ಎ.ಬಿ.ಡಿ…ಎ.ಬಿ.ಡಿ – ಎ.ಬಿ. ಡಿವಿಲಿಯರ್ಸ್
ದಕ್ಶಿಣ ಆಪ್ರಿಕಾದ ಬೆಲಾ-ಬೆಲಾದ ಒಂದು ಮನೆಯ ಅಂಗಳದಲ್ಲಿ ಹದಿಹರೆಯದ ಹುಡುಗರ ಜೊತೆ, ಹನ್ನೊಂದು ವರ್ಶದ ಒಬ್ಬ ಪುಟ್ಟ ಹುಡುಗನೂ ಕೂಡ ಕ್ರಿಕೆಟ್ ಆಡುತ್ತಿರುತ್ತಾನೆ. ಆಟದಲ್ಲಿ ಆ ಪೋರ ಒಂದು ಸುಳುವಾದ ಕ್ಯಾಚ್ಅನ್ನು ಕೈಚೆಲ್ಲಿದಾಗ, “ಮೊದಲು ಆ ಟೋಪಿಯನ್ನು ತೆಗಿ, ನಿನಗೆ ಅದನ್ನು ತೊಡುವ ಯೋಗ್ಯತೆಯಿಲ್ಲ” ಎಂದು 22 ವರ್ಶದ ಗೆರಿಟ್ (ಹುಡುಗನ ಅಣ್ಣನ ಗೆಳೆಯ) ಗದರುತ್ತಾನೆ. ಹೀಗೆ ಹೇಳಿದ ಮೇಲೂ ಅವನ ಮಾತನ್ನು ಕೇಳಲಿಲ್ಲವೆಂಬ ಸಿಟ್ಟಿಂದ ತಾನೇ ಆ ಟೋಪಿಯನ್ನು ಆಹುಡುಗನ ತಲೆಯಿಂದ ತೆಗೆದು ನೆಲದ ಮೇಲೆ ಬಿಸಾಕಿ ತನ್ನ ಕಾಲಿಂದ ಹೊಸಕಿ ಹಾಕುತ್ತಾನೆ. ಇದನ್ನು ನೋಡಿದ ಆ ಪುಟ್ಟ ಹುಡುಗ ದಿಗ್ಬ್ರಮೆಗೊಳಗಾಗಿ ಬಿಕ್ಕಿ ಬಿಕ್ಕಿ ಅಳುತ್ತಾನೆ. ಆ ಟೋಪಿ, 1995 ರಲ್ಲಿ ಸೆಂಚುರಿಯನ್ನಲ್ಲಿ ನಡೆದ ದಕ್ಶಿಣ ಆಪ್ರಿಕಾ ಮತ್ತುಇಂಗ್ಲೆಂಡ್ ನಡುವಣ ಟೆಸ್ಟ್ ಪಂದ್ಯ ನೋಡಲು ಹೋದಾಗ ಆ ಹುಡುಗನ ತಂದೆ ಕೊಡಿಸಿದ ಅವನ ನೆಚ್ಚಿನ ‘ಜಾಂಟಿ ಕ್ಯಾಪ್’ ಆಗಿರುತ್ತದೆ. ಅಲ್ಲಿಂದ ಆ ಪುಟ್ಟ ಹುಡುಗ ಒಂಬತ್ತೇ ವರ್ಶಗಳಲ್ಲಿ ದಕ್ಶಿಣ ಆಪ್ರಿಕಾ ಪರ ಅಂತರಾಶ್ಟ್ರೀಯ ಕ್ರಿಕೆಟ್ ಆಡುವ ಮಟ್ಟಕ್ಕೆ ಬೆಳೆಯುತ್ತಾನೆ. ಅಶ್ಟೇ ಅಲ್ಲ, ತಾನು ಕ್ರಿಕೆಟ್ ನಿಂದ ದೂರ ಸರಿಯುವ ಹೊತ್ತಿಗೆ ಕ್ರಿಕೆಟ್ ಜಗತ್ತು ಕಂಡ ಅಪರೂಪದ ದಿಗ್ಗಜನಾಗಿರುತ್ತಾನೆ. ಆ ಪುಟ್ಟ ಹುಡುಗನೇ ಅಬ್ರಾಹಿಮ್ ಬೆಂಜಮಿನ್ ಡಿವಿಲಿಯರ್ಸ್ (ಎ.ಬಿ.ಡಿ).
ಹುಟ್ಟು-ಶಾಲೆ-ಎಳವೆಯ ಕ್ರಿಕೆಟ್
ಡಿವಿಲಿಯರ್ಸ್ 1984 ರ ಪೆಬ್ರವರಿ 17 ರಂದು ದಕ್ಶಿಣ ಆಪ್ರಿಕಾದ ಬೆಲಾ-ಬೆಲಾ ದಲ್ಲಿ ಹುಟ್ಟಿದರು. ತಂದೆ ಅಬ್ರಾಹಮ್.ಬಿ. ಡಿವಿಲಿಯರ್ಸ್ ವೈದ್ಯರಾಗಿದ್ದರು. ಅವರ ತಾಯಿ ಮಿಲ್ಲಿ ಡಿವಿಲಿಯರ್ಸ್. ಆಟೋಟದಲ್ಲಿ ಎ.ಬಿ.ಡಿ. ಮತ್ತವರ ಇಬ್ಬರು ಅಣ್ಣಂದಿರ ಪ್ರತಿಬೆಯನ್ನು ಗುರುತಿಸಿದ ಅವರ ತಾಯಿ, ಮಕ್ಕಳ ಆಟೋಟಕ್ಕೆ ಬೇಕಾದ ಎಲ್ಲಾ ರೀತಿಯ ಬೆಂಬಲ ನೀಡುತ್ತಾ, ಶಾಲಾ ದಿನಗಳಿಂದಲೇ ಬೆನ್ನೆಲುಬಾಗಿ ನಿಲ್ಲುತ್ತಾರೆ. ಪುಟ್ಟ ಎ.ಬಿ.ಡಿ. ಎಲ್ಲಾ ಬಗೆಯ ಆಟಗಳನ್ನು ತಮ್ಮ ಅಣ್ಣಂದಿರೊಟ್ಟಿಗೆ ಆಡಲು ಶುರು ಮಾಡಿದ್ದು ತಮ್ಮ ಮನೆಯ ಅಂಗಳದಲ್ಲೇ.
ವಾರ್ಮ್ ಬಾತ್ ಶಾಲೆಯಲ್ಲಿ ತಮ್ಮ ಮೊದಲ ಹಂತದ ಶಿಕ್ಶಣ ಮುಗಿಸಿದ ಎ.ಬಿ.ಡಿ. ತಮ್ಮ ಹದಿಮೂರನೇ ವಯಸ್ಸಿನಲ್ಲಿ ಮುಂದಿನ ಕಲಿಕೆಗಾಗಿ ಎಪೀಸ್ ಶಾಲೆ ಸೇರುತ್ತಾರೆ. ಆಟೋಟಗಳಿಗೆ ಹೆಸರುವಾಸಿಯಾಗಿದ್ದ ಎಪೀಸ್ ನಲ್ಲಿ ಎ.ಬಿ.ಡಿ. ಕ್ರಿಕೆಟ್ ನೊಂದಿಗೆ ರಗ್ಬಿ, ಹಾಕಿ, ಗಾಲ್ಪ್ ಮತ್ತು ಟೆನ್ನಿಸ್ ಆಟಗಳನ್ನೂ ಆಡುತ್ತಾರೆ. ಒಂದು ಹಂತದ ವರಗೆ ವ್ರುತ್ತಿಪರ ಟೆನ್ನಿಸ್ ತರಬೇತಿಯನ್ನೂ ಪಡೆಯುತ್ತಾರೆ. ಎ.ಬಿ.ಡಿ. ಹದಿನಾಲ್ಕನೇ ವಯಸ್ಸಿನಲ್ಲಿ ದಕ್ಶಿಣ ಆಪ್ರಿಕಾದ ಆ ವಯಸ್ಸಿನ ಆಟಗಾರರ ರ್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ತಾನದಲ್ಲೂ ಕೆಲಕಾಲ ಇರುತ್ತಾರೆ. ಕಳೆದ ವರ್ಶದ ವಿಂಬೆಲ್ಡನ್ನಲ್ಲಿ ಟೆನ್ನಿಸ್ ದಿಗ್ಗಜ ಪೆಡರರ್ ರನ್ನು ಆಂಡರ್ಸನ್ ಮಣಿಸಿದ್ದರು. ಇದೇ ಆಂಡರ್ಸನ್ರನ್ನು ಕಿರಿಯರ ಟೆನ್ನಿಸ್ ನಲ್ಲಿ ಎ.ಬಿ.ಡಿ. ನಿರಾಯಾಸವಾಗಿ ನೇರ ಸೆಟ್ ಗಳಲ್ಲಿ ಸೋಲಿಸಿದ್ದರು ಎಂದರೆ ಅವರು ಒಳ್ಳೆ ಟೆನ್ನಿಸ್ ಆಟಗಾರರೇ ಇರಬೇಕು ಅಲ್ಲವೇ? ಎಪೀಸ್ ಶಾಲೆಯ ತಂಡದಲ್ಲಿ ಡುಪ್ಲೆಸಿಸ್ ಮತ್ತು ರುಡಾಲ್ಪ್ ಕೂಡ ಇರುತ್ತಾರೆ. ಈ ಬಲಾಡ್ಯ ತಂಡ ಎಲ್ಲಾ ಬಗೆಯ ಶಾಲಾ ಟೂರ್ನಿಯನ್ನು ಗೆದ್ದು ದಾಕಲೆಯ ಮೇಲೆ ದಾಕಲೆಗಳನ್ನು ಬರೆಯುತ್ತಾ ಎ.ಬಿ.ಡಿ. ರನ್ನು ವ್ರುತ್ತಿಪರ ಕ್ರಿಕೆಟ್ ಗೆ ಅಣಿಯಾಗುವಂತೆ ಮಾಡುತ್ತದೆ. ಶಾಲೆಯ ಕಲಿಕೆ ಮುಗಿದ ಮೇಲೆ ಸ್ಪೋರ್ಟ್ಸ್ ಸೈನ್ಸ್ ಪದವಿ ಪಡೆಯಲು ಎ.ಬಿ.ಡಿ. ಪ್ರೆಟೋರಿಯ ವಿಶ್ವವಿದ್ಯಾಲಯ ಸೇರುತ್ತಾರೆ.
ಮೊದಲ ದರ್ಜೆ ಮತ್ತು ಲಿಸ್ಟ್ ಎ ಪಾದಾರ್ಪಣೆ
ವಿಶ್ವಕಪ್ ಗೂ ಮುನ್ನ ಅಂತರಾಶ್ಟ್ರೀಯ ತಂಡಗಳ ಎದುರು ಆ ದೇಶದ ದೇಸೀ ತಂಡಗಳು ಅಬ್ಯಾಸ ಪಂದ್ಯಗಳನ್ನು ಆಡೋದು ವಾಡಿಕೆ. ಹೀಗೆ 2003 ರ ವಿಶ್ವಕಪ್ ಗೂ ಮುನ್ನ ಕೆನೆಡಾ ಎದುರು ಟೈಟಾನ್ಸ್ ಪರ ಎ.ಬಿ.ಡಿ. ತಮ್ಮ ಮೊದಲ ಲಿಸ್ಟ್ ಎ ಆಡುತ್ತಾರೆ. ಚೊಚ್ಚಲ ಪಂದ್ಯದಲ್ಲೇ ಬಿರುಸಿನ 109 ರನ್ ಗಳನ್ನು ಬಾರಿಸಿ ಗಮನ ಸೆಳೆಯುತ್ತಾರೆ. ನಂತರ ಅದೇ ವರ್ಶ, ದಕ್ಶಿಣ ಆಪ್ರಿಕಾದ ಕಿರಿಯರ ತಂಡದ ಸದಸ್ಯರಾಗಿ ಇಂಗ್ಲೆಂಡ್ ಪ್ರವಾಸ ಮಾಡುತ್ತಾರೆ. ಅಲ್ಲೂ ಸಹ ಒಂದು ಶತಕವನ್ನು (143) ಗಳಿಸಿಮೆಚ್ಚುಗೆ ಗಳಿಸುತ್ತಾರೆ. ಪ್ರವಾಸದಿಂದ ಮರಳಿದ ಬಳಿಕ 2003/04 ರ ದೇಸೀ ರುತುವಿಗೆ ನಾರ್ತರನ್ಸ್ ತಂಡ, ಡಿವಿಲಿಯರ್ಸ್ ಅವರೊಂದಿಗೆ ಆರು ತಿಂಗಳುಗಳಿಗೆ 5 ಸಾವಿರ ರಾಂಡ್ ಗಳ ಒಪ್ಪಂದ ಮಾಡಿಕೊಳ್ಳುತ್ತದೆ. ಅಕ್ಟೋಬರ್ ನಲ್ಲಿ ವೆಸ್ಟರ್ನ್ ಪ್ರಾವಿನ್ಸ್ ತಂಡದಮೇಲೆ ನಾರ್ತರನ್ಸ್ ಪರವಾಗಿ ಎ.ಬಿ.ಡಿ. ತಮ್ಮ ಚೊಚ್ಚಲ ಮೊದಲ-ದರ್ಜೆ ಪಂದ್ಯವನ್ನಾಡುತ್ತಾರೆ. ಈ ಪಂದ್ಯ ಡೇಲ್ ಸ್ಟೇನ್ ರಿಗೂ ಮೊದಲ ಪಂದ್ಯವಾಗಿರುತ್ತದೆ. ಈ ಪಂದ್ಯದ ಎರಡು ಇನ್ನಿಂಗ್ಸ್ ಗಳಲ್ಲಿ ತಲಾ 58 ಮತ್ತು 61 ರನ್ ಗಳಿಸಿ ವ್ರುತ್ತಿಪರ ಕ್ರಿಕೆಟ್ ಗೆ ಒಳ್ಳೆ ಆರಂಬವನ್ನು ಪಡೆಯುತ್ತಾರೆ. ಆ ಸಾಲಿನ ದೇಸೀ ಕ್ರಿಕೆಟ್ ನಂತರ ಐರ್ಲೆಂಡ್ ನ ಕ್ಯಾರಿಕ್ ಪರ್ಗುಸ್ ಕ್ಲಬ್ ಪರ ಆಡಲು ವಿದೇಶಿ ಆಟಗಾರನಾಗಿ ಆಯ್ಕೆ ಆಗುತ್ತಾರೆ. ಅಲ್ಲಿ ಎರಡು ಸಲ ಇನ್ನೂರಕ್ಕೂ ಹೆಚ್ಚು (233 ಮತ್ತು 208) ರನ್ ಗಳಿಸುತ್ತಾರೆ. ಈ ಪ್ರದರ್ಶನಗಳಿಂದ ದಕ್ಶಿಣ ಆಪ್ರಿಕಾ-ಎ ತಂಡಕ್ಕೆ ಬಡ್ತಿ ಪಡೆಯುತ್ತಾರೆ. ತಂಡದ ಜಿಂಬಾಬ್ವೆ ಪ್ರವಾಸದಲ್ಲೂ ಅವರ ಬ್ಯಾಟ್ ಸದ್ದು ಮಾಡುತ್ತದೆ. ಶತಕ ಗಳಿಸದ್ದಿದ್ದರೂ 3 ಅರ್ದ ಶತಕಗಳನ್ನು ಗಳಿಸಿ ಅಂತರಾಶ್ಟ್ರೀಯ ಕ್ರಿಕೆಟ್ಆಡಲು ತಾವು ಸಜ್ಜಾಗಿರುವುದನ್ನು ಸಾಬೀತು ಮಾಡುತ್ತಾರೆ. ಆ ಬಳಿಕ ತವರಿನಲ್ಲಿ ಪ್ರವಾಸಿ ನ್ಯೂಜಿಲ್ಯಾಂಡ್ ಎದುರು ದಕ್ಶಿಣ ಆಪ್ರಿಕಾ-ಎ ಪರ ಇನ್ನೊಂದು ಸರಣಿ ಆಡುತ್ತಾರೆ. ಈ ಸರಣಿಯ ಒಂದು ಪಂದ್ಯದಲ್ಲಿ ಕೆಟ್ಟ ಹೊಡೆತವೊಂದಕ್ಕೆ ಬಲಿಯಾಗಿ ಕೋಚ್ ರೇ ಜೆನ್ನಿಂಗ್ಸ್ ರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಕೆಂಡಾಮಂಡಲವಾಗಿದ್ದ ಜೆನ್ನಿಂಗ್ಸ್ “ಎ.ಬಿ.ಡಿ. ನಿನ್ನನ್ನು ನೀನು ಏನು ಅಂದುಕೊಂಡಿದ್ದೀಯ? ನಾನು ಕೋಚ್ ಆಗಿರುವ ಯಾವ ತಂಡದಲ್ಲೂ ಇನ್ನು ನಿನಗೆ ಆಡುವ ಅವಕಾಶ ಇಲ್ಲ” ಎಂದು ತಮ್ಮ ಕೋಪವನ್ನುಹೊರಹಾಕುತ್ತಾರೆ. ಆಗ ನಾಯಕ ಅಶ್ವೇಲ್ ಪ್ರಿನ್ಸ್, ನೊಂದ ಎ.ಬಿ.ಡಿ. ರನ್ನು ಸಮಾದಾನ ಮಾಡಿ ವಾತಾವರಣವನ್ನು ತಿಳಿ ಮಾಡುತ್ತಾರೆ. ನಂತರ 2004/05 ರ ದೇಸೀ ಕ್ರಿಕೆಟ್ ಗೆ ಮರಳಿ ಎರಡು ಬರ್ಜರಿ ಶತಕಗಳನ್ನು ಗಳಿಸಿ ಮತ್ತೊಮ್ಮೆ ಆಯ್ಕೆಗಾರರ ಕಣ್ಸೆಳೆಯುತ್ತಾರೆ. ಇವರ ಈ ಪ್ರದರ್ಶನವನ್ನು ಗಮನಿಸಿ ಆಯ್ಕೆಗಾರರು ಇಂಗ್ಲೆಂಡ್ ಎದುರಿನ 5 ಟೆಸ್ಟ್ ಗಳ ಸರಣಿಗೆ ಎ.ಬಿ. ಡಿವಿಲಿಯರ್ಸ್ ರನ್ನು ಆಯ್ಕೆ ಮಾಡುತ್ತಾರೆ. ಕೇವಲ ಒಂದೇ ಒಂದು ವರ್ಶದ ಮೊದಲ ದರ್ಜೆ ಕ್ರಿಕೆಟ್ ನ ಅನುಬವವುಳ್ಳ ಎ.ಬಿ.ಡಿ. ಟೆಸ್ಟ್ ಕ್ರಿಕೆಟಿಗನಾಗುವತ್ತ ದಾಪುಗಾಲು ಇಡುತ್ತಾರೆ.
ಟೆಸ್ಟ್ ಪಾದಾರ್ಪಣೆ – ಅಂತರಾಶ್ಟ್ರೀಯ ಕ್ರಿಕೆಟ್
2004 ರ ಡಿಸಂಬರ್ 17 ರಂದು ಪೋರ್ಟ್ ಎಲಿಜೆಬತ್ ನಲ್ಲಿ ಡಿವಿಲಿಯರ್ಸ್ ಆರಂಬಿಕ ದಾಂಡಿಗನಾಗಿ ಟೆಸ್ಟ್ ಪಾದಾರ್ಪಣೆ ಮಾಡಿದರು. ಕಾಕತಾಳೀಯ ಎಂಬಂತೆ ಸ್ಟೇನ್ ರಿಗೂ ಇದು ಚೊಚ್ಚಲ ಪಂದ್ಯವಾಗಿರುತ್ತದೆ. ಎ.ಬಿ.ಡಿ. ಈ ಪಂದ್ಯದಲ್ಲಿ 28 ಮತ್ತು 14 ರನ್ ಗಳಿಸಿ ಸಾದಾರಣ ಪ್ರಾರಂಬ ಪಡೆದರು. ನಂತರ ಎರಡನೇ ಟೆಸ್ಟ್ ನಲ್ಲಿ 52 ರನ್ ಗಳಿಸಿದ ಮೇಲೆ ಇನ್ನೆರಡು ಟೆಸ್ಟ್ ಗಳಲ್ಲಿ ವಿಪಲರಾದರು. ಈ ಸರಣಿಯ ಐದನೇ ಮತ್ತು ಕಡೆಯ ಟೆಸ್ಟ್ ತಮಗೆ ಕೊನೆ ಅವಕಾಶ ಎಂದು ಅರಿತ ಎ.ಬಿ.ಡಿ., ಒತ್ತಡದಲ್ಲಿಯೇ ಸೆಂಚುರಿಯನ್ ಟೆಸ್ಟ್ ಆಡಲು ಕಣಕ್ಕಿಳಿದರು. ಮೊದಲ ಇನ್ನಿಂಗ್ಸ್ ನಲ್ಲಿ 92 ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ ತಮ್ಮ ಚೊಚ್ಚಲ ಶತಕ (109) ಗಳಿಸಿದ ಡಿವಿಲಿಯರ್ಸ್, ತಮ್ಮ ಟೆಸ್ಟ್ ಬದುಕಿನಲ್ಲಿ ಮತ್ತೆಂದೂ ಹಿಂತಿರುಗಿ ನೋಡಲೇ ಇಲ್ಲ. ಅಲ್ಲಿಂದ ಟೆಸ್ಟ್ ತಂಡದ ಕಾಯಮ್ ಸದಸ್ಯರಾದರೂ ಅವರ ಒಂದು ದಿನದ ಕ್ರಿಕೆಟ್ ಬದುಕು ಮೊದಲಿಗೆ ಅಶ್ಟೇನು ಚೆನ್ನಾಗಿರಲಿಲ್ಲ. ಅವರ ಮೊದಲ ಅರ್ದ ಶತಕ ಗಳಿಸಲು 17 ಪಂದ್ಯಗಳ ವರೆಗೂ ಕಾಯಬೇಕಾಯಿತು. ಅವರು ಮೊದಲ ಶತಕ ಗಳಿಸಿದ್ದು ತಮ್ಮ 38 ನೇ ಪಂದ್ಯದಲ್ಲಿ. ಆದರೆ ಅದಾದ ನಂತರ ಸ್ತಿರ ಪ್ರದರ್ಶನ ನೀಡುತ್ತಾ ಎರಡೂ ಬಗೆಯ ಪಂದ್ಯಗಳಲ್ಲಿ ತಮ್ಮ ಪ್ರಾಬಲ್ಯ ಮೆರೆದರು.
ಪಲ ನೀಡಿದ ಅಪರಿಚಿತನ ಸಲಹೆ – ಬದಲಾದ ಎ.ಬಿ.ಡಿ
2007 ರ ತನಕ ಹೇಳಿಕೊಳ್ಳುವಂತ ಆಟ ಡಿವಿಲಿಯರ್ಸ್ ಅವರಿಂದ ಬರದಿದ್ದರೂ ತಂಡದಲ್ಲಿ ತಮ್ಮ ಎಡೆಯನ್ನು(place) ಉಳಿಸಿಕೊಂಡು ಒಬ್ಬ ಸರಾಸರಿ ಆಟಗಾರನಂತೆ ಅವರ ಬದುಕು ಸಾಗುತ್ತದೆ. ಆಗೊಮ್ಮೆ ಎ.ಬಿ.ಡಿ. ಒಂದು ಕಾರ್ಯಕ್ರಮದ ಸಲುವಾಗಿ ಕೇಪ್ ಟೌನ್ ವಿಮಾನ ಹತ್ತಿದಾಗ ಅಪರಿಚಿತರೊಬ್ಬರು ಮಾತು ಶುರು ಮಾಡುತ್ತಾರೆ. ಮಾತನಾಡುತ್ತಾ “ನೀವು ಆಡುವಾಗ ಮುಂದಿನ ಇನ್ನಿಂಗ್ಸ್ ಬಗೆಗಿನ ಚಿಂತೆಗಿಂತ, ಮುಂದಿನ ಪಾರ್ಟಿಯ ಬಗ್ಗೆ ಯೋಚಿಸುತ್ತೀರಿ ಎಂಬಂತೆ ಕಾಣುತ್ತದೆ. ಯಾಕಿಶ್ಟು ಅವಸರ?” ಎಂದು ಕೇಳುತ್ತಾರೆ. ಇದರಿಂದ ಕಕ್ಕಾಬಿಕ್ಕಿಯಾದ ಎ.ಬಿ.ಡಿ ಬಾಯಿಂದ ಮಾತುಗಳೇ ಹೊರಡುವುದಿಲ್ಲ. ಆ ವ್ಯಕ್ತಿಗೆ 20 ವರ್ಶಗಳ ಕಾಲ ಕ್ರೀಡಾ ಪತ್ರಕರ್ತ ಹಾಗೂ ಎಡಿಟರ್ ಆಗಿ ಕೆಲಸ ಮಾಡಿರುವ ಅನುಬವವಿದೆ ಎಂದು ತಿಳಿದ ಮೇಲೆ ಅವರಿಗೆ ಮಾತನ್ನು ಮುಂದುವರಿಸುವಂತೆ ಎ.ಬಿ.ಡಿ. ಹೇಳುತ್ತಾರೆ. ಆಗ ಆ ವ್ಯಕ್ತಿ, “ನಿಮ್ಮ ಸರಾಸರಿ ಎರಡೂ ಬಗೆಯ ಪಂದ್ಯಗಳಲ್ಲಿ 36 ಇದ್ದು, ಇದು ನಿಮ್ಮ ಅಳವಿಗೆ ತಕ್ಕ ಆಟವಲ್ಲ. ನೀವು ಇನ್ನಶ್ಟು ಬೆವರು ಹರಿಸಬೇಕು, ನಿಮ್ಮ ಅಳವಿನ ಅರಿವು ನಿಮಗಾಗಬೇಕು. ನಿಮ್ಮ ವ್ಯಾಪಾರ, ಕ್ರಿಕೆಟೇತರ ಚಟುವಟಿಕೆಗಳನ್ನು ನಮ್ಮ ಸಂಸ್ತೆ ಏನೂ ಲಾಬ ಬಯಸದೆ ನಿರ್ವಹಿಸುತ್ತದೆ. ನೀವು ಆಟದ ಮೇಲಶ್ಟೇ ಗಮನ ಕೊಡಿ” ಎಂದು ಸಲಹೆ ನೀಡುತ್ತಾರೆ. ಇವರ ಮಾತಿಗೆ ಬೆಲೆ ಕೊಟ್ಟು ಎ.ಬಿ.ಡಿ. ಬೇರೆಲ್ಲಾ ಚಟುವಟಿಕೆಗಳಿಂದ ದೂರ ಸರಿದು ಆಡಲು ಶುರು ಮಾಡುತ್ತಾರೆ. 2016 ರ ಹೊತ್ತಿಗೆ ಎರಡೂ ಮಾದರಿಯ ಪಂದ್ಯಗಳಲ್ಲಿ ಅವರ ಸರಾಸರಿ 50 ಕ್ಕೂ ಹೆಚ್ಚಾಗುತ್ತದೆ. ಮತ್ತು 20 ಕ್ಕೂ ಹೆಚ್ಚು ಶತಕಗಳನ್ನು ಬಾರಿಸುತ್ತಾರೆ.
ಅಂತರಾಶ್ಟ್ರೀಯ ಕ್ರಿಕೆಟ್ ಬದುಕು
14 ವರ್ಶಗಳ ಕಾಲ ಅಂತಾರಾಶ್ಟ್ರೀಯ ಕ್ರಿಕೆಟ್ ಆಡಿದ ಎ.ಬಿ.ಡಿ. ಬ್ಯಾಟ್ಸ್ಮನ್ ಅಲ್ಲದೆ ಅದಿಕ್ರುತ ವಿಕೆಟ್ ಕೀಪರ್ ಮತ್ತು ನಾಯಕನಾಗಿಯೂ ಆಡಿದ್ದಾರೆ. ಸಮಯಕ್ಕೆ ಆಡುವಂತ ಜಾಣ್ಮೆ ಮತ್ತು ಅಳವು ಎರಡೂ ಅವರ ಆಟದಲ್ಲಿತ್ತು. ಒಂದು ದಿನದ ಪಂದ್ಯದಲ್ಲಿ ಕೇವಲ 31 ಎಸೆತಗಳಲ್ಲಿ ಶತಕ ಬಾರಿಸಿ ದಾಕಲೆ ಬರೆದ ಎ.ಬಿ.ಡಿ, ಒಮ್ಮೆ ಟೆಸ್ಟ್ ಪಂದ್ಯವನ್ನು ಉಳಿಸಲು 220 ಎಸೆತಗಳಲ್ಲಿ ಒಂದೂ ಬೌಂಡರಿ ಇಲ್ಲದೆ 33 ರನ್ ಗಳಿಸುತ್ತಾರೆ. ಈ ರೀತಿ ಎರಡೂ ಬಗೆಯಲ್ಲಿ ಆಡಬಲ್ಲ ಅತವಾ ಆಡಿರುವ ಆಟಗಾರನನ್ನು ಹಿಂದೆಂದೂ ಕಂಡಿಲ್ಲ; ಮುಂದೆ ಕಾಣೋದು ಅಪರೂಪವೇ ಆಗಿದೆ. ಪಿಚ್ ಎಂತದ್ದೇ ಇರಲಿ, ಬೌಲರ್ ಯಾರೇ ಇರಲಿ, ಸ್ಪಿನ್ ಆಗಲಿ ವೇಗದ ಬೌಲಿಂಗ್ ಆಗಲಿ, ಇವ್ಯಾವುದೂ ತಮ್ಮ ಮೇಲೆ ಪರಿಣಾಮ ಬೀರದಂತೆ ನೈಜ ಆಟ ಎ.ಬಿ.ಡಿ. ಮಾತ್ರ ಆಡಬಲ್ಲರು ಎಂದು ಹಲವಾರು ಬಾರಿ ಸಾಬೀತು ಮಾಡಿದ್ದಾರೆ. ಯಾರ್ಕರ್, ಬ್ಲಾಕ್-ಹೋಲ್ ನಲ್ಲಿರುವ ಎಸೆತಗಳನ್ನೂ ಎ.ಬಿ.ಡಿ. ಸ್ವೀಪ್ ಮಾಡಿ ಸಿಕ್ಸರ್ ಗೆ ಅಟ್ಟುತ್ತಿದ್ದ ರೀತಿಯನ್ನು ಪವಾಡವೇ ಅನ್ನಬೇಕು. ತಮ್ಮ ಅಂತರಾಶ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ ಒಂದೂ ವಿವಾದವಿಲ್ಲದೆ 114 ಟೆಸ್ಟ್ ಗಳಲ್ಲಿ 50 ರ ಸರಾಸರಿಯಲ್ಲಿ 22 ಶತಕಗಳುಳ್ಳ 8,765 ರನ್, 228 ಒಂದು ದಿನದ ಪಂದ್ಯಗಳಲ್ಲಿ 53.5 ರ ಸರಾಸರಿಯಲ್ಲಿ 25 ಶತಕಗಳುಳ್ಳ 9,577 ರನ್ ಗಳನ್ನು ಗಳಿಸಿದ್ದಾರೆ. ಇಲ್ಲಿ 101 ರ ಸ್ಟ್ರೈಕ್ ರೇಟ್ ಅವರ ಕ್ರಿಕೆಟ್ ಬದುಕಿನ ಹೈಲೈಟ್ ಎಂದರೆ ತಪ್ಪಾಗಲಾರದು. ಜೊತೆಗೆ 78 ಟಿ-20 ಪಂದ್ಯಗಳಲ್ಲಿ 1,672 ರನ್ ಬಾರಿಸಿದ್ದಾರೆ. ಮತ್ತು ಜಾಂಟಿ ರೋಡ್ಸ್ ನಂತರ ಅವರಂತ ಚುರುಕು ಪೀಲ್ಡರ್ ಕ್ರಿಕೆಟ್ ಜಗತ್ತು ಕಂಡಿದ್ದರೆ ಅದು ಎ.ಬಿ.ಡಿ. ಅವರೇ. ಅಂಗಳದ ಯಾವುದೇ ಬಾಗದಲ್ಲಿದ್ದರೂ ತಮ್ಮಇರುವಿಕೆಯನ್ನು ಕ್ಯಾಚ್ ಹಿಡಿದೋ, ನೇರ ರನ್ ಔಟ್ ಮಾಡಿಯೋ ಅವರು ನೆನಪಿಸುತ್ತಿದ್ದರು. ಅವರು ವಿಕೆಟ್ ಕೀಪರ್ ಆಗಿಯೂ ಕೆಲ ಕಾಲ ಆಡಿದ್ದು ಒಂದು ವಿಶೇಶ. ತಂಡದ ನಾಯಕನಾಗಿದ್ದಾಗ 2015 ರ ವಿಶ್ವಕಪ್ ಸೆಮಿಪೈನಲ್ ನಲ್ಲಿ ನ್ಯೂಜಿಲ್ಯಾಂಡ್ ಎದುರು ಸೋತದ್ದು ಅವರ ವ್ರುತ್ತಿ ಬದುಕಿನ ಬೇಸರದ ಕ್ಶಣ ಎಂದು ಅವರು ಈಗಲೂ ನೆನೆಯುತ್ತಾರೆ.
ಐಪಿಎಲ್ ಕ್ರಿಕೆಟ್ – ಬೆಂಗಳೂರಿನ ನಂಟು
2008 ರಲ್ಲಿ ಮೊದಲ್ಗೊಂಡು ಐಪಿಎಲ್ ನ ಮೊದಲ ಮೂರು ಆವ್ರುತ್ತಿಗಳಲ್ಲಿ ದೆಹಲಿ ತಂಡದ ಪರ ಆಡಿ, ಸಾದಾರಣ ಯಶಸ್ಸು ಕಂಡಿದ್ದ ಎ.ಬಿ.ಡಿ. 2011 ರಿಂದ ಬೆಂಗಳೂರು ತಂಡದ ಸದಸ್ಯರಾಗಿ ತಮ್ಮ ಬ್ಯಾಟಿನ ಮೋಡಿಯಿಂದ ಎಲ್ಲೆಡೆ ಅಬಿಮಾನಿಗಳನ್ನು ಗಳಿಸಿದರು. ಚೆಂಡನ್ನು ಅಂಗಳದ ಯಾವ ಮೂಲೆಗಾದರೂ ಅಟ್ಟುವ ಅವರ ಅಳವನ್ನು ಕಂಡು ಕ್ರಿಕೆಟ್ ಪಂಡಿತರು ಮಿಸ್ಟರ್ 360 ಎಂದು ಹೆಸರಿಸಿದರು. ಎರಡು ಬಾರಿ ಡೇಲ್ ಸ್ಟೇನ್ ಅಂತಹ ದಿಗ್ಗಜ ಬೌಲರ್ ಎಸೆದ ಒಂದು ಓವರ್ ನಲ್ಲಿ 20 ಕ್ಕೂಹೆಚ್ಚು ರನ್ ಬಾರಿಸಿ ಬೆಂಗಳೂರು ತಂಡವನ್ನು ಗೆಲ್ಲಿಸಿದ್ದು ಜನರ ಮನದಲ್ಲಿ ಇನ್ನೂ ಹಚ್ಚ ಹಸಿರಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ “ಎ.ಬಿ.ಡಿ.”… “ಎ.ಬಿ.ಡಿ.”… ಎಂದು ಕೂಗುತ್ತಾ, ಜನರು ಕೇಕೆ ಹಾಕುತ್ತಾ ಪಂದ್ಯವನ್ನು ನೋಡುವ ಪರಿ ಕ್ರಿಕೆಟ್ನ ರೋಚಕ ಕ್ಶಣಗಳಲ್ಲೊಂದು ಎಂದರೆ ತಪ್ಪಾಗಲಾರದು. ಅವರು ಬ್ಯಾಟ್ ಮಾಡಲು ಬಂದಾಗ ಜನರ ಸಂತಸ, ಹರ್ಶೋದ್ಗಾರ ಕೂಗು ಹೇಳ ತೀರದು. ಒಟ್ಟು 11 ವರ್ಶಗಳಲ್ಲಿ 142 ಪಂದ್ಯಗಳನ್ನಾಡಿ 39 ರ ಸರಾಸರಿ ಮತ್ತು 150 ರ ಸ್ಟ್ರೈಕ್ ರೇಟ್ ನಲ್ಲಿ 3 ಶತಕ ಮತ್ತು 28 ಅರ್ದ ಶತಕಗಳುಳ್ಳ 3,962 ರನ್ ಗಳನ್ನು ಗಳಿಸಿದ್ದಾರೆ. ಈ ರನ್ ಗಳಲ್ಲಿ ಹೆಚ್ಚಿನವು ತಂಡ ಒತ್ತಡದಲ್ಲಿರುವಾಗ ಬಂದಿರುವುದು ವಿಶೇಶ. ಎ.ಬಿ.ಡಿ. ಕ್ರೀಸ್ ನಲ್ಲಿದ್ದಾರೆ ಎಂದರೆ ಓವರ್ ಗೆ 15 ರನ್ ಗಳ ಸರಾಸರಿ ಬೇಕಿದ್ದರೂ ಗೆಲ್ಲಬಹುದು ಎಂದು ಅವರ ತಂಡ ನಂಬುತ್ತದೆ ಅನ್ನೋದು ಅವರ ಅಳವಿಗೆ ಹಿಡಿದ ಕನ್ನಡಿ. ಆದರೂ ಒಮ್ಮೆಯೂ ಬೆಂಗಳೂರು ತಂಡ ಐಪಿಎಲ್ ಗೆಲ್ಲದಿರುವುದು ತಮಗೆ ತುಂಬಾ ಬೇಸರ ತಂದಿದೆ ಎಂದು ಎ.ಬಿ.ಡಿ. ಹೇಳುತ್ತಾರೆ.
ಡಿವಿಲಿಯರ್ಸ್ ಎಂಬ ಅಜಾತಶತ್ರು
2015 ರ ದಕ್ಶಿಣ ಆಪ್ರಿಕಾದ ಬಾರತದ ಪ್ರವಾಸದ ವೇಳೆ ಐದನೇ ಮತ್ತು ಕಡೆಯ ಒಂದು ದಿನದ ಪಂದ್ಯ ಮುಂಬೈನ ವಾಂಕಡೆ ಅಂಗಳದಲ್ಲಿ ನಡೆದಾಗ, ಇದು ಅಂತರಾಶ್ಟ್ರೀಯ ಪಂದ್ಯವೆಂಬುದನ್ನೂ ಮರೆತು ಮುಂಬೈ ಮಂದಿ ಎ.ಬಿ.ಡಿ. ಬ್ಯಾಟ್ ಮಾಡಲು ಬಂದಾಗ ಎ.ಬಿ.ಡಿ.! ಎ.ಬಿ.ಡಿ.!! ಎಂದು ಸ್ವಾಗತಿಸಿದ್ದರು. ಅವರ ಪ್ರತಿ ಬೌಂಡರಿ ಸಿಕ್ಸರ್ ಗಳಿಗೂ ಮೆಚ್ಚುಗೆ ತೋರಿದ್ದರು. ಅದೇ ಪ್ರವಾಸದಲ್ಲಿ ತಮ್ಮ ನೂರನೇ ಟೆಸ್ಟ್ ಅನ್ನು ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಆಡಿದಾಗ ಕನ್ನಡಿಗರೂ ಸಹ ತಮ್ಮ ಮನೆಯ ಮಕ್ಕಳಾದ ಶ್ರೀನಾತ್, ಕುಂಬ್ಳೆ ಅತವಾ ದ್ರಾವಿಡ್ ಅವರು ನೂರನೇ ಪಂದ್ಯದವನ್ನು ತವರಿನಲ್ಲಿ ಆಡುತ್ತಿದ್ದಾರೇನೋ ಎಂಬಂತೆ ಸಂಬ್ರಮ ಪಟ್ಟಿದ್ದರು. ಈ ಪಂದ್ಯವನ್ನು ನೋಡಲು ಬಂದಿದ್ದ ಎ.ಬಿ.ಡಿ. ಕುಟುಂಬ ಬಾರತೀಯರ ಈ ಪ್ರೀತಿಗೆ ನಾವು ಸದಾ ಆಬಾರಿ ಎಂದಿದ್ದರು. ಹೌದು, ಎ.ಬಿ.ಡಿ. ಅಂತಹ ಸಂಬಾವಿತ ಆಟಗಾರರಿಗೆ ದೇಶ, ಬಾಶೆ ಎಂಬ ಚೌಕಟ್ಟು ಇರುವುದಿಲ್ಲ. ಎಲ್ಲರೂ ಇವ ನಮ್ಮವ ಎಂದೇ ಅವರ ಆಟವನ್ನು ನೋಡಿ ಬೆನ್ನು ತಟ್ಟುತ್ತಾರೆ. 2015 ರ ವಿಶ್ವಕಪ್ ನಲ್ಲಿ ಸೋತು ದಕ್ಶಿಣ ಆಪ್ರಿಕಾ ಹೊರನಡೆದಾಗ, ಎ.ಬಿ.ಡಿ. ಕಣ್ಣಾಲಿಗಳು ಒದ್ದೆ ಆಗಿರುವುದನ್ನು ಕಂಡು ಬಾರತೀಯರೂ ಸೇರಿ ನಾನಾ ದೇಶದ ಅಬಿಮಾನಿಗಳು ಕಂಬನಿ ಮಿಡಿದಿದ್ದರು. ಇದೇ ಎ.ಬಿ.ಡಿ. ಅವರು ಸಂಪಾದಿಸಿರುವ ಆಸ್ತಿ. ಬಹುಶ ಅವರನ್ನು ಇಶ್ಟ ಪಡದ ಯೊವೊಬ್ಬ ಕ್ರಿಕೆಟ್ ಪ್ರಿಯನೂ ಇರಲಾರ.
ದಿಡೀರ್ ನಿವ್ರುತ್ತಿ – ಅಬಿಮಾನಿಗಳಿಗೆ ತೀವ್ರ ನಿರಾಸೆ
2016 ರ ನಂತರ ಹಲವು ಬಾರಿ ಗಾಯದ ಸಮಸ್ಯೆಯಿಂದ ಎ.ಬಿ.ಡಿ. ತಂಡದಿಂದ ಹೊರಗುಳಿದರು. 2 ವರ್ಶಗಳ ಕಾಲ ಟೆಸ್ಟ್ ಕ್ರಿಕೆಟ್ ನಿಂದ ದೂರ ಉಳಿದು ಒಂದು ದಿನದ ಮತ್ತು ಟಿ-20 ಪಂದ್ಯಗಳನ್ನಶ್ಟೇ ಆಡಿದರು. ಈ ವೇಳೆ ಹಲವು ಬಾರಿ ಅವರ ನಿವ್ರುತ್ತಿಯ ಊಹಾಪೋಹಗಳು ಹೊರಬಂದಾಗ ಅವುಗಳನ್ನು ಅಲ್ಲಗೆಳೆದರು. ಆದರೆ 2018 ರ ಐಪಿಎಲ್ ನಲ್ಲಿ ಬೆಂಗಳೂರು ತಂಡ ಹೊರನಡೆದ ನಂತರ ಮೇ 23 ರಂದು ಒಂದು ವಿಡಿಯೋ ಸಂದೇಶದ ಮೂಲಕ ಅಂತರಾಶ್ಟ್ರೀಯ ಕ್ರಿಕೆಟ್ ನಿಂದ ಎ.ಬಿ.ಡಿ. ದೂರ ಸರಿಯುತ್ತಿರುವುದಾಗಿ ಹೇಳಿದರು. ‘ನನಗೆ ಸುಸ್ತಾಗಿದೆ, ಕುಟುಂಬದೊಡನೆ ಕಾಲ ಕಳೆಯಬೇಕು ಹಾಗಾಗಿ ಈ ತೀರ್ಮಾನ ಕೈಗೊಂಡಿದ್ದೇನೆ’ ಎಂದು ಸಮಜಾಯಿಶಿ ನೀಡಿದರು. ಆದರೆ ಇವು ಯಾವುವೂ ಅಬಿಮಾನಿಗಳ ನೋವು-ಬೇಸರವನ್ನು ಕಡಿಮೆ ಮಾಡಲಾಗಲಿಲ್ಲ. ದಕ್ಶಿಣ ಆಪ್ರಿಕಾ ಮಾತ್ರವಲ್ಲದೆ ಪ್ರಪಂಚದ ಎಲ್ಲಾ ಕ್ರಿಕೆಟ್ ಆಡುವ ದೇಶಗಳಿಂದಲೂ ಅಬಿಮಾನಿಗಳು, ಕ್ರಿಕೆಟ್ ಪಂಡಿತರು ಬೇಸರ ಹೊರ ಹಾಕಿದರು. ‘ಮುಂದಿನ ವರ್ಶ ವಿಶ್ವಕಪ್ ಇದೆ ದಯವಿಟ್ಟು ಇನ್ನೊಂದು ವರ್ಶ ಆಡಿ’ ಎಂದು ಪ್ರಪಂಚದ ಸಹಸ್ರಾರು ಅಬಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಕೊಂಡರು. ವೈಯಕ್ತಿಕ ದಾಕಲೆ, ರನ್ ಗಳಿಗೆ ಎಂದೂ ಆಡದ ಎ.ಬಿ.ಡಿ, ಎರಡೂ ಮಾದರಿಯ ಕ್ರಿಕೆಟ್ ನಲ್ಲಿ ಹತ್ತು ಸಾವಿರ ರನ್ ಗಳ ಬಳಿ ಇದ್ದರೂ ಅದರ ಬಗ್ಗೆ ವಿಚಾರ ಮಾಡದೆ ತಮ್ಮ ನಿವ್ರುತ್ತಿಯ ತೀರ್ಮಾನವೇ ಅಂತಿಮ ಎಂದು ಹಿಂದೆ ಸರಿದರು. ಇನ್ನು ಏನಿದ್ದರೂ ಟಿ-20 ಲೀಗ್ ಗಳಾದ ಐಪಿಎಲ್, ಪಿಎಸ್ಎಲ್, ಸಿಪಿಎಲ್ ಗಳಲ್ಲಶ್ಟೇ ಅವರ ಆಟ ಸವಿಯಲು ಸಾದ್ಯ. ಹಾಗಾಗಿ ಈ ಸಾಲಿನ ಐಪಿಎಲ್ ನಲ್ಲಿ ಬೆಂಗಳೂರಿನ ಪರ ಆಡುವ ಅವರ ಆಟವನ್ನು ನೋಡಲು ಅಬಿಮಾನಿಗಳು ಕಾತುರದ ಕಣ್ಣುಗಳಿಂದ ಕಾಯುತ್ತಿದ್ದಾರೆ.
ಎ.ಬಿ.ಡಿ – ಕ್ರಿಕೆಟ್ ನ ಸರ್ವಶ್ರೇಶ್ಟ ಬ್ಯಾಟ್ಸ್ಮನ್?
ಎ.ಬಿ.ಡಿ. ತಮ್ಮ ಬ್ಯಾಟಿಂಗ್ ನ ಉತ್ತುಂಗದಲ್ಲಿರುವಾಗ ಹಲವಾರು ಬಾರಿ ಕ್ರಿಕೆಟ್ ಪಂಡಿತರು ಮತ್ತು ಅಬಿಮಾನಿಗಳು ಕೇಳಿದ ಕೇಳ್ವಿ ಇದು. ಬ್ರಾಡ್ಮನ್ ನಂತರ ಎ.ಬಿ.ಡಿ. ಸರ್ವಶ್ರೇಶ್ಟರೇ? ರಿಚರ್ಡ್ಸ್, ಲಾರಾ, ತೆಂಡೂಲ್ಕರ್ ರಿಗಿಂತ ವಿಶಿಶ್ಟ ಬ್ಯಾಟ್ಸ್ಮನ್ ಎ.ಬಿ.ಡಿ. ಮತ್ತು ಬೇರಾವ ದಿಗ್ಗಜನೂ ಆಡದಂತಹ ಹೊಡೆತಗಳನ್ನು, ಇನ್ನಿಂಗ್ಸ್ ಗಳನ್ನು ಅವರಾಡಿದ್ದಾರೆ. ಹಾಗಾಗಿ ಅವರೇ ಸರ್ವಶ್ರೇಶ್ಟ ಎಂಬ ಅನಿಸಿಕೆಗಳು ಕೇಳಿ ಬಂದವು. ಇನ್ನೂ ಕೆಲವರು ‘ಎ.ಬಿ.ಡಿ. ಮನುಶ್ಯರೇ ಅಲ್ಲ!! ಯಾವ ಮನುಶ್ಯ ತಾನೇ ಈ ರೀತಿ ಆಡಲು ಸಾದ್ಯ? ದಯವಿಟ್ಟು ಇವರ ಡಿ.ಎನ್.ಎ. ಪರೀಕ್ಶೆ ಮಾಡಿ’ ಎಂದೂ ಕೆಲವು ಕ್ರಿಕೆಟ್ ಪಂಡಿತರು ತಮಾಶೆಯಾಗಿ ನುಡಿದರು. ಅವರು ಲಯದಲ್ಲಿರುವಾಗ ಅವರ ಆಟವನ್ನು ನೋಡಿ ಕಣ್ಣು ತುಂಬಿಸಿಕೊಂಡ ನಮ್ಮ ಪೀಳಿಗೆಯೇ ಅದ್ರುಶ್ಟಶಾಲಿ ಎನ್ನಬೇಕು. ಕಡೆಯದಾಗಿ ಯಾರ ಅಬಿಪ್ರಾಯ, ಅನಿಸಿಕೆಗಳು ಏನೇ ಇರಲಿ ಎ.ಬಿ.ಡಿ. ಮಾತ್ರ ಕ್ರಿಕೆಟ್ ಜಗತ್ತು ಕಂಡ ಅಪರೂಪದ ಮತ್ತು ಅದ್ವಿತೀಯ ಪ್ರತಿಬೆ ಅನ್ನುವುದರಲ್ಲಿ ಎರಡು ಮಾತಿಲ್ಲ.
( ಚಿತ್ರ ಸೆಲೆ: indiatoday.in, sports.ndtv.com, rediff.com )
ಇತ್ತೀಚಿನ ಅನಿಸಿಕೆಗಳು