ವಿಯಟ್ನಾಮಿನ ಡ್ರ್ಯಾಗನ್ ಕೋಳಿಗಳು
– ಕೆ.ವಿ.ಶಶಿದರ.
ಕೋಳಿ/ಹುಂಜ ಎಂದಲ್ಲಿ ತಕ್ಶಣ ಮನಸ್ಸಿಗೆ ಬರುವುದು ಮಾಂಸಾಹಾರಿಗಳಿಗೆ ಅಪ್ಯಾಯಮಾನವಾದ, ಅವರು ಹೆಚ್ಚು ಬಯಸುವ ಪ್ರಾಣಿ ಎಂದು. ಜೀವಿಗಳ ಜಗತ್ತಿನಲ್ಲಿ ಕೋಳಿಯನ್ನು ಪಕ್ಶಿ ಎಂದು ವರ‍್ಗೀಕರಿಸಲಾಗಿದೆ. ಮಾಂಸಕ್ಕಾಗಿ ಇವುಗಳನ್ನು ಸಾಕಿ ಸಲಹಲು ಸಾಕಶ್ಟು ಹಣ ವಿನಿಯೋಗಿಸಲಾಗುತ್ತದೆ. ಇದರ ಜೊತೆ ಕೋಳಿಯ ಮೊಟ್ಟೆ ಸಹ ಅತ್ಯತ್ತಮ ಪೌಶ್ಟಿಕ ಆಹಾರ. ಪೌಶ್ಟಿಕಾಂಶದ ಕೊರತೆ ಇರುವವರಿಗೆ ಮೊಟ್ಟೆ ತಿನ್ನುವಂತೆ ತಿಳಿಸುವುದು ಸಾಮಾನ್ಯ. ಹಾಲು ಮತ್ತು ಮೊಟ್ಟೆ ತೆಗೆದುಕೊಳ್ಳುವ ಸಸ್ಯಾಹಾರಿಗಳನ್ನು “ಲ್ಯಾಕ್ಟೋ ವೊವೋ ವೆಜಿಟೇರಿಯನ್” ಎನ್ನುತ್ತಾರೆ. ಲ್ಯಾಕ್ಟೋ ಅಂದರೆ ಹಾಲು, ವೊವೋ ಎಂದಲ್ಲಿ ಮೊಟ್ಟೆ.
ಈ ಕೋಳಿಗೆ ಆನೆಕಾಲು ರೋಗವೇ?
ಮನುಶ್ಯನಿಗೆ ಆನೆಕಾಲು ರೋಗ ಬಂದಿರುವುದನ್ನು ಬಹಳಶ್ಟು ಜನ ಕಂಡಿರಿತ್ತೀರಿ. ಈ ಕಾಯಿಲೆಗೆ ತುತ್ತಾದವರ ಕಾಲುಗಳು, ಒಂದು ಅತವಾ ಎರಡೂ ಕಾಲುಗಳು, ಮೊಣಕಾಲಿನಿಂದ ಕೆಳಕ್ಕೆ ಆನೆ ಕಾಲಿನಂತೆ ಊದಿ, ನಡೆಯಲು ಸಾದ್ಯವಾಗದ ಹೆಣಬಾರವಾಗುತ್ತದೆ. ಅವರುಗಳು ಕಾಲನ್ನು ಎತ್ತಿ ಹಾಕಿ ನಡೆಯುವುದನ್ನು ನೋಡಿದರೆ, ನೋಡುವವರಿಗೂ ಯಮಯಾತನೆ ಕಂಡಿತ. ಈ ರೀತಿಯ ಕಾಲುಗಳು ಕೋಳಿಗೂ ಬಂದರೆ? ಆಗ ಅದು ಡ್ರ್ಯಾಗನ್ ಕೋಳಿಯಾಗುತ್ತದೆ. ನೋಡಲು ಬೀಕರ ಹಾಗೂ ಬಯಂಕರ ಕುರೂಪಿಯಾಗಿರುವ ಇದರ ದಪ್ಪನೆಯ ಕಾಲು ಆದದ್ದು ಕಾಯಿಲೆಯಿಂದಲ್ಲ. ಬದಲಾಗಿ ಅದು ವಂಶಪಾರಂಪರಿಕವಾಗಿ ಬಂದಿರುವಂತದು. ಆದ್ದರಿಂದಲೇ ಇದು ವಿಶ್ವದ ಅತ್ಯಂತ ದುಬಾರಿ ಕೋಳಿಗಳಲ್ಲಿ ಒಂದು. ಇದಕ್ಕೆ ಮೂಲ ಅದರ ದಪ್ಪನೆಯ ತೊಡೆಗಳು. ಇದರಿಂದ ತಯಾರಿಸಿದ ತಿನಿಸುಗಳು ಬಲು ರುಚಿಯಂತೆ!
ರಾಜಮನೆತನಕ್ಕಾಗಿ ಸಾಕಲಾಗುತ್ತಿದ್ದ ದುಬಾರಿ ಕೋಳಿ
ವಿಯಟ್ನಾಂನಲ್ಲಿರುವ ಈ ಜಾತಿಯ ಕೋಳಿಯನ್ನು ‘ಡಾಂಗ್ ಟಾವೋ’ ಕೋಳಿ ಎನ್ನುತ್ತಾರೆ. ಇದು ತನ್ನ ರುಚಿಕರ ಮಾಂಸಕ್ಕಾಗಿ ಬಹಳ ಹೆಸರುವಾಸಿ. ಯಾವುದೇ ಪ್ರಸಿದ್ದಿ ಪಡೆದ ವಸ್ತು ಸೇರಬೇಕಿರುವುದು ದೇಶದ ರಾಜಮನೆತನಕ್ಕೆ ಅಲ್ಲವೆ? ಹೌದು. ಈ ಅಮೂಲ್ಯವಾದ ಕೋಳಿಯೂ ಸಹ ಹಿಂದೆ ಬಿದ್ದಿಲ್ಲ. ರಾಜ ಮನೆತನದವರ ಆಹಾರಕ್ಕಾಗಿಯೇ ‘ಡಾಂಗ್ ಟಾವೋ’ ಕೋಳಿಯನ್ನು ಸಾಕುತ್ತಿದ್ದುದು ಉಂಟು. ಈ ತಳಿಯ ಕೋಳಿಗಳನ್ನು ಸಾಕುವುದು ಕಶ್ಟವಾಗಿರುವ ಹಿನ್ನೆಲೆಯಲ್ಲಿ ಇವುಗಳ ಸಿಗುವಿಕೆ ಕಡಿಮೆ. ಬೇಡಿಕೆ ಹೆಚ್ಚಾಗಿ ಲಬ್ಯತೆ ಕಡಿಮೆಯಾದಲ್ಲಿ ಬೆಲೆ ತಾನೇ ತಾನಾಗಿ ಹೆಚ್ಚುವುದು ಲೋಕಾರೂಡಿ. ಇದರಲ್ಲಿ ವ್ಯಾಪಾರಿಗಳ ದುರಾಸೆ ಸಹ ಅಲ್ಲಗೆಳೆಯುವಂತಿಲ್ಲ. ಹಾಗಾಗಿ ಒಂದು ಜೋಡಿ ಕೋಳಿ 1600 ಪೌಂಡ್ ಬೆಲೆ ಬಾಳುತ್ತದೆ. ಇದರ ಕಾದ್ಯಗಳು ಹೆಚ್ಚಾಗಿ ಶ್ರೀಮಂತರ ಪೈವ್ ಸ್ಟಾರ್ ರೆಸ್ಟಾರೆಂಟ್‍ಗಳಲ್ಲಿ ಮತ್ತು ‘ಡಾಂಗ್ ಟಾವೋ’ ಪಂಗಡದವರು ವಾಸಿಸುವ ಹನೋಯಿಯಿಂದ ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ಕೋಐ ಚೌನಲ್ಲಿ ಮಾತ್ರ ದೊರೆಯುತ್ತದೆ.
ಮಿಡತೆ ಪ್ರಿಯ ಈ ಕೋಳಿ!
ಈ ಕೋಳಿಗಳ ದುಂಡನಾಕಾರದ ಗಡ್ಡೆಯ ಕಾಲುಗಳ ಸುತ್ತಾ ಕೆಂಪು ಬಣ್ಣದ ಚರ‍್ಮದ ಹೊದಿಕೆ ಇರುವುದನ್ನು ಗಮನಿಸಬಹುದು. ಇದರ ಕಾಲುಗಳು ಒಬ್ಬ ಸಾಮಾನ್ಯ ವ್ಯಕ್ತಿಯ ಮಣಿಕಟ್ಟಿನಶ್ಟು ದಪ್ಪವಾಗಿರುತ್ತದೆ. ಬೆಳೆದ ಒಂದು ಗಂಡು ‘ಡಾಂಗ್ ಟಾವೋ’ ಡ್ರ್ಯಾಗನ್‍ನ ತೂಕ ಆರು ಕೆಜಿಯಶ್ಟಿರುತ್ತದೆ. ಕೋಳಿಗಳು ಸಾಮಾನ್ಯವಾಗಿ ಬಿಳಿ ಬಣ್ಣದ್ದಾಗಿದ್ದು, ಹುಂಜದ ಗರಿಗಳು ವರ‍್ಣಮಯವಾಗಿರುವ ಕಾರಣ, ನೋಡಲು ಅತಿ ಸುಂದರ. ಇದರ ಆಹಾರ ಕೂಡ ವಿಚಿತ್ರ. ದವಸ ದಾನ್ಯಗಳಿಗಿಂತ ಮಿಡತೆಗಳ ಆಹಾರ ಡಾಂಗ್ ಟಾವೋ ಕೋಳಿಗೆ ಬಹಳ ಇಶ್ಟ. ಬೇರೆಲ್ಲವುಗಳಿಗಿಂತಾ ಇದನ್ನು ಅವು ಬಹಳ ಆನಂದಿಸುತ್ತವೆ.
ದಪ್ಪಗಿದ್ದರೂ ತುಂಬಾ ಸೂಕ್ಶ್ಮ ಡಾಂಗ್ ಟಾವೋ ಕೋಳಿ!
ಈ ಕೋಳಿಗಳ ಮತ್ತೊಂದು ವಿಚಿತ್ರವೆಂದರೆ ತುಂಬಾ ಸೂಕ್ಶ್ಮ. ತಾಪಮಾನದಲ್ಲಿ ಕೊಂಚ ಏರುಪೇರಾದರೂ ಇದು ಉಳಿಯುವುದಿಲ್ಲ. ಇದಕ್ಕೆ ಒಂದೇ ರೀತಿಯ ತಾಪಮಾನ ಅವಶ್ಯವಾಗಿಬೇಕು. ಹಾಗಾಗಿ ಇದರ ಸಾಕಣೆ ಕಶ್ಟಕರ. ಸಾಮಾನ್ಯ ಕೋಳಿಗಳು ಇಡುವ ಮೊಟ್ಟೆಯ ಪ್ರಮಾಣ ಸಾಕಶ್ಟಿರುವ ಕಾರಣ ಅವುಗಳ ಸಾಕಣೆ ಕರ‍್ಚು ಕಡಿಮೆ. ಅವುಗಳಿಗೆ ಹೋಲಿಸಿದರೆ ಡ್ರ್ಯಾಗನ್ ಕೋಳಿ ಇಡುವ ಮೊಟ್ಟೆಯ ಪ್ರಮಾಣವೂ ಸಹ ತುಂಬಾ ಕಡಿಮೆ. ಡಾಂಗ್ ಟಾವೋ ಕೋಳಿಯ ಕಾಲುಗಳು ಮತ್ತು ಪಾದಗಳು ಹೆಚ್ಚು ದಪ್ಪವಿರುವ ಕಾರಣ, ಮೊಟ್ಟೆಯಿಂದ ಮರಿ ಮಾಡುವ, ಕಾವು ಕೊಡುವ, ಪ್ರಕ್ರಿಯೆ ಕೂಡ ಕಶ್ಟಕರ. ಇದರಿಂದ ಇಂತಹ ಕೋಳಿಗಳ ಸಾಕಣೆಕಾರರಿಗೆ ತಲೆ ನೋವಾಗಿದೆ. ಮೊಟ್ಟೆಯಿಂದ ಮರಿ ಹೊರಬರುವಾಗ ಸೂಕ್ಶ್ಮವಾದ ಗಮನ ಅವಶ್ಯ. ಮೊಟ್ಟೆಯಿಂದ ಮರಿ ಹೊರಬಂದ ನಂತರ ಅದನ್ನು ಬೆಳೆಸಿ ಮಾರುಕಟ್ಟೆ ಮಾಡಬಹುದಾದ ಮೂರರಿಂದ ಐದು ಕೆಜಿ ತೂಕವಾಗಲು ತಗಲುವ ಅವದಿ ಎಂಟು ತಿಂಗಳಿಂದ ಒಂದು ವರ‍್ಶ. ಸಾಮಾನ್ಯ ಕೋಳಿಗಳಿಗಿಂತ ಇದರ ಸಾಕಣೆ ಬಲು ದುಬಾರಿಯಾಗಲಿಕ್ಕೆ ಇದೇ ಕಾರಣ .
( ಮಾಹಿತಿ ಸೆಲೆ : dailymail.co.uk )
( ಚಿತ್ರ ಸೆಲೆ : amusingplanet.com )
ಇತ್ತೀಚಿನ ಅನಿಸಿಕೆಗಳು