿಸಿಲ ಮಳೆಯಲಿ
ನೊಂದು ಬೆಂದು ಚಲದಿಂದಲಿ
ಬೆವರ ಹೊಳೆಯಂತೆ ಹರಿಸಿ
ಬೊಬ್ಬೆ ಎದ್ದ ಕಾಲುಗಳು
ಮಣ್ಣ ಮೆತ್ತಿಕೊಂಡ ಮೈ ಕೈಗಳು
ಎಳ್ಳಶ್ಟು ಸುಕಕೆ ಮತ್ತಶ್ಟು ದುಡಿತ
ಮತ್ತೆ ತಪ್ಪಲಿಲ್ಲ ಸಾಲದ ಹಿಡಿತ

ನೊಗ ಹೊತ್ತ ಎತ್ತುಗಳು ಜೊತೆಗೆ
ಸಂಸಾರದ ಸೊಗ ಹೆಗಲ ಸುತ್ತು
ಅನಿಶ್ಟ ಅಂದಕಾರರದ ದಾತರು
ಸ್ವಹಿತಾಸಕ್ತಿ ಕಾರುವ ಕ್ರೂರಿಗಳು
ಹೊಟ್ಟೆ ಬಟ್ಟೆಯ ಕಟ್ಟಿ ಕೂಡಿಟ್ಟರೂ
ಮತ್ತದೇ ಕುಣಿಕೆಗೆ ಕೊರಳೊಡ್ಡಿಸಿಹರು
ಸಾಲದ ಶೂಲದಿಂ ಇರಿಯುತಿಹರು

ಸುಕ್ಕು ಗಟ್ಟಿದ ಚರ‍್ಮ, ಕುಳಿ ಕಂಡ ಕಣ್ಣು
ಅಲ್ಪ ಸ್ಪಲ್ಪ ಸ್ವತ್ತಿನಲಿ ಬರೀ ತಲೆಸುತ್ತು
ಅದಾವುದೋ ಕನಸುಗಳ ಸಾಕಾರಕೆ
ನೂರಾರು ಕನಸುಗಳ ಹಿರಿದು ಕೊಂದು
ಮತ್ತೆ ಮತ್ತೆ ಅದೇ ದುಡಿತ ತುಡಿತ ಮಿಡಿತ
ನನ್ನವರ ನಗುವಿನ ಹಸಿರಿಗೆ ಮತ್ತದೇ ಜಪ
ನನ್ನೊಂದಿಗೆ ಅದೆಶ್ಟೋ ನೋವು, ಹೊರಗೆ ನಗು

ಅವರ ಬಯಕೆಗಳು ಅವೆಶ್ಟೋ
ನನ್ನವರ ಕಾರ‍್ಯಗಳು ಮೊದಲು
ನನ್ನ ಮನದೊಳಗಿನ ಮಾತುಗಳು
ಸುಟ್ಟು ಚಿನ್ನವಾಗಿ ಬರಬೇಕು ಅಶ್ಟೆ
ಸಾಲದ ಬಾರಕೆ ಸೊರಗಿದರೂ ಚಿಂತೆ
ಚಿತೆ ಏರುವ ತನಕ ಬಿಡಲಾರೆ ಈ ಸಂತೆ

(ಚಿತ್ರ ಸೆಲೆ: finalreport.in)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications