ಯುಗಾದಿ ನೆನಪಿಸುವ ‘ಹೋಳಿಗಿ’

ಮಾಲತಿ ಮುದಕವಿ.

ಹೋಳಿಗೆ, ಒಬ್ಬಟ್ಟು, hOLige

 

ಇದು ಬಾಳ ಹಿಂದಿನ ಸುದ್ದೀ. ನಮ್ಮ ಮನ್ಯಾಗ ಮಡೀ ಬಾಳ. ಹಿಂಗಾಗಿ ನಾವು ಅಕ್ಕಾ ತಂಗೀ ಅಡಿಗೀ ಮನಿಂದ ಯಾವಾಗಲೂ ದೂರನ. ಆದರೂ ಅಕ್ಕಗ ತಿಂಗಳದಾಗಿನ ಮೂರ ದಿನಾ ಅವ್ವನಿಂದ ಅಡಿಗೀದು ಪ್ರ್ಯಾಕ್ಟಿಕಲ್ ನಾಲೆಜ್ ಒಂದಿಶ್ಟು ಸಿಕ್ಕಿತ್ತು. ನಂಗಂತೂ ಶೂನ್ಯ. ಅಕ್ಕ ನನಗಿಂತಾ ಸಾಕಶ್ಟು ದೊಡ್ಡಾಕಿ. ನಂದು ಪ್ರೈಮರಿ ಮುಗಿಯೂದರಾಗನ ಅಕಿ ಮದಿವ್ಯಾಗಿ ಹೋದ್ಲು. ಒಬ್ಬಾಕೇ ಅಂತ ಅವ್ವಾ ನನಗ ಹೆಚ್ಚಿನ ಕೆಲಸಾನೂ ಹಚ್ಚತಿದ್ದಿಲ್ಲಾ. ಸಾಲಿ ಗೀಲೀ, ಅಬ್ಯಾಸಾ ಅಂತ ಹಂಗ ಉಂಡಾಡಿ ಗುಂಡಕ್ಕನಂಗ ಇದ್ದೆ.

ನನ್ನ ಪಿಜಿ ಮುಗಿಯೂದರಾಗನ ಅಪ್ಪ ಲಗ್ನಾ ಮಾಡಿದ್ದಾ. ಅಲ್ಲೀ ತನಕಾ ಲಗ್ನಾಂತಂದ್ರ ಜೋಡೀ ಅಡ್ಯಾಡಲಿಕ್ಕೆ, ಹರಟಿ ಹೊಡೀಲಿಕ್ಕೆ ಜೋಡೀದಾರ ಸಿಗತಾನ, ಗೆಳತ್ಯಾರನ ಹುಡಿಕ್ಕೊಂಡ ಹೋಗಬೇಕಾಗಿಲ್ಲಂತ ಅನಕೊಂಡ ಕುಶ್ಯಾಗಿದ್ದೆ. ಹಂಗೂ ಒಂದಿಶ್ಟು ದಿನಾ ಅತ್ತೀಮನಿ, ತವರಮನಿ ಅಂತ ಅಡಿಗೀಮನೀಯೊಳಗ ಹೋಗಲಾರದನ ಕಳದೆ. ನನ್ನ ಗಂಡ ಬಿಳಿಗೆರೆಯ ಕಾಲೇಜಿನೊಂದರಾಗ ಲೆಕ್ಚರರು. ಅಲ್ಲಿಗೆ ನಾವು ಪೆಬ್ರವರಿ ತಿಂಗಳದಾಗ ಹೋಗಿದ್ವಿ. ಹಳ್ಳಿಯ ವಾತಾವರಣ. ತುಂಬಾ ಸುಂದರ. ಆದರ ಪ್ಯಾಟಿಯ ಯಾವದ ವಸ್ತು ಅಲ್ಲೆ ಸಿಗತಿದ್ದಿಲ್ಲಾ. ಕಾಯಿಪಲ್ಲೆ ತರಲಿಕ್ಕೂ ತಿಪಟೂರನ ಗತಿ. ಇಂತಾದರಾಗ ಯುಗಾದಿ ಹಬ್ಬ ಬಂತು. ಅಡಿಗೀ ಏನ ಮಾಡೋದಂತ ಇಬ್ಬರೂ ಲೆಕ್ಕಾ ಹಾಕ್ತಿದ್ವಿ. ಅವ್ವ ಮಾಡೋ ಹೂರಣದ ಹೋಳಿಗಿ ನೆನಪಾದ್ವು. ಮೆತ್ತಗ ರೇಶ್ಮೀಯಂತಾ ಹೋಳಿಗಿ!!

ನಮ್ಮ ಯಜಮಾನ್ರು ಕೇಳಿದ್ರು, “ಅಲ್ಲಾ… ನಿಂಗ ಬರತಾವೇನ ಮಾಡ್ಲಿಕ್ಕೇ..? ಯಾಕಂದ್ರ ಅವನ್ನ ಮಾಡ್ಲಿಕ್ಕೆ ಬಾಳ ಶಾಣೇತನಾ ಬೇಕಂತ… ನಮ್ಮವ್ವ ಅಂತಿದ್ಲೂ”.

ನಾ ಹೇಳಿದ್ದೆ,”ಅಯ್ಯ, ಅದರಾಗೇನದ ಶಾಣೇತನಾ? ಅದೇನ ಪಂಪನ ಕಾವ್ಯನ? ಕುಮಾರವ್ಯಾಸನ ಬಾರತಾನ? ಹೂರಣಾ ಕುದಸೂದೂ… ಕಣಕಾ ಕಲಸೂದೂ… ಅದರಾಗ ತುಂಬಿ ಲಟ್ಟೀಸಿ ಎಣ್ಣೀ ಬಿಟ್ಟ ಎರಡೂ ಬಾಜೂ ಬೇಯ್ಸೂದೂ… ” ಅಂತ!

ಎಶ್ಟು ಬ್ಯಾಳೀ ಹಾಕೋದೂ? ಅವರ ಗೆಳ್ಯಾ ಒಬ್ಬಾಂವ ಬರಾಂವಿದ್ದಾ. ಅಂವಾ ಬ್ಯಾಚುಲರ್. ಪಾಪ, ಹಬ್ಬ ಅಂತ ಕರದಿದ್ವೀ! ಇಬ್ಬರೂ ವಿಚಾರ ಮಾಡಿ, ಎರಡ ವಾಟಗಾ ಹಾಕೋದಂತ ಟರಾಯ್ಸಿದ್ವಿ(ತೀರ‍್ಮಾನಿಸಿದ್ವಿ) ಬೆಲ್ಲಾ, ಸರಿಕ್ಕ ಸರಿ. ಅದೂ ಎರಡ ವಾಟಗಾ. ಬತ್ತೀ ಸ್ಟವ್ ಮ್ಯಾಲ ಕುಕ್ಕರಿಟ್ವೆ (ಈ ಕುಕ್ಕರು ಆವಾಗಿನ್ನೂ ಪ್ಯಾಟಿಗೆ ಬಂದಿತ್ತು ಹೊಸದಾಗಿ. ನಮಗ ಪ್ರೆಸೆಂಟ್ ಬಂದಿತ್ತು) ಬೆಲ್ಲಾ, ಬ್ಯಾಳಿ, ನೀರು…ಸೀಟೀನು ಆತು.. ಈಕಡೆ ಕಣಕಾನೂ ತಯಾರಾಗಿತ್ತು. ಪ್ರೆಶರ್ ನೂ ಇಳೀತೂ. ನೋಡತೇನೀ.. ಬ್ಯಾಳಿ ಒಂದರ ಬೆಂದಿರಬೇಕೂ? ಎಲ್ಲಾ ಕಗ್ಗಲ್ಲಿನ್ಹಾಂಗ ಕೂತಿದ್ವೂ. ಮತ್ತ ನೀರ ಹಾಕಿದೆ. ಮತ್ತ ಸೀಟಿ ಹೊಡಿಸಿದೆ. ಊಂಹೂಂ… ಏನೂ ಉಪಯೋಗ ಆಗಲಿಲ್ಲಾ. ತಲೀ ಮ್ಯಾಲ ಕೈಹೊತ್ತ ಕುಂತೆ. ಹಸಿವ್ಯಾರೆ ಬಾಳ ಆಗಿತ್ತು. ಅನ್ನಕ್ಕೂ ಇಟ್ಟಿದ್ದಿಲ್ಲಾ. ಕಲಸಿಟ್ಟ ಕಣಕದಲೆ ಚಪಾತಿ ಮಾಡಬೇಕಂದ್ರ ಅದು ಅಳ್ಳಕ ರಾಡಿ! ಅದಕ್ಕ ಇನ್ನಶ್ಟು ಕಣಕಾ ಕೂಡ್ಸಿ ಚಪಾತಿ ಮಾಡಬೇಕಂತ ವಿಚಾರ ಮಾಡಿ ಮತ್ತ ಎರಡ ವಾಟಗಾ ಕೂಡ್ಸಿ ಕಲಸೀದೆ. ನನಗ ಬಾಳ ನಾಚಿಕಿ ಆಗಿಬಿಟ್ಟಿತ್ತು. ಎಶ್ಟೆಲ್ಲಾ ಕೊಚಗೊಂಡಿದ್ದೆ.. ಈಗ!

ಮದ್ಯಾನ 1 ಹೊಡದಿತ್ತು. ನಮ್ಮವರು ತಮ್ಮ ಗೆಳ್ಯಾನ್ನ ಬ್ಯಾರೆ ಊಟಕ್ಕ ಕರದಿದ್ರೂ. ಅವನನ್ನ ಕರೀಲಿಕ್ಕಂತ ಅವನ ರೂಮಿಗೆ ಹೋಗಿದ್ರು. ಬರಾ ಬರಾ ಕಾಯಿಪಲ್ಯಾ ಹೆಚಗೊಂಡೆ. ಕಣ್ಣು ತುಂಬ ನೀರ ತುಂಬಿದ್ವು. ಉಳ್ಳಾಗಡ್ಡೀ ಕಾಕಿಗೋ, ಅವ್ವನ ನೆನಪಾಗ್ಯೋ ಗೊತ್ತಿಲ್ಲಾ. ಹಂಗನ ಕಣ್ಣು ಮೂಗೂ ಒರಿಸಿಕೋತ(!) ಕುಕ್ಕರಿನ್ಯಾಗಿನ ಬ್ಯಾಳೀ ಎಲ್ಲಾ ಬಚ್ಚಲಕ್ಕ ಸುರವಿ, ಕುಕ್ಕರ ತೊಳಕೊಂಡು, ಅಕ್ಕಿ, ಬ್ಯಾಳಿ ಬೇಯಸಾಕ್ಕಿಟ್ಟೆ. ಇಶ್ಟ ಮಾಡಲಿಕ್ಕೆ ಇನ್ನೂ ಅರ‍್ದಾ ತಾಸಾರ ಬೇಕಿತ್ತು. ಆವಾಗೇನ ಈಗಿನ್ಹಂಗ ಗ್ಯಾಸ? ನಾಲ್ಕ ನಾಲ್ಕ ಬರ‍್ನರ? ಇದ್ದು ಬಿದ್ದೂ ಎರಡ ಸ್ಟವ್. ಒಂದ ಬತ್ತೀದು. ಇನ್ನೊಂದು ಬರ್ ಅಂತ ಒದರವ್ವಾ! ಸೀ(ಸಿಹಿ) ಏನ ಮಾಡೋದಂತ ವಿಚಾರ ಮಾಡಿದೆ. ಮನ್ಯಾಗ ಒಂದಶ್ಟು ಬಾಳೆಹಣ್ಣು ಇದ್ದದ್ದ ನೆನಪಾತು.

ಬಾಗಲಾ ಬಡದ ಸಪ್ಪಳಾತು. ಅಯ್ಯ ದೇವರ, ಬಂದಬಿಟ್ರೇನೋ ಇವ್ರಂತನಕೊಂಡ ಬಾಗಲಾ ತಗದೆ. ಬಾಜೂ ಮನೀ ಪಾರ‍್ವತಮ್ಮ. ನಾ ಅವ್ರಿಗೆ ಅಮ್ಮಂತನ ಅನತಿದ್ದೆ(ಅಂತಿದ್ದೆ). ಅವರ ಕೈಯಾಗ ಏನೇನೋ ಬಾಂಡೆ(ಪಾತ್ರೆ). ಒಳಗ ಬಂದ್ರು.

“ಏನಮ್ಮ, ಈಗ ಅಡಿಗೆ ಮಾಡ್ತಿದೀಯ? ಒಬ್ಬಟ್ಟು, ಚಿತ್ರಾನ್ನ, ಪಾಯಸ ಎಲ್ಲಾ ತಂದಿದೀನೀ… ನೀನು ಮಾಡಿರೋದ್ನ ರಾತ್ರಿಗೆ ತಿನ್ನಿ” ಎಂದು ಹೇಳಿ ಎಲ್ಲಾ ಅಡಿಗಿ ಇಟ್ಟು ಹೋದರು.

ನನಗ ಕಣ್ಣು ತುಂಬಿ ಬಂದಿದ್ವು. ಅವ್ವನಂತ ಅವರ ಅಂತಕ್ಕರಣದಿಂದಾಗಿ ನನ್ನ ಮಾರಿ ಮ್ಯಾಲ ಹಬ್ಬದ ಕುಶೀ ಮೂಡಿತ್ತು. ನನ್ನ ಬಾಕಿ ಅಡಿಗಿ ಆಗು ಹೊತ್ತಿಗೆ ನಮ್ಮ ಗೆಸ್ಟು ಬಂದ್ರೂ. “ವ್ಹಾ.. ವ್ಹಾ.. ಏನ ಹೋಳಿಗಿ ಆಗ್ಯಾವರೀ”  ಅಂತನಕೋತ ಊಟಾ ಮಾಡಿ ಹೋದ್ರೂ.

ಇದಾ ನನಗ ಯುಗಾದಿ ದಿನಾ ಬೆಲ್ಲಾ ತಿಂದಂತಾ ಅನುಬವ!! ಇಂದು ಏನೇನೆಲ್ಲ ಅಡಿಗಿ ಮಾಡಿದ್ರು ಅವತ್ತಿನ ಅನುಬವಾ ಇನ್ನೂ ಹಸಿರು 🙂

( ಚಿತ್ರ ಸೆಲೆ: honalu )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *