ಹೆಣ್ಣಿಗೆ‌ ತವರಿನ ಅನುಬಂದ

–  ಅಶೋಕ ಪ. ಹೊನಕೇರಿ.

bride, ಮದುವೆ ಹೆಣ್ಣು

‘ತೊಟ್ಟಿಲ ಹೊತ್ಕೊಂಡು ತವರು ಬಣ್ಣ ಉಟ್ಕೊಂಡು ತಿಟ್ಟತ್ತಿ ತಿರುಗಿ ನೋಡ್ಯಾಳ’ ಎಂಬ ಜನಪದ ಸಾಲನ್ನು ನೀವು ಕೇಳಿರುತ್ತೀರಿ. ಈ ಹೆಣ್ಣು ಮಗಳು ಚೊಚ್ಚಲ ಹೆರಿಗೆಗೆ ತವರಿಗೆ ಬಂದು, ಮರಳಿ ಗಂಡನ ಮನೆಗೆ ಮಗುವನ್ನು ಎತ್ತಿಕೊಂಡು, ತವರಿನ ತೊಟ್ಟಿಲನ್ನು ಹೊತ್ತುಕೊಂಡು, ತವರಿನ ಬಣ್ಣ ಅಂದರೆ ತವರಿನವರು ಕೊಡಿಸಿದ ಹೊಸ ಸೀರೆ ಉಟ್ಟುಕೊಂಡು ತಿಟ್ಟತ್ತಿ( ತಿಟ್ಟತ್ತಿ = ದಿಬ್ಬ/ದಿಣ್ಣೆ + ಹತ್ತಿ) ಹೋಗುವಾಗ ತಿಟ್ಟಿನ ತುದಿಯಲ್ಲಿ ನಿಂತು ಮತ್ತೊಮ್ಮೆ ತವರು ಮನೆಯನ್ನು ನೋಡಿ ಕಣ್ಣು ತುಂಬಿಕೊಳ್ಳುತ್ತಾಳೆ. ಅಂದರೆ ಆ ಹೆಣ್ಣು ಮಗಳಿಗೆ ತಾನು ಹುಟ್ಟಿ ಬೆಳೆದ ತವರ ಮೇಲೆ ಅಶ್ಟೊಂದು ಪ್ರೀತಿ, ಮಮಕಾರ.

ಹೆಣ್ಣಿಗೆ ಗಂಡನ ಮನೆಯಲ್ಲಿ ಸ್ವರ‍್ಗವೇ ಇರಲಿ ಆಕೆಗೆ ತವರಿನ ಸೆಳೆತ ಇದ್ದೇ ಇರುತ್ತದೆ. ಅಲ್ಲಿ ಗಂಜಿ ಇರಲಿ, ಅಂಬಲಿ ಇರಲಿ ಅದು ಅವಳಿಗೆ ಅಮ್ರುತವೇ. ಈ ಹೆಣ್ಣು ಎಂದರೇನೆ ತ್ಯಾಗಮಯಿ. ಮದುವೆಯಾಗುತ್ತಿದ್ದಂತೆ ಈಕೆ ಹುಟ್ಟಿ ಬೆಳೆದು, ಆಡಿಪಾಡಿ ನಲಿದ ತವರನ್ನು, ತನ್ನ ಹೆತ್ತ ತಂದೆ-ತಾಯಿ-ಒಡಹುಟ್ಟಿದವರನ್ನು ಬಿಟ್ಟು ಹೊಸತೊಂದು ವಾತಾವರಣಕ್ಕೆ ಒಗ್ಗಿಕೊಂಡು ಬಾಳ್ವೆ ಮಾಡಬೇಕು. ಇದು ಬಾವನಾತ್ಮಕವಾಗಿ ಬಹಳ ಕಶ್ಟ. ಆದರೂ ಈ ವ್ಯವಸ್ತೆಯ ಚೌಕಟ್ಟಿನಲ್ಲಿ ಇದು ಅನಿವಾರ‍್ಯ. ಇದಕ್ಕಾಗಿ ನಾವು ಹೆಣ್ಣಿಗೆ ತಲೆ ಬಾಗಲೇಬೇಕು.

ಗಂಡನ ಮನೆಯಲ್ಲಿರುವ ಹೆಣ್ಣುಮಗಳಿಗೆ ತವರಿನಿಂದ ಸಹೋದರ ಹಬ್ಬ-ಹರಿದಿನಗಳಿಗೆ ಯಾವಾಗ ಕರೆಯಲಿಕ್ಕೆ ಬರುತ್ತಾನೆ ಎಂಬ ಕಾತರ ಇರುತ್ತದೆ. ಹಬ್ಬದ ನೆಪದಲ್ಲಿ ನಾಲ್ಕು ದಿನ ತವರಿನಲ್ಲಿ ಕಳೆಯಬಹುದಲ್ಲ ಎನ್ನುವ ಆಸೆ ಹೆಣ್ಣು ಮಗಳಿಗೆ. ಅಕಸ್ಮಾತ್ ತವರಿನಿಂದ ಯಾರೂ ಕರೆಯಲು ಬರದಿದ್ದರೆ ಅವಳಿಗಾಗುವ ನಿರಾಶೆ, ದುಕ್ಕ ಅಶ್ಟಿಶ್ಟಲ್ಲ. ಅಶ್ಟೊಂದು ತವರಿನ ಅನುಬಂದ ಈಕೆಗೆ.

ನೀವು “ಬಾಗ್ಯದ ಬಳೆಗಾರ ಹೋಗಿ ಬಾ ನನ ತವರಿಗೆ” ಎಂಬ ಜನಪದ ಹಾಡನ್ನು ಕೇಳಿರುತ್ತೀರಿ. ಹೆಣ್ಣುಮಗಳಿಗೆ ತವರಿನ ಬಗ್ಗೆ ಎಶ್ಟೊಂದು ಹೆಮ್ಮೆ ಎಂಬುದನ್ನು ಈ ಹಾಡು ತಿಳಿಸುತ್ತದೆ. ಜನಪದ ಶೈಲಿಯಲ್ಲಿ ಬಳೆಗಾರನಿಗೆ ತನ್ನ ತವರಿನ ವಿಳಾಸ ಹೇಳುತ್ತಾ, ‘ನನ್ನ ಹಡೆದವ್ವ ಕಾಯುತ್ತಿರುತ್ತಾಳೆ, ಆಕೆಗೆ ಬಳೆ ತೊಡಿಸಿ ಬಾ’ ಎನ್ನುವ ಹಾಡು ಅತ್ಯಂತ ಮಾರ‍್ಮಿಕವಾಗಿ ತವರಿನೊಡನೆ ತನ್ನ ಅನುಬಂದ ಎಂತಹದ್ದು ಎಂದು ತೋರಿಸುತ್ತದೆ.

ಈ ತ್ಯಾಗಮಯಿ ಹೆಣ್ಣುಮಗಳು ಮದುವೆಯಾಗಿ ಗಂಡನ ಮನೆಗೆ ಹೋದರೂ ತನ್ನ ತವರಿನ ಏಳ್ಗೆಯ ಬಗ್ಗೆಯೇ ಚಿಂತಿಸುತ್ತಿರುತ್ತಾಳೆ. ತವರಿನಲ್ಲಿ ಏನೇ ತೊಂದರೆಯುಂಟಾದರೂ ಮರುಗುತ್ತಾಳೆ. ತವರಿಗಾಗಿ ಅವಳ ಮನ ಸದಾ ತುಡಿಯುತ್ತಿರುತ್ತದೆ, ಮಿಡಿಯುತ್ತಿರುತ್ತದೆ. ಆದ್ದರಿಂದ ಹೆಣ್ಣಿಗೆ ತವರಿನ ಅನುಬಂದ ಬಿಡಿಸಲಾಗದ ಬಂದ. ಗಂಡನ ಮನೆಯಲ್ಲಾಗಲಿ, ತವರಿನಲ್ಲಾಗಲಿ ಇಂತಹ ತ್ಯಾಗಮಯಿ ಹೆಣ್ಣನ್ನು ನೋಯಿಸದೆ ನಡೆಸಿಕೊಂಡರೆ, ಅದು ಈ ಇಳೆಯಲ್ಲಿ ಹೆಣ್ಣೆಂಬ ಸ್ರುಶ್ಟಿಗೆ ನಾವು ನೀಡುವ ದೊಡ್ಡ ಗೌರವ.

(ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: