ಆಪ್ರಿಕಾದ ಕ್ರೂರ ಕಾಡುನಾಯಿಗಳು

– ಮಾರಿಸನ್ ಮನೋಹರ್.

wild dog, ಕಾಡು ನಾಯಿ

ಹುಲಿ, ಸಿಂಹ, ಚಿರತೆ ತಮ್ಮ ಬೇಟೆಯ ಕುತ್ತಿಗೆಯನ್ನು ಕಚ್ಚಿ ಹಿಡಿದು, ಉಸಿರನಾಳ ಒತ್ತಿಹಿಡಿದು ಕೊಲ್ಲುತ್ತವೆ. ಆದರೆ ಈ ಪ್ರಾಣಿಗಳು ತಮ್ಮ ಬೇಟೆ ಇನ್ನೂ ಬದುಕಿರುವಾಗಲೇ ಅವುಗಳ ಹೊಟ್ಟೆಯನ್ನು ಬಗೆದು, ಕರುಳು ಹೊರಗೆ ಎಳೆದು ತಿನ್ನುತ್ತವೆ! ಇವುಗಳ ಬೇಟೆಯಾಡುವ ಪರಿ ಎಂತಹವರನ್ನೂ ಮೈನಡುಗಿಸದೇ ಇರದು. ಇವೇ ಆಪ್ರಿಕಾದ ಬಯಂಕರ ಕ್ರೂರ ಕಾಡುನಾಯಿಗಳು.

ಈ ನಾಯಿಗಳು ಬೇಟೆಯನ್ನು ‘ಮುಗಿಸುವ’ ಪರಿ ಹೆದರಿಕೆ ಹುಟ್ಟಿಸುತ್ತದೆ!

ಕಾಡುನಾಯಿಗಳ ಬೇಟೆ, wild dogs huntingಆಪ್ರಿಕಾದ ಈ ಕಾಡುನಾಯಿಗಳು 4 ರಿಂದ 10ರ ಗುಂಪಿನಲ್ಲಿ ಕಾಣಿಸಿಕೊಳ್ಳುತ್ತವೆ. ಯಾವಾಗಲೂ ಗುಂಪುಗಳಲ್ಲಿ ಇರುವ ಇವು ಚಿರತೆ, ಹುಲಿಗಳ ಹಾಗೆ ಒಂಟಿಯಾಗಿ ಬೇಟೆಯಾಡುವುದಿಲ್ಲ. ಗುಂಪುಗಳಲ್ಲಿ ಬೇಟೆಯನ್ನು ಸುತ್ತುವರೆದು ತಮ್ಮ ಚೂಪಾದ ಗಟ್ಟಿಯಾದ ಹಲ್ಲುಗಳಿಂದ ದಾಳಿ ಮಾಡಿ, ಹೊಟ್ಟೆಯ ಮೇಲಿನ ತೊಗಲನ್ನು ಮೊದಲು ಹರಿದು ಬಿಡುತ್ತವೆ. ಬಳಿಕ ಅದೇ ಹರಿದ ತೊಗಲಿನ ಜಾಗದಿಂದ ಹೊಟ್ಟೆಯ ಬಾಗದಲ್ಲಿ ತೂತು ಮಾಡಿ, ಕರುಳು ಸಿಕ್ಕೊಡನೆ ಅದನ್ನು ಕಚ್ಚಿ ಹೊರಗೆ ಎಳೆದು ತಿನ್ನುತ್ತವೆ. ಮತ್ತೆ ಮತ್ತೆ ದಾಳಿ ಮಾಡಿ ಪೂರಾ ಹೊಟ್ಟೆಯನ್ನು ಹರಿದು ಹಾಕಿ, ಮೂಳೆ ಮಾಂಸಗಳನ್ನು ಎರಡನೇ ಸುತ್ತಿನಲ್ಲಿ ತಿಂದು ಮುಗಿಸುತ್ತವೆ. ಇದೆಲ್ಲ ಆಗುವುದು ಕೇವಲ 3-4 ನಿಮಿಶಗಳಲ್ಲಿ! ಅಳ್ಳೆದೆಯವರಿಗೆ ಇದನ್ನು ನೋಡುತ್ತಲೇ ತಲೆ ಸುತ್ತು ಬಂದು ಬಿದ್ದುಬಿಡಬಹುದು.

ಗುಂಪಿನಲ್ಲಿಯೇ ಚೆನ್ನಾಗಿ ಹೊಂಚು ಹಾಕಿ, ಸುತ್ತುವರೆದು ತಮ್ಮ ಬೇಟೆಯನ್ನು ಎಲ್ಲಿಯೂ ಓಡಿಹೋಗದಂತೆ ಹಿಡಿದು ಚಿಂದಿ ಚಿಂದಿಯನ್ನಾಗಿ ಮಾಡಿ ತಿಂದು ಮುಗಿಸುತ್ತವೆ. ತಮ್ಮ ಬೇಟೆಯನ್ನು ಸುತ್ತುವರೆಯುವಾಗ ಕಾಡುನಾಯಿಗಳು ಶಿಳ್ಳೆಯಂತಹ ಮೆಲ್ಲನೆಯ ಸದ್ದು ಮಾಡುತ್ತಾ, ಮೂಗಿನಿಂದ ಮುಲುಗುತ್ತಾ ಒಂದಕ್ಕೊಂದು ಸನ್ನೆಯ ಮೂಲಕ ಮಾತನಾಡಿಕೊಳ್ಳುವಂತೆ ವ್ಯವಸ್ತಿತವಾಗಿ ಸಂಚು ಹೂಡುತ್ತವೆ.

ಕಾಡುನಾಯಿಗಳ ಮೈಮಾಟ

ನೋಡಲು ತೇಟ್ ನಾಯಿಯ ಹಾಗೆ ಆಕಾರ, ರೂಪ. ಆದರೆ ಇವು ತುಂಬಾ ಚಾಲಾಕು, ದಿಟ್ಟ, ಕ್ರೂರ. ಬೇರೆ ಪ್ರಾಣಿಗಳನ್ನು ಕಂಡರೆ ಇವುಗಳಿಗೆ ಅಂಜಿಕೆಯಿಲ್ಲ. ಕಾಡುನಾಯಿಗಳು ಕಂದು ಕಪ್ಪು, ಬಿಳಿ, ಕಂದು ಬಣ್ಣ ಸೇರಿರುವ ಮೈ ಹೊಂದಿದ್ದರೆ ಕಿವಿ, ಬಾಯಿ ಕಪ್ಪು ಬಣ್ಣದಲ್ಲಿರುತ್ತದೆ. ಬಾಲದ ತುದಿ ಚಿಂದಿ ಬಟ್ಟೆಯ ಹಾಗೆ ಬೆಳ್ಳಗೆ ಇರುತ್ತದೆ.

ಕತ್ತೆಕಿರುಬ ಮತ್ತು ಕಾಡುನಾಯಿಗಳಿಗೆ ಒಂತರಾ ಎಣ್ಣೆ ಶೀಗೇಕಾಯಿ ಸಂಬಂದ!

ಕಾಡುನಾಯಿಗಳಿಗೆ ಕಡುಹಗೆ ಮಾಡುವ ಪ್ರಾಣಿಗಳೆಂದರೆ ಕತ್ತೆಕಿರುಬಗಳು( ಹಾಯಿನಾಗಳು). ಬೇಟೆಗಾಗಿ ಒಂದನ್ನೊಂದು ಕಚ್ಚಿ, ಸಾಯಿಸಿ ತಿಂದುಬಿಡುತ್ತವೆ. ಯಾವುದಾದರೂ ಕತ್ತೆಕಿರುಬ ಕಾಡುನಾಯಿಗಳ ಗುಂಪಿನ ಬಾಯಿಗೆ ಒಂಟಿಯಾಗಿ ಸಿಕ್ಕಿ ಬಿಟ್ಟರೆ ಸಾಕು ಅದು ಸತ್ತ ಹಾಗೆಯೇ. ಅದೇ ತರಹ ಯಾವುದಾದರೂ ಕಾಡುನಾಯಿ ಒಂಟಿಯಾಗಿ ಕತ್ತೆಕಿರುಬಗಳ ಬಾಯಿಗೆ ಸಿಕ್ಕರೆ ಅದರ ಬದುಕು ಕೊನೆಯಾದಂತೆಯೇ!

ಕಾಡುನಾಯಿಗಳ ಆಹಾರ ಮತ್ತು ಬಾಳಬಗೆ

ಸಾಮಾನ್ಯವಾಗಿ ಆಪ್ರಿಕಾದ ‘ಸವನ್ನಾ’ ಹುಲ್ಲುಗಾವಲುಗಳಲ್ಲಿ ಹೇರಳವಾಗಿ ಇರುವ ಜಿಂಕೆ, ಕಡವೆ, ಕ್ರಿಶ್ಣಮ್ರುಗ, ವೈಲ್ಡ್‌ಬೀಸ್ಟ್‌, ಕಾಡುಕೋಣ, ಕಾಡೆಮ್ಮೆ, ಕಾಡುಹಂದಿ, ಇಂಪಾಲಾ, ಜೀಬ್ರಾಗಳನ್ನು ಕಾಡುನಾಯಿಗಳು ತಿನ್ನುತ್ತವೆ. ಕಾಡುನಾಯಿಗಳ ಮುಂದಾಳು ಹಾಗೂ ಕುಟುಂಬದ ಮುಕ್ಯಸ್ತ ಒಂದು ಹೆಣ್ಣು ಕಾಡುನಾಯಿ. ಅದು ಸಾಮಾನ್ಯವಾಗಿ ವಯಸ್ಸಿನಲ್ಲಿ ದೊಡ್ಡದಾಗಿ ಇರುತ್ತದೆ. ಮರಿಗಳನ್ನು ಗುಂಪಿನ ಎಲ್ಲ ಹೆಣ್ಣು ನಾಯಿಗಳು ಹಾಲು ಕುಡಿಸುತ್ತಾ ಆರೈಕೆ ಮಾಡಿಕೊಳ್ಳುತ್ತಾ ನೋಡಿಕೊಳ್ಳುತ್ತವೆ. ಕಾಡುನಾಯಿಗಳು ಬಯಲಿನಲ್ಲಿಯೇ ಬದುಕುತ್ತವೆ. ಕೆಲವೊಮ್ಮೆ ಗುದ್ದುಗಳನ್ನು (ಬಿಲಕ್ಕಿಂತ ದೊಡ್ಡ ತೂತುಗಳು) ಅಗೆದು ಅದರಲ್ಲಿ ತಮ್ಮ ಮರಿಗಳನ್ನು ಇಟ್ಟು ಕಾಯುತ್ತವೆ.

ಕಾಡುನಾಯಿಗಳು ತಮ್ಮ ಮರಿಗಳಿಗೆ ಬೇಟೆ ತಿನಿಸುವ ಬಗೆ ವಿಚಿತ್ರ

ಬೇಟೆಗಾಗಿ ದೊಡ್ಡ ಕಾಡುನಾಯಿಗಳೇ ಹೋಗುತ್ತವೆ. ಬೇಟೆಯಾಡಿ ಮಾಂಸದ ತುಂಡುಗಳನ್ನು ನುಂಗಿ ಹೊಟ್ಟೆಗೆ ಸೇರಿಸುತ್ತವೆ. ತಮ್ಮ ಮರಿಗಳ ಕಡೆಗೆ ಓಡಿಬಂದು ನುಂಗಿಬಿಟ್ಟ ಮಾಂಸದ ತುಂಡುಗಳನ್ನು ಅವುಗಳ ಮುಂದೆ ಕಾರಿಬಿಡುತ್ತವೆ. ಕಾಡುನಾಯಿಗಳ ಹೊಟ್ಟೆಯಲ್ಲಿರುವ ಗ್ಯಾಸ್ಟ್ರಿಕ್ ಆ್ಯಸಿಡ್ (ಊಟವನ್ನು ಕರಗಿಸುವ ಹೊಟ್ಟೆ ರಸ) ಮಾಂಸವನ್ನು ಮೆತ್ತಗೆ ಮಾಡಿಬಿಟ್ಟಿರುತ್ತದೆ. ಇದು ಆ ಮರಿಗಳು ತಿನ್ನುವುದಕ್ಕೆ ಹಗುರ ಮಾಡುತ್ತದೆ.

ಮರಿಗಳು ಓಡಲು ಶುರುಮಾಡಿದಾಗ ಅವು ಹಿರಿಯ ಕಾಡುನಾಯಿಗಳ ಜೊತೆ ಬೇಟೆಯಾಡಲು ಹೋಗುತ್ತವೆ. ಆದರೆ ಬೇಟೆಯಾಡುವುದಿಲ್ಲ. ಹಿರಿಯ ಕಾಡುನಾಯಿಗಳು ತಮ್ಮ ಬೇಟೆಯನ್ನು ಕಚ್ಚಿ ನೆಲಕ್ಕೆ ಉರುಳಿಸಿದ ಮೇಲೆ ತಮ್ಮ ಮೂಗಿನಿಂದ ಶಿಳ್ಳೆ ಹೊಡೆಯುತ್ತಾ ಮರಿಗಳನ್ನು ಕರೆಯುತ್ತವೆ. ಕಾಡುನಾಯಿಗಳಂತೆ ಮರಿಗಳೂ ತಮ್ಮ ಬೇಟೆ ಇನ್ನೂ ಬದುಕಿರುವಾಗಲೇ ಅದನ್ನು ತಿನ್ನುತ್ತವೆ.

(ಮಾಹಿತಿ ಮತ್ತು ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: