“ಮಹಿಳೆ ನಿನ್ನಿಂದಲೇ ಈ ಇಳೆ”

ಅಶೋಕ ಪ. ಹೊನಕೇರಿ.

ಹೆಣ್ಣು ಎಂದೊಡನೆ ನನಗೆ ನನ್ನ ಅಮ್ಮನೇ ಕಣ್ಣು ಮುಂದೆ ಬರುವಳು. ಅಮ್ಮನೇ ನನಗೆ  ಸ್ಪೂರ‍್ತಿ. ನಾವೆಲ್ಲ ಸಣ್ಣವರಿದ್ದಾಗ ನಮಗೆ ಎಶ್ಟೇ ಬಡತನವಿದ್ದರು, ಸಂಸಾರದಲ್ಲಿ ಸಾವಿರ ತೊಂದರೆಗಳಿದ್ದರೂ ಮಕ್ಕಳ ಗಮನಕ್ಕೆ ಬಾರದ ಹಾಗೆ ಅವನ್ನೆಲ್ಲಾ ನಿಬಾಯಿಸುವ ಕಲೆ ನಮ್ಮ ಅಮ್ಮನಿಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಹೆತ್ತಮ್ಮ ನನಗೆ ದೇಶ ಆಳುವ ರಾಣಿಯಂತೆ ತೋರುತಿದ್ದಳು. ಗಟ್ಟಿತನ, ದೈರ‍್ಯ, ವಾತ್ಸಲ್ಯ – ಎಲ್ಲವನ್ನೂ ನಾನು ನನ್ನ ಅಮ್ಮನಲ್ಲಿ ಕಂಡೆ.

ಆಕೆ ಓದಿದ್ದು ಮೂರನೆ ತರಗತಿಯಾದರೂ ಆಕೆಯ ಓದುವ ಹುಚ್ಚಿಗೆ ನಾನೇ ಬೆರಗಾಗಿದ್ದೇನೆ. ಯಾವುದೇ ಪುಸ್ತಕ, ಮ್ಯಾಗಜೀನ್, ಕತೆ, ಕಾದಂಬರಿ ಸಿಗಲಿ, ಪುರುಸೊತ್ತು ಮಾಡಿಕೊಂಡು ಓದಿಯೇ ತೀರಬೇಕೆಂಬ ಹಂಬಲ ಆಕೆಯದು. ನಮ್ಮ ಗ್ರಾಮದಿಂದ ಮೂರು ಕಿಲೋ ಮೀಟರ್ ದೂರದ ಪುಟ್ಟ ಗ್ರಂತಾಲಯದ ಸದಸ್ಯತ್ವ ಪಡೆದು, ಸಮಯ ಸಿಕ್ಕಾಗ ಹೋಗಿ ಪುಸ್ತಕ ತಂದು ಓದುವ ಅಮ್ಮನ ಹವ್ಯಾಸ ನನಗೆ ದಂಗು ಬಡಿಸಿತ್ತು. ಕಾರಂತ, ಕುವೆಂಪು, ಬೈರಪ್ಪ, ಅನಕ್ರು, ತರಾಸು, ಇಂದಿರಾ, ಸಾಯಿಸುತೆ – ಹೀಗೆ ಅವರ ಓದುವ ಯಾದಿಯಲ್ಲಿ ಯಾವ ಕಾದಂಬರಿಕಾರರು ಕತೆಗಾರರು ಉಳಿದಿಲ್ಲ.

ನಮ್ಮ ಮೊದಲ ಹಂತದ ಅತ್ಯುತ್ತಮ ಶಿಕ್ಶಕಿ ಎಂದರೆ ಅದು ನಮ್ಮ ಅಮ್ಮನೇ. ಕನ್ನಡದ ಒತ್ತಕ್ಶರಗಳನ್ನು ಸರಿಯಾಗಿ ಬರೆಯಲು ಹೇಳಿಕೊಟ್ಟವಳು ನಮ್ಮ ಅಮ್ಮನೇ. ಒತ್ತಕ್ಶರಗಳನ್ನು ಬರೆಯುವುದು ತಪ್ಪಿದಾಗ ಎಶ್ಟೋ ಬಾರಿ ಅಮ್ಮನ ಕೈಯಿಂದ ಹೊಡೆತಗಳು ಬಿದ್ದಿದ್ದಾವೆ. ಹಾಗಾಗಿ ನಮಗೆ ಮೊದಲ ಹಂತದ ಕನ್ನಡ ಅಕ್ಶರ ಕಲಿಕೆಯಲ್ಲಿ ಆಕೆ ಕಟೋರಾಣಿ. ಮಕ್ಕಳ ಓದುವಿಕೆಯಲ್ಲಿ ಆಕೆಗಿದ್ದ ಗಮನ, ಉತ್ಕಟ ಇಚ್ಚೆ ನಮ್ಮನ್ನೆಲ್ಲ ವಿದ್ಯಾವಂತರನ್ನಾಗಿಸಿ ನಮ್ಮ ಬದುಕನ್ನು ಹಸನಾಗಿಸಿದೆ.

ಆಗಿನ ಬಡತನದಲ್ಲೂ ಅಮ್ಮ ನಮ್ಮ ಮನೆಯ ಉತ್ತಮ ಹಣಕಾಸಿನ ಮಂತ್ರಿ. ಅಪ್ಪನ ಅತಿ ಕಡಿಮೆ ದುಡಿಮೆಯಲ್ಲಿಯೇ ಸಂಸಾರದ ಆಯವ್ಯಯ ಬಹಳ ಚೆನ್ನಾಗಿ ನಿಬಾಯಿಸುತ್ತಿದ್ದ ನಿಪುಣೆ ಮತ್ತು ಅದರಲ್ಲೆ ಉಳಿತಾಯ ಮಾಡಿ ಮುಂಬರುವ ತೊಂದರೆಗಳಿಗಾಗಿ ಎತ್ತಿಡುವ ದೂರದ್ರುಶ್ಟಿತ್ವ ನನಗೆ ಬಣ್ಣಿಸಲು ಅಸದಳ. ಮನೆಯ ಹಿತ್ತಲಿನ ದೊಡ್ಡ ಜಾಗೆಯಲ್ಲಿ ತರಾವರಿ ತರಕಾರಿ ಬೆಳೆದು ಮನೆಗೂ ಬಳಸಿ, ಇತರರಿಗೂ ಮಾರಿ ಹಣ ಕೂಡಿಸುವಾಗ ಆಕೆಯಲ್ಲಿ ಉತ್ತಮ ರೈತನನ್ನು ಕಂಡಿದ್ದೇನೆ. ಇರುವ ಪುಟ್ಟ ಹಂಚಿನ ಮನೆಯನ್ನೆ ಅಂದಗೊಳಿಸುವ, ಮಾರ‍್ಪಾಡು ಮಾಡಿ ವಿನ್ಯಾಸಗೊಳಿಸುವ ವಿಶಯದಲ್ಲಿ ಆಕೆಯಲ್ಲಿ ನಾನು ಉತ್ತಮ ಎಂಜಿನಿಯರ್ ಮತ್ತು ಉತ್ತಮ ಕಟ್ಟಡ ಕಾರ‍್ಮಿಕನನ್ನು ಕಂಡಿದ್ದೇನೆ.

ಆಕೆ ನಮ್ಮ ಮನೆಯ ಉತ್ತಮ ಚೆಪ್ ಕೂಡ. ತಾನೇ ಬೆಳೆದ ಬಸಲೆ ಸೊಪ್ಪಿನಲ್ಲಿ ಮಾಡುತ್ತಿದ್ದ ಸಾರು ಮತ್ತು ಅಕ್ಕಿಕಡುಬಿನ ರುಚಿಯನ್ನು ಯಾವ ಪಂಚತಾರ ಹೋಟೆಲೂ ಸರಿಗಟ್ಟುವುದಿಲ್ಲ. ಕೆಸುವಿನ ಸೊಪ್ಪು ಗಂಟು ಕಟ್ಟಿ ಮಾಡೋ ಪಲ್ಯ, ಕೆಸುವಿನ ಗೆಡ್ಡೆ ಸಾರು, ಹಲಸಿನ ಗುಜ್ಜೆ ಪಲ್ಯ ಸಾರು ನೆನೆದರೆ ನನಗೆ ಈಗಲೂ ಬಾಯಲ್ಲಿ ನೀರೂರುತ್ತದೆ. ಅಶ್ಟೆ ಏಕೆ, ಹಲಸಿನ ಕಡುಬು, ಅರಿಶಿಣ ಎಲೆಯ ಕಡುಬು, ಹುರಳಿ ಕಟ್ಟಿನ ಸಾರು, ನಮ್ಮ ಮಾವ ಬದ್ರಾ ನದಿಯಿಂದ ಹಿಡಿದು ತರುತ್ತಿದ್ದ ತಾಜಾ ಮೀನುಗಳನ್ನು ಬಳಸಿ ಮಾಡುತ್ತಿದ್ದ ಸಾರು – ಎಲ್ಲವೂ ಉತ್ರುಶ್ಟ ಕಾದ್ಯಗಳೇ. ಹಾಗಾಗಿ ಅಡಿಗೆಯಲ್ಲಿ ನಮ್ಮ ಅಮ್ಮನಿಗೆ ಅಮ್ಮನೆ ಸಾಟಿ.

ಬಹುಶಹ ಆಕೆಯ ಬಡತನ ಜವಾಬ್ದಾರಿಯನ್ನು ಕಲಿಸಿದೆ, ಉತ್ತಮ ಚಿಂತನೆಗಳಿಗೆ ಹಚ್ಚಿದೆ. ಸರಿಯಾ ನಿರ‍್ದಾರ ತೆಗೆದುಕೊಳ್ಳುವಂತೆ ಮಾಡಿದೆ. ನಮ್ಮೆಲ್ಲರ ಬದುಕಿನಲ್ಲಿ ಆಕೆಯ ವ್ಯಕ್ತಿತ್ವ ಮರೆಯಲಾರದ ಚಾಪು ಮೂಡಿಸಿದೆ. ಅದೇ ಶಿಸ್ತು, ಅದೇ ಸಂಯಮ, ಅದೇ ಜಾಣ್ಮೆ ನಮ್ಮ ಬದುಕಿಗೆ ದಾರಿ ದೀಪವಾಗಿ ನಮ್ಮ ಬದುಕನ್ನು ಹಸಿರಾಗಿಸಿದೆ. “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ” ಎಂಬ ಮಾತು ನಮ್ಮ ಅಮ್ಮನಂತವರನ್ನು ನೋಡಿಯೇ ಹುಟ್ಟಿಕೊಂಡಿರಬೇಕು. ಬಹುಶಹ ತಾಯಿ ಎಲ್ಲರ ಬದುಕಿನಲ್ಲೂ ಮಹತ್ತರವಾದ ಬದಲಾವಣೆಗೆ ಕಾರಣಳಾಗಿರುತ್ತಾಳೆ. ನನ್ನ ಅಮ್ಮನೇ ನನಗೆ ಪ್ರತೀ ವರ‍್ಶದ ಮಹಿಳೆ. ಆಕೆಯೇ ನನಗೆ ರಾಶ್ಟ್ರಿಯ ಅಂತರರಾಶ್ಟ್ರೀಯ ಬಿರುದು ಸಮ್ಮಾನ ಪಡೆದ ಮಹಿಳೆ. ಹಾಗಾಗಿಯೇ ಈ ಮಾತು ‘ಅಮ್ಮನೆಂಬ ಮಹಿಳೆಯಿಂದಲೇ ಈ ಇಳೆ’.

ದನ್ಯೆ ಇಳಾ ಮಾತೆ. ಅಮ್ಮನೆಂಬ ಅತ್ಯುತ್ತಮ ಮಹಿಳೆಯನ್ನು ಈ ಸ್ರುಶ್ಟಿಯಲ್ಲಿ ಇರಿಸಿದ್ದಕ್ಕೆ.
ದನ್ಯೆ ತಾಯಿ ಅಮ್ಮನೆಂಬ ಸ್ರುಶ್ಟಿಗೆ ಪರ‍್ಯಾಯವಿಲ್ಲದ್ದಕ್ಕೆ!

(ಚಿತ್ರ ಸೆಲೆ: artponnada.blogspot.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: