ಮಾವಿಗೆ ಮಾವೇ ಸಾಟಿ!

ಮಾರಿಸನ್ ಮನೋಹರ್.

ಮಾವು, ಮಾವಿನಹಣ್ಣು, Mango

ಮಾವಿನಹಣ್ಣುಗಳನ್ನು ಎಶ್ಟು ಹೊಗಳಿದರೂ ಸಾಲದು, ಎಶ್ಟು ತಿಂದರೂ ಮನದಣಿಯದು. ಹೊಟ್ಟೆ ಬೇಡವೆನ್ನುತ್ತದೆ ಆದರೆ ಮನವು, ಊಹೂಂ, ಇಲ್ಲವೇ ಇಲ್ಲ. ಹಳ್ಳಿ ಕಡೆಗೆ ಹೋಗಿ ಮಾವಿನ ತೋಪು ಇರುವವರ ಬಳಿ ಕೊಳ್ಕೊಡುಗೆ ಕುದುರಿಸಿ 100-150 ಮಾವಿನಕಾಯಿ ತರುತ್ತೇವೆ. ಅವುಗಳನ್ನು ಹಣ್ಣುಮಾಡಲು ಕಳವೆ ಒಣಹುಲ್ಲು (ಬತ್ತದ ಒಣಹುಲ್ಲು) ತಂದು ಅದರಲ್ಲಿ ಕೆಲವು ದಿನ ಇಡುತ್ತೇವೆ. ಒಂದು ವಾರ ಆದ ಮೇಲೆ ಮಾವಿನಕಾಯಿಗಳು ಹಣ್ಣುಗಳಾಗಿ, ಮನೆಯಲ್ಲೆಲ್ಲಾ ಅದರ ಗಮಗಮ ಪರಿಮಳ ತುಂಬಿ ತುಳುಕುತ್ತದೆ. ರೂಂ ಪ್ರೆಶ್ನರ್ ಬೇಕಾಗಿಯೇ ಇಲ್ಲ!

ಒಂದು ಬಕೆಟಿನಲ್ಲಿ ತಣ್ಣೀರು ತೆಗೆದುಕೊಂಡು ಅದರಲ್ಲಿ ಇಪ್ಪತ್ತು ಮಾವಿನಹಣ್ಣುಗಳನ್ನು 5 ನಿಮಿಶ ಇಡುತ್ತೇನೆ. ಆಮೇಲೆ ಒಂದೊಂದಾಗಿ ಹಣ್ಣನ್ನು ತೆಗೆದುಕೊಂಡು ಚೆನ್ನಾಗಿ ಒತ್ತಿ ಒತ್ತಿ ಮೆತ್ತಗೆ ಮಾಡಿ ಹಣ್ಣಿನ ‘ತುಂಬು’ ತೆಗೆದು ಚೀಕು ಹಾರಿಸಿ, ಹಣ್ಣನ್ನು ಹಿಂಡಿ ಹಿಂಡಿ ಬಟ್ಟಲಲ್ಲಿ ರಸ ತೆಗೆದು ಅದಕ್ಕೆ ಬೇಕಾದರೆ ಸ್ವಲ್ಪ ಸಕ್ಕರೆ ಹಾಕಿಕೊಳ್ಳುತ್ತೇನೆ. ಏಲಕ್ಕಿ ಪುಡಿ ನಾನು ಹಾಕಲ್ಲ, ಹಾಕುವುದೂ ಇಲ್ಲ. ಯಾಕೆಂದರೆ ಅದರಿಂದ ಮಾವಿನ ಪರಿಮಳ ಹೋಗಿಬಿಡುತ್ತೆ. ಈ ರಸದ ಬಟ್ಟಲನ್ನು ಕೆಲಹೊತ್ತು ತಂಪುಪೆಟ್ಟಿಗೆಯಲ್ಲಿ ಇಡುತ್ತೇನೆ. ಬಿಸಿಬಿಸಿ ಚಪಾತಿ ತಯಾರು ಆಗುತ್ತಲೇ ಮಾವಿನರಸವನ್ನು ಹೊರತೆಗೆದು ಆ ಬಟ್ಟಲಲ್ಲಿ ಚಪಾತಿ ಅದ್ದಿ ಬಾಯಲ್ಲಿ ಇಟ್ಟಾಗ ಆಗುವ ಆನಂದ ಹೇಗೆ ಹೇಳಲಿ!!!

ಹೊಟ್ಟೆ ತುಂಬುವವರೆಗೆ ಅಲ್ಲ ನನ್ನ ಮನ ತಣಿಯುವವರೆಗೆ ತಿನ್ನುತ್ತಲೇ ಹೋಗುತ್ತೇನೆ. ಹೊಟ್ಟೆಯ ಚಿಂತೆಯೇ? ಹೊಟ್ಟೆ ಮೂರು ನಾಲ್ಕು ದಿನಗಳಲ್ಲಿ ತಾನೇ ಸರಿಯಾಗುತ್ತೆ. ಆದರೆ ರುಚಿಕರ ಮಾವು ಮತ್ತೆ ಮತ್ತೆ ಬರುತ್ತದೇನು? ಇಲ್ಲವೇ ಇಲ್ಲ. ಅದಕ್ಕೆ ಹೊಟ್ಟೆಯ ಚಿಂತೆ ನನಗಿಲ್ಲ. ಮಾವು ಚೆನ್ನಾಗಿ ಹಣ್ಣಾಗಿರಬೇಕು. ಅದನ್ನು ಮಾತ್ರ ನೆನಪಿನಲ್ಲಿ ಇಡಿ, ಅರ‍್ದ ಹಣ್ಣಾಗಿದ್ದರೆ ಅದರಲ್ಲಿ ಹುಳಿ ಇರುತ್ತೆ. ಇದು ಹೊಟ್ಟೆಗೆ ಒಳ್ಳೆಯದಲ್ಲ, ಆಸಿಡಿಟಿ ಹೆಚ್ಚಿಸುತ್ತೆ. ಇದೇ ಕಾರಣಕ್ಕೆ ನಾನು ಹೊರಗಿನಿಂದ ಮಾವಿನಹಣ್ಣು ಕೊಳ್ಳುವುದಿಲ್ಲ.

ಸ್ಕೂಲು ದಿನಗಳಲ್ಲಿ ಅದೂ ಬೇಸಿಗೆ ರಜದಲ್ಲಿ ಮಾವಿನ ಮರಕ್ಕೆ ಕಲ್ಲು ತೂರಿ ಮಿಡಿ ಮಾವಿನಕಾಯಿಗಳನ್ನು ಮರದಿಂದ ಉದುರಿಸಿ, ಆ ಮಿಡಿ ಮಾವಿನಕಾಯನ್ನು ಹಲ್ಲಲ್ಲಿ ಕಚ್ಚಿ ಇಲ್ಲವೇ ಈಳಿಗೆ ಮಣೆಯಲ್ಲಿ ಕೊಯ್ದು, ಅದರ ಮೇಲೆ ಉಪ್ಪು ಕಾರ ಉದುರಿಸಿ ತಿನ್ನುತ್ತಿದ್ದನ್ನು ನೆನೆಸಿಕೊಂಡರೆ, ಆಹಾ ಈಗಲೂ ಬಾಯಲ್ಲಿ ನೀರೂರುತ್ತೆ. ಇದನ್ನು ಎಲ್ಲರೂ ಚಿಕ್ಕವರಿದ್ದಾಗ ಮಾಡೇ ಮಾಡಿರುತ್ತಾರೆ. ಕೆಲವೊಂದು ಸಲ ಮಾವಿನಕಾಯಿಯನ್ನು ಕೊಯ್ದು ಆ ಹೋಳಿನ ಮೇಲೆ ಕಲ್ಲುಪ್ಪನ್ನು ಉಜ್ಜಿ ಹೊರಬಂದ ರಸವನ್ನು ಆಸೆಯಿಂದ ನೆಕ್ಕುತ್ತಿದ್ದೆವು! ಗೆಳೆಯರೆಲ್ಲಾ ಕೂಡಿ ಮಂದಿಯ ಮಾವಿನ ಗಿಡಗಳಿಗೆ ಕಲ್ಲು ತೂರುತ್ತಿದ್ದಾಗ, ಮರ ಕಾಯುವವರಿಂದ ಬಹಳಶ್ಟು ಬೈಗುಳಗಳನ್ನು ತಿಂದದ್ದೂ ಇದೆ. ಮಾವಿನ ತೋಪುಗಳಲ್ಲಿ ಮರ ಕಾಯುವವರು ಮರಗಳಿಗೆ ಉದ್ದಕ್ಕೆ ಚಪ್ಪಲಿ ಕಟ್ಟಿ ತೂಗಿ ಬಿಟ್ಟಿರುತ್ತಾರೆ. ಅದರ ಅರ‍್ತ ‘ಗಿಡಗಳು ಕಾವಲಿನಲ್ಲಿ ಇವೆ ಕದಿಯಲು ಬಂದರೆ ಏನಾಗಬಹುದು’ ಎಂಬ ಇನ್‌ಡೈರೆಕ್ಟ್ ಮೆಸೇಜ್!

ಮನೇಲಿ ಅಮ್ಮ ಮಾವಿನಕಾಯಿ ಮಿಡಿ ಇಲ್ಲವೇ ಸ್ವಲ್ಪ ಬಲಿತ ಮಾವಿನಕಾಯಿಗಳಿಂದ ಚಟ್ನಿ ಮಾಡುತ್ತಿದ್ದಳು. ಇದರ ರುಚಿಯನ್ನಂತೂ ಮರೆಯುವ ಹಾಗೇ ಇಲ್ಲ. ಮಾವಿನಕಾಯಿಗಳ ಸಿಪ್ಪೆ ತೆಗೆದು ಅದನ್ನು ಕುಟ್ಟಿ, ಹುಳಿ ಸೋಸಿಬಿಟ್ಟು ಅದಕ್ಕೆ ಜೀರಿಗೆ ಈರುಳ್ಳಿ ಉಪ್ಪು ಕಾರ ಕಲಸಿ ಒಗ್ಗರಣೆ ಕೊಟ್ಟು, ಐದು ನಿಮಿಶ ಹಂಚಿನ ಮೇಲೆಯೇ ತಾಳಿಸಿದರೆ ರೆಡಿ! ಇದು ಬಿಸಿಬಿಸಿ ಅನ್ನ-ತುಪ್ಪದ ಜೊತೆ ತುಂಬಾ ಒಳ್ಳೇ ಜೋಡಿ. ರೊಟ್ಟಿ ಚಪಾತಿಯೊಂದಿಗೂ ಚೆನ್ನಾಗಿರುತ್ತೆ .ಯಾವುದೇ ಉಪ್ಪಿನಕಾಯಿಗಿಂತಲೂ ಈ ತಾಜಾ ಚಟ್ನಿ ರುಚಿಕಟ್ಟಾಗಿರುತ್ತೆ.

ನನ್ನ ಅಜ್ಜಿ ಮಿಡಿ ಮಾವಿನಕಾಯಿಗಳಿಂದ ‘ಅರೆ ಉಪ್ಪಿನಕಾಯಿ’ ಮಾಡುತ್ತಾಳೆ. ಅರೆ ಉಪ್ಪಿನಕಾಯಿ ಅಂತ ಯಾಕೆ ಹೇಳಿದೆ ಅಂದರೆ ಇದು ಪಕ್ಕಾ ಉಪ್ಪಿನಕಾಯಿ ಅಲ್ಲ. ಮಿಡಿಗಳನ್ನು ಕೊಯ್ದು ಅದಕ್ಕೆ ಕಾರ ಉಪ್ಪು ಸ್ವಲ್ಪ‌ ಹಸಿ ಎಣ್ಣೆ ಸೇರಿಸಿದರೆ ಇದು ರೆಡಿ. ಇರುಳು ಮಾಡಿಟ್ಟರೆ ಮುಂಜಾನೆ ಅನ್ನ ರೊಟ್ಟಿ ಚಪಾತಿಯೊಂದಿಗೆ ನೆಂಚಿಕೊಳ್ಳಲು ಚೆನ್ನಾಗಿರುತ್ತೆ. ನಾನು ಬಿಸಿ ಅನ್ನ ಹೆಸರುಬೇಳೆ ಸಾರಿನೊಂದಿಗೆ ನೆಂಚಿಕೊಳ್ಳುತ್ತೇನೆ, ಸೂಪರಾಗಿರುತ್ತೆ. ಮಟನ್ ಸಾರಿನಲ್ಲಿ ಟೊಮೆಟೋ ಹಣ್ಣಿನ ಜೊತೆ ಬಲಿತ ಮಾವಿನ ಕಾಯಿ ಹೋಳು ಸೇರಿಸಿ ಮಾಡಿದರೆ ಮಟನ್ ಸಾರು, ರಾಗಿ ಮುದ್ದೆ ಅನ್ನ ರೊಟ್ಟಿ ಯಾವುದಾದರೂ ಸರಿ ತುಂಬಾ ಬೊಂಬಾಟ್ ಆಗಿರುತ್ತೆ.

ಇನ್ನೂ ನಾನು ಮಾವಿನ ಹಣ್ಣಿನ ರಸ ಹಾಗೂ ಬೆರಕೆ ದೋಸೆಗಳ ಬಗ್ಗೆ ಹೇಳಿಯೇ ಇಲ್ಲ. ಬೆರಕೆ ದೋಸೆ ಅಂತ ಯಾಕೆ ಕರೆಯುತ್ತಾರೆ ಅಂತ ಅಮ್ಮನಿಗೆ ಕೇಳಿದೆ. ಕಡಲೆಬೇಳೆ, ಜೋಳ, ಗೋದಿ, ಉದ್ದಿನಬೇಳೆ, ತೊಗರಿಬೇಳೆ, ಹೆಸರುಬೇಳೆ ಇವೆಲ್ಲ ಹಾಕಿಕೊಂಡು ಬೀಸುತ್ತಾರೆ. ಆ ಬೆರಕೆ ಹಿಟ್ಟಿನಿಂದ ದೋಸೆ ಹೊಯ್ಯುತ್ತಾರೆ. ವಿಶೇಶ ಅಂದರೆ ಈ ದೋಸೆ ಹಂಚಿನ ಮೇಲೆ ಹೊಯ್ದು ಅದನ್ನು ಮಡಚಿದ ಮಾವಿನ ಎಲೆಯಿಂದ ಹರಡುತ್ತಾರೆ. ಈ ಬೆರಕೆ ದೋಸೆಯನ್ನು ಮಹಾರಾಶ್ಟ್ರದ ಕಡೆಯೂ ಮಾಡುತ್ತಾರೆ, ಕಾಂದೇಶ್ (ಕನ್ನಡ ದೇಶ) ಕಡೆ ತುಂಬಾ ಪೇಮಸ್. ಅಲ್ಲಿ ಇದಕ್ಕೆ ‘ದ್ಹೀರಡೆ’ ಅಂತ ಕರೆಯುತ್ತಾರೆ. ಬೇಸಿಗೆಯಲ್ಲಿ ಮಾವಿನರಸದ ಜೊತೆ ಬೆರಕೆ ದೋಸೆ ಬಡಗಣ ಕರ‍್ನಾಟಕದ ಕಡೆ ಪ್ರಸಿದ್ದ. ಇದು ಮಾಡದೆ ಬೇಸಿಗೆ ಪೂರಾ ಆಗುವುದಿಲ್ಲ.

ಬಲಿತ ಮಾವಿನಕಾಯಿ ಹೋಳುಗಳನ್ನು ಉಪ್ಪು ಹಚ್ಚಿ ಬಿಸಿಲಲ್ಲಿ ಒಣಗಿಸಿದಾಗ ‘ಆಮ್ ಚೂರ್’ ತಯಾರಾಗುತ್ತೆ. ಇದು ಬಡಗಣ ಇಂಡಿಯಾದ ಕಡೆ ಪೇಮಸ್ ‘ಆಮಚೂರ’ ಪುಡಿಯಾಗಿ ಚಾಟ್ ಮಸಾಲದಲ್ಲಿ ಬಳಕೆಯಾಗುತ್ತದೆ. ಈ ಒಣಗಿದ ಹೋಳುಗಳನ್ನು ಸಾಂಬಾರ್ ಮಾಡುವಾಗ, ಹುಳಿಸಾರು ಮಾಡುವಾಗ ಬಳಸುತ್ತಾರೆ. ಮಾವಿನಕಾಯಿ ಸುಟ್ಟು ಅದರ ಹುಳಿ ತೆಗೆದು ಅಪ್ಪೆಹುಳಿ ಅಂತಲೂ ಮಾಡುತ್ತಾರೆ.

( ಚಿತ್ರ ಸೆಲೆ: kirkmarket.ky )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: