ಡಾಕ್ಟರ್‌ ಮೇಲುಡುಪು, Doctor's apron

ಡಾಕ್ಟರ್‌ಗಳ ಶಸ್ತ್ರಚಿಕಿತ್ಸೆಯ ಮೇಲುಡುಪು ನೀಲಿ ಇಲ್ಲವೇ ಹಸಿರು ಬಣ್ಣದಲ್ಲಿ ಏಕಿರುತ್ತೆ?

– ಕೆ.ವಿ.ಶಶಿದರ.

ಡಾಕ್ಟರ್‌ ಮೇಲುಡುಪು, Doctor's apron
ಯಾವುದೇ ಒಂದು ಕೆಲಸವನ್ನು ತೆಗೆದುಕೊಳ್ಳಿ, ಅದಕ್ಕೆ ತಕ್ಕುದಾದ ಉಡುಪು ಇರುತ್ತದೆ. ಮಕ್ಕಳಲ್ಲಿ ತಾರತಮ್ಯವಿರಬಾರದು ಎನ್ನುವ ಉದ್ದೇಶದಿಂದ ಅವರಿಗೆ ಸ್ಕೂಲ್ ಯೂನಿಪಾರಂ ನೀಡುವುದು ಈಗೀಗ ಹೆಚ್ಚಿದೆ. ಸರ‍್ಕಾರಿ ಉದ್ಯಮದಲ್ಲೂ ಕೆಲವು ಕಡೆ ಈ ಪದ್ದತಿ ಜಾರಿಯಲ್ಲಿದೆ. ಕಾಕಿ ಬಟ್ಟೆ ಇದರಲ್ಲಿ ಹೆಚ್ಚಿನ ಪಾಲನ್ನು ಪಡೆದಿದೆ. ಸಾರ‍್ವಜನಿಕ ವಾಹನ ಚಾಲಕರು, ಆಟೋ ಚಾಲಕರು, ಪೊಲೀಸ್ ಸಿಬ್ಬಂದಿ, ಸೇನಾ ಪಡೆ ಹೀಗೆ ಹತ್ತು ಹಲವು ಕಡೆ ಇದರ ಪ್ರಸೆನ್ಸ್ ಕಾಣಬಹುದು.

ಆದರೆ ಒಂದು ವಿಚಿತ್ರವನ್ನು ತಾವೆಲ್ಲಾ ಗಮನಿಸಿರಬಹುದು. ಎರಡು ಮೂರು ಬಣ್ಣದ ಯೂನಿಪಾರಂ ದರಿಸುವುದು ಡಾಕ್ಟರ್‌ಗಳು ಮಾತ್ರ, ಬೇರೆಲ್ಲೂ ಈ ರೀತಿಯ ಪದ್ದತಿ ಕಾಣುವುದಿಲ್ಲ. ಎಲ್ಲಾ ಡಾಕ್ಟರ್‌ಗಳು ಯಾವಾಗಲೂ ದರಿಸುವುದು ಬಿಳಿ ನಿಲುವಂಗಿಯನ್ನು. ಇದು ಶುಬ್ರತೆಯ ಪ್ರತೀಕ. ಆದರೆ ಶಸ್ತ್ರಚಿಕಿತ್ಸಕರು ಮಾತ್ರ ಬೇರೆಯದೇ ಬಣ್ಣದ ಮೇಲುಡುಪನ್ನು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಬಳಸುತ್ತಾರೆ. ಇದು ವಿಶ್ವಾದ್ಯಂತ ಪ್ರಮಾಣಿತ ಅಬ್ಯಾಸವಾಗಿದೆ. ಅವರೂ ಸಹ ಏಕೆ ಶುಬ್ರತೆಯ ಪ್ರತೀಕವಾದ ಬಿಳಿ ಬಣ್ಣದ ಅತವಾ ಇತರೆ ತೆಳು ಬಣ್ಣದ ಮೇಲುಡುಪನ್ನು ಬಳಸುವುದಿಲ್ಲ?

20ನೇ ಶತಮಾನಕ್ಕೆ ಮೊದಲು ಬಿಳಿ ಬಣ್ಣದ ಮೇಲುಡುಪನ್ನು ಶಸ್ತ್ರಚಿಕಿತ್ಸಕರು ಬಳಸುತ್ತಿದ್ದರು. ನಿರ‍್ದಿಶ್ಟವಾಗಿ 1914ಕ್ಕೂ ಮುಂಚೆ ಈ ಪದ್ದತಿ ಇತ್ತು. ಬಳಿಕ ಶಸ್ತ್ರಚಿಕಿತ್ಸಕರು, ಶಸ್ತ್ರ ಚಿಕಿತ್ಸಾ ಕೊಟಡಿಯಲ್ಲಿ ನೀಲಿ ಅತವಾ ಹಸಿರು ಬಣ್ಣದ ಮೇಲುಡುಪನ್ನು ಬಳಸಲು ಪ್ರಾರಂಬಿಸಿದರು.  ಆದರೆ ಪ್ರಶ್ನೆ ಇರುವುದು ಇಲ್ಲಿಯೇ? ಏಕೆ?

ಇದಕ್ಕೆ ಮೂಲ ಕಾರಣ ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ಸರ‍್ಜನ್ನುಗಳು ಬಹುಪಾಲು ಅವರ ದ್ರುಶ್ಟಿ ಶಸ್ತ್ರಚಿಕಿತ್ಸಾ ಸಮಯದಲ್ಲಿ ರೋಗಿಯ ದೇಹದಿಂದ ಒಸರುವ ರಕ್ತದ ಕೆಂಪು ಬಣ್ಣದ ಪ್ರದೇಶದಲ್ಲಿ ಕೇಂದ್ರಿತವಾಗಿರುತ್ತದೆ. ಕಣ್ಣಿನ ದ್ರುಶ್ಟಿಯನ್ನು ಕಾರಣಾಂತರಗಳಿಂದ ಬದಲಾಯಿಸಿ ಎದುರು ನಿಂತಿರುವ ಬೇರೆ ಸರ‍್ಜನ್/ಸಹಾಯಕರನ್ನು ಗಮನಿಸಿದಲ್ಲಿ, ಶಸ್ತ್ರಚಿಕಿತ್ಸಾ ಕೊಟಡಿಯ ತೀಕ್ಶ್ಣ ಬೆಳಕು ಅವರು ತೊಟ್ಟಿರುವ ಶ್ವೇತವರ‍್ಣದ ಮೇಲುಡುಪಿನ ಮೇಲೆ ಬಿದ್ದು ಪ್ರತಿಪಲಿಸುವ ಕಾರಣ ಅವರ ಕಣ್ಣುಗಳಿಗೆ ತಾತ್ಕಾಲಿಕ ಕುರುಡುತನ ಉಂಟುಮಾಡುತ್ತದೆ. ಕೆಲ ಕ್ಶಣಗಳು ಏನೂ ಮಾಡದ ಪರಿಸ್ತಿತಿ ಉದ್ಬವವಾಗುತ್ತದೆ. ಶಸ್ತ್ರ ಚಿಕಿತ್ಸಾ ಸಮಯದಲ್ಲಿ ಪ್ರತಿ ಕ್ಶಣವೂ ಅತ್ಯಮೂಲ್ಯ. ಇದರಿಂದ ಶಸ್ತ್ರ ಚಿಕಿತ್ಸೆ ತಡವಾಗಿ ಅತವಾ ಬೇರೇನಾದರೂ ಆಗಿ ರೋಗಿಯ ಪ್ರಾಣಕ್ಕೆ ಅಪಾಯ ಒದಗಬಹುದು. ಆದ ಕಾರಣ ಶಸ್ತ್ರಚಿಕಿತ್ಸಾ ಕೊಟಡಿಯಲ್ಲಿ ಬಿಳಿ ಬಣ್ಣದ ಬದಲಿಯಾಗಿ ಹಸಿರು ಅತವಾ ನೀಲಿ ಬಣ್ಣದ ಮೇಲುಡುಪನ್ನು ಬಳಸುತ್ತಾರೆ.

ಇದನ್ನು ಕೇಳಿದ ಕೂಡಲೇ ಮತ್ತೊಂದು ಪ್ರಶ್ನೆ ಉದ್ಬವಿಸಬಹುದು. ಹಸಿರು ಅತವಾ ನೀಲಿ ಬಣ್ಣವೇ ಏಕೆ? ಹಳದಿ, ಕಿತ್ತಳೆ, ಗುಲಾಬಿ ಮುಂತಾದ ಬಣ್ಣ ಏಕಾಗಬಾರದು? ಎಂದು. ಬಿಳಿಬಣ್ಣವನ್ನು ಗಮನಿಸಿದರೆ ಅದರಲ್ಲಿ ಏಳು ಬಣ್ಣಗಳು ಮಿಲನವಾಗಿವೆ. ಈ ಏಳು ಬಣ್ಣಗಳಲ್ಲಿ ಕೆಂಪು ಒಂದು ಬದಿಯಲ್ಲಿದ್ದರೆ ಅದರ ವಿರುದ್ದದಲ್ಲಿ ಹಸಿರು, ನೀಲಿ, ನೇರಳೆ ಬಣ್ಣಗಳಿವೆ. ಹಳದಿ, ಕಿತ್ತಳೆ, ಕೆಂಪು ಬಣ್ಣದ ಬದಿಯಲ್ಲಿ ಇದೆ. ಕೆಂಪು ಬಣ್ಣದ ವೇವ್ ಲೆಂತ್‌ಗಿಂತಾ, ನೀಲಿ ಮತ್ತು ಹಸಿರು ಬಣ್ಣದ ವೇವ್ ಲೆಂತ್‌ ಬಿನ್ನವಾಗಿರುವ ಕಾರಣ ಕೆಂಪು ಸ್ಪಶ್ಟವಾಗಿ ಕಂಡುಬರುತ್ತೆ. ಹಾಗಾಗಿ, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನೀಲಿ ಮತ್ತು ಹಸಿರು ಬಣ್ಣದ ಮೇಲುಡುಪನ್ನು ನೋಡಿದರೂ ಕಣ್ಣಿನ ದ್ರುಶ್ಟಿಗೆ ತೊಂದರೆಯಾಗುವುದಿಲ್ಲ. ಕೆಂಪು ಬಣ್ಣದ ಚಾಯೆ ಹಾಗೆಯೇ ಉಳಿಯುತ್ತದೆ. ಮುಂದಿನ ಕಾರ‍್ಯ ಸುಗಮವಾಗುತ್ತದೆ. ಇದರಿಂದಾಗಿ ಶಸ್ತ್ರಚಿಕಿತ್ಸೆಯ ಕೊಟಡಿಯಲ್ಲಿ ಕೆಲಸ ನಿರತರು ಹಸಿರು ಅತವಾ ನೀಲಿ ಬಣ್ಣದ ಮೇಲುಡುಪನ್ನು ಮಾತ್ರ ಹಾಕಿಕೊಳ್ಳುವುದನ್ನು ರೂಡಿಸಿಕೊಂಡಿದ್ದಾರೆ. ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ಶಸ್ತ್ರಚಿಕಿತ್ಸಾ ಕೊಟಡಿಗೂ ಸಹ ನೀಲಿ ಅತವಾ ಹಸಿರು ಬಣ್ಣ ಬಳಿದಿರುವುದನ್ನು ಗಮನಿಸಬಹುದು.

(ಚಿತ್ರ ಸೆಲೆ: health.mi)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.