ಬಿಗಾರ್ ಜಲಪಾತ – ರೊಮೇನಿಯಾದ ನೈಸರ‍್ಗಿಕ ವಿಸ್ಮಯ

ಕೆ.ವಿ.ಶಶಿದರ.

ಬಿಗಾರ್ ಅಬ್ಬಿ, Bigar Waterfall

ಸಾಮಾನ್ಯವಾಗಿ ಜಲಪಾತಗಳು ಕಣಿವೆಗಳಲ್ಲಿ ಕಂಡುಬರುತ್ತವೆ. ಮೇಲಿಂದ ದುಮುಕುವ ನೀರನ್ನು ನೋಡುವುದೇ ಒಂದು ಆಹ್ಲಾದಕರ ದ್ರುಶ್ಯ. ದುಮುಕುವಾಗ ಅಡ್ಡ ಬಂದ ಕಲ್ಲುಬಂಡೆಗಳಿಗೆ ಬಡಿದು ಸಿಡಿಯುವ ನೋಟ ನಯನ ಮನೋಹರ. ಅದರಲ್ಲೂ ಜಲಪಾತದ ತಳಬಾಗಕ್ಕೆ ಹೋದಲ್ಲಿ ಅಲ್ಲಿ ಕಾಣಸಿಗುವ ದ್ರುಶ್ಯ ಬಣ್ಣಿಸಲಸದಳ. ಈ ರೀತಿಯ ಕಾಣ್ಕೆ ಎತ್ತರದಿಂದ ದುಮುಕುವ ಜಲಪಾತಗಳಲ್ಲಿ ಸಾಮಾನ್ಯ.

ಮಶ್ರೂಮ್ ಆಕಾರದ ಅಬ್ಬಿ

ವಿಶ್ವದ 8 ಸುಂದರ, ಸಾಟಿಯಿಲ್ಲದ ಅಬ್ಬಿಗಳಲ್ಲಿ(ಜಲಪಾತ) ಮುಂಚೂಣಿಯಲ್ಲಿರುವ ಜಲಪಾತ ರೊಮೇನಿಯಾದ ಬಿಗಾರ್ ಜಲಪಾತ. ಇದು ಇತರೆ ಜಲಪಾತಗಳಿಗಿಂತ ವಿಶಿಶ್ಟವಾಗಿರುವುದು ಗುಮ್ಮಟ ಅತವಾ ಮಶ್ರೂಮ್ ಆಕಾರದಿಂದ. ಹಾಗಾಗಿ ಸ್ತಳೀಯರು ಇದನ್ನು ‘ಮಿನಿಸ್ ಆಳಕಣಿವೆಯ(Canyon) ಪವಾಡ” ಎನ್ನುತ್ತಾರೆ. ಮಿನಿಸ್ ಸಣ್ಣ ನದಿ ಹರಿದು ಬರುವ ಹಾದಿಯಲ್ಲಿ ಅಡ್ಡಲಾದ ದೊಡ್ಡ, ನಿಗೂಡ, ಪಾಚಿಯಿಂದ ಆವರಿಸಲ್ಪಟ್ಟ, ಗುಂಡಗಿನ ಬಂಡೆ ಮೇಲಿಂದ ಜಾರುತ್ತದೆ. ನಿದಾನವಾಗಿ ಮತ್ತು ನಯವಾಗಿ 8 ಮೀಟರ್ ಎತ್ತರದಿಂದ ಕೆಳಗಿಳಿಯುವ ನೀರು ತೆಳ್ಳನೆಯ ಪರದೆಯಂತೆ ಕಾಣುವುದು ವಿಶೇಶ. ದೀರ‍್ಗವಾಗಿ ಹರಡಿದ ಹಸಿರು ಕೊಡೆಯಾಕಾರದ ಬಂಡೆಯ ಮೇಲಿಂದ ಮಲ್ಲನೆ ಜಾರುವ ದ್ರುಶ್ಯ ನಿಜಕ್ಕೂ ಅತ್ಯದ್ಬುತ. ಸುತ್ತಲೂ ಇರುವ ಹಸಿರು ಮುಚ್ಚಿದ ಪ್ರದೇಶ ಇದರ ಮೆರುಗನ್ನು ಇಮ್ಮಡಿಗೊಳಿಸಿದೆ. ಹೀಗೆ ಲಾಸ್ಯವಾಡುತ್ತಾ ಕೆಳಗಿಳಿದ ನೀರು ಹರಿದು ಇನ್ನೊಂದು ನದಿಯನು ಸೇರುತ್ತದೆ.ಬಿಗಾರ್ ಅಬ್ಬಿ, Bigar Waterfall

ನೀರು ದುಮುಕುವ ಪ್ರದೇಶದ ಎದುರುಬದಿಯಲ್ಲಿ ನಿಂತು ನೋಡಿದರೆ, ನೀರಿನ ಹರಿವಿನ ಮೂಲ ಪೂರ‍್ಣವಾಗಿ ಮುಸುಕಾಗುತ್ತದೆ, ಕಾಣುವುದಿಲ್ಲ. ಈ ಜಲಪಾತದೊಡನೆ, ಇಲ್ಲಿರುವ ಅತ್ಯಂತ ಸುಂದರವಾದ ನೀಲಿ ಸರೋವರ ಮತ್ತು ಗುಹೆಗಳನ್ನು ಕಾಣಬಹುದು. ಹಸಿರು ರಾಶಿ ಕಣ್ಮನ ಸೆಳೆಯುತ್ತದೆ. ಪ್ರವಾಸಿಗರು ಈ ನಯನ ಮನೋಹರ ದ್ರುಶ್ಯವನ್ನು ನೋಡಿ ಕಣ್ತುಂಬಿಕೊಳ್ಳಲು ಅನುವಾಗುವಂತೆ ಮರದ ಸೇತುವೆಯನ್ನು ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಇದರ ಮೇಲೆ ನಿಂತು ಜಲಪಾತವನ್ನು ತುಂಬಾ ಹತ್ತಿರದಿಂದ ನೋಡಬಹುದು ಮತ್ತು ಪೋಟೋವನ್ನೂ ಕೂಡ ತೆಗೆಯಬಹುದು.

ಈ ಜಲಪಾತದ ಹಿಂದೆ ಒಂದು ಕತೆಯಿದೆ!

ಬಿಗಾರ್ ಜಲಪಾತಕ್ಕೆ ಸಂಬಂದಿಸಿದಂತೆ ಸುಂದರ ಮತ್ತು ದುಗುಡದ ಕತೆಯೊಂದಿದೆ. ಈ ಪ್ರದೇಶದಲ್ಲಿ ಒಂದು ರೈತ ಕುಟುಂಬ ವಾಸಿಸುತ್ತಿತ್ತು. ಅವರಿಗೆ ಸಂತಾನ ಬಾಗ್ಯ ಇರಲಿಲ್ಲ. ಈ ಕಾರಣದಿಂದ ಅತ್ರುಪ್ತಿ, ಹತಾಶೆ ಅವರಲ್ಲಿ ಮನೆ ಮಾಡಿತ್ತು. ಮಕ್ಕಳನ್ನು ಪಡೆಯಬೇಕೆಂಬ ಬಲವಾದ ಬಯಕೆಯಿಂದ ಅಲೆಮಾರಿ ಮಾಟಗಾತಿಯೊಬ್ಬಳ ಮೊರೆ ಹೋಗುತ್ತಾರೆ. ಮಾಟಗಾತಿ ರೈತ ಮಹಿಳೆಗೆ ಅಲ್ಲಿನ ಬುಗ್ಗೆಯ ನೀರನ್ನು ಕುಡಿದಲ್ಲಿ ಮುದ್ದಾದ ಹೆಣ್ಣು ಮಗು ಅವಳದಾಗುತ್ತದೆಂದೂ, ಆ ಮಗು ದೊಡ್ಡವಳಾದ ಮೇಲೆ ಯಾರನ್ನಾದರೂ ಪ್ರೀತಿಸಿದರೆ ಮಗಳಿಗೆ ಸಾವು ನಿಶ್ಚಿತವೆಂದೂ, ಹಾಗಾಗಿ ಅವಳು ಯಾರ ಪ್ರೀತಿಯ ಪಾಶಕ್ಕೆ ಬೀಳಬಾರದು ಎಂದು ತಿಳಿಸುತ್ತಾಳೆ.

ಮಾಟಗಾತಿ ಹೇಳಿದಂತೆ, ರೈತ ಮಹಿಳೆ ಬುಗ್ಗೆಯ ನೀರನ್ನು ಕುಡಿಯುತ್ತಾಳೆ. ಆ ನೀರನ್ನು ಕುಡಿದ ಕಾರಣ ಸುಂದರವಾದ ಹೆಣ್ಣು ಮಗುವಿಗೆ ಜನ್ಮವಾಗುತ್ತದೆ. ಬೆಳೆದು ದೊಡ್ಡವಳಾದ ಆ ರೈತನ ಮಗಳು ಬಿಗಾರ ಎಂಬ ಯುವಕನ ಪ್ರೇಮ ಪಾಶದಲ್ಲಿ ಸಿಲುಕುತ್ತಾಳೆ. ಯಾವುದು ಆಗಬಾರದೆಂದು ಮಾಟಗಾತಿ ಹೇಳಿದ್ದಳೋ ಅದು ನಡೆದುಹೋಗುತ್ತದೆ. ಇದನ್ನು ತಿಳಿದ ಪೋಶಕರು ಮಗಳ ಸಾವನ್ನು ತಪ್ಪಿಸಲು ಆಕೆಯನ್ನು ಗುಹೆಯಲ್ಲಿ ಅಡಗಿಸಿಡಲು ತೀರ‍್ಮಾನಿಸುತ್ತಾರೆ.

ಗುಹೆಯಲ್ಲಿ ಬಂದಿತಳಾದ ಹುಡುಗಿ ದುಕ್ಕದಿಂದ ಜೋರಾಗಿ ಅಳಲು ಪ್ರಾರಂಬಿಸಿದಾಗ, ಈಕೆಯ ಅಳುವಿನ ಸದ್ದನು ಕೇಳಿ ಮಾಟಗಾತಿ ಅವಳ ಮುಂದೆ ಬಂದು, “ನಿನ್ನನ್ನು ಈ ಗುಹೆಯಿಂದ ಬಿಡುಗಡೆ ಮಾಡಲು ನನ್ನಿಂದ ಸಾದ್ಯವಿಲ್ಲ, ಆದರೆ ನಿನ್ನ ಪ್ರಿಯತಮನನ್ನು ಸೇರಲು ಸಹಾಯ ಮಾಡುವೆ” ಎಂಬ ಬರವಸೆ ನೀಡಿ ಆಕೆಯ ನೋವಿಗೆ ಕೊನೆ ಹಾಡುತ್ತಾಳೆ. ರೈತನ ಮಗಳ ಕೂದಲನ್ನು ಹರವಿ, ಅದರ ಮೇಲೆ ಬಿದ್ದ ಆಕೆಯ ಕಣ್ಣೀರನ್ನು ಜಲಪಾತದ ಪರದೆ ಮಾಡಿ, ಗುಹೆಯಲ್ಲಿ ಬಿಗಾರನನ್ನು ಅವಳ ಬಳಿ ಸೇರಿಸಿ, ಪ್ರೇಮಿಗಳನ್ನು ಶಾಶ್ವತವಾಗಿ ಒಂದು ಮಾಡಿದಳು ಎನ್ನುತ್ತದೆ ಆ ಕತೆ.

ಪಶ್ಚಿಮ ರೊಮೇನಿಯಾದ ಕಾರಸ್-ಸೆವೆರಿನ್ ಕೌಂಟಿಯಲ್ಲಿನ ಬೊಜೋವಿಚ್ ಪಟ್ಟಣದ ಬಳಿ ಈ ನಯನ ಮನೋಹರ ಜಲಪಾತವಿದೆ. ಸುತ್ತಾಡುಗರಿಗೆ ಒಂದೊಳ್ಳೆ ತಾಣವಿದು.

( ಮಾಹಿತಿ ಮತ್ತು ಚಿತ್ರ ಸೆಲೆ: awakeningstate.com, atlasobscura.com, uncover-romania.com )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ಮಾರಿಸನ್ ಮನೋಹರ್ says:

    ಅದ್ಭುತ !!!

  2. Sandeep R B says:

    ತುಂಬ ಚನ್ನಗಿದೆ , ದಯವಿಟ್ಟು ಅಮೆಜಾನ್ ಹಾಗೂ ಮಹಾನದಿ ನೈಲ್ ಬಗ್ಗೆ ಬರಿಯಿರಿ

ಅನಿಸಿಕೆ ಬರೆಯಿರಿ: