ದಾಸೆಟ್ಟನ್ : ಗುರುವನ್ನು ಮೀರಿಸಿದ ಶಿಶ್ಯ

– ಮಾರಿಸನ್ ಮನೋಹರ್.

 

ಹಲವರಿಗೆ ದಾಸೆಟ್ಟನ್ ಅಂದರೆ ಬೇಗ ಗೊತ್ತಾಗುವುದಿಲ್ಲ. K J ಯೇಸುದಾಸ್ (ಕಟ್ಟಾಸೆರ‍್ರೀ ಜೋಸೆಪ್ ಯೇಸುದಾಸ್) ಅಂದರೆ ಕೂಡಲೇ ಎಲ್ಲರಿಗೂ ಗೊತ್ತಾಗುತ್ತದೆ. ಅವರ ವೇದಿಕೆ ಹೆಸರು ‘ದಾಸೆಟ್ಟನ್’! ಅವರ ಸಂಗೀತ ಅಬಿಮಾನಿಗಳು ಮತ್ತು ಅವರ ಗುರುಗಳು ಎಲ್ಲರೂ ಅವರನ್ನು ಪ್ರೀತಿಯಿಂದ ‘ದಾಸೆಟ್ಟನ್’ ಅಂತಾ ಕರೆಯುತ್ತಾರೆ. ಪಂಜಾಬಿ, ಅಸ್ಸಾಮೀ, ಕಾಶ್ಮೀರೀ ಬಾಶೆಗಳನ್ನು ಬಿಟ್ಟರೆ ಇಂಡಿಯಾ ಒಕ್ಕೂಟದಲ್ಲಿ ಇರುವ ಎಲ್ಲ ಬಾಶೆಗಳ ಹಾಡುಗಳನ್ನು ಯೇಸುದಾಸ್ ಹಾಡಿದ್ದಾರೆ. ಇವರು ಇಲ್ಲಿಯವರೆಗೆ ಒಟ್ಟು 1,00,000 ಹಾಡುಗಳನ್ನು ಹಾಡಿ ರೆಕಾರ‍್ಡ್ ಮಾಡಿದ ದಾಕಲೆ ಇದೆ. ಒಂದು ಸಲ ಇವರು ಒಂದೇ ದಿನದಲ್ಲಿ ಚೆನ್ನೈ ರೆಕಾರ‍್ಡ್ ಸ್ಟೂಡಿಯೋದಲ್ಲಿ ತೆಂಕಣ(ದಕ್ಶಿಣ) ಇಂಡಿಯಾದ ನಾಲ್ಕು ಬಾಶೆಗಳ 50 ಸಿನಿಮಾ ಹಾಡುಗಳನ್ನು ಹಾಡಿ ರೆಕಾರ‍್ಡ್ ಮಾಡಿದ್ದರು. ಇವರಿಗೆ ದಾಕಲೆಗಳ ಹಮ್ಮೀರ ಅಂದರೆ ತುಂಬ ಕಡಿಮೆಯಾದೀತು!

ಯೇಸುದಾಸರ ಅಚ್ಚುಮೆಚ್ಚಿನ ಗುರುಗಳಲ್ಲಿ ಚೆಂಬೈ ವೈದ್ಯನಾತ ಬಾಗವತಾರ್ ಒಬ್ಬರು, ಚೆಂಬೈಯವರ ಅಚ್ಚುಮೆಚ್ಚಿನ ಶಿಶ್ಶರಲ್ಲಿ ‘ದಾಸೆಟ್ಟನ್’ ಒಬ್ಬರು. ಚೆಂಬೈ ವೈದ್ಯನಾತ ಬಾಗವತಾರ್ ಅವರು ಕೇರಳದ ಚೆಂಬೈ ಹಳ್ಳಿಯವರು. ಸಂಗೀತ ಕುಟುಂಬದಿಂದಲೇ ಬಂದ ಚೆಂಬೈ ಅವರದು ಕರ‍್ನಾಟಕ ಸಂಗೀತದಲ್ಲಿ ತುಂಬ ದೊಡ್ಡ ಹೆಸರು. ಕರ‍್ನಾಟಕ ಸಂಗೀತದ ದೊಡ್ಡ ಗೌರವ ‘ಸಂಗೀತ ಕಲಾನಿದಿ‘ ಪದಕ ಪಡೆದಿದ್ದ ಇವರ ಹೆಸರು ಹೇಳದೇ ಹೋದರೆ ಕರ‍್ನಾಟಕ ಸಂಗೀತ ಅರೆಬರೆಯಾಗುತ್ತದೆ. ಚೆಂಬೈ ತಮ್ಮ ಕಂಚಿನ ಕಂಟ, ತಿಳಿಯಾದ ದನಿ, ಸ್ವರಗಳ ಸರಿಯಾದ ಹಾಡುಗಾರಿಕೆ, ತಾಳ ಲಯಗಳ ಮೇಲಿನ ಅಮೋಗ ಹಿಡಿತದಿಂದಾಗಿ ಕೇಳುಗರನ್ನು ಸಂಗೀತ ಕೋಡಿಯಲ್ಲಿ ತೇಲುವಂತೆ ಮಾಡಬಲ್ಲವರಾಗಿದ್ದರು. ಬೇರೆ ಕರ‍್ನಾಟಕ ಸಂಗೀತ ಹಾಡುಗಾರರು ದಿನಕ್ಕೆ ಒಂದೇ ಕಚೇರಿ ನಡೆಸಿ ದಣಿಯುತ್ತಿದ್ದರು. ಆದರೆ ಚೆಂಬೈ ದಿನಕ್ಕೆ ಮೂರು ಕಚೇರಿಗಳನ್ನು ಸುಲಬವಾಗಿ ನಡೆಸಿ ಕೊಡುತ್ತಿದ್ದರು. ಹೆಚ್ಚಿನ ಜೋರು, ದನಿಯ ಮೇಲೆ ಹಾಕದೆಯೇ ತುಂಬು ಗಂಟಲಿನಿಂದ ಕೊನೆಯಲ್ಲಿ ಕೂತವರಿಗೂ ಕೇಳುವಂತೆ ಮದುರವಾಗಿ ಗಟ್ಟಿಯಾಗಿ ಚೆಂಬೈ ಹಾಡುತ್ತಿದ್ದರು. ಇವರ ಪ್ರೀತಿಯ ಶಿಶ್ಯನೇ , ‘ದಾಸೆಟ್ಟನ್’ – K J ಯೇಸುದಾಸ್. ಚೆಂಬೈ ಬದುಕಿರುವವರೆಗೂ ದಾಸೆಟ್ಟನ್ ಜೊತೆಗೆ ನೂರಾರು ಕಚೇರಿಗಳನ್ನು ನಡೆಸಿಕೊಟ್ಟಿದ್ದರು. ಗುರು ಚೆಂಬೈ ಕರ‍್ನಾಟಕ ಸಂಗೀತದಲ್ಲಿ ದೊಟ್ಡ ಹೆಸರು ಮಾಡಿದ್ದರೆ, ಶಿಶ್ಯ ದಾಸೆಟ್ಟನ್ ಯೇಸುದಾಸ್ ಕರ‍್ನಾಟಕ ಸಂಗೀತದಲ್ಲೂ ಸಿನಿಮಾ ಸಂಗೀತದಲ್ಲೂ ದೊಡ್ಡ ಹೆಸರು ಮಾಡಿದ್ದಾರೆ.

ಚೆಂಬೈ ಅವರ ಮೊದಲು ಗುರು ಅವರ ತಂದೆ, ಯೇಸುದಾಸ್ ಅವರ ಮೊದಲ ಗುರು ಕೂಡ ಅವರ ತಂದೆ. ಇಬ್ಬರೂ ಕೇರಳದವರೇ. ಚೆಂಬೈ ವೈದ್ಯನಾತ ಬಾಗವತರ್ ಅವರು ಪಾಲಕ್ಕಾಡಿನ ಚೆಂಬೈ ಹಳ್ಳಿಯವರಾದರೆ ಯೇಸುದಾಸ್ ಕೊಚ್ಚಿಯವರು. ಯೇಸುದಾಸ್ ತಮ್ಮ ಮೊದಲ ಹಂತದ ಸಂಗೀತ ತರಬೇತಿಯನ್ನ ತಮ್ಮ ತಂದೆಯಿಂದ ಪಡೆದ ಮೇಲೆ, ಮುಂದಿನ ಹಂತಗಳಲ್ಲಿ ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರಿಂದ ಪಡೆದರು. ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಮತ್ತೊಬ್ಬ ದೊಡ್ಡ ಕರ‍್ನಾಟಕ ಸಂಗೀತ ಹಾಡುಗಾರ‍್ತಿ ‘ಬಾರತ ರತ್ನ’ MS ಸುಬ್ಬುಲಕ್ಶ್ಮೀಯವರಿಗೂ ಗುರುಗಳಾಗಿದ್ದರು. ಯೇಸುದಾಸ್ ಮತ್ತು ಸುಬ್ಬುಲಕ್ಶ್ಮೀ ಅವರಲ್ಲಿನ ಸಾಮ್ಯತೆ ಅಂದರೆ ಇಬ್ಬರೂ ತಮ್ಮ ತಮ್ಮ ಗುರುಗಳನ್ನು ಮೀರಿಸಿದ ತುಂಬ ದೊಡ್ಡ ಹಾಡುಗಾರರು. ಸುಬ್ಬುಲಕ್ಶ್ಮೀ ಕರ‍್ನಾಟಕ ಸಂಗೀತಕ್ಕೇ ಸೀಮಿತವಾಗಿ ಹಾಡುವುದಕ್ಕಿಂತ ಮುಂಚೆ ಹಿಂದಿ ಮತ್ತು ತಮಿಳು ಸಿನಿಮಾಗಳಲ್ಲಿ ನಟನೆ ಮತ್ತು ಹಾಡುಗಾರಿಕೆ ಮಾಡಿದ್ದರು. ಗುರುಗಳು ತಮ್ಮ ಶಿಶ್ಯರ ಹೆಸರಿನಿಂದ ಗುರುತಿಸುವಂತೆ ಮಾಡಿದ ಬಲು ಅಪರೂಪದ ಕರ‍್ನಾಟಕ ಸಂಗೀತ ಹಾಡುಗಾರರ ಜೋಡಿ ಯೇಸುದಾಸ್ ಮತ್ತು ಸುಬ್ಬುಲಕ್ಶ್ಮೀ ಅವರದು.

ಯೇಸುದಾಸ್ ಇಲ್ಲಿಯವರೆಗೂ ಕರ‍್ನಾಟಕ ಸಂಗೀತ ಹಾಗೂ ಸಿನಿಮಾ ಸಂಗೀತ ಎರಡರಲ್ಲೂ ತೊಡಗಿಸಿಕೊಂಡಿದ್ದಾರೆ. ಯೇಸುದಾಸ್ ತಮ್ಮ ಕರಿಯರ್ ನ ಉದ್ದಕ್ಕೂ ಕನ್ನಡ, ಮಲಯಾಳ,ತೆಲುಗು, ತಮಿಳು, ಬಂಗಾಳಿ, ಓಡಿಯಾ, ಅರೇಬಿಕ್ , ಇಂಗ್ಲೀಶ್, ಲ್ಯಾಟಿನ್, ರಶಿಯನ್ ,ಹಿಂದಿ ಬಾಶೆಗಳ ಹಾಡುಗಳನ್ನು ಹಾಡಿದ್ದಾರೆ. ತಮ್ಮ ಗುರುಗಳ ನೆನಪಿಗೆ ಯೇಸುದಾಸ್ ಚೆಂಬೈ ಹಳ್ಳಿಯಲ್ಲಿ ವೈದ್ಯನಾತ ಬಾಗವತರ್ ಅವರ ಸುಂದರವಾದ ಮತ್ತು ಬವ್ಯವಾದ ಮೂರ‍್ತಿಯನ್ನು ಕೂಡಿಸಿದ್ದಾರೆ. 1956 ರಲ್ಲೇ ಸೋವಿಯತ್ ಒಕ್ಕೂಟದ ಕರೆಯೋಲೆ ಮೇರೆಗೆ ಕಜಕಿಸ್ತಾನಕ್ಕೆ ಹೋಗಿ ಅಲ್ಲಿನ ‘ರೇಡಿಯೋ ಕಜಕಿಸ್ತಾನ್’ ದಲ್ಲಿ ಹಾಡಿದ್ದರು!

ಕರ‍್ನಾಟಕದ ಕೊಲ್ಲೂರು ಮೂಕಾಂಬಿಕಾ ಅಮ್ಮನವರ ಗುಡಿಯಲ್ಲಿ ಜನವರಿಯಲ್ಲಿ ನಡೆಯುವ ಒಂಬತ್ತು ದಿನಗಳ ಕರ‍್ನಾಟಕ ಸಂಗೀತ ಕಚೇರಿ ಯೇಸುದಾಸ್ ನಡೆಸಿಕೊಡುತ್ತಾರೆ. ಅವರ ಹುಟ್ಟಿದ ದಿನವಾದ ಜನವರಿ 10 ರಂದು ಚೆಂಬೈ ಮತ್ತು ಯೇಸುದಾಸ್ ಒಟ್ಟಿಗೆ ಹಲವಾರು ಸಂಗೀತ ಕಚೇರಿಗಳನ್ನು ನಡೆಸಿಕೊಟ್ಟಿದ್ದಾರೆ. ಚೆಂಬೈಯವರ ಸ್ಪಶ್ಟ ತುಂಬು ಗಂಟಲಿನ ಚೂಪು ಸ್ವರ ಮತ್ತು ಯೇಸುದಾಸ್ ಅವರ ಮದುರ ಹಾಗೂ ಅದ್ಬುತ ಅಲುಗಾಟಿಕೆ ಸ್ವರ ಕೇಳುಗರನ್ನು ಮತ್ತೊಂದು ಲೋಕಕ್ಕೆ ಒಯ್ಯತ್ತದೆ. ತಾಳದ ಹೊತ್ತಿನ ಊಹೆ ಚೆಂಬೈಯವರಲ್ಲಿ ನಿಕರ ಮತ್ತು ಅಶ್ಟೇ ಅದ್ಬುತ. ಮ್ರುದಂಗದ ತಾಳದಲ್ಲಿ ಎಲ್ಲಿಂದ ಬೇಕಾದರೂ ತಮ್ಮ ಹಾಡನ್ನು ಶುರುಮಾಡುತ್ತಿದ್ದರು. ಕಚೇರಿ ನಡೆಸುತ್ತಿದ್ದಾಗಲೇ ರಾಗಗಳಲ್ಲಿ ಹೊಸ ಹೊಸ ಚಾಪು ಹಾಗೂ ವರಸೆಗಳನ್ನು ಹಾಕುತ್ತಾ ಹಾಡುತ್ತಾ ತಮ್ಮ ಶಿಶ್ಯ ಯೇಸುದಾಸ್ ಅವರಿಗೆ ಕಲಿಸುತ್ತಿದ್ದರು. ಯೇಸುದಾಸ್ ಅವರೂ ಅಶ್ಟೇ, ತಮ್ಮ ಗುರು ಚೆಂಬೈ ಹಾಕುತ್ತಿದ್ದ ಚಾಲೆಂಜುಗಳನ್ನು ತೆಗೆದುಕೊಂಡು ತಮ್ಮ ಮದುರ ಸ್ವರದಲ್ಲಿ ಹಾಡಿ ಗುರುವನ್ನು ಮೀರಿಸುತ್ತಿದ್ದರು. ಆಗ ಕೇಳುಗರು ಅಚ್ಚರಿಯಿಂದ ಮೂಕರಾಗಿ ಚಪ್ಪಾಳೆಗಳ ಸುರಿ ಮಳೆ ಸುರಿಸುತ್ತಿದ್ದರು.

ಚೆಂಬೈ ಅವರದು ದೊಡ್ಡ ಮೈ, ದೊಡ್ಡ ಗಂಟಲು ಸ್ವರದನಿ, ದೊಡ್ಡ ವ್ಯಕ್ತಿತ್ವ ಮತ್ತು ವಿಶೇಶವಾಗಿ ದೊಡ್ಡ ಗುಂಡಿಗೆ. ವೇದಿಕೆ ಮೇಲೆ ಹಾಡುತ್ತಾ ಕೇವಲ ತಮ್ಮ ಪ್ರತಿಬೆ ತೋರಿಸುವ ಜಿದ್ದಿಗೆ ಬೀಳದೆ ಸಹ ಹಾಡುಗಾರ, ಮ್ರುದಂಗ ಬಾರಿಸುವವ, ಪಿಟೀಲು ನುಡಿಸುವವ ಇವರೆಲ್ಲರಿಗೂ ತಮ್ಮ ಪ್ರತಿಬೆ ತೋರಿಸಲು ಸಮಾನ ಅವಕಾಶ ಕೊಡುತ್ತಿದ್ದರು. “ಬಲೇ ಬಲೇ” ಅನ್ನುತ್ತಾ ಹುರಿದುಂಬಿಸುವ ವಿಶಾಲ ಗುಣದವರಾಗಿದ್ದರು. ಯೇಸುದಾಸ್ ಅವರ 33 ನೇ ಹುಟ್ಟು ಹಬ್ಬದಂದು ಚೆಂಬೈ ಮತ್ತು ಯೇಸುದಾಸ್ ಇಬ್ಬರೂ ಒಟ್ಟಿಗೆ ಕರ‍್ನಾಟಕ ಸಂಗೀತ ಕಚೇರಿ ನಡೆಸಿಕೊಡುತ್ತಾ, ಹಾಡಿದ ಬೈರವಿ ರಾಗದ ವಿರಿಬೋನಿ ವರ‍್ಣವು ತುಂಬಾ ಅದ್ಬುತವಾಗಿದೆ. ಅಟತಾಳ ವರ‍್ಣವಾದ ವಿರಿಬೋನಿಯನ್ನು ತುಂಬಾ ನಿಪುಣ, ದಿಗ್ಗಜ ಕರ‍್ನಾಟಕ ಸಂಗೀತ ಹಾಡುಗಾರರು ಮಾತ್ರ ಸರಿಯಾಗಿ, ಕಟ್ಟಳೆಗಳ ಅನುಸಾರ ಹಾಡಬಲ್ಲರು. ಚೆಂಬೈ ಮತ್ತು ಯೇಸುದಾಸ್, ಸುಬ್ಬುಲಕ್ಶ್ಮೀ ಮತ್ತು ರಾದಾ ವಿಶ್ವನಾತನ್ (ಸುಬ್ಬುಲಕ್ಶ್ಮೀ ಅವರ ಮಗಳು) ಅವರು ಹಾಡಿದ ವಿರಿಬೋನಿಯು ತುಂಬಾ ಪ್ರಸಿದ್ದವಾಗಿದೆ. ಬೇರೆ ಕರ‍್ನಾಟಕ ಸಂಗೀತ ಹಾಡುಗಾರರು ಕೂಡ ಹಾಡಿದ್ದಾರೆ, ಆದರೆ ಈ ಮೇಲಿನ ಮಂದಿಯಶ್ಟೇ ಆ ಹಾಡಿಗೆ ಮೆರುಗನ್ನು ಕೊಡಲು ಸಾದ್ಯವಾಗಿದೆ. ಚೆಂಬೈ ಹಾಗೂ ಯೇಸುದಾಸ್ ಹಾಡಿದ “ಶಿವ ಶಿವ ಶಿವ ಎನರಾದ” ಎಂಬ ತುಂಬ ಪ್ರಸಿದ್ದ ಕ್ರುತಿ (ಹಿಂದೂಸ್ತಾನಿ ಹಾಡಿನ ಪದ್ದತಿಯಲ್ಲಿ ಬಂದಿಶ್, ಚೀಜ್ ಅಂತ ಕರೆಯತ್ತಾರೆ) ಕೇಳುಗರನ್ನು ಮಂತ್ರಮುಗ್ದ ಮಾಡುತ್ತದೆ. “ವಿರಿಬೋನಿ” ಮತ್ತು “ಶಿವ ಶಿವ ಶಿವ ಎನರಾದ” ಕ್ರುತಿ ಯುಟ್ಯೂಬ್ ನಲ್ಲಿ ಲಬ್ಯವಿವೆ, ಈ ಕೆಳಗಿನ ಕೊಂಡಿಗಳಲ್ಲಿ ಸಂಗೀತ ಆಸಕ್ತರು ಕೇಳಿ ಆನಂದಿಸಬಹದು.

( ಮಾಹಿತಿ ಸೆಲೆ: wikipedia )

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಮಾರಿಸನ್ ಮನೋಹರ್ says:

    ತಿದ್ದುಪಡಿ : m s ಸುಬ್ಬುಲಕ್ಶ್ಮೀ ಅವರ ಮಗಳ ಹೆಸರು ರಾದಾ ವಿಶ್ವನಾತನ್ ಅಂತ ಆಗಿರಬೇಕಿತ್ತು ಸುದಾ ರಂಗನಾತ್ ಅಲ್ಲ..ಸಹ್ರುದಯಿ ಓದುಗರಲ್ಲಿ ಕ್ಶಮೆ ಕೋರುತ್ತಿದ್ದೇನೆ. Thank you

ಅನಿಸಿಕೆ ಬರೆಯಿರಿ: