‘ಬದುಕು’ – ಕಿರುಬರಹ

–  ಅಶೋಕ ಪ. ಹೊನಕೇರಿ.

Life ಬದುಕು

ನಾನು ದಾರಿಯಲ್ಲಿ ಹೋಗುವಾಗ ಕೆಲವರ ಮುಕವನ್ನು ದಿಟ್ಟಿಸಿ ನೋಡುತ್ತೇನೆ ನೂರಕ್ಕೆ ತೊಂಬತ್ತರಶ್ಟು ಮಂದಿಯ ಮುಕದಲ್ಲಿ ನಗುವೇ ಇರುವುದಿಲ್ಲ…!! ಮುಕದಲ್ಲಿ ಏನೋ ಚಿಂತೆ, ದುಗುಡ, ದಾವಂತ, ಒತ್ತಡ, ಅವಸರದ ಚಿಹ್ನೆಗಳೇ ಕಾಣುತ್ತವೆ. ಅಪರೂಕ್ಕೊಮ್ಮೆ ಅಲ್ಲಿ ಇಲ್ಲಿ ನಗು ಮೊಗದ, ಒತ್ತಡರಹಿತ ಕ್ರಿಯಾಶೀಲ ಮುಕಗಳು ಕಾಣಸಿಗುತ್ತವೆ. ಮರಳುಗಾಡಿನಲ್ಲಿ ಓಯಸಿಸ್ ಸಿಕ್ಕಂತೆ!

ಹೌದು… ಈ ಬೂಮಿಯಲ್ಲಿ ನಾವು ಜನಿಸಿದ ಮೇಲೆ ಅದು ನಮ್ಮ ‘ಬದುಕೇ’. ನಮ್ಮೊಳಗಿನ ಕಶ್ಟ ಸುಕಗಳನ್ನ, ಸಿಹಿ ಕಹಿಗಳನ್ನ, ನೋವು ನಲಿವುಗಳನ್ನು ನಾವೇ ಅನುಬವಿಸಬೇಕು, ಬೇರೆಯವರಿಂದ ಬಹಳ ಎಂದರೆ ಕಶ್ಟದಲ್ಲಿ ಸಾಂತ್ವನದ ನುಡಿಗಳು ಸಿಕ್ಕಾವು… ಇಲ್ಲ ನಮ್ಮ ನಲಿವಿನಲಿ ಒಂದಿಶ್ಟು ಬಾಗಿಯಾದರೂ ಆಗಬಹುದು! ‘ಬದುಕು’ ನಮ್ಮಿಶ್ಟವೇನೊ ನಿಜ, ಇನ್ನೊಬ್ಬರ ಮರ‍್ಜಿಯಲ್ಲಿ ನಮ್ಮ ಬದುಕು ಸಾಗಬೇಕಿಲ್ಲ. ಹಾಗಂತ ಸ್ವೇಚ್ಚಾಚಾರ ಸಲ್ಲದು. ಏಕೆಂದರೆ ನಾವು ನಾಗರಿಕ ಸಮಾಜದ ಚೌಕಟ್ಟಿನಲ್ಲಿ ಬದುಕುತ್ತೇವೆ. ನಮ್ಮ ‘ಬದುಕು’ ನಮ್ಮ ನಡವಳಿಕೆ ನೋಡುಗರಿಗೆ ಅಸಬ್ಯ, ಅಸಹ್ಯ, ಅನಾಗರಿಕ ಎನಿಸಬಾರದು. ‘ಬದುಕಿ’ನ ಸರ‍್ವ ಸ್ವಾತಂತ್ರ್ಯವನ್ನು ನಾವು ಸಬ್ಯತೆಯ ಚೌಕಟ್ಟಿನಲ್ಲಿ ಅನುಬವಿಸಿದರೆ ನಾವು ಮಾನಸಿಕವಾಗಿ ಸ್ವಸ್ತವಾಗಿರುತ್ತೇವೆ. ನಮ್ಮ ದೈನಂದಿನ ಜಂಜಾಟದ ಬದುಕಿನಲ್ಲಿ ಹಲವಾರು ಸಮಸ್ಯೆಗಳು ಬರುತ್ತವೆ. ಅಯ್ಯೋ ಅವರೇನು ಅಂದುಕೊಂಡಾರೂ… ಇವರೇನು ಅಂದುಕೊಂಡಾರೂ… ಎಂದು ನೆರೆಹೊರೆಯವರಿಗೆ ಅಂಜಿ ಮನಸ್ಸನ್ನು ಹತ್ತಿಕ್ಕಿ ಬದುಕುವುದು ತರವಲ್ಲ. ಏಕೆಂದರೆ ಸಾಮಾನ್ಯವಾಗಿ ಎಲ್ಲರ ಮನೆಯ ದೋಸೆ ತೂತೇ!

ಹೇಗಿದ್ರು ಅದು ನಮ್ಮ ‘ಬದುಕು’, ಅದನ್ನು ನಾವು ಅನುಬವಿಸಲೇಬೇಕು. ಏಕೆಂದರೆ ಅದು ನಮ್ಮದೇ ಬದುಕು. ನಮ್ಮ ಬದುಕನ್ನು ಇತರರಿಗೆ ಎರವಲಾಗಿ ಕೊಡಲು ಬರುವುದಿಲ್ಲ. ಹೆಚ್ಚೆಂದರೆ ಬಲ್ಲವರಿಂದ ಒಂದಿಶ್ಟು ಸಲಹೆ, ಸೂಚನೆ, ಮಾರ‍್ಗದರ‍್ಶನ ಪಡೆದು ಸೂಕ್ತವೆಂದರೆ ನಮ್ಮ ಬದುಕಿಗೆ ಅಳವಡಿಸಿಕೊಂಡು ಬದುಕು ಸಾಗಿಸಬಹುದು. ನೋಡಿ…. ನಮ್ಮ ಮಿತಿಯಲ್ಲಿ ನಾವು ಸಂತೋಶವಾಗಿ ಬದುಕಬೇಕೆಂದರೆ ನಾವು ಇತರರ ಬದುಕಿನೊಂದಿಗೆ ಹೋಲಿಸಿಕೊಳ್ಳವುದನ್ನು ಬಿಡಬೇಕು. ಅವರು ಅನೂಕೂಲವಾಗಿದ್ದಾರೆ… ಇವರು ಸಂತೋಶವಾಗಿದ್ದಾರೆ…. ಎಂದು ಹೋಲಿಕೆಯ ಜೀವನ ನಮಗೆ ನೋವು, ದುಕ್ಕ ತಂದುಕೊಡುತ್ತದೆ.

‘ಯೋಗಿ ಪಡೆದದ್ದು ಯೋಗಿಗೆ, ಜೋಗಿ ಪಡೆದದ್ದು ಜೋಗಿಗೆ’ ಎಂಬ ಸರಳ ಸೂತ್ರವನ್ನು ನಾವು ಅಳವಡಿಸಿಕೊಂಡು ಬದುಕಿದ್ದೆ ಆದಲ್ಲಿ, ನಮ್ಮ ‘ಬದುಕು’ ನಂದನವನವಾಗುತ್ತದೆ, ನೈತಿಕ ಶ್ರೀಮಂತಿಕೆಯಿಂದ ಕೂಡಿರುತ್ತದೆ. ಆದ್ದರಿಂದ ನಮ್ಮ ಬದುಕಿನ ಸಣ್ಣ ಪಯಣದಲ್ಲಿ ‘ನಾವಾಗೆ’ ಸಂತಸದಿಂದ ಬದುಕಲು ಕಲಿತರೆ ಸ್ವರ‍್ಗಕ್ಕೆ ಕಿಚ್ಚು ಹಚ್ಚದೆ ಮತ್ತೇನು ಹಚ್ಚಲು ಸಾದ್ಯ… ಅಲ್ಲವೇ?!

(ಚಿತ್ರಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications