ಹೀಗೊಂದು ಪೇಚಿನ ಪ್ರಸಂಗ

ಕೆ.ವಿ.ಶಶಿದರ.

ರೈಲು ನಿಲ್ದಾಣ

ನಾನು ಕೆಲಸ ನಿರ‍್ವಹಿಸುತ್ತಿದ್ದುದು ಡೈರಿಯಲ್ಲಿ. 15-20 ವರ‍್ಶ ಮೇಲ್ಪಟ್ಟವರಿಗೆ ತಾವು ಓದಿದ್ದನ್ನು ನೆನಪು ಮಾಡಿಕೊಡಲು ಹಾಗೂ ಹೊಸ ಹೊಸ ತಾಂತ್ರಿಕತೆ ಬಗ್ಗೆ ತಿಳಿಸಲು ರೀಪ್ರೆಶರ್ ಕೋರ‍್ಸ್‍ಗೆ ಕಳುಹಿಸುವುದು ವಾಡಿಕೆ. 90ರ ದಶಕದ ಆದಿ ಬಾಗದಲ್ಲಿ ನನ್ನ ಸರದಿ ಬಂತು. ಇದಕ್ಕಾಗಿ ನಾನು ಹೋಗಬೇಕಿದ್ದುದು ಉತ್ತರ ಬಾರತದ ಹರಿಯಾಣಾ ರಾಜ್ಯದ ಕರ‍್ನಾಲ್‍ನಲ್ಲಿರುವ ರಾಶ್ಟ್ರೀಯ ಹೈನು ಸಂಶೋದನಾ ಸಂಸ್ತೆಗೆ. ಉತ್ತರ ಬಾರತಕ್ಕೆ ಎಂದೂ ಹೋದವನಲ್ಲ. ಇದೇ ಮೊದಲ ಪ್ರಯಾಣ. ಅಲ್ಲಿಗೆ ಯಾವ ರೀತಿಯಲ್ಲಿ ಹೋಗಿ ಬರಬೇಕು, ಯಾವ್ಯಾವ ವ್ಯವಸ್ತೆ ಇದೆ, ಉಳಿದುಕೊಳ್ಳುವ ಸ್ತಳ, ಊಟೋಪಚಾರದ ವ್ಯವಸ್ತೆ ಎಲ್ಲವನ್ನೂ ಅಲ್ಲಿಗೆ ಹೋಗಿ ಬಂದವರಿಂದ ಆದಶ್ಟೂ ತಿಳಿದುಕೊಂಡೆ.

ಮೊದಲೇ ರಿಸರ್‍ವೇಶನ್ ಮಾಡಿಸಿದ್ದ ಕಾರಣ ಬೆಂಗಳೂರಿನಲ್ಲಿ ಯಾವುದೇ ತಾಪತ್ರಯವಿಲ್ಲದೆ ಪ್ರಯಾಣ ಪ್ರಾರಂಬಿಸಿದೆ. ಆಗ ದೆಹಲಿಗೆ 48 ಗಂಟೆಗಳ ದೀರ‍್ಗ ಪ್ರಯಾಣ. ಹೊರಟ ಎರಡು ದಿನದ ಬಳಿಕ ದೆಹಲಿ ತಲುಪಿದೆ. ನನ್ನ ಅದ್ರುಶ್ಟಕ್ಕೆ ನಾನು ಪ್ರಯಾಣಿಸಿದ ರೈಲು ಕೇವಲ ಒಂದು ಗಂಟೆ ಮಾತ್ರ ತಡವಾಗಿ ದೆಹಲಿ ತಲುಪಿತ್ತು. ಅಲ್ಲಿಂದ ಮುಂದಕ್ಕೆ ನಾಲ್ಕು ಗಂಟೆಗಳ ಪ್ರಯಾಣ ಕರ‍್ನಾಲ್‍ಗೆ. ಅದಕ್ಕೂ ಈಗಾಗಲೇ ಜೇಲಮ್ ಎಕ್ಸ್‌ಪ್ರೆಸ್‌ನ ಮೊದಲನೇ ದರ‍್ಜೆಯಲ್ಲಿ ಸೀಟು ಬುಕ್ಕಾಗಿದ್ದರಿಂದ ಆತಂಕವಿಲ್ಲದೆ ಕಾದು ಕುಳಿತೆ. ಅದೂ ಸಹ ಸರಿಯಾದ ಸಮಯಕ್ಕೆ ಬರುವುದಿತ್ತು. ಜೇಲಮ್ ಎಕ್ಸ್‌ಪ್ರೆಸ್ ಬಂದಿದ್ದೇ ತಡ ಇಡೀ ಪ್ಲಾಟ್ ಪಾರಂ ಮೇಲಿದ್ದ ಸಹಸ್ರಾರು ಜನ ರೈಲು ಹತ್ತಲು ಒಮ್ಮೆಲೆ ನುಗ್ಗಿದರು. ಒಂದೆರಡು ಕ್ಶಣ ನಾನು ತಬ್ಬಿಬ್ಬಾದೆ. ರಿಸರ್‍ವೇಶನ್ ಮಾಡಿಸಿದ್ದ ಕಾರಣ ನಾನು ಮೊದಲನೇ ದರ‍್ಜೆಯ ಬೋಗಿಯನ್ನು ಹುಡುಕಿಕೊಂಡು ಹೋದೆ. ಎಲ್ಲಾ ಬೋಗಿಗಳಲ್ಲೂ ಜನರ ನೂಕಾಟ ತಳ್ಳಾಟ, ಮಕ್ಕಳು-ಮರಿಗಳ ಅಳು, ಕೇಳಿ ನಿಜಕ್ಕೂ ನಾನು ಹೆದರಿದೆ. ಮೊದಲನೇ ದರ‍್ಜೆಯ ಬೋಗಿಯ ಕತೆ ವಿಬಿನ್ನವಾಗೇನು ಇರಲಿಲ್ಲ. ಯಾರ‍್ಯಾರು ಯಾವ ಬೋಗಿಗೆ ಹತ್ತಬೇಕು ಎನ್ನುವ ಸಾಮಾನ್ಯ ಶಿಸ್ತು ಸಹ ಅಲ್ಲಿನ ಜನಕ್ಕಿಲ್ಲ. ಒಂದು ಬೋಗಿಯಲ್ಲಿ ಮುನ್ನೂರು ಕನಿಶ್ಟ ಪ್ಯಾಕಾಗುತ್ತಿದ್ದರು.

ನಾನು ಹತ್ತಬೇಕಿದ್ದ ಬೋಗಿಯಲ್ಲಿ ಆಗಲೇ ನೂರಾರು ಜನ ಸೇರಿದ್ದರು ಮತ್ತು ಇನ್ನೂ ನೂರಾರು ಜನ ಹತ್ತುವ ಯತ್ನದಲ್ಲಿದ್ದರು. ನನ್ನ ಎರಡು ಬ್ಯಾಗುಗಳನ್ನು ಹಿಡಿದು ನಾನು ಅವರೊಡನೆ ಸೇರಿಕೊಂಡೆ. ‘ಹೂವಿನಿಂದ ನಾರು ಸ್ವರ‍್ಗಕ್ಕೆ ಎಂಬಂತೆ ಅವರುಗಳೇ ನನ್ನನ್ನು ಬೋಗಿಯೊಳಕ್ಕೆ ತಳ್ಳಿದ್ದರು. ಅನಾಯಾಸವಾಗಿ ನಾನು ಹತ್ತಲು ಸಪಲನಾದೆ. ಟ್ರೇನಿಂಗಿನ ಪ್ರತಮ ಅದ್ಯಾಯದಲ್ಲಿ ಪಾಸಾಗಿದ್ದೆ. ಹತ್ತುವುದೇನೋ ಹತ್ತಿದೆ, ಅಲ್ಲ ಹತ್ತಿಸಿದ್ದರು. ನನಗೆ ಎದುರಾಗಿದ್ದು ಕರ‍್ನಾಲ್ ಎಶ್ಟು ಹೊತ್ತಿಗೆ ಮುಟ್ಟುತ್ತೆ ಎಂಬ ಪ್ರಶ್ನೆ. ಹಾಗೆಯೇ ಎರಡೂ ಬ್ಯಾಗುಗಳನ್ನು ಹಿಡಿದುಕೊಂಡು ಅಲ್ಲಿನವರು ಮಾತನಾಡುವುದನ್ನು ಗಮನಿಸಿದೆ. ಒಬ್ಬ ಕರ‍್ನಾಲ್‍ನಲ್ಲಿ ಇಳಿಯಬೇಕು ಎಂದು ಹೇಳುತ್ತಿದ್ದಂತೆ ಅನಿಸಿತು. ಹರಕು ಮುರುಕು ಹಿಂದಿ ಅರ‍್ತವಾಗುತ್ತಿದ್ದ ಕಾರಣ ಅಶ್ಟನ್ನು ಅರ‍್ತೈಸಿಕೊಂಡೆ. ನನ್ನ ಕಣ್ಣೆಲ್ಲಾ ಅವನ ಮೇಲೇ ಕೇಂದ್ರಿತವಾಯಿತು. ಒಂದೇ ಒಂದು ಪಾಸಿಟಿವ್ ವಿಶಯವೆಂದರೆ ಆತ ನನ್ನ ಕಣ್ಣು ತಪ್ಪಿಸಿ ಎಲ್ಲೂ ಹೋಗಲು ಸಾದ್ಯವಿಲ್ಲದ್ದು. ಅಶ್ಟು ತುಂಬಿತ್ತು ರೈಲು.

ರಾತ್ರಿ ಹತ್ತು ಗಂಟೆಗೆ ಟ್ರೈನು ಹೊರಟಿತು. ನಿಲ್ಲಲು ಸಹ ಜಾಗವಿಲ್ಲದಂತೆ ಜಾಮ್‍ಪ್ಯಾಕ್ ಆಗಿತ್ತು ಬೋಗಿ. ಅಲ್ಲಿನ ಜನರ ಕೆಟ್ಟ ಉಸಿರಿನ ಹಾಗೂ ಬಾಯಿ ವಾಸನೆ ನನಗೆ ತಡೆಯಲಾಗಲಿಲ್ಲ. ವಿದಿಯಿಲ್ಲ. ಪ್ರಯಾಣ ಮುಂದುವರೆಯಿತು. ಸಮಯ ಕಳೆಯುತ್ತಿದ್ದಂತೆ ಆ ಜನ ನಿಂತಲ್ಲೇ ನಿದ್ದೆ ಮಾಡಲು ಶುರುಮಾಡಿದರು. ಸರಿ ರಾತ್ರಿ ಹನ್ನರೆಡೂವರೆಯ ಸಮಯ ನನ್ನ ಗಮನದ ಕೇಂದ್ರ ಬಿಂದುವಾಗಿದ್ದ ಆತ ಇಳಿಯಲು ತಯಾರಿ ಮಾಡಿಕೊಳ್ಳಲು ಪ್ರಾರಂಬಿಸಿದ. ನಾನೂ ಅವನೊಡನೆ ಇಳಿಯಲು ನಿಂತಲ್ಲೇ ಮೈಕೈ ಮುರಿದುಕೊಂಡು ಮಾನಸಿಕವಾಗಿ ತಯಾರಾದೆ. ಒಂದು ಗಂಟೆಗೂ ಮುಂಚೆ ರೈಲು ಕರ‍್ನಾಲ್‍ನಲ್ಲಿ ನಿಂತಿತು. ನಿಂತು ನಿದ್ದೆ ಮಾಡುತ್ತಿರುವರನ್ನು ಪಕ್ಕಕ್ಕೆ ತಳ್ಳಿ ಬಾಗಿಲು ಪೂರ‍್ಣ ಬಂದಾಗಿದ್ದ ಕಾರಣ ಹರಸಾಹಸ ಮಾಡಿ ಕಿಟಕಿಯಿಂದ ಹೊರಕ್ಕೆ ನೆಗೆದೆ. ಸುತ್ತಲೂ ಗಾಡಾಂದಕರ ಕತ್ತಲು. ರೈಲು ಹೋದ ಮೇಲಂತೂ ಐದು ನಿಮಿಶ ಕತ್ತಲಿಗೆ ಹೊಂದಿಕೊಳ್ಳಲು ಸಮಯ ತೆಗೆದುಕೊಂಡೆ. ನಂತರ ನಿಲ್ದಾಣದ ವ್ಯವಸ್ತಾಪಕರನ್ನು ಕಂಡು ಅವರಲ್ಲಿ ಹರಕು ಮುರುಕು ಹಿಂದಿಯಲ್ಲಿ ಹೇಳಿ ವ್ಯೆಟಿಂಗ್ ರೂಮ್‍ನಲ್ಲಿ ಆಶ್ರಯ ಪಡೆದೆ. ಅಲ್ಲಿ ತಿಗಣೆಗಳ ಕಾಟ. ಒಂದೇ ಒಂದು ಸೆಕೆಂಡೂ ಸಹ ಕೂರಲಾಗದೆ ಹೊರಬಂದೆ.

ನಿರ‍್ಜನ ರೈಲ್ವೇ ನಿಲ್ದಾಣ. ಇಡೀ ಪ್ಲಾಟ್ ಪಾರಂ ನಾನೊಬ್ಬನೇ. ಅಲ್ಲಿದ್ದ ಬೆಂಚಿನ ಮೇಲೆ ಹಾಗೇ ಮಲಗಿದೆ. ಐದು ಗಂಟೆಗೆಲ್ಲಾ ಎಚ್ಚರವಾಯ್ತು. ನೇರ ನಿಲ್ದಾಣದಿಂದ ಹೊರಗೆ ಬಂದೆ. ನಾಲ್ಕಾರು ಆಟೋಗಳು ಇದ್ದವು. ನನ್ನ ಪಾಂಡಿತ್ಯದ ಹಿಂದಿಯಲ್ಲಿ ನಾನು ಹೋಗಬೇಕಾದ್ದ ಜಾಗದ ಬಗ್ಗೆ ಒಬ್ಬನಲ್ಲಿ ಕೇಳಿದೆ. ಅವ ಎರಡು ನೂರು ಎಂದು ಬೆರಳು ತೋರಿಸಿದ. ನಾನು ಚೌಕಾಸಿ ಮಾಡಿ ನೂರಾ ಐವತ್ತಕ್ಕೆ ಒಪ್ಪಿಸಿ, ದನ್ಯನಾದಂತೆ ಆಟೋ ಹತ್ತಿ ಕುಳಿತೆ. ಅರ‍್ದ ಗಂಟೆಯ ನಂತರ ‘ಉತರೋ ಸಾಬ್’ ಎಂದು ನನ್ನನ್ನು ಎಚ್ಚರಿಸಿ ಇಳಿಸಿ, ಚಿಲ್ಲರೆ ಇಲ್ಲ ಅಂತ ಹೇಳಿ ಪೂರಾ ಇನ್ನೂರು ಕಿತ್ತುಕೊಂಡು ಹೋದ. ಸೇರಬೇಕಾದ್ದ ಜಾಗ ಸೇರಿದ ಕುಶಿ ನನ್ನಲ್ಲಾಯಿತು. ಅಲ್ಲೇ ಇದ್ದ ಹಾಸ್ಟಲ್‍ನಲ್ಲಿ ರಿಪೋರ‍್ಟ್ ಮಾಡಿಕೊಂಡು ಕೊಟ್ಟ ರೂಮಿಗೆ ಹೋಗಿ ಮಾಡಿದ ಮೊದಲ ಕೆಲಸವೆಂದರೆ ಗೀಸರ್ ಆನ್ ಮಾಡಿದ್ದು. ಸ್ನಾನದ ರೂಮಿಗೆ ಹೋಗಿ ಸ್ನಾನ ಮಾಡುವಾಗ ಪಕ್ಕದಲ್ಲೇ ರೈಲು ಹೋದ ಶಬ್ದ ಕೇಳಿಸಿತು. ಸ್ನಾನ ಮುಗಿದ ಕೂಡಲೆ ನಾನು ವಿಚಾರಣೆ ಮಾಡಿದ್ದು ರೈಲ್ವೇ ನಿಲ್ದಾಣದ ಬಗ್ಗೆ. ಹಾಸ್ಟೆಲ್ಲಿನ ಹುಡುಗ ಮಾತನಾಡದೇ ನನ್ನನ್ನು ಮೊದಲನೇ ಮಹಡಿಗೆ ಕರೆದೊಯ್ದು ಅಲ್ಲಿಂದ ತೋರಿಸಿದ. ಕೂಗಳತೆಯ ದೂರದಲ್ಲೇ ಇತ್ತು ರೈಲ್ವೇ ನಿಲ್ದಾಣ. ಐದು ನಿಮಿಶದ ಕಾಲ್ನಡಿಗೆಯಶ್ಟು ದೂರ.

(ಚಿತ್ರ ಸೆಲೆ: pexels.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *